ಬೆಂಗಳೂರು: ರಾಜಧಾನಿಯ ಸಂಚಾರ ಜೀವನಾಡಿಯಾಗಿ ಬೆಳೆಯುತ್ತಿರುವ ನಮ್ಮ ಮೆಟ್ರೋ (Namma Metro) ಸಂಚಾರದಲ್ಲಿ ದಿಢೀರ್ ವ್ಯತ್ಯಯವಾಗಿದ್ದು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕೆಂಗೇರಿಯಿಂದ ಬೈಯ್ಯಪ್ಪನ ಹಳ್ಳಿ (Kengeri to Byyappanahalli) ಕಡೆಗೆ ಹೋಗುವ ನೇರಳೆ ಮಾರ್ಗದಲ್ಲಿ (Purple root) ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದ್ದು ನಿಲ್ದಾಣಗಳು ಜನರಿಂದ ಗಿಜಿಗುಡುತ್ತಿವೆ.
ಮಂಗಳವಾರ (ಜುಲೈ 4) ಬೆಳಗ್ಗೆ ಏಳು ಗಂಟೆಯಿಂದ ಒಮ್ಮಿಂದೊಮ್ಮೆಲೇ ಸಮಸ್ಯೆ ಉಂಟಾಗಿದೆ. ರೈಲುಗಳು ಸಮಯಕ್ಕೆ ಸರಿಯಾಗಿ ಬಾರದೆ ಇರುವುದು, ಯಾವುದೋ ಹೊತ್ತಿಗೆ ಬರುವುದು, ಕೆಲವು ರೈಲುಗಳು ಕ್ಯಾನ್ಸಲ್ ಆಗುವುದು ಹೀಗೆ ಹಲವು ಸಮಸ್ಯೆಗಳು ಕಂಡುಬಂದವು. ಎಷ್ಟೋ ನಿಮಿಷಕ್ಕೊಮ್ಮೆ ಬರುವ ರೈಲುಗಳು ಕೂಡಾ ತುಂಬಿ ತುಳುಕುತ್ತಿದ್ದುದರಿಂದ ಅದಕ್ಕೆ ಹತ್ತಲಾಗದೆ ಜನರು ನಿರಾಶರಾದರು. ಹೀಗಾಗಿ ಬಹುತೇಕ ಎಲ್ಲ ನಿಲ್ದಾಣಗಳಲ್ಲಿ ಜನಸಾಗರವೇ ಕಂಡುಬಂತು. ಪ್ಲ್ಯಾಟ್ ಫಾರಂಗಳಲ್ಲಿ ನಿಲ್ಲಲೂ ಜಾಗವಿರಲಿಲ್ಲ.
ಬೆಳಗ್ಗಿನ ಹೊತ್ತು ಸಾಕಷ್ಟು ಸಂಖ್ಯೆಯ ಪ್ರಯಾಣಿಕರು ಮೆಟ್ರೋ ರೈಲನ್ನು ಅವಲಂಬಿಸುತ್ತಾರೆ, ಇದರ ಜತೆಗೆ ಈಗ ಹೆಚ್ಚಿನ ಐಟಿ ಕಂಪನಿಗಳು ವಾರದ ಆರಂಭದಲ್ಲಿ ಸಿಬ್ಬಂದಿಗಳನ್ನು ಕಚೇರಿಗೇ ಬರಬೇಕು ಎಂಬ ನಿಯಮ ಮಾಡಿದ್ದರಿಂದ ಮೆಟ್ರೋ ಪ್ರಯಾಣಿಕರ ಸಂಖೈಯೂ ಜಾಸ್ತಿಯಾಗಿದೆ. ಇದರ ನಡುವೆಯೇ ಮೆಟ್ರೋ ಸಂಚಾರ ವ್ಯತ್ಯಯ ಆಗಿರುವುದರಿಂದ ಭಾರಿ ಸಮಸ್ಯೆ ಉಂಟಾಯಿತು.
ಹೆಚ್ಚು ಜನ ಸಂಚರಿಸುವ ಅವಧಿಯಾದ ಪೀಕ್ ಟೈಮ್ನಲ್ಲೇ ಮೆಟ್ರೋ ಏಕಾಏಕಿ ಸ್ಥಗಿತಗೊಂಡಿದ್ದರಿಂದ ಕಚೇರಿ, ಶಾಲಾ-ಕಾಲೇಜಿಗೆ ಹೋಗಲು ಮೆಟ್ರೋ ಅವಲಂಬಿಸಿರುವ ಪ್ರಯಾಣಿಕರಿಗೆ ತೊಂದರೆಯಾಯಿತು. ಕಚೇರಿಗೆ ಹೋಗಬೇಕಾದವರು ಮೆಟ್ರೋ ನಿಲ್ದಾಣದಲ್ಲೇ ಬಾಕಿಯಾಗಿದ್ದಾರೆ.
ಅನೌನ್ಸ್‌ಮೆಂಟ್ ಕೂಡಾ ಮಾನ್ಯುವಲ್!
ನೇರಳೆ ಮಾರ್ಗದ ಮೆಟ್ರೋ ಸಂಚಾರ ಎಷ್ಟೊಂದು ಅಸ್ತವ್ಯಸ್ತವಾಗಿತ್ತು ಎಂದರೆ ಮೆಟ್ರೋ ರೈಲುಗಳಲ್ಲಿ ಸಾಮಾನ್ಯವಾಗಿ ಕೇಳಿಬರುವ ಸ್ವೀಟ್ ವಾಯ್ಸ್ ಕೂಡಾ ನಾಪತ್ತೆಯಾಗಿತ್ತು. ಮುಂದಿನ ನಿಲ್ದಾಣ ಯಾವುದು ಎನ್ನುವುದನ್ನು ಅತ್ಯಂತ ಹಿತವಾಗಿ ಹೇಳುತ್ತಿದ್ದ ಧ್ವನಿಯ ಬದಲು ʻವಿಧಾನ ಸೌಧ.. ವಿಧಾನ ಸೌಧ.. ವಿಧಾನ ಸೌಧʼʼ ಎಂದು ಚಾಲಕನೇ ಮೈಕ್ ಹಿಡಿದು ಕಿರುಚಬೇಕಾದ ಸ್ಥಿತಿ ಬಂದಿತ್ತು. ಸಾಮಾನ್ಯವಾಗಿ ಎರಡು ನಿಮಿಷ ಮೊದಲು ಕೇಳುವ ಈಗ ರೈಲು ಬರಲಿದೆ ಎಂಬ ಅನೌನ್ಸ್‌ಮೆಂಟ್ ಕೂಡಾ ಇಲ್ಲ! ಮೆಟ್ರೋದಲ್ಲೂ ಹೀಗೆಲ್ಲ ಆಗಬಹುದಾ ಎಂದು ಅಚ್ಚರಿಪಡುವಷ್ಟು ವ್ಯತ್ಯಯವಾಗಿದೆ.
ಆಗಿದ್ದೇನು? ಏನು ಸಮಸ್ಯೆ? ಮೆಟ್ರೋ ಹೇಳುವುದೇನು?
ನಮ್ಮ ಮೆಟ್ರೋ (BMRCL) ಕಾರ್ಪೊರೇಷನ್‌ನ ಅಧಿಕೃತ ಪ್ರಕಟಣೆಯ ಪ್ರಕಾರ, ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಏನೋ ಲೋಪ ಆಗಿದ್ದರಿಂದ ಸಮಸ್ಯೆಯಾಗಿದೆ. ಇದನ್ನು ಸರಿಪಡಿಸಲು ತಾಂತ್ರಿಕ ವರ್ಗ ಪ್ರಯತ್ನಪಡುತ್ತಿದೆ. ಈ ಸಮಸ್ಯೆಗಾಗಿ ವಿಷಾದ ವ್ಯಕ್ತಪಡಿಸುವುದಾಗಿ ಮೆಟ್ರೋ ಹೇಳಿದೆ.
ಬೈಯ್ಯಪ್ಪನಹಳ್ಳಿಯಲ್ಲಿ ಸಿಗ್ನಲ್ ಸಮಸ್ಯೆ ಉಂಟಾಗಿದ್ದು, ಮ್ಯಾನುವಲ್ ಆಗಿ ಸಿಗ್ನಲಿಂಗ್ ಮಾಡಲಾಗುತ್ತಿದೆ.
ಪೀಕ್ ಆವರ್ ಮುಗಿದ ಬಳಿಕ ಸೇವೆ ಸ್ಥಗಿತಗೊಳಿಸಿ ಸಿಗ್ನಲ್ ವ್ಯವಸ್ಥೆ ಸರಿಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
11 ಗಂಟೆಯವರೆಗೂ ಸರಿಯಾಗದ ತಾಂತ್ರಿಕ ಸಮಸ್ಯೆ
ಬೆಳಗ್ಗೆ ಏಳು ಗಂಟೆಯಿಂದ ನೇರಳ ಮಾರ್ಗದಲ್ಲಿ ಸಮಸ್ಯೆ ಉಂಟಾಗಿದ್ದು, 11 ಗಂಟೆಯವರೆಗೂ ಅದು ಸರಿಯಾಗಿರಲಿಲ್ಲ. ಜನರು ನಿಲ್ದಾಣದಲ್ಲಿ ಏನು ಮಾಡಬೇಕು ಎಂದು ತಿಳಿಯದೆ ಪರದಾಡುತ್ತಿದ್ದುದು ಕಂಡುಬಂತು
Expect delays on purple line, due to signalling issues . Staff are working to normalise . For kind info and inconvenience regretted .
— ನಮ್ಮ ಮೆಟ್ರೋ (@cpronammametro) July 4, 2023
ಭಾನುವಾರ ಎರಡು ಗಂಟೆ ವ್ಯತ್ಯಯ
ನೇರಳೆ ಮಾರ್ಗದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದರಿಂದ ಭಾನುವಾರ ಎರಡು ಗಂಟೆಗಳ ಕಾಲ ನಮ್ಮ ಮೆಟ್ರೋ ಸ್ಥಗಿತಗೊಳಿಸಲಾಗಿತ್ತು. ಜೂನ್ 30ರಂದು ಎಂ.ಜಿ ರಸ್ತೆ ಮೆಟ್ರೋದಿಂದ ಬೈಯಪ್ಪನಹಳ್ಳಿ ನಿಲ್ದಾಣದವರೆಗೆ ಬೆಳಗ್ಗೆ 7ರಿಂದ 9 ಗಂಟೆವರೆಗೆ ಸಂಚರಿಸಿರಲಿಲ್ಲ..
ಇದನ್ನೂ ಓದಿ: Namma Metro: ಮೆಟ್ರೋ ಕಾಮಗಾರಿಗೆ ಈವರೆಗೆ 38 ಬಲಿ, 12 ಮಂದಿಗೆ ಗಾಯ: ಸಿಎಂ ಬೊಮ್ಮಾಯಿ
ಹೊರಗೆ ಹೋಗಬೇಕು ಎಂದರೆ 9.50 ರೂ.!
ಈ ನಡುವೆ, ಮೆಟ್ರೋ ರೈಲು ನಿಲ್ದಾಣಕ್ಕೆ ಎಂಟ್ರಿ ಪಡೆದುಕೊಂಡು ರೈಲಿಗಾಗಿ ಕಾದು ನಿಂತವರು ರೈಲು ಬಾರದೆ ಇರುವುದರಿಂದ ಹೊರಗೆ ಹೋಗಿ ಬೇರೆ ವ್ಯವಸ್ಥೆ ಮಾಡೋಣ ಎಂದು ಹೊರಗೆ ಬಂದರೆ ಆಗ 9.50 ರೂ. ಹಣ ಕಟ್ ಆಗುವುದು ಕಂಡುಬಂತು! ಇದರ ವಿರುದ್ಧವೂ ಜನರ ಆಕ್ರೋಶ ಕೇಳಿಬಂದಿದೆ.