ಬೆಂಗಳೂರು: ಬೆಂಗಳೂರನ್ನು ಮೆಟ್ರೋ ಹಬ್ (Namma Metro) ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಬಜೆಟ್‌ನಲ್ಲಿ ಕೆಲವು ಯೋಜನೆಗಳನ್ನು ಪ್ರಕಟಿಸಿದೆ. ಈ ನಡುವೆ ಮೆಟ್ರೋ ಸಂಚಾರ ವಿಸ್ತರಣೆ ಕಾಮಗಾರಿ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಕೆಲವು ಬದಲಾವಣೆಗಳನ್ನು ಪ್ರಕಟಿಸಲಾಗಿದೆ. ಇದರ ಪ್ರಕಾರ ಜು.10ರಿಂದ ಆಗಸ್ಟ್ 9ರವರೆಗೆ ಒಂದು ತಿಂಗಳ ಕಾಲ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ (Metro operation) ಉಂಟಾಗಲಿದೆ. ಈ ಅವಧಿಯಲ್ಲಿ ಪ್ರತಿ ದಿನ ಎರಡು ಗಂಟೆಗಳ ಕಾಲ ಮೆಟ್ರೋ ಸಂಚಾರ ಬಂದ್ ಆಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತಿಳಿಸಿದೆ.
ಆದರೆ, ಇದು ಬೆಂಗಳೂರಿನಲ್ಲಿ ಓಡಾಡುವ ಎಲ್ಲ ಮೆಟ್ರೋ ರೈಲುಗಳಿಗೆ ಸಂಬಂಧಿಸಿದ ವಿಷಯವಲ್ಲ. ಕೇವಲ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ಸ್ಟೇಷನ್ ಮತ್ತು ಬೈಯಪ್ಪನಹಳ್ಳಿ ಹಾಗೂ ಕೃಷ್ಣರಾಜಪುರದಿಂದ ವೈಟ್‌ಫೀಲ್ಡ್ (ಕಾಡುಗೋಡಿ) ನಡುವಿನ ಸಂಚಾರಕ್ಕೆ ಸಂಬಂಧಿಸಿದ ವಿಷಯ.
ಯಾವ ಮಾರ್ಗದಲ್ಲಿ ಸಂಚಾರ ಬಂದ್? ಏನು ವಿಷಯ?
- ಬೈಯಪ್ಪನಹಳ್ಳಿ-ಸ್ವಾಮಿ ವಿವೇಕಾನಂದ ರಸ್ತೆ ಹಾಗೂ ಕೃಷ್ಣರಾಜಪುರ-ವೈಟ್‌ಫೀಲ್ಡ್(ಕಾಡುಗೋಡಿ) ನಡುವಿನ ಎರಡು ಮೆಟ್ರೋ ರೈಲು ಸಂಚಾರವನ್ನು ಬೆಳಗ್ಗೆ 5 ರಿಂದ 7 ಘಂಟೆವರೆಗೂ ಸ್ಥಗಿತಗೊಳಿಸಲಾಗುತ್ತಿದೆ.
- ಬೆಳಗ್ಗೆ 7 ಘಂಟೆಯ ನಂತರ ಬೈಯಪ್ಪನಹಳ್ಳಿ-ಕೆಂಗೇರಿ, ಕೃಷ್ಣರಾಜಪುರ-ವೈಟ್‌ಫೀಲ್ಡ್(ಕಾಡುಗೋಡಿ) ನಡುವಿನ ರೈಲು ಸಂಚಾರವು ಎಂದಿನಂತೆ ರಾತ್ರಿ 11 ಘಂಟೆವರೆಗೆ ಇರಲಿದೆ.
- ಇನ್ನು ಹಸಿರು ಬಣ್ಣದ ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು BMRCL ತಿಳಿಸಿದೆ.
ಯಾಕೆ ಬೆಳಗ್ಗಿನ ಎರಡು ಗಂಟೆ ಹೊತ್ತು ಬಂದ್?
ಎಲ್ಲರಿಗೂ ತಿಳಿದಿರುವಂತೆ ಕೆಂಗೇರಿಯಿಂದ ಬೈಯಪ್ಪನಹಳ್ಳಿವರೆಗೆ ನೇರಳೆ ಮಾರ್ಗದಲ್ಲಿ ಸಂಚಾರ ಆರಂಭವಾಗಿ ವರ್ಷಗಳೇ ಕಳೆದಿವೆ. ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗೆ 15.5 ಕಿ.ಮೀ. ಉದ್ದದ ವಿಸ್ತರಿತ ಯೋಜನೆಯ ಕಾಮಗಾರಿಯೂ ಆರಂಭಗೊಂಡಿತ್ತು. ಅದರಲ್ಲಿ ಕೆ.ಆರ್.ಪುರದಿಂದ ವೈಟ್‌ಫೀಲ್ಡ್‌ವರೆಗಿನ 12 ಕಿ.ಮೀ. ಉದ್ದದ ಮೆಟ್ರೋ ರೈಲು ಸಂಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 25ರಂದು ಉದ್ಘಾಟಿಸಿದ್ದರು.
ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಶ್ರೀ ಸತ್ಯಸಾಯಿ ಆಸ್ಪತ್ರೆ, ನಲ್ಲೂರುಹಳ್ಳಿ, ಕುಂದಲಹಳ್ಳಿ, ಸೀತಾರಾಮಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್‌ಪಾಳ್ಯ, ಮಹದೇವಪುರ ಕೆಆರ್ ಪುರ ಹೀಗೆ ಹತ್ತು ನಿಲ್ದಾಣಗಳನ್ನು ದಾಟುತ್ತಾ ರೈಲು ಸಂಚರಿಸುತ್ತಿದೆ. ಆದರೆ ಬೈಯಪ್ಪನ ಹಳ್ಳಿ ಮತ್ತು ಕೆ.ಆರ್. ಪುರ ನಡುವಿನ ಸಂಚಾರ ಇನ್ನೂ ಆರಂಭಗೊಂಡಿಲ್ಲ. ಆ ಕೆಲಸ ಈಗ ನಡೆಯುತ್ತಿದೆ. ಹೀಗಾಗಿ ಬೈಯಪ್ಪನಹಳ್ಳಿ ಹಾಗೂ ಕೃಷ್ಣರಾಜಪುರಂ ನಿಲ್ದಾಣಗಳನ್ನು ಸಂಪರ್ಕಿಸುವ 3.5 ಕಿ.ಮೀ. ಟ್ರ್ಯಾಕ್‌ನ ಸಿಗ್ನಲಿಂಗ್ ಹಾಗೂ ಇತರ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು, ಇದಕ್ಕಾಗಿ ಪ್ರತಿದಿನ ಬೆಳಗ್ಗೆ 5ರಿಂದ 7 ಗಂಟೆವರೆಗೆ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದೆ.
ಕೆಲವೇ ಸಮಯದಲ್ಲಿ ಉದ್ಘಾಟನೆ
ಈಗ ದಿನಕ್ಕೆ ಎರಡು ಗಂಟೆಗಳ ಕಾಲ ಮೆಟ್ರೋ ಸಂಚಾರ ಸ್ಥಗಿತಗೊಳಿಸಿ ರೈಲುಗಳ ಸಂಚಾರ ಪರೀಕ್ಷೆ ಸಿಗ್ನಲ್‌ಗಳನ್ನು ಪರೀಕ್ಷೆ ನಡೆಸಿ ಓಕೆ ಅನಿಸಿದರೆ ಕೆಲವೇ ತಿಂಗಳಲ್ಲಿ ನೇರಳೆ ಮಾರ್ಗದ ರೈಲು ಕೆಂಗೇರಿಯಿಂದ ನೇರವಾಗಿ ವೈಟ್‌ಫೀಲ್ಡ್‌ವರೆಗೂ ಸಂಚರಿಸಲಿದೆ. (ಈಗ ಕೆಂಗೇರಿಯಿಂದ ಬೈಯಪ್ಪನಹಳ್ಳಿವರೆಗೆ ರೈಲು ಸಾಗುತ್ತದೆ. ಅಲ್ಲಿಂದ 3.5 ಕಿ.ಮೀ. ರಸ್ತೆಯಲ್ಲಿ ಕ್ರಮಿಸಿ ಕೆ.ಆರ್‌ಪುರಕ್ಕೆ ಹೋದರೆ ಅಲ್ಲಿ ವೈಟ್‌ಫೀಲ್ಡ್‌ವರೆಗೆ ಸಾಗುವ ಮೆಟ್ರೋ ಹತ್ತಬೇಕಾಗುತ್ತದೆ).
ಇದನ್ನೂ ಓದಿ: Namma Metro : ಮೆಟ್ರೊ ಕಾಮಗಾರಿ ಮತ್ತೊಂದು ಎಡವಟ್ಟು; ಸರ್ವಿಸ್ ರಸ್ತೆಗೆ ಉರುಳಿ ಬಿದ್ದ ಕ್ರೇನ್
ಮೆಟ್ರೋ ರೈಲು ಸಂಚಾರದ ಈಗಿನ ಸ್ಥಿತಿಗತಿ ಏನು?
ಸದ್ಯ ಬೆಂಗಳೂರಿನಲ್ಲಿ ಒಟ್ಟು 56 ಕಿ. ಮೀ. ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು ಸಂಚಾರ ನಡೆಸುತ್ತಿವೆ. 2023ರಲ್ಲಿ 38.09 ಕಿ. ಮೀ. ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಓಡಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆ. ಇದರಿಂದಾಗಿ ನಮ್ಮ ಮೆಟ್ರೋ ಜಾಲ 94.09 ಕಿ. ಮೀ.ಗೆ ವಿಸ್ತರಣೆಯಾಗಲಿದೆ. ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಸೇರಿ ಎರಡು ಟೆಕ್ ಹಬ್‌ಗಳನ್ನು 2023ರಲ್ಲಿ ನಮ್ಮ ಮೆಟ್ರೋ ಸಂಪರ್ಕಿಸಲಿದೆ. ಬೆಂಗಳೂರು ನಗರದ ಮತ್ತೊಂದು ಮಹತ್ವದ ನಮ್ಮ ಮೆಟ್ರೋ ಮಾರ್ಗವಾದ 18.82 ಕಿ. ಮೀ. ಉದ್ದದ ಆರ್. ವಿ. ರಸ್ತೆ-ಬೊಮ್ಮಸಂದ್ರ (ಹಳದಿ ಮಾರ್ಗ) ಈ ವರ್ಷದ ಅಂತ್ಯದಲ್ಲಿ ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದೆ.