Site icon Vistara News

Namma Metro : ಮೆಟ್ರೋ ರೈಲಿನಲ್ಲಿ ಸರ್ಕಸ್‌ ಹುಚ್ಚಾಟ: ನಾಲ್ವರು ವಿದ್ಯಾರ್ಥಿಗಳಿಗೆ ದಂಡ

Metro Circus

ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ಮೆಟ್ರೋ ರೈಲಿನಲ್ಲಿ (Namma Metro) ಗೋಬಿ ಮಂಚೂರಿ (Gobi Manchuri) ತಿಂದ ವ್ಯಕ್ತಿಯೊಬ್ಬರಿಗೆ ಪೊಲೀಸರು 500 ರೂ. ದಂಡ ವಿಧಿಸಿದ್ದರು. ಇದೀಗ ಚಲಿಸುವ ರೈಲಿನಲ್ಲಿ ಸರ್ಕಸ್‌ (Circus at Metro train) ಮಾಡಿದ ನಾಲ್ವರು ವಿದ್ಯಾರ್ಥಿಗಳು (Four students) ದಂಡನೆಗೆ ಗುರಿಯಾಗಿದ್ದಾರೆ.

ಅಕ್ಟೋಬರ್‌ 17ರ ರಾತ್ರಿ ಹಸಿರು ಲೈನ್‌ ಮೆಟ್ರೋದಲ್ಲಿ ಯಲಚೇನಹಳ್ಳಿಗೆ ಹೋಗುತ್ತಿದ್ದಾಗ ವಿದ್ಯಾರ್ಥಿಗಳು ಹುಚ್ಚಾಟ ನಡೆಸಿದ್ದರು. ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ನಿಲ್ಲುವಾಗ ಹಿಡಿಯುವ ಹ್ಯಾಂಡಲ್‌ಗಳನ್ನು ಬಳಸಿ ಅದರಲ್ಲಿ ಸರ್ಕಸ್‌ ಮಾಡಿದ್ದರು.

ರಾತ್ರಿ ಸುಮಾರು 11 ಗಂಟೆಗೆ ರೋಲಿಂಗ್ ವ್ಯಾಯಾಮ ಮಾಡಿದ ಮೀತ್ ಪಟೇಲ್ ಹಾಗೂ ಇತರ ಮೂವರು ವಿದ್ಯಾರ್ಥಿಗಳ ವರ್ತನೆಗೆ ಸಹಪ್ರಯಾಣಿಕರು ಆಗಲೇ ಕಿಡಿ ಕಾರಿದ್ದರು. ಆದರೆ, ವಿದ್ಯಾರ್ಥಿಗಳು ಅದಕ್ಕೆ ಕಿವಿ ಕೊಡದೆ ಉದ್ಧಟತನ ಮುಂದುವರಿಸಿದ್ದರು.

ಈ ನಡುವೆ, ಪ್ರಯಾಣಿಕರು ಈ ಸರ್ಕಸ್‌ನ ವಿಡಿಯೊ ಮಾಡಿ ಯಲಚೇನಹಳ್ಳಿಯ ಮೆಟ್ರೋ ನಿಲ್ದಾಣದಲ್ಲಿದ್ದ ಸೆಕ್ಯೂರಿಟಿ ಸ್ಟಾಫ್‌ಗೆ ನೀಡಿದ್ದರು. ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಲ್ಲಿಯೇ ಸೆಕ್ಯೂರಿಟಿ ಡಿಪಾರ್ಟ್ಮೆಂಟ್ & ಹೋಮ್ ಗಾರ್ಡ್ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಬಿಸಿ ಮುಟ್ಟಿಸಿದರು. ಮೆಟ್ರೋ ಪ್ರಾಪರ್ಟಿ ಡ್ಯಾಮೇಜ್ ಮಾಡಿದ ವಿದ್ಯಾರ್ಥಿಗಳಿಗೆ ₹500 ದಂಡ ವಿಧಿಸಿದ್ದಲ್ಲದೆ, ಮೆಟ್ರೋದಲ್ಲಿ ಈ ರೀತಿಯ ವರ್ತನೆ ತೋರದಂತೆ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: Namma Metro : ಮೆಟ್ರೋ ರೈಲಿನಲ್ಲಿ ಗೋಬಿ ಮಂಚೂರಿ ತಿಂದವನಿಗೆ 500 ರೂ. ದಂಡ

ರೈಲು ನಿಲ್ದಾಣದಲ್ಲಿ ಫ್ರಾಂಕ್‌ ಮಾಡಿದ ಯುವಕ ಅರೆಸ್ಟ್‌!

ಕೆಲವು ದಿನಗಳ ಹಿಂದೆ ಮೆಟ್ರೋದ ಎಸ್ಕಲೇಟರ್‌ ಬಳಿ ಯುವಕನೊಬ್ಬ ವೃದ್ಧೆಯೊಬ್ಬರ ಬಳಿ ಕುಚೇಷ್ಟೆ ಮಾಡಿದ್ದಲ್ಲದೆ, ರೈಲಿನೊಳಗೆ ಕರೆಂಟ್‌ ಶಾಕ್‌ ಹೊಡೆದಂತೆ ನಟಿಸಿದ್ದ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಜ್ವಲ್ (23) ಬಂಧಿತ ಆರೋಪಿ. ಈತ ಸೋಷಿಯಲ್‌ ಮೀಡಿಯಾ ಬಳಕೆದಾರನಾಗಿದ್ದು, ತನ್ನ ಒಂದು ವಿಡಿಯೊಗೋಸ್ಕರ ಚಿತ್ರವಿಚಿತ್ರವಾಗಿ ಆಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಾಂಕ್ ವಿಡಿಯೊಗಳನ್ನು ಪೋಸ್ಟ್ ಮಾಡುವ ಪ್ರಜ್ವಲ್‌, ಈ ಬಾರಿ ಇದಕ್ಕಾಗಿ ಮೆಟ್ರೋ ನಿಲ್ದಾಣವನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಅಲ್ಲಿಗೆ ಬಂದ ಪ್ರಜ್ವಲ್‌, ಎಸ್ಕಲೇಟರ್‌ ಬಳಿ ಬಂದಿದ್ದಾನೆ. ಅಲ್ಲಿ ಮಹಿಳಾ ಪ್ರಯಾಣಿಕರೊಬ್ಬರನ್ನು ಹೆದರಿಸಲು ಪ್ರಯತ್ನಿಸಿದ್ದ. ಇದನ್ನು ವಿಡಿಯೊ ಮಾಡಿಕೊಂಡಿದ್ದ.

ಅಲ್ಲದೆ, ಚಲಿಸುತ್ತಿರುವ ಮೆಟ್ರೋದಲ್ಲಿ ಮೊದಲು ಕರೆಂಟ್‌ ಶಾಕ್‌ ಹೊಡೆದವನಂತೆ ನಾಟಕ ಮಾಡಿದ್ದಾನೆ. ಇದರಿಂದ ಅಕ್ಕಪಕ್ಕದವರು ಗಾಬರಿಯಾಗಿದ್ದಾರೆ. ಸಹ ಪ್ರಯಾಣಿಕರು ಆತನನ್ನೇ ದಿಟ್ಟಿಸಿ ನೋಡಿದ್ದಾರೆ. ತನಗೆ ಮೆಟ್ರೋ ಕಂಬಿಯಿಂದ ಏನೋ ಆಗಿದೆ ಎಂಬಂತೆ ಅದನ್ನೇ ನೋಡಿ ಇನ್ನೊಂದು ಕಡೆ ಬಂದು ನಿಂತಿದ್ದಾನೆ. ತನಗೆ ತಲೆ ಸುತ್ತಿದಂತೆ ನಟಿಸಿದ್ದಾನೆ. ಈ ವಿಡಿಯೊವನ್ನು ತನ್ನ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಅಪ್ಲೋಡ್‌ ಮಾಡಿದ್ದು, “ಹೆಂಗೆ ಹೆಂಗಿದೆ ಓಪನಿಂಗ್‌ ಥ್ರಿಲ್‌” ಎಂದು ಹೇಳಿಕೊಂಡಿದ್ದಾನೆ. ಈಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Exit mobile version