Site icon Vistara News

Namma Metro: ಮತ್ತೆ ಅವಮಾನ ಮಾಡಿದ ನಮ್ಮ ಮೆಟ್ರೋ; ಬಟನ್‌ ಇಲ್ಲದ್ದಕ್ಕೆ ಕಾರ್ಮಿಕನಿಗೆ ಪ್ರವೇಶ ನೀಡದ ಸಿಬ್ಬಂದಿ!

Namma Metro which does not allow entry to a worker for not having button

ಬೆಂಗಳೂರು: ಹಾಕಿಕೊಂಡಿರುವ ಬಟ್ಟೆ ಕ್ಲೀನ್‌ ಇಲ್ಲ ಎಂಬ ಕಾರಣಕ್ಕಾಗಿ ರೈತರೊಬ್ಬರನ್ನು ಮೆಟ್ರೋ (Namma Metro) ಪ್ರವೇಶಿಸಲು (Metro denies entry to Farmer) ಅವಕಾಶ ನೀಡದೆ ಅಪಮಾನ ಮಾಡಿದ್ದ ಘಟನೆ ಮಾಸುವ ಮುನ್ನವೇ ಬೆಂಗಳೂರಿನಲ್ಲಿ (Bangalore News) ಮೆಟ್ರೋ ಸಿಬ್ಬಂದಿ ಮತ್ತೊಂದು ಎಡವಟ್ಟು ಮಾಡಿದ್ದು, ಕಾರ್ಮಿಕನಿಗೆ ಪ್ರವೇಶ ನಿರಾಕರಿಸಿ ಉದ್ದಟತನವನ್ನು ಮೆರೆದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶಕ್ಕೆ (Netizens fumes) ಕಾರಣವಾಗಿದೆ.

ಕಾರ್ಮಿಕ ಯುವಕ ಧರಿಸಿದ್ದ ಉಡುಪು ಸರಿ ಇಲ್ಲ ಎಂಬ ಕಾರಣ ನೀಡಿ ಆತನಿಗೆ ಒಳಗೆ ಹೋಗಲು ಅನುಮತಿಯನ್ನು ಕೊಟ್ಟಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಅನ್ನದಾತನಿಗೆ ಅವಮಾನ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕೇಸ್ ನಡೆದಿದೆ.

ಈ ಯುವಕನ ಶರ್ಟ್‌ನಲ್ಲಿ ಗುಂಡಿ (ಬಟನ್ಸ್) ಇಲ್ಲದ ಕಾರಣ ತಡೆದು ನಿಲ್ಲಿಸಿರುವ ಆರೋಪ ಕೇಳಿಬಂದಿದೆ. ಶರ್ಟ್‌ನ ಗುಂಡಿಯನ್ನು ಹಾಕಿಕೊಂಡು ನೀಟಾಗಿ ಬಾ. ಇಲ್ಲದಿದ್ದರೆ ಎಂಟ್ರಿ ಕೊಡಲ್ಲವೆಂದು ಮೆಟ್ರೋ ಸಿಬ್ಬಂದಿ ಆತನಿಗೆ ಗದರಿದ್ದಾರೆ ಎನ್ನಲಾಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ

ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಜನಾಕ್ರೋಶ ವ್ಯಕ್ತವಾಗಿದ್ದು, ಮೆಟ್ರೋ ಸಿಬ್ಬಂದಿ ನಡೆಗೆ ಎಕ್ಸ್‌ನಲ್ಲಿ ಅಸಮಾಧಾನಗಳನ್ನು ಹೊರಹಾಕಲಾಗಿದೆ. ಅಲ್ಲದೆ, ಸಂಸದ ತೇಜಸ್ವಿ ಸೂರ್ಯ ಅವರಿಗೆ ಈ ಬಗ್ಗೆ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಲಾಗಿದೆ.

ಈ ಹಿಂದೆ ಅಪಮಾನ ಮಾಡಿದ ಮೆಟ್ರೋ ಸಿಬ್ಬಂದಿ ವಜಾ

ಫೆಬ್ರವರಿ 26ರಂದು ಹಾಕಿಕೊಂಡಿರುವ ಬಟ್ಟೆ ಕ್ಲೀನ್‌ ಇಲ್ಲ ಎಂಬ ಕಾರಣಕ್ಕಾಗಿ ರೈತರೊಬ್ಬರನ್ನು ಮೆಟ್ರೋ ಪ್ರವೇಶಿಸಲು ಅವಕಾಶ ನೀಡದೆ ಅಪಮಾನ ಮಾಡಿದ್ದ ಸಿಬ್ಬಂದಿಯನ್ನು ಒಂದೇ ದಿನದಲ್ಲಿ ಸೇವೆಯಿಂದ ವಜಾ ಮಾಡಲಾಗಿತ್ತು.

ರಾಜಾಜಿನಗರದ ಮೆಟ್ರೋ ಸ್ಟೇಷನ್‌ನಲ್ಲಿ ತಲೆ ಮೇಲೆ ಮೂಟೆ ಹೊತ್ತು ಬಂದ ರೈತನೊಬ್ಬನನ್ನು ಒಳಗೆ ಬಿಡದೆ ಅಪಮಾನಿಸಿದ ಘಟನೆಯನ್ನು ಸಹ ಪ್ರಯಾಣಿಕರು ವಿಡಿಯೊ ಮಾಡಿ ಜಾಲತಾಣದಲ್ಲಿ ಹಾಕಿದ್ದರು. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ಮೆಟ್ರೋ ಸಿಬ್ಬಂದಿ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತ BMRCL ಮುಜುಗರಕ್ಕೆ ಕಾರಣರಾದ ಸಿಬ್ಬಂದಿ ಅಮಾನತು ಮಾಡಿದೆ. ಈ ಬಗ್ಗೆ X ನಲ್ಲಿ ಅಧಿಕೃತ ಮಾಹಿತಿ ನೀಡಿ ವಿಷಾದ ವ್ಯಕ್ತಪಡಿಸಿದ BMRCL ಪ್ರಯಾಣಿಕರಿಗೆ ಉಂಟಾದ ಅನುಕೂಲತೆಗೆ ವಿಷಾದಿಸಿತ್ತು.

ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಯಾಗಿದ್ದು, ರಾಜಾಜಿನಗರ ಘಟನೆಯ ಕುರಿತು ತನಿಖೆ ನಡೆಸಿ ಭದ್ರತಾ ಮೇಲ್ವಿಚಾರಕರ ಸೇವೆಯನ್ನು ವಜಾಗೊಳಿಸಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನನುಕೂಲತೆಗಾಗಿ ನಿಗಮವು ವಿಷಾದಿಸುತ್ತದೆ ಎಂದು ನಮ್ಮ ಮೆಟ್ರೋ ಹೇಳಿತ್ತು.

ಅಧಿಕಾರಿಗಳ ವಿರುದ್ಧ ಕ್ರಮ ಎಂದ ಸಚಿವ ಚಲುವರಾಯ ಸ್ವಾಮಿ

ಈ ನಡುವೆ, ಮೆಟ್ರೋದಲ್ಲಿ ರೈತನ ತಡೆದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕೃಷಿ ಸಚಿವ ಚಲುವರಾಯ ಸ್ವಾಮಿ,
ಅದು ತಪ್ಪು, ಆತ ಒಳ್ಳೆಯ ಬಟ್ಟೆಯನ್ನೇ ಹಾಕಿದ್ದಾನೆ, ಬಟ್ಟೆ ಹರಿದು ಹೋಗಿದೆ ಅನ್ನೋದೆಲ್ಲ ನಮ್ಮ ಸಂಸ್ಕಾರ ಅಲ್ಲ. ಅವರವರ ಶಕ್ತಿ ಅನುಸಾರ ಬಟ್ಟೆ ಧರಿಸುತ್ತಾರೆ. ರೈತನನ್ನು ಯಾರೇ ತಡೆದಿದ್ದರೂ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು. ತಡೆದು ಅಪಮಾನ ಮಾಡಿದ್ದು ಅಕ್ಷಮ್ಯ ಅಪರಾಧ ಎಂದಿರುವ ಅವರು ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದರು. ಬಳಿಕ ಕ್ರಮವನ್ನೂ ತೆಗೆದುಕೊಳ್ಳಲಾಗಿತ್ತು.

ಇದನ್ನೂ ಓದಿ : Namma Metro : ಬಟ್ಟೆ ಕ್ಲೀನ್‌ ಇಲ್ಲ ಎಂದು ರೈತನಿಗೆ ಪ್ರವೇಶ ನಿರಾಕರಿಸಿದ ಮೆಟ್ರೋ; ನೆಟ್ಟಿಗರ ಆಕ್ರೋಶ

ಮೆಟ್ರೋ ನಿಲ್ದಾಣದಲ್ಲಿ ಆಗಿದ್ದೇನು?

ತಲೆಯ ಮೇಲೆ ಬಟ್ಟೆಯ ಮೂಟೆಯೊಂದನ್ನು ಹೊತ್ತುಕೊಂಡು ಬಂದ ವ್ಯಕ್ತಿಯೊಬ್ಬರನ್ನು ಮೆಟ್ರೋ ಸುರಕ್ಷತಾ ತಪಾಸಣೆ ಸಿಬ್ಬಂದಿ ತಡೆದಿದ್ದಾರೆ. ಆಗ ಅದನ್ನು ನೋಡಿದ ಸಹ ಪ್ರಯಾಣಿಕರೊಬ್ಬರು ಅವರನ್ನು ಯಾಕೆ ಒಳಗೆ ಬಿಡುತ್ತಿಲ್ಲ ಎಂದು ಕೇಳಿದ್ದಾರೆ. ಆಗ ಸಿಬ್ಬಂದಿ ಅವರ ಬಟ್ಟೆ ಗಲೀಜಾಗಿದೆ, ಹೀಗಿದ್ದರೆ ಸಹ ಪ್ರಯಾಣಿಕರಿಗೆ ಅಸಹ್ಯವಾಗುತ್ತದೆ. ಆ ಕಾರಣಕ್ಕಾಗಿ ಒಳಗೆ ಬಿಡಲಾಗುತ್ತಿಲ್ಲ ಎಂದು ಹೇಳಿದ್ದರು.

ಇದಕ್ಕೆ ಸಹಪ್ರಯಾಣಿಕರು ಭದ್ರತಾ ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಮೆಟ್ರೋ ಪ್ರಯಾಣಿಕರು ಯಾವ ರೀತಿಯ ಬಟ್ಟೆ ಧರಿಸಬೇಕು ಎಂದು ಎಲ್ಲಾದರೂ ನಿಯಮವಿದೆಯಾ ಎಂದು ಕೇಳಿದ ಸಹಪ್ರಯಾಣಿಕರು ರೈತರಿಗೆ ಈ ರೀತಿ ಅಪಮಾನ ಮಾಡಿದ್ದು ಸರಿಯಾ ಎಂದು ಕೇಳಿದ್ದರು.

ಬಟ್ಟೆ ಕೊಳಕಾಗಿದೆ ಎಂಬ ಕಾರಣಕ್ಕೆ ಒಳಗೆ ಬಿಡುವುದಿಲ್ಲ ಅಂತೀರಲ್ಲಾ.. ನನ್ನ ಬಟ್ಟೆ ಲಕಲಕ ಹೊಳೆಯುತ್ತಿದೆ. ಹಾಗಿದ್ದರೆ ನನ್ನನ್ನು ಫ್ರೀ ಆಗಿ ಕರೆದುಕೊಂಡು ಹೋಗುತ್ತೀರಾ ಎಂದು ಕೇಳಿದ್ದರು. ಕೊನೆಗೆ ಸಿಬ್ಬಂದಿಯ ಯಾವ ಮಾತಿಗೂ ಕ್ಯಾರೇ ಅನ್ನದೆ ರೈತನನ್ನು ಮೆಟ್ರೋ ರೈಲಿನಲ್ಲಿ ಕರೆದುಕೊಂಡು ಹೋಗಿದ್ದರು.

ಅವರ ಮೂಟೆಯಲ್ಲಿ ಏನಾದರೂ ವಸ್ತುಗಳಿವೆ ಎಂಬ ಕಾರಣಕ್ಕಾಗಿ ಅವರನ್ನು ತಡೆದರೆ ನಾನೇನೂ ಮಾತನಾಡುವುದಿಲ್ಲ. ಆದರೆ, ಒಬ್ಬ ರೈತನ ಬಟ್ಟೆ ಕೊಳಕಾಗಿದೆ ಎಂಬ ಕಾರಣಕ್ಕಾಗಿ ಆತನನ್ನು ಅಪಮಾನಿಸಬಾರದು ಎಂದು ಸಹಪ್ರಯಾಣಿಕ ಲೈವ್‌ ವಿಡಿಯೊದಲ್ಲಿ ಹೇಳಿಕೊಂಡಿದ್ದರು.

Exit mobile version