Site icon Vistara News

Namma Metro : ಗಮನಿಸಿ; ಜ. 26ರಿಂದ 3 ದಿನ ಈ ಮಾರ್ಗದಲ್ಲಿ ರೈಲು ಸಂಚಾರ ಇಲ್ಲ

Namma Metro green Line

ಬೆಂಗಳೂರು: ಬೆಂಗಳೂರಿನ ಜೀವನಾಡಿ ನಮ್ಮ ಮೆಟ್ರೋ (Namma Metro) ಪ್ರಯಾಣಿಕರ ಗಮನಕ್ಕೆ, ಜನವರಿ 26ರಿಂದ ಮೂರು ದಿನಗಳ ಕಾಲ ಮೆಟ್ರೋದ ಎರಡು ಪ್ರಮುಖ ರೈಲು ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸಂಚಾರ ಇರುವುದಿಲ್ಲ (No train movement for three days) ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಪ್ರಕಟಿಸಿದೆ.

ಈ ದಿನಗಳಲ್ಲಿ ಹಸಿರು ಮಾರ್ಗದಲ್ಲಿ ಬರುವ ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ನಡುವೆ ಮೆಟ್ರೋ ರೈಲು ಸೇವೆ ಲಭ್ಯವಿರುವುದಿಲ್ಲ. ನಾಗಸಂದ್ರ ಮತ್ತು ಮಾದಾವರ ನಡುವೆ ಮಾರ್ಗ ವಿಸ್ತರಣೆಗೆ ಸಂಬಂಧಿಸಿದ ವಿದ್ಯುತ್ ಕಾಮಗಾರಿಗಳಿಗೆ ಅನುಕೂಲವಾಗುವಂತೆ ಈ ಕ್ರಮ ಜರುಗಿಸಲಾಗಿದೆ. ಹೀಗಾಗಿ ಜನವರಿ 26, 27 ಮತ್ತು 28ರಂದು ರೇಷ್ಮೆ ಸಂಸ್ಥೆ (Silk Institute) ಮತ್ತು ಪೀಣ್ಯ ಇಂಡಸ್ಟ್ರಿ ನಡುವೆ ಮಾತ್ರ ಹಸಿರು ಮಾರ್ಗದ ರೈಲುಗಳು ಸಂಚರಿಸಲಿವೆ.ʼ

ಜನವರಿ 29ರಂದು ಬೆಳಗ್ಗೆ 5 ಗಂಟೆಗೆ ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ನಡುವಿನ ರೈಲು ಸಂಚಾರ ಮತ್ತೆ ಆರಂಭವಾಗಲಿದೆ. ಸಂಚಾರ ವ್ಯತ್ಯಯದಿಂದ ಜಾಲಹಳ್ಳಿ, ದಾಸರಹಳ್ಳಿ ಮತ್ತು ನಾಗಸಂದ್ರ ನಿಲ್ದಾಣಗಳಿಂದ/ನಿಲ್ದಾಣಗಳಿಗೆ ತೆರಳುವ ಪ್ರಯಾಣಿಕರಿಗೆ ಮೂರು ದಿನ ತೊಂದರೆಯಾಗಲಿದೆ ಎಂದು ಬಿಎಂಆರ್‌ಸಿಎಲ್‌ ವಿಷಾದಿಸಿದೆ.

ಪೀಣ್ಯ ಇಂಡಸ್ಟ್ರಿ, ಗೊರಗುಂಟೆ ಪಾಳ್ಯ ಸ್ಟೇಷನ್‌ನಲ್ಲಿ ಹೆಚ್ಚುವರಿ ಟಿಕೆಟ್‌ ಕೌಂಟರ್‌

ಜನವರಿ 26ರಿಂದ 29ರವರೆಗೆ ಪೀಣ್ಯ ಇಂಡಸ್ಟ್ರಿಯಿಂದ ನಾಗಸಂದ್ರಕ್ಕೆ ರೈಲು ತೆರಳದೆ ಇರುವುದರಿಂದ ಆ ಭಾಗದ ಪ್ರಯಾಣಿಕರು ಪೀಣ್ಯ ಇಂಡಸ್ಟ್ರಿ ಮತ್ತು ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣಕ್ಕೆ ಬರುವ ಸಾಧ್ಯತೆ ಇದೆ. ಹೀಗಾಗಿ ಅಲ್ಲಿ ಜನದಟ್ಟಣೆ ಹೆಚ್ಚಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಹೆಚ್ಚಿನ ಜನ ಸಂದಣಿ ತಪ್ಪಿಸಲು ವಾಟ್ಸಾಪ್‌ ಅಥವಾ ನಮ್ಮ ಮೆಟ್ರೋ ಅಪ್ಲಿಕೇಶನ್ ಮೂಲಕ ಕ್ಯೂಆರ್ ಟಿಕೆಟ್ ಖರೀದಿಸುವಂತೆ ಮನವಿ ಮಾಡಲಾಗಿದೆ.

ಪೀಣ್ಯ ಇಂಡಸ್ಟ್ರಿ ಮೆಟ್ರೋ ನಿಲ್ದಾಣದಲ್ಲಿ ಹೆಚ್ಚಿನ ಜನಸಂದಣಿಯನ್ನು ನಿರೀಕ್ಷಿಸಿ, ಬಿಎಂಆರ್‌ಸಿಎಲ್ ಇನ್ನೂ ಆರು ಟಿಕೆಟ್ ಕೌಂಟರ್‌ಗಳು, ಇನ್ನೂ ಐದು ಎಎಫ್‌ಸಿ (ಸ್ವಯಂಚಾಲಿತ ಶುಲ್ಕ ಸಂಗ್ರಹ) ಗೇಟ್‌ಗಳು ಮತ್ತು ಇಲ್ಲಿಯವರೆಗೆ ಮುಚ್ಚಲಾದ ಮತ್ತೊಂದು ಪ್ರವೇಶದ್ವಾರವನ್ನು ತೆರೆಯಲಿದೆ.

ನೇರಳೆ ಮಾರ್ಗದ ಸಂಚಾರದಲ್ಲಿ ವ್ಯತ್ಯಯವಿಲ್ಲ

ನೇರಳೆ ಮಾರ್ಗವಾದ ಚಲ್ಲಘಟ್ಟದಿಂದ ವೈಟ್‌ಫೀಲ್ಡ್ (ಕಾಡುಗೋಡಿ) ವರೆಗೆ ರೈಲು ಕಾರ್ಯಾಚರಣೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಂದಿನಂತೆ ಈ ಮಾರ್ಗದಲ್ಲಿ ರೈಲುಗಳು ಚಲಿಸಲಿವೆ ಎಂದು ತಿಳಿಸಲಾಗಿದೆ.

ಲಾಲ್‌ ಭಾಗ್‌ ಫ್ಲವರ್‌ ಶೋಗೆ ಮೆಟ್ರೋ ಗಿಫ್ಟ್‌; ಎಲ್ಲಿಂದ ಹೋದರೂ 30 ರೂ.!

ಬೆಂಗಳೂರು: ಗಣರಾಜ್ಯೋತ್ಸವದಂದು (Republic Day) ಲಾಲ್ ಬಾಗ್ ಫ್ಲವರ್ ಶೋಗೆ (lalbagh flower show) ತೆರಳುವ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ ಗುಡ್ ನ್ಯೂಸ್ ನೀಡಿದೆ. ಜ.26ರಂದು ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ ಪರಿಚಯಿಸಲಾಗಿದ್ದು, ಇದಕ್ಕೆ ಕೇವಲ 30 ರೂ. ನಿಗದಿ ಮಾಡಲಾಗಿದೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್‌, ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ, ನಮ್ಮ ಮೆಟ್ರೋದಲ್ಲಿ ಜ. 26ರಂದು (ಗಣರಾಜ್ಯೋತ್ಸವ ದಿನ), ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳನ್ನು ಪರಿಚಯಿಸಲಾಗಿದೆ. ಆ ದಿನದಂದು ಬೆಳಗ್ಗೆ 10:00 ಗಂಟೆಯಿಂದ ರಾತ್ರಿ 08:00 ಗಂಟೆಯವರೆಗೆ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಟಿಕೆಟ್ ದರವನ್ನು 30 ರೂ. ನಿಗದಿಪಡಿಸಲಾಗಿದೆ ಎಂದು ತಿಳಿಸಿದೆ.

ಈ ಪೇಪರ್ ಟಿಕೆಟ್ ಆ ದಿನದ ಒಂದು ಪ್ರಯಾಣಕ್ಕೆ ಮಾತ್ರ ಮಾನ್ಯವಾಗಿರುತ್ತದೆ ಹಾಗೂ ಬೆಳಗ್ಗೆ 8 ರಿಂದ
ಸಂಜೆ 6 ಗಂಟೆಯವರೆಗೆ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಖರೀದಿಸಬಹುದಾಗಿದೆ. ಲಾಲ್‌ಬಾಗ್ ಮೆಟ್ರೋ
ನಿಲ್ದಾಣದಲ್ಲಿ ಪೇಪರ್ ಟಿಕೆಟ್ ರಾತ್ರಿ 8 ಗಂಟೆಯವರೆಗೆ ಲಭ್ಯವಿರುತ್ತದೆ.

ಮೆಟ್ರೋ ಪ್ರಯಾಣಿಕರು ಲಾಲ್‌ಬಾಗ್ ನಿಲ್ದಾಣ ಪ್ರವೇಶಿಸಲು ಮತ್ತು ಯಾವುದೇ ನಿಲ್ದಾಣದಿಂದ ನಿರ್ಗಮಿಸಲು ಪೇಪರ್ ಟಿಕೆಟ್‌ಗಳನ್ನು ಹಾಜರಿಪಡಿಸಬೇಕಾಗುತ್ತದೆ. ಆದಾಗ್ಯೂ, ಯಾವುದೇ ನಿಲ್ದಾಣದಿಂದ ಲಾಲ್‌ಬಾಗ್ ಮೆಟ್ರೋ ನಿಲ್ದಾಣಕ್ಕೆ ಟೋಕನ್, ಸ್ಮಾರ್ಟ್ ಕಾರ್ಡ್ NCMC ಕಾರ್ಡ್‌ಗಳು ಮತ್ತು ಕ್ಯೂಆರ್ ಟಿಕೆಟ್‌ಗಳ ಮೂಲಕ ಪ್ರಯಾಣಿಸಬಹುದು ಹಾಗೂ ಲಾಲ್‌ಬಾಗ್ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಹಿಂತಿರುಗಲು ಸ್ಮಾರ್ಟ್ ಕಾರ್ಡ್, NCMC ಕಾರ್ಡ್, QR ಟಿಕೆಟ್‌ಗಳ ಮೂಲಕ ಮತ್ತು ಟೋಕನ್‌ ಗಳ ಬದಲಿಗೆ ಪೇಪರ್ ಟಿಕೆಟ್‌ಗಳ ಮೂಲಕ ಮಾತ್ರ ಪ್ರಯಾಣಿಸಬಹುದು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

Exit mobile version