Site icon Vistara News

Namma Metro: ಮೆಟ್ರೋ ಟ್ರ್ಯಾಕ್‌ನಲ್ಲಿ ಲಾಕ್‌ ಆದ ಮೆಂಟೈನ್ಸ್‌ ವೆಹಿಕಲ್‌! ಮೇಲೆತ್ತಲು ಕ್ರೇನ್‌ ಬಳಕೆ

Namma Metro Use of cranes

ಬೆಂಗಳೂರು: ರಾಜಾಜಿನಗರ ಮೆಟ್ರೊ (namma metro) ನಿಲ್ದಾಣದ ತಿರುವಿನಲ್ಲೇ ನಿರ್ವಹಣೆಗಾಗಿ ಹೋಗಿದ್ದ ವಾಹನವು (ರೀ ರೈಲ್ ವಾಹನ) ಹಳಿಯಲ್ಲೇ ಸಿಲುಕಿದೆ. ಪರಿಣಾಮ ಹಸಿರು ಮಾರ್ಗದಲ್ಲಿ ಮೆಟ್ರೋ ಓಡಾಟದಲ್ಲಿ ವ್ಯತ್ಯಯ ಉಂಟಾಗಿದೆ. ಮೆಂಟೈನ್ಸ್‌ ವೆಹಿಕಲ್‌ ಆಯತಪ್ಪಿ ಟ್ರ್ಯಾಕ್‌ನಿಂದ ವಾಲಿದ ಪರಿಣಾಮ ಹೀಗಾಗಿದೆ ಎನ್ನಲಾಗಿದೆ.

17 ಟನ್‌ ತೂಕ ಇರುವ ಮೆಂಟೈನ್ಸ್‌ ವಾಹನ

ಮೆಂಟೈನ್ಸ್‌ ವಾಹನವನ್ನು (ರೀ ರೈಲ್ ವೆಹಿಕಲ್‌) ಹಳಿಗೆ ತರಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಹಳಿಯಲ್ಲಿ ಸಿಲುಕಿರುವ ಸುಮಾರು 17 ಟನ್‌ ಇರುವ ಮೆಂಟೈನ್ಸ್‌ ವಾಹನವನ್ನು ವಾಪಸ್‌ ಹಳಿ ಮೇಲೆ ಕೂರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕ್ರೇನ್ ಮೂಲಕ ಲಿಫ್ಟಿಂಗ್ ಮಾಡುವ ಕಾರ್ಯಾಚರಣೆ ನಡೆಯುತ್ತಿದೆ.

200 ಟನ್ ಲಿಫ್ಟ್ ಮಾಡುವ ಸಾಮರ್ಥ್ಯ ಹೊಂದಿರುವ ಕ್ರೇನ್ ಬಳಸಿ ಮೆಂಟೈನ್ಸ್‌ ವಾಹನವನ್ನು ಕೆಳಗಿಳಿಸಲು ಮೆಟ್ರೋ ಇಂಜಿನಿಯರ್‌ ಕ್ರೇನ್ ಆಪರೇಟರ್‌ಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಬೆಲ್ಟ್ ಸಿಲಿಂಗ್ ಅಳವಡಿಸಿ ಮೆಂಟೈನ್ಸ್‌ ವಾಹನವನ್ನು ಲಿಫ್ಟ್ ಮಾಡಲಿದ್ದಾರೆ. 4 ‌ಮೂಲೆಯಲ್ಲೂ ಸಿಲಿಂಗ್ ಬೆಲ್ಟ್ ಅಳವಡಿಕೆ‌ ಮಾಡಿ ಲಿಫ್ಟಿಂಗ್ ಮಾಡಲಿದ್ದಾರೆ.

ಕ್ರೇನ್‌ ಮೂಲಕ ಲಿಫ್ಟಿಂಗ್‌ ಕಾರ್ಯಾಚರಣೆ

ಕೆಟ್ಟು ನಿಂತ ಮೆಂಟೈನ್ಸ್‌ ರೈಲ್ವೆ ವೆಹಿಕಲ್‌

ಈ ಸಂಬಂಧ ಪ್ರತಿಕ್ರಿಯಿಸಿರುವ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚವ್ಹಾಣ್, ನಮ್ಮ ಮೆಟ್ರೋ ನೆಟ್ ವರ್ಕ್ ವಿಸ್ತರಣೆ ಆಗುತ್ತಿದೆ. ಪ್ರತಿ ಡಿಪೋದಲ್ಲಿ ರೋಡ್ ಕಂ ರೈಲ್ವೆ ವೆಹಿಕಲ್ ಇರುತ್ತದೆ. ಮೆಟ್ರೋ ರೈಲು ಕೆಟ್ಟು ನಿಂತರೆ ಅದನ್ನು ಈ ರೈಲ್ವೆ ವೆಹಿಕಲ್ ಹಳಿಯಲ್ಲಿ ಹೋಗಿ ಸರಿ ಪಡಿಸುತ್ತದೆ. ಈ ರೋಡ್ ಕಂ ರೈಲಿನಲ್ಲಿ ಮೆಟ್ರೋ ಸರಿಪಡಿಸುವ ಗ್ಯಾಜೇಟ್ಸ್ ಗಳಿರುತ್ತೆ. ಸೋಮವಾರ ರಾತ್ರಿ ಈ ವೆಹಿಕಲ್ ಕಾರ್ಯಾಚರಣೆಗೆ ಹೋದಾಗ ಕೆಟ್ಟು ಹೋಗಿದ್ಯಾ ಅಥವಾ ಹಳಿ ತಪ್ಪಿದ್ಯಾ ಎಂಬ ಮಾಹಿತಿ ಇಲ್ಲ ಎಂದರು.

ಬೆಂಗಳೂರಿಗೆ ದೆಹಲಿ ಟೀಂ

ಮೆಟ್ರೋ ಟ್ರ್ಯಾಕ್‌ನಲ್ಲಿ ಮೆಂಟೈನ್ಸ್‌ ವಾಹನವು ಅರ್ಧಕ್ಕೆ ವಾಲಿದೆ. ಇದು ಇನ್ನಷ್ಟು ವಾಲುವ ಸಾಧ್ಯತೆ ಇದೆ. ಹೀಗಾಗಿ ದೆಹಲಿಯ ತಜ್ಞರ ತಂಡವನ್ನು ಕರೆಸುವ ಸಾಧ್ಯತೆ ಇದೆ. ಇತ್ತ ಮೆಂಟೈನ್ಸ್‌ ವಾಹನವನ್ನು ಮೇಲೆತ್ತಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಕೈ ಕೊಟ್ಟ ಮೆಟ್ರೋ; ಬಿಎಂಟಿಸಿಯತ್ತ ಹೆಜ್ಜೆ ಹಾಕಿದ ಪ್ರಯಾಣಿಕರು

ಸಾಲು ಸಾಲು ರಜೆಯನ್ನು ಮುಗಿಸಿ ವಾಪಸ್‌ ತಮ್ಮ ತಮ್ಮ ಕೆಲಸ- ಕಾರ್ಯಗಳತ್ತ ಮುಖ ಮಾಡಿದ್ದ ಜನರಿಗೆ ಇದು ಅನಾನುಕೂಲ ಉಂಟು ಮಾಡಿತ್ತು. ಪೀಕ್‌ ಅವರ್‌ನಲ್ಲೇ ರೈಲು ಓಡಾಟವು ಸ್ಥಗಿತವಾಗಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ಶಾಲಾ-ಕಾಲೇಜು ಮಕ್ಕಳಿಂದ ಹಿಡಿದು ಉದ್ಯೋಗಿಗಳಿಗೆ ಸಮಸ್ಯೆ ಆಯಿತು. ಮೆಟ್ರೋ ಅರ್ಧಕ್ಕೆ ಕೈಕೊಟ್ಟ ಪರಿಣಾಮ ಬಹುತೇಕರು ಬಿಎಂಟಿಸಿ ಬಸ್‌ನತ್ತ ಹೆಜ್ಜೆ ಹಾಕಿದ್ದರು. ಇತ್ತ ಒಂದು ಟ್ರ್ಯಾಕ್‌ ಬಳಕೆಗೆ ಬರದ ಕಾರಣಕ್ಕೆ ಏಕಮುಖವಾಗಿ ಮಾತ್ರ ರೈಲುಗಳು ಸಂಚರಿಸುತ್ತಿವೆ.

ಸದ್ಯ ನಾಗಸಂದ್ರದಿಂದ ಯಶವಂತಪುರ ಮತ್ತು ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆಯಿಂದ ರೇಷ್ಮೆ ಸಂಸ್ಥೆ ಮೆಟ್ರೊ ನಿಲ್ದಾಣದ ನಡುವೆ ಮಾತ್ರ ಹಸಿರು ಮಾರ್ಗದಲ್ಲಿ ರೈಲು ಸೇವೆಗಳು ಲಭ್ಯವಿವೆ. ಯಶವಂತಪುರದಿಂದ ಮಂತ್ರಿ ಸ್ಕ್ವೇರ್‌ ವರೆಗೆ ಸೇವೆ ಲಭ್ಯವಿಲ್ಲ. ಶ್ರೀರಾಮಂಪುರ, ಕುವೆಂಪುನಗರ, ರಾಜಾಜಿನಗರ, ಮಹಾಲಕ್ಷ್ಮೀ, ಸ್ಯಾಂಡಲ್​ ಸೋಪ್ ಫ್ಯಾಕ್ಟರಿ ನಡುವೆ ಮೆಟ್ರೋ ಸೇವೆ ಸಂಚಾರ ಇರುವುದಿಲ್ಲ.

ಯಶವಂತಪುರ ಮೆಟ್ರೋ ನಿಲ್ದಾಣ ಹೌಸ್ ಫುಲ್

ಹಸಿರು ಮಾರ್ಗದಲ್ಲಿ ತಾಂತ್ರಿಕ ದೋಷ ಉಂಟಾಗಿದ ಹಿನ್ನೆಲೆಯಲ್ಲಿ 5 ನಿಮಿಷಕ್ಕೊಂದು ಓಡಾಡುತ್ತಿದ್ದ ರೈಲು ಈಗ ಅರ್ಧ ಗಂಟೆಗೊಮ್ಮೆ ರೈಲು ಬರುತ್ತಿದೆ. ಯಶವಂತಪುರ ಮೆಟ್ರೋ ನಿಲ್ದಾಣವು ಪ್ರಯಾಣಿಕರಿಂದ ತುಂಬಿ ಹೋಗಿತ್ತು. ಫ್ಲಾಟ್ ಫಾರಂನಲ್ಲಿ ಜನರು ನಿಲ್ಲಲು ಆಗದಷ್ಟು ಕಿಕ್ಕಿರಿದು ತುಂಬಿದ್ದರು. ಕೆಲವರು ಮೆಟ್ರೋ ಪ್ರವೇಶ ದ್ವಾರದ ಗ್ಲಾಸ್‌ಅನ್ನು ಕಾಲಿನಲ್ಲಿ ಒದ್ದು ದಾಟಿ ಹೋಗಿದ್ದಾರೆ. ಯಶವಂತಪುರ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರ ( ಶರ್ಟರ್ ) ಗಳನ್ನು ಮೆಟ್ರೋ ಸಿಬ್ಬಂದಿ ಬಂದ್‌ ಮಾಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version