ಬೆಂಗಳೂರು: ಇಲ್ಲಿನ ನಾಗವಾರದ ರಿಂಗ್ ರೋಡ್‌ನ ಎಚ್‌ಬಿಆರ್ ಲೇಔಟ್ ಬಳಿ ಮಂಗಳವಾರ ಮುಂಜಾನೆ (ಜ.10) ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ನ (Namma Metro Pillar) ರಾಡ್‌ಗಳು ಉರುಳಿ ತಾಯಿ-ಮಗುವಿನ ಜೀವವನ್ನು ತೆಗೆದಿದ್ದವು.
ಈ ಘಟನೆ ಬಳಿಕ ನಮ್ಮ ಮೆಟ್ರೋ ಪಿಲ್ಲರ್ ಎಷ್ಟು ಸೇಫ್ ಎಂಬ ಪ್ರಶ್ನೆ ಕಾಡುತ್ತಿದೆ. ಇಷ್ಟಕ್ಕೂ ನಮ್ಮ ಮೆಟ್ರೋ ಪಿಲ್ಲರ್ ಡಿಸೈನ್ ಹೇಗಿರಬೇಕು? ಕಾಮಗಾರಿ ವೇಳೆ ಏನೆಲ್ಲ ಸುರಕ್ಷತಾ ಕ್ರಮಕೈಗೊಳ್ಳಬೇಕು? ಸದ್ಯ ನಗರದಲ್ಲಿ ನಡೆಯುತ್ತಿರುವ ನಿರ್ಮಾಣ ಹಂತದ ಮೆಟ್ರೋ ಕಾಮಗಾರಿಯಲ್ಲಿ ಪಿಲ್ಲರ್ ಎಷ್ಟು ಸುರಕ್ಷಿತ ಎಂಬುದರ ರಿಯಾಲಿಟಿ ಚೆಕ್ ಇಲ್ಲಿದೆ.
ಹೇಗಿರಬೇಕು ಪಿಲ್ಲರ್ ಡಿಸೈನ್?
ಮೆಟ್ರೋ ಪಿಲ್ಲರ್ ಡಿಸೈನ್ ಹೇಗಿರಬೇಕು ಎಂದರೆ ಸುಮಾರು 45ರಿಂದ 50 ಮೀಟರ್ ಆಳದಿಂದ ಪಿಲ್ಲರ್ ಇರಬೇಕು. M20 ಗ್ರೇಡ್ ಅಥವಾ ಅದಕ್ಕಿಂತ ಹೆಚ್ಚು ಗ್ರೇಡ್ ಕಾಂಕ್ರಿಟ್ ಬಳಸಬೇಕು. ಪಿಲ್ಲರ್ ನಿರ್ಮಾಣ ಸ್ಥಳದಲ್ಲಿ ಭೂಮಿಯ ತೇವಾಂಶ ಪರೀಕ್ಷೆಯಾಗಿರಬೇಕು. ಪಿಲ್ಲರ್ ಸುತ್ತಳತೆಗಿಂತ ಪಿಲ್ಲರ್ ತಳಭಾಗ ಅಗಲವಿರಬೇಕು.
ದುರಂತದ ಬಳಿಕವೂ ಬಿಎಂಆರ್‌ಸಿಎಲ್ ನಿರ್ಲಕ್ಷ್ಯ?
ಮಾರತ್ ಹಳ್ಳಿ- ಎಚ್ಎಸ್ಆರ್ ಲೇಔಟ್ ನಡುವೆ ನಡೆಯುತ್ತಿರುವ ಮೆಟ್ರೋ ಕಾಮಗಾರಿಯಲ್ಲಿ ಸುಮಾರು 25 ಅಡಿ ಎತ್ತರಕ್ಕೆ ಪಿಲ್ಲರ್ ನಿಲ್ಲಿಸಿದ್ದು ಆಸರೆಗೆ ಯಾವುದೇ ಕಂಬಿಗಳಿಗಿಲ್ಲ. ರಸ್ತೆ ಕಡೆ ವಾಲದಂತೆ ಎರಡು ವೈರ್ ರೋಪ್‌ಗಳಿಂದ ಪಿಲ್ಲರ್ ಕಟ್ಟಿ ನಿಲ್ಲಿಸಲಾಗಿದೆ. ತೂಕ ಹೆಚ್ಚಾದಂತೆ ಯಾವ ಕಡೆಯಾದರೂ ಪಿಲ್ಲರ್ ಕುಸಿಯುವ ಸಾಧ್ಯತೆ ಇದೆ. ಸದ್ಯ ನೆಲ ಮಟ್ಟಕ್ಕೆ ಇರುವ ಪಿಲ್ಲರ್‌ಗಳಿಗೆ ಮಾತ್ರ ಕಾಂಕ್ರೀಟ್ ಹಾಕಲಾಗಿದೆ. ಕೆಲವು ಪಿಲ್ಲರ್‌ಗಳಿಗೆ ಸಪೋರ್ಟ್ ಆಗಿ ಕಬ್ಬಿಣದ ರಾಡುಗಳನ್ನು ಕೊಡಲಾಗಿದ್ದರೆ, ಮತ್ತೆ ಕೆಲವು ಕಡೆಗಳಲ್ಲಿ ಯಾವುದೇ ಸಪೋರ್ಟ್ ಇಲ್ಲದೇ ಕಂಬಿಗಳನ್ನು ನಿಲ್ಲಿಸಲಾಗಿದೆ. ಸಿಲ್ಕ್ ಬೋರ್ಡ್‌ನಿಂದ ಮಾರತ್ ಹಳ್ಳಿವರೆಗೆ ಬಹುತೇಕ ಪಿಲ್ಲರ್‌ಗಳು ಯಾವುದೇ ಸಪೋರ್ಟ್ ಇಲ್ಲದೇ ನಿಂತಿವೆ.
ಕಾಂಕ್ರೀಟ್ ಹಾಕುವಾಗಲೇ ರಾಡ್ ಅಳವಡಿಕೆ
ಮಾನ್ಯತಾ ಟೆಕ್ ಪಾರ್ಕ್‌ನಿಂದ ಟಿನ್ ಫ್ಯಾಕ್ಟರಿ ವರೆಗೆ ಮೆಟ್ರೊ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಈ ಒಂದು ಭಾಗದಲ್ಲಿ ಪಿಲ್ಲರ್‌ಗಳ ಅಳವಡಿಕೆ ಮಾಡಲಾಗುತ್ತಿದೆ. ಆದರೆ ಕಾಂಕ್ರೀಟ್ ಇನ್ನೂ ಹಾಕಿಲ್ಲ, ಕೇವಲ ರಾಡ್‌ಗಳ ಮುಖಾಂತರ ಅಳವಡಿಕೆ ಮಾಡಲಾಗಿದೆ. ಆದರೆ ತಜ್ಞರು ಹೇಳುವ ಪ್ರಕಾರ ಕಾಂಕ್ರೀಟ್ ಹಾಕುವಾಗಲೇ ರಾಡ್‌ಗಳನ್ನು ಹಾಕಿ ಅಳವಡಿಸಬೇಕು ಎಂದಿದ್ದಾರೆ.
ಲೋಪದೋಷದ ನಂತರವೂ ದುರಸ್ತಿಯಲ್ಲಿ ವಿಳಂಬ
ಮೆಟ್ರೋ ದುರಂತಕ್ಕೆ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎನ್ನಲಾಗುತ್ತಿದ್ದು, ಪಿಲ್ಲರ್ ಕುಸಿತ ದುರಂತಕ್ಕೆ ಕಾರಣವಾದ ಲೋಪ ಕಂಡು ಬಂದರೂ ದುರಸ್ತಿ ಮಾಡುವಲ್ಲಿ ಬಿಎಂಆರ್‌ಸಿಎಲ್ ವಿಳಂಬ ಧೋರಣೆ ತಾಳುತ್ತಿದೆ. ಜತೆಗೆ ಎತ್ತರದ ರಾಡ್ ಹಾಕಿ ಕಾಂಕ್ರೀಟ್ ಹಾಕದೆ ಬಿಡಲಾಗಿತ್ತು. ಸುಮಾರು 60 ಅಡಿ ಎತ್ತರದ ಸಪೋರ್ಟ್ ಇಲ್ಲದೆ ನಿಂತಿದ್ದು, ಭಾರವನ್ನು ತಡೆಯದೆ ಪಿಲ್ಲರ್ ಕುಸಿದ್ದಿತ್ತು.
ಕಾಮಗಾರಿ ಮಾರ್ಗಗಳಲ್ಲಿ ಓಡಾಟಕ್ಕೆ ಜನರ ಹಿಂದೇಟು
ನಗರದಲ್ಲಿ ವಿವಿಧ ಕಡೆ ಎರಡನೇ ಹಂತದ ಕಾಮಗಾರಿ ನಡೆಯುತ್ತಿದ್ದು, ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತದಿಂದಾಗಿ ಕಾಮಗಾರಿ ಮಾರ್ಗಗಳಲ್ಲಿ ಜನರು ಓಡಾಟಕ್ಕೆ ಹಿಂದೇಟು ಹಾಕುವಂತಾಗಿದೆ. ನಗರದ ಔಟರ್ ರಿಂಗ್ ರೋಡ್, ತುಮಕೂರು ರಸ್ತೆ, ದೇವನಹಳ್ಳಿ ಏರ್‌ಪೋರ್ಟ್ ರಸ್ತೆ, ಆರ್ ವಿ ರಸ್ತೆ ಟು ಬೊಮ್ಮಸಂದ್ರ, ಗೊಟ್ಟಿಗೆರೆ- ನಾಗವಾರ ಸೇರಿದಂತೆ ಹಲವೆಡೆ ಮೆಟ್ರೋ ಕಾಮಗಾರಿ ನಡೆಯುತ್ತಿದೆ.
ಇದನ್ನೂ ಓದಿ | Namma Metro Pillar | ಹಿಂದೆಯೂ ಹಲವು ಜೀವಗಳನ್ನು ಬಲಿ ಪಡೆದಿತ್ತು ನಮ್ಮ ಮೆಟ್ರೋ ಕಾಮಗಾರಿ