ಬೆಂಗಳೂರು: ನಮ್ಮ ಮೆಟ್ರೋ ತನ್ನ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಮತ್ತೊಂದು ಬೋಗಿ ಮೀಸಲಿಡಲು ಚಿಂತನೆ ನಡೆಸಿದೆ. ಯಾಕಂದರೆ ಅತ್ಯಂತ ಸುರಕ್ಷಿತ ಎಂದು ಹೇಳಲಾದ ನಮ್ಮ ಮೆಟ್ರೋದಲ್ಲಿ (Namma Metro) ಇತ್ತೀಚೆಗೆ ಮಹಿಳಾ ಪ್ರಯಾಣಿಕರು ಲೈಂಗಿಕ ಕಿರುಕುಳಕ್ಕೆ (Physical Abuse) ಒಳಗಾಗುತ್ತಿದ್ದಾರೆ. ನಮ್ಮ ಮೆಟ್ರೋ (Namma Metro) ಸಂಚಾರ ಎಲ್ಲ ರೀತಿಯಿಂದಲೂ ಸುರಕ್ಷಿತ ಎಂಬ ಭಾವ ಕ್ರಮೇಣ ಕಡಿಮೆಯಾಗುತ್ತಿದೆ.
ಅತ್ಯಂತ ಕಠಿಣವಾದ ಪ್ರವೇಶ ನಿಯಮಗಳು, ರೈಲು ಹತ್ತುವಾಗ ಪಾಲಿಸಬೇಕಾದ ಕ್ರಮಗಳಿಂದ ನಮ್ಮ ಮೆಟ್ರೋ ರೈಲಿನಲ್ಲಿ ಓಡಾಡುವುದು ಅತ್ಯಂತ ಸೆಕ್ಯೂರ್ಡ್ ಅನ್ನುವ ಫೀಲಿಂಗ್ ಇತ್ತು. ಆದರೆ ಮೆಟ್ರೋ ಕನೆಕ್ಟಿವಿಟಿ ಸಿಕ್ಕ ನಂತರ ಜನದಟ್ಟಣೆ ಹೆಚ್ಚಾಗಿದೆ. ಇದರಿಂದಾಗಿ ಪ್ರಯಾಣಿಕರು ರೈಲಿನೊಳಗೆ ಹತ್ತಿದ್ದರೆ ಉಸಿರಾಡಲು ಕಷ್ಟ ಪಡುವಂತಾಗಿದೆ. ಎಲ್ಲ ರೀತಿಯ ಜನರು ರೈಲು ಹತ್ತುತ್ತಿರುವುದರಿಂದ ಅಲ್ಲೂ ಲೈಂಗಿಕ ಕಿರುಕುಳ (Sexual Harassment), ಜೋರಾಗಿ ಮಾತನಾಡುವುದು, ದಬಾಯಿಸುವುದು ಮೊದಲಾದ ವಿದ್ಯಮಾನಗಳು ನಡೆಯುತ್ತಿವೆ.
ಇತ್ತೀಚೆಗಂತೂ ಮಹಿಳೆಯರ ಜತೆ ಅಸಭ್ಯ ವರ್ತನೆ ಕೇಸ್‌ಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಳ್ಳುವ ಕಾಮುಕರು ಮಹಿಳೆಯರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದಾರೆ. ಮಹಿಳೆಯ ಖಾಸಗಿ ಅಂಗಗಳನ್ನು ಮುಟ್ಟುವುದು, ಪದೇಪದೆ ಮೈ ಮೇಲೆ ಬೀಳುವುದು ಸೇರಿದಂತೆ ನಾನಾ ರೀತಿಯ ಲೈಂಗಿಕ ದೌರ್ಜನ್ಯವನ್ನು ಎಸಗುತ್ತಿದ್ದಾರೆ. ಮಹಿಳೆಯರು ಮುಲಾಜಿಲ್ಲದೇ ಕಾಮುಕರಿಗೆ ಚಳಿಬಿಡಿಸುತ್ತಿದ್ದಾರೆ.
ಸದ್ಯ ಮಹಿಳೆಯರ ಸುರಕ್ಷತೆಗಾಗಿ ಮತ್ತೊಂದು ಬೋಗಿ ಮೀಸಲಿಡಲು ಮನವಿಗಳು ಬಂದಿವೆ. ಈಗಾಗಲೇ ರೈಲಿನಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿಯೊಂದು ಇದೆ. ಇದೀಗ ಮತ್ತೊಂದು ಬೋಗಿ ಮೀಸಲಿಡಬೇಕೆಂದು ಮೆಟ್ರೋಗೆ ಬೇಡಿಕೆ ಬಂದಿವೆ. ಬಿಎಂಆರ್‌ಸಿಎಲ್ ಕೂಡ ಈ ಬಗ್ಗೆ ಚರ್ಚೆ ನಡೆಸುತ್ತಿದ್ದು, ಶೀಘ್ರದಲ್ಲೇ ಮಹಿಳೆಯರಿಗೆ ಒಟ್ಟಾರೆ ಎರಡು ಬೋಗಿ ಮೀಸಲಿಡಲು ಚಿಂತನೆ ನಡೆಸಿದೆ.
ಇದನ್ನೂ ಓದಿ: Mount Carmel College : ಕೋ ಎಜುಕೇಶನ್‌ಗೆ ಮೌಂಟ್ ಕಾರ್ಮೆಲ್ ಮುಕ್ತ; ಹುಡುಗರು ಬೇಡ ಅಂದ್ರಾ ಹೆಣ್ಮಕ್ಕಳು!?
ಘಟನೆ-1 ಹಿಂದಿನ ಭಾಗ ಮುಟ್ಟಿ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ
ಮೆಜೆಸ್ಟಿಕ್‌ನಲ್ಲಿರುವ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ. ಯುವತಿಯೊಬ್ಬಳಿಗೆ 2023ರ ನವೆಂಬರ್ 22ರ ಬೆಳಗ್ಗೆ 8.30ರ ಸುಮಾರಿಗೆ ಮೆಟ್ರೋದಲ್ಲಿ ಪ್ರಯಾಣಿಸಲೆಂದು ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಬಂದಿದ್ದಳು. ಅಷ್ಟು ಹೊತ್ತಿಗೆ ಅಲ್ಲಿ ಭಾರಿ ಜನದಟ್ಟಣೆ ಇತ್ತು. ರೈಲು ಏರುವಾಗಲೂ ಹಿಂದಿನಿಂದ ತಳ್ಳಾಟ ಜೋರಾಗಿತ್ತು. ಹಾಗೆ ಕಷ್ಟು ಕಟ್ಟು ಏರಿ ಹೇಗೋ ಒಳಗೆ ನಿಂತ ಮೇಲೆ ಕೆಂಪು ಅಂಗಿ ಧರಿಸಿದ್ದ ವ್ಯಕ್ತಿಯೊಬ್ಬ ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಆಕೆಯ ಹಿಂದಿನ ಭಾಗವನ್ನು ಸ್ಪರ್ಶಿಸಿ ಕಿರುಕುಳ ನೀಡಲು ಆರಂಭ ಮಾಡಿದ್ದಾನೆ. ಆರಂಭದಲ್ಲಿ ಆಕೆಗೆ ಇದು ಜನರ ಒತ್ತಡದ ನಡುವೆ ಏನೋ ತಪ್ಪಾಗಿ ನಡೆಯುತ್ತಿರಬಹುದು ಎಂದು ಭಾವಿಸಿದ್ದಾಳೆ. ಆದರೆ, ಕೆಲವೇ ಸೆಕೆಂಡುಗಳಲ್ಲಿ ಆಕೆಗೆ ಆತನ ದುಷ್ಟ ವರ್ತನೆ ಅರ್ಥವಾಗಿತ್ತು. ಆಕೆ ಆತನಿಂದ ತಪ್ಪಿಸಿಕೊಂಡು ಸ್ವಲ್ಪ ಮುಂದೆ ಹೋಗಿ ಬೇರೆಯವರ ಸಹಾಯ ಕೋರಿದರೂ ಎಲ್ಲರೂ ತಮ್ಮ ಲೋಕದಲ್ಲೇ ಮುಳುಗಿದ್ದರು ಬಿಟ್ಟರೆ ಯಾರೂ ಸಹಾಯಕ್ಕೆ ಬರಲಿಲ್ಲ ಎಂದು ಆಕೆಯ ಗೆಳತಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಳು.
ಘಟನೆ-2 ಟೆಕ್ಕಿ ಯುವತಿ ಮೈ ಸವರಿದ್ದ ಕಾಮುಕ
ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ (Majestic Metro Railway station) 2023 ಡಿಸೆಂಬರ್ 7ರ ಬೆಳಗ್ಗೆ 9.40ರ ಸುಮಾರಿಗೆ ಈ ಘಟನೆ ನಡೆದಿತ್ತು. ಕಿರುಕುಳಕ್ಕೆ ಒಳಗಾದ ಯುವತಿ ಕೂಗಿಕೊಂಡಾಗ ಅಲ್ಲಿದ್ದ ಮೆಟ್ರೋ ಸಿಬ್ಬಂದಿ ಕೂಡಲೇ ಅ ಕೀಚಕನನ್ನು ಹಿಡಿದಿದ್ದರು. ಕೆಲವು ದಿನಗಳ ಹಿಂದಷ್ಟೇ ಒಬ್ಬ ಯುವತಿಗೆ ಮೆಟ್ರೋದಲ್ಲಿ ಕಿರುಕುಳ (Physical abuse in Metro) ನೀಡಲಾಗಿತ್ತು. 22 ವರ್ಷದ ಯುವತಿ ರೈಲಿನಲ್ಲಿದ್ದಾಗ ರೈಲಿನ ಜನ ಸಂದಣಿ ಮತ್ತು ಒತ್ತಡದ ಪರಿಸ್ಥಿತಿಯ ಲಾಭವನ್ನು ಎತ್ತಿದ ಲೋಕೇಶ್ ಅಲಿಯಾಸ್ ಲೋಕಿ ಎಂಬಾತ ಆಕೆಯ ಮೈಕೈ ಮುಟ್ಟಿ ಕಿರುಕುಳ ನೀಡಿದ್ದ. ಅನುಚಿತವಾಗಿ ವರ್ತಿಸಿದ ಆತ ರೈಲು ನಿಲ್ಲುತ್ತಿದ್ದಂತೆಯೇ ರೈಲಿನಿಂದ ಇಳಿದು ಎಸ್ಕಲೇಟರ್ ಮೂಲಕ ಎಸ್ಕೇಪ್ ಆಗಲು ಯತ್ನಿಸಿದ್ದ. ಆಗ ಯುವತಿ ಜೋರಾಗಿ ಕೂಗಿಗೊಂಡಾಗ ಭದ್ರತಾ ಸಿಬ್ಬಂದಿ ಆತನನ್ನು ಅಲ್ಲೇ ಹಿಡಿದುಹಾಕಿದ್ದರು. ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ದಾಖಲಾಗಿ, ಬಳಿಕ ಆತ ಅರೆಸ್ಟ್ ಆಗಿದ್ದ.
ಘಟನೆ-3 ಯುವತಿಯ ಹಿಂದೆ ನಿಂತು ಲೈಂಗಿಕ ಕಿರುಕುಳ
2023 ಡಿಸೆಂಬರ್ 23ರಂದು ಕುಡಿದ ಮತ್ತಿನಲ್ಲಿ ಯುವತಿಯ ಜತೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದ. ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಯುವತಿಯು ವೈಟ್‌ಫೀಲ್ಡ್‌ಗೆ ಹೋಗಲು ನ್ಯಾಷನಲ್ ಕಾಲೇಜು ಬಳಿ ಮೆಟ್ರೋ ಹತ್ತಿದ್ದಳು. ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಬೋಗಿಯಲ್ಲಿ ಕುಳಿತಿದ್ದ ವ್ಯಕ್ತಿಯು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಯುವತಿ ಇಳಿಯುತ್ತಿದ್ದಂತೆ ಅಸಭ್ಯವಾಗಿ ವರ್ತನೆ ಮಾಡಿದ್ದ. ಹಿಂದಿನಿಂದ ಯುವತಿಯ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ. ನಂತರ ಆಕೆಯನ್ನೇ ನೋಡುತ್ತ ನಿಂತು, ಬಳಿಕ ಅಲ್ಲಿಂದ ಹೊರಟಿದ್ದ. ಇದರಿಂದ ಭಯಗೊಂಡಿದ್ದ ಯುವತಿಯು ಕೂಡಲೇ ಮೆಟ್ರೋದಿಂದ ಇಳಿದು ಸೆಕ್ಯೂರಿಟಿ ಸಿಬ್ಬಂದಿಗೆ ವಿಚಾರವನ್ನು ತಿಳಿಸಿದ್ದಾಳೆ. ಕೂಡಲೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿತ್ತು.
ಘಟನೆ- 4 ಯುವತಿ ಖಾಸಗಿ ಅಂಗವನ್ನು ಸ್ವರ್ಶಿಸಿದ
2024ರ ಜನವರಿ 1ರಂದು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಯುವತಿಯ ಖಾಸಗಿ ಅಂಗವನ್ನು ಸ್ವರ್ಶಿಸಿ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದ. ವ್ಯಕ್ತಿಯ ಕಿರುಕುಳವನ್ನು ನಮ್ಮ ಮೆಟ್ರೋದ ಭದ್ರತಾ ವಿಭಾಗದ ಸಿಬ್ಬಂದಿಗೆ ತಿಳಿಸಿದ ಯುವತಿ ಎಲ್ಲರ ಸಮ್ಮುಖದಲ್ಲೇ ಛೀಮಾರಿ ಹಾಕಿದ್ದಳು. ಕೂಡಲೇ ಕಿರುಕುಳ ನೀಡಿದ ವ್ಯಕ್ತಿಯನ್ನು ವಿಚಾರಣೆ ನಡೆಸಿದ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಕಾಮುಕ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡು, ಇನ್ನೊಮ್ಮೆ ಹೀಗೆ ಮಾಡುವುದಿಲ್ಲ ಎಂದು ಕ್ಷಮೆಯಾಚಿಸಿದ್ದ.
ಇದನ್ನೂ ಓದಿ: National Youth Day 2024: ಜಗತ್ತಿನಲ್ಲಿ ಸ್ಥಿರವಾಗಿ ಉಳಿಯುವುದೆಂದರೆ ಬದಲಾವಣೆ ಮಾತ್ರ ಎಂದಿದ್ದ ವಿವೇಕಾನಂದರು!
ಹೆಚ್ಚುತ್ತಿರುವ ಒತ್ತಡದ ಪರಿಣಾಮ
ಮೆಟ್ರೋ ರೈಲಿನಲ್ಲಿ ಈಗ ಪೀಕ್ ಅವರ್ ಸಂಚಾರ ಎನ್ನುವುದು ನಿಜಕ್ಕೂ ದುಸ್ವಪ್ನವೇ ಆಗಿದೆ. ಚಲ್ಲಘಟ್ಟದಿಂದ ನೇರವಾಗಿ ವೈಟ್ ಫೀಲ್ಡ್ ಕನೆಕ್ಷನ್ ಸಿಗುವುದರಿಂದ ಜನರು ಹೆಚ್ಚು ಹೆಚ್ಚು ಮೆಟ್ರೋ ರೈಲನ್ನು ಅವಲಂಬಿಸಿದ್ದಾರೆ. ಇದರಿಂದಾಗಿ ಜನರ ಒತ್ತಡ ಹೆಚ್ಚಿದೆ. ಈಗ ಎಲ್ಲ ರೀತಿಯ ಜನರೂ ಮೆಟ್ರೋ ಹತ್ತುವುದರಿಂದು ಕೆಲವರು ತಮ್ಮ ಕೆಟ್ಟ ಚಾಳಿಗಳನ್ನು ಇಲ್ಲಿಗೂ ತಂದಿದ್ದಾರೆ.
ಜನದಟ್ಟಣೆಯ ಸಂದರ್ಭದಲ್ಲಿ ರೈಲನ್ನು ಏರುವುದೇ ಕಷ್ಟವಾಗುತ್ತದೆ. ಒಳಗೆ ಹೋದರೆ ಉಸಿರಾಡಲಾಗದ ಒತ್ತೊತ್ತಾಗಿ ನಿಲ್ಲಬೇಕಾದ ಪರಿಸ್ಥಿತಿ. ಜತೆಗೆ ಬ್ಯಾಗ್‌ಗಳ ಒತ್ತಡ. ಇಂಥ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಕೆಲವರು ಕಿರುಕುಳ ನೀಡಲು ಶುರು ಮಾಡುತ್ತಾರೆ. ಕೆಲವೊಮ್ಮೆ ಕಿರುಕುಳ ನೀಡುತ್ತಿದ್ದಾರೆ ಎಂಬುದು ಗೊತ್ತಾದರೂ ವಿರೋಧಿಸಲಾಗದ ಪರಿಸ್ಥಿತಿ ಇರುತ್ತದೆ. ನಾವು ಬೇಕೂಂತ ಮಾಡಿಲ್ಲ. ಇಷ್ಟೊಂದು ಜನ ಇದ್ದಾಗ ಒಬ್ಬರಿಗೊಬ್ಬರು ತಾಕುವುದನ್ನೇ ದೊಡ್ಡ ವಿಷಯ ಯಾಕೆ ಮಾಡುತ್ತೀರಿ ಎಂದು ತಿರುಗಿ ಪ್ರಶ್ನೆ ಕೇಳುತ್ತಾರೆ. ಇವರು ಮಾಡುವ ಕುಚೇಷ್ಟೆಗಳನ್ನು ಯಾವ ಸಿಸಿ ಕ್ಯಾಮೆರಾವೂ ಪತ್ತೆ ಹಚ್ಚುವುದು ಕಷ್ಟ. ಇನ್ನು ಮೆಟ್ರೋಗಳಲ್ಲಿ ಈಗ ಜನರ ಬೈದಾಟ, ತಳ್ಳಾಟವೂ ಜಾಸ್ತಿಯಾಗಿದೆ. ಬಸ್ ಸ್ಟಾಂಡ್‌ಗಳ ವಾತಾವರಣವೇ ಇಲ್ಲೂ ಕಂಡುಬರುತ್ತಿದೆ. ಇದಕ್ಕೆ ಪರಿಹಾರವಾಗಿ, ಪೀಕ್ ಅವರ್‌ಗಳಲ್ಲಿ ಹೆಚ್ಚುವರಿ ರೈಲುಗಳನ್ನು ಬಿಡುವುದು ಒಂದೇ ಮಾರ್ಗ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ