ಬೆಂಗಳೂರು: ರಾಜಧಾನಿ ಬೆಂಗಳೂರಿಗರ ನೆಚ್ಚಿನ ಟ್ರಾನ್ಸ್‌ಪೋರ್ಟ್ ಎಂದರೆ ಅದು ನಮ್ಮ ಮೆಟ್ರೋ ಸೇವೆ. ಆದರೆ, ಇದೇ ಸೇವೆಯನ್ನು ಬಳಸಲು ಜನರು ಭಯಪಡುವಂತಾಗಿದೆ. ಏಕೆಂದರೆ ಮೆಟ್ರೋ ನಿಲ್ದಾಣದೊಳಗೆ ಪ್ರವೇಶಿಸುತ್ತಿದ್ದಂತೆ ಕೋತಿಗಳ ಕಾಟ ಹೆಚ್ಚಿದೆ. ಈ ಮೂಲಕ “ನಮ್ಮ ಮೆಟ್ರೋ” ಕೋತಿಗಳ ತಾಣವಾಗಿ ಮಾರ್ಪಟ್ಟಿದೆ.
ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ನಿತ್ಯ ಮೆಟ್ರೋ ಸ್ಟೇಷನ್‌ಗಳಲ್ಲಿ ಕೋತಿಗಳದ್ದೇ ಟೆನ್ಷನ್ ಶುರುವಾಗಿದೆ. ಕೈನಲ್ಲಿ ಬ್ಯಾಗ್ ನೋಡಿದ ಕೂಡಲೇ ಆಹಾರವೆಂದು ಓಡಿ ಬರುವ ಕೋತಿಗಳಿಂದ ಪ್ರಯಾಣಿಕರು ತಪ್ಪಿಸಿಕೊಳ್ಳುವುದೇ ಹರಸಾಹಸವಾಗಿದೆ. ಕೋತಿಗಳ ಕಾಟಕ್ಕೆ ಮೆಟ್ರೋ ಪ್ರಯಾಣಿಕರು ಹೈರಾಣಾಗಿದ್ದಾರೆ.
ಇತ್ತ ಮಂಗನ ಕಾಟಕ್ಕೆ ಹೆದರಿ ಪ್ರಯಾಣಿಕರಿಗೆ ಎಚ್ಚರಿಕೆ ಸಂದೇಶವನ್ನು ನಮ್ಮ ಮೆಟ್ರೋ ನೀಡಿದೆ. ಪ್ರಮುಖವಾಗಿ ಸೌತ್ ಎಂಡ್ ಸರ್ಕಲ್ ಹಾಗೂ ಮಾಗಡಿ ರೋಡ್ ಮೆಟ್ರೋ ಸ್ಟೇಷನ್ ಬಳಿ ಮಂಗನ ಕಾಟ ಹೆಚ್ಚಿದೆ. ಹೀಗಾಗಿ ʻಕೋತಿ ಇದೆ ಎಚ್ಚರಿಕೆʼ ಎಂದು ನಮ್ಮ ಮೆಟ್ರೋ ನೋಟಿಸ್ ಬೋರ್ಡ್ ಹಾಕಿದೆ.
ನಿಲ್ದಾಣದೊಳಗೆ ಬರುವ ಪ್ರಯಾಣಿಕರ ಮೇಲೆ ಹಠಾತ್ ದಾಳಿಯ ಭಯದಿಂದ ಎಚ್ಚರಿಕೆ ಫಲಕ ಹಾಕಲಾಗಿದೆ. ಇದರೊಂದಿಗೆ ಕೋತಿಗಳು ಹೈವೋಲ್ಟೇಜ್ ಹಳಿಗಳ ಮೇಲೆ ಹೋದರೆ ಎಂಬ ಆತಂಕವು ಇದ್ದು, ಇದಕ್ಕಾಗಿ ಸ್ಥಳದಲ್ಲೇ ಇರುವ ಸಿಬ್ಬಂದಿ ಗಮನಹರಿಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ | video Viral: ಹಸಿದ ಕೋತಿ, ಮರಿಗೆ ಮಾವಿನಹಣ್ಣು ನೀಡಿದ ಕಾನ್‌ಸ್ಟೆಬಲ್ ನೆಟ್ಟಿಗರು ಫಿದಾ