Site icon Vistara News

Namma Metro : ಬೈಯಪ್ಪನಹಳ್ಳಿ- ಕೆಆರ್‌ಪುರ ಮೆಟ್ರೊ ಪ್ರಾಯೋಗಿಕ ಸಂಚಾರ ಯಶಸ್ವಿ, ಆಗಸ್ಟ್‌ ಅಂತ್ಯದಲ್ಲಿ Real travel

Namma metro

ಬೆಂಗಳೂರು: ನೇರಳೆ ಮಾರ್ಗದಲ್ಲಿ (Purple line) ಬರುವ ಬೈಯಪ್ಪನಹಳ್ಳಿ-ಕೆಆರ್‌ಪುರ (Byappanahalli to KR Pura) ನಡುವಿನ ಮೆಟ್ರೋ ಮಾರ್ಗದಲ್ಲಿ (Namma Metro) ಪ್ರಾಯೋಗಿಕ ಸಂಚಾರ (Trial Run) ಬುಧವಾರ ಸಂಜೆ ಯಶಸ್ವಿಯಾಗಿ ನಡೆಯಿತು. ಈ ಮಾರ್ಗದಲ್ಲಿ ಇನ್ನು ಒಂದು ತಿಂಗಳ ಕಾಲ ಆಗಾಗ ಪ್ರಾಯೋಗಿಕ ಸಂಚಾರ ನಡೆದು ಆಗಸ್ಟ್‌ ವೇಳೆ ನಿಜವಾದ ಪ್ರಯಾಣ ಆರಂಭವಾಗುವ ನಿರೀಕ್ಷೆ ಇದೆ.

ಬೈಯಪ್ಪನಹಳ್ಳಿಯಿಂದ ಕೆ.ಆರ್‌. ಪುರ ನಡುವಿನ ಅಂತರ 2.5 ಕಿ.ಮೀ. ಆಗಿದೆ. ಈ ಎರಡು ನಿಲ್ದಾಣಗಳ ನಡುವೆ, ಜ್ಯೋತಿಪುರ ಎನ್ನುವ ಒಂದು ನಿಲ್ದಾಣವಿದೆ. ಕೆ.ಆರ್‌.ಪುರಂನಿಂದ ಬುಧವಾರ ಸಂಜೆ 6.04ಕ್ಕೆ ಹೊರಟ ಮೆಟ್ರೋ ರೈಲು ಎಲ್ಲ ತಾಂತ್ರಿಕ ಸಂಗತಿ ಮತ್ತು ಸಿಗ್ನಲಿಂಗ್‌ ವ್ಯವಸ್ಥೆಗಳನ್ನು ಪರಿಶೀಲಿಸಿಕೊಂಡು ಬೈಯಪ್ಪನಹಳ್ಳಿ ಕಡೆಗೆ ಸಾಗಿತು. 2.5 ಕಿ.ಮೀ. ದೂರವನ್ನು ಸುಮಾರು 47 ನಿಮಿಷದಲ್ಲಿ ರೈಲು ತಲುಪಿತು. ಅಲ್ಲಿಂದ ಮತ್ತೆ ಕೆ.ಆರ್‌. ಪುರಂಗೆ ರೈಲು ಸಂಚಾರ ನಡೆಸಿತು. ಗಂಟೆಗೆ ಕೇವಲ 15 ಕಿ.ಮೀ ವೇಗದಲ್ಲಿ ರೈಲು ಓಡಿಸಲಾಗಿದೆ. ಅದರ ಜತೆಗೆ ಮಧ್ಯೆ ಮಧ್ಯೆ ಕೆಲವು ಕಡೆ ತಪಾಸಣೆಗಾಗಿ ನಿಲ್ಲಿಸಲಾಗಿತ್ತು.

ರೋಲಿಂಗ್ ಸ್ಟಾಕ್, ಟ್ರಾಕ್ಷನ್, ಸಿಗ್ನಲಿಂಗ್ ಮತ್ತು ಟೆಲಿಕಮ್ಯುನಿಕೇಷನ್ಸ್ ಮತ್ತು ಟ್ರ್ಯಾಕ್ ತಂಡದಿಂದ ಮೆಟ್ರೋ ಸಿಬ್ಬಂದಿಯನ್ನು ಒಳಗೊಂಡಿರುವ 12 ಜನರೊಂದಿಗೆ ಲೊಕೊ ಪೈಲಟ್ ಪಿ ಜಗದೀಸನ್ ರೈಲನ್ನು ಮುನ್ನಡೆಸಿದರು. ನಿಜವೆಂದರೆ ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಜ್ಯೋತಿಪುರ ನಿಲ್ದಾಣದಿಂದ ಪ್ರಾಯೋಗಿಕ ಸಂಚಾರ ಆರಂಭಿಸಬೇಕಾಗಿತ್ತು. ಆದರೆ, ಮಳೆಯಿಂದಾಗಿ ಆರಂಭಿಕ ಸ್ಥಾನವನ್ನು ಕೆ.ಆರ್‌. ಪುರಂಗೆ ಶಿಫ್ಟ್‌ ಮಾಡಲಾಯಿತು ಎಂದು ತಿಳಿದುಬಂದಿದೆ.

ಮಾರ್ಗಮಧ್ಯದ ಎರಡು ಉಕ್ಕಿನ ಸೇತುವೆಗಳಲ್ಲಿ ರೈಲನ್ನು ಸ್ವಲ್ಪ ಹೊತ್ತು ನಿಲ್ಲಿಸಲಾಗಿತ್ತು. ಜ್ಯೋತಿಪುರ ಮೆಟ್ರೋ ನಿಲ್ದಾಣದ ಕೆಳಗೆ ಕೆಲಕಾಲ ನಿಂತಿತ್ತು. ಟ್ರ್ಯಾಕ್‌ಗಳ ಉದ್ದಕ್ಕೂ ಇರುವ ಅಡಚಣೆಗಳಿಗಾಗಿ ಸೂಕ್ಷ್ಮವಾಗಿ ಪರಿಶೀಲಿಸುವ ಕಾರಣಕ್ಕಾಗಿ ಈ ನಿಧಾನಗತಿಯ ಚಲನೆ ಮೂಲಕ ಪರಿಶೀಲಿಸಲಾಯಿತು. ರೈಲ ಹಳಿಗಳ ಮೇಲೆ ಕೆಲವೊಂದು ನಿರ್ಮಾಣ ಅವಶೇಷಗಳು ಮತ್ತು ಸಣ್ಣ ತಂತಿಗಳನ್ನು ಹಾಗೆಯೇ ಬಿಡಲಾಗಿತ್ತು. ಅದರ ಮೇಲೆ ಸಂಚರಿಸುವಾಗ ಏನಾಗುತ್ತದೆ ಎನ್ನುವುದನ್ನು ಪರಿಶೀಲಿಸುವುದು ಕೂಡಾ ಟ್ರಯಲ್‌ರನ್‌ನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಗುರುವಾರ ಬೆಳಗ್ಗೆ ಬೈಯಪ್ಪನಹಳ್ಳಿಯಿಂದ ಪೂರ್ಣ ಪ್ರಮಾಣದ ಪ್ರಾಯೋಗಿಕ ಓಡಾಟ ನಡೆದಿದೆ.

ಅತ್ಯಂತ ಪ್ರಮುಖವಾದ ಲಿಂಕ್‌ ಮಾರ್ಗ ಇದು

ಎಲ್ಲರಿಗೂ ತಿಳಿದಿರುವಂತೆ ಕೆಂಗೇರಿಯಿಂದ ಬೈಯಪ್ಪನಹಳ್ಳಿವರೆಗೆ ನೇರಳೆ ಮಾರ್ಗದಲ್ಲಿ ಸಂಚಾರ ಆರಂಭವಾಗಿ ವರ್ಷಗಳೇ ಕಳೆದಿವೆ. ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗೆ 15.5 ಕಿ.ಮೀ. ಉದ್ದದ ವಿಸ್ತರಿತ ಯೋಜನೆಯ ಕಾಮಗಾರಿಯೂ ಆರಂಭಗೊಂಡಿತ್ತು. ಅದರಲ್ಲಿ ಕೆ.ಆರ್‌.ಪುರದಿಂದ ವೈಟ್‌ಫೀಲ್ಡ್‌ವರೆಗಿನ 12 ಕಿ.ಮೀ. ಉದ್ದದ ಮೆಟ್ರೋ ರೈಲು ಸಂಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ 25ರಂದು ಉದ್ಘಾಟಿಸಿದ್ದರು.

ವೈಟ್‌ಫೀಲ್ಡ್‌, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಶ್ರೀ ಸತ್ಯಸಾಯಿ ಆಸ್ಪತ್ರೆ, ನಲ್ಲೂರುಹಳ್ಳಿ, ಕುಂದಲಹಳ್ಳಿ, ಸೀತಾರಾಮಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್‌ಪಾಳ್ಯ, ಮಹದೇವಪುರ ಕೆಆರ್‌ ಪುರ ಹೀಗೆ ಹತ್ತು ನಿಲ್ದಾಣಗಳನ್ನು ದಾಟುತ್ತಾ ರೈಲು ಸಂಚರಿಸುತ್ತಿದೆ. ಆದರೆ, ಬೈಯಪ್ಪನ ಹಳ್ಳಿ ಮತ್ತು ಕೆ.ಆರ್‌. ಪುರ ನಡುವಿನ ಸಂಚಾರ ಇನ್ನೂ ಆರಂಭಗೊಂಡಿಲ್ಲ. ಅದರ ಪ್ರಾಯೋಗಿಕ ಪರೀಕ್ಷೆಯೇ ಈಗ ನಡೆಯುತ್ತಿರುವುದು. ಅದೀಗ ಆಗಸ್ಟ್‌ ಅಂತ್ಯದ ಹೊತ್ತಿಗೆ ತೆರೆದುಕೊಳ್ಳಲಿದೆ.

ಇದನ್ನೂ ಓದಿ : Namma Metro : ನೀವು ನಂಬ್ತೀರಾ? ಇನ್ನು ಸ್ವಲ್ಪ ದಿನ ಹೋದ್ರೆ ಚಾಲಕನಿಲ್ಲದೆಯೇ ಓಡುತ್ತಂತೆ ನಮ್ಮ ಮೆಟ್ರೊ!

ಒಮ್ಮೆ ಬೈಯಪ್ಪನ ಹಳ್ಳಿಯಿಂದ ಕೆ.ಆರ್‌ಪುರಂ ಮಾರ್ಗ ತೆರೆದುಕೊಂಡರೆ ನೇರಳೆ ಮಾರ್ಗದಲ್ಲಿ ನೇರವಾಗಿ ವೈಟ್‌ಫೀಲ್ಡ್‌ವರೆಗೆ ಪ್ರಯಾಣಿಸಬಹುದು. ವೈಟ್‌ ಫೀಲ್ಡ್‌ ಭಾಗದಲ್ಲಿ ಅತಿ ಹೆಚ್ಚು ಐಟಿ ಕಂಪನಿಗಳಿದ್ದು ಅವುಗಳ ಉದ್ಯೋಗಿಗಳಿಗೆ ಇದರಿಂದ ನೆರವಾಗಲಿದೆ. ಈಗ ಕೆ.ಆರ್‌ಪುರಂನಿಂದ ವೈಟ್‌ಫೀಲ್ಡ್‌ವರೆಗೆ ರೈಲು ಸಂಚಾರವಿದ್ದರೂ ಬೈಯಪ್ಪನಹಳ್ಳಿಯಿಂದ ಕೆ.ಆರ್‌. ಪುರಂವರೆಗೆ ಬೇರೆ ವಾಹನಗಳನ್ನು ಅವಲಂಬಿಸಬೇಕಾದ ಕಾರಣಕ್ಕಾಗಿ ಹೆಚ್ಚಿನವರು ಈ ರೈಲು ಸೇವೆಯನ್ನು ಬಳಸುತ್ತಿರಲಿಲ್ಲ. ಇನ್ನು ಮುಂದೆ ಇದರ ಉಪಯೋಗ ಚೆನ್ನಾಗಿ ನಡೆಯುವ ನಿರೀಕ್ಷೆ ಇದೆ.

ಬೆಂಗಳೂರು: ನೇರಳೆ ಮಾರ್ಗದಲ್ಲಿ (Purple line) ಬರುವ ಬೈಯಪ್ಪನಹಳ್ಳಿ-ಕೆಆರ್‌ಪುರ (Byappanahalli to KR Pura) ನಡುವಿನ ಮೆಟ್ರೋ ಮಾರ್ಗದಲ್ಲಿ (Namma Metro) ಪ್ರಾಯೋಗಿಕ ಸಂಚಾರ (Trial Run) ಬುಧವಾರ ಸಂಜೆ ಯಶಸ್ವಿಯಾಗಿ ನಡೆಯಿತು. ಈ ಮಾರ್ಗದಲ್ಲಿ ಇನ್ನು ಒಂದು ತಿಂಗಳ ಕಾಲ ಆಗಾಗ ಪ್ರಾಯೋಗಿಕ ಸಂಚಾರ ನಡೆದು ಆಗಸ್ಟ್‌ ವೇಳೆ ನಿಜವಾದ ಪ್ರಯಾಣ ಆರಂಭವಾಗುವ ನಿರೀಕ್ಷೆ ಇದೆ.

Exit mobile version