ನಮ್ಮ ಮೆಟ್ರೊದ ಎರಡನೇ ಹಂತದ ಕಾಮಗಾರಿಯಲ್ಲಿ ಸುರಂಗ ಕೊರೆಯುತ್ತಿದ್ದ ಲಾವಿ ಎಂಬ ಟನೆಲ್ ಬೋರಿಂಗ್ ಮೆಷಿನ್ (ಟಿಬಿಎಂ) 1076 ಮೀಟರ್ ಉದ್ದದ ಸುರಂಗ ಕಾರ್ಯವನ್ನು ಇಂದು (ಏ.16) ಪೂರ್ಣಗೊಳಿಸಿದೆ.
ಮೆಟ್ರೊ ಸುರಂಗ ನಿರ್ಮಾಣ ಕಾರ್ಯದಲ್ಲಿ ಇದೊಂದು ಮಹತ್ವದ ಹೆಜ್ಜೆ. ಶಿವಾಜಿನಗರದಿಂದ ಎಂಜಿ ರಸ್ತೆಯವರೆಗೆ ಒಟ್ಟು 1076 ಮೀಟರ್ ಉದ್ದ ಸುರಂಗವನ್ನು ʼಲಾವಿʼ ಎಂಬ ಹೆಸರಿನ ಈ ಟಿಬಿಎಂ ಕೊರೆದಿದೆ. ಈ ಕಾಮಗಾರಿಗೆ ಇದು ಭರ್ತಿ ಒಂದು ವರ್ಷ ಎರಡು ತಿಂಗಳು ತೆಗೆದುಕೊಂಡಿದೆ ಎಂಬುದು ಸ್ವಾರಸ್ಯಕರ.
2021ರ ಫೆಬ್ರವರಿ 10ರಂದು ಶಿವಾಜಿನಗರದಲ್ಲಿ ಸುರಂಗ ಪ್ರವೇಶಿಸಿದ್ದ ಲಾವಿ ಇಂದು ಎಂಜಿ ರಸ್ತೆಯಲ್ಲಿ ಹೊರಬಂದಿದೆ. ಬೃಹತ್ ಸುರಂಗ ನಿರ್ಮಾಣ ಮಾಡುವ ಈ ಮೆಷಿನ್ ಬಹು ನಿಧಾನವಾಗಿ, ಆದರೆ ನಿಖರವಾಗಿ ಮಣ್ಣನ್ನು ಕೊರೆಯುತ್ತ ಹೋಗುತ್ತದೆ.
ಮೆಟ್ರೋ ಎರಡನೇ ಹಂತದಲ್ಲಿ ಗೊಟ್ಟಿಗೆರೆ- ನಾಗವಾರ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಇದರಲ್ಲಿ 9 ಟಿಬಿಎಂಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ಪೈಕಿ ಲಾವಿ ಎಂಬ ಟಿಬಿಎಂ ಈ ಬ್ರೇಕ್ ಥ್ರೂ ಮಾಡಿದೆ. ರೀಚ್ 6ರಲ್ಲಿ ಬರುವ ಅನೇಕ ಸುರಂಗ ಮಾರ್ಗಗಳನ್ನು ವಿವಿಧ ಟಿಬಿಎಂಗಳು ಕೊರೆಯುತ್ತಿವೆ. ಮುಂದಿನ ದಿನಗಳಲ್ಲಿ ಎಂಜಿ ರಸ್ತೆಯಿಂದ ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ವರೆಗೆ ಸುರಂಗ ಕೊರೆಯುವ ಕೆಲಸವನ್ನು ʼಲಾವಿʼ ಟಿಬಿಎಂ ಆರಂಭಿಸಲಿದೆ.
ಉತ್ತರ ಬೆಂಗಳೂರಿನ ಮೆಟ್ರೊ ನಿರ್ಮಾಣದ ಸಂದರ್ಭದಲ್ಲಿ ಹೆಚ್ಚಿನ ಸುರಂಗಗಳು ಹಾಗೂ ಎಲಿವೇಟೆಡ್ ಮೆಟ್ರೊ ಲೈನ್‌ಗಳು ನಿರ್ಮಾಣವಾಗುತ್ತಿವೆ. ಗೊಟ್ಟಿಗೆರೆ- ನಾಗವಾರ ಮಾರ್ಗ 2024ರಲ್ಲಿ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಎರಡನೇ ಹಂತದ ಮೆಟ್ರೊದಲ್ಲಿ ಸುಮಾರು 14 ಕಿಲೋಮೀಟರ್‌ನಷ್ಟು ದೂರ ಭೂಗತವಾಗಿರಲಿದ್ದು, 12 ನಿಲ್ದಾಣಗಳು ನೆಲದಡಿಯಲ್ಲಿಯೇ ಬರಲಿವೆ.
ಇದನ್ನೂ ಓದಿ: ಮಳೆಗೆ ಮುಳುಗಿದ ಬೆಂಗಳೂರು ಪ್ರದೇಶಗಳು: ಮನೆ, ದೇವಸ್ಥಾನಕ್ಕೆ ನುಗ್ಗಿದ ನೀರು