Site icon Vistara News

Namma Metro : ಕೆಲವೇ ವರ್ಷದಲ್ಲಿ ಬಿಡದಿವರೆಗೂ ಓಡಲಿದೆ ನಮ್ಮ ಮೆಟ್ರೋ

DK Shivakumar bidadi metro Extension

ಬೆಂಗಳೂರು: ಬೆಂಗಳೂರಿನ ಜೀವನಾಡಿಯಾಗಿ ಬೆಳೆಯುತ್ತಿರುವ ನಮ್ಮ ಮೆಟ್ರೋವನ್ನು (Namma Metro) ಬಿಡದಿವರೆಗೂ ವಿಸ್ತರಣೆ ಮಾಡಲು ಸರ್ವೇ ಮಾಡಿಸುತ್ತಿದ್ದು, ಈ ವಿಚಾರವಾಗಿ ಡಿಪಿಆರ್ ಸಿದ್ಧಪಡಿಸಲು ಸೂಚಿಸಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರು ತಿಳಿಸಿದ್ದಾರೆ. ಬಿಡದಿಯ ಟೊಯೋಟಾ- ಕಿರ್ಲೋಸ್ಕರ್ ಸಂಸ್ಥೆಯ (Toyota Kirloskar Company) ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ತರಬೇತಿ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಿಡದಿ ಯೋಜನಾ ಪ್ರಾಧಿಕಾರ (Bidadi development Authority) ರದ್ದು ಮಾಡಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಿ ಪರಿವರ್ತಿಸಲು ಆದೇಶ ಮಾಡಲಾಗಿದೆ ಎಂದೂ ಅವರು ಪ್ರಕಟಿಸಿದರು.

“ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಜನರು ಕೆಲಸ ಮಾಡುತ್ತಿದ್ದಾರೆ. ಇವರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲು ಮೆಟ್ರೋ ಯೋಜನೆ ಇಲ್ಲಿಯ ತನಕ ವಿಸ್ತರಿಸುವಂತೆ ಶಾಸಕರು, ಸಂಸದರು ಮನವಿ ಸಲ್ಲಿಸಿದ್ದರು. ಹೀಗಾಗಿ ಬಿಎಂಆರ್‌ಸಿಎಲ್ ಅವರಿಗೆ ಯೋಜನಾ ವರದಿ ಸಿದ್ಧಪಡಿಸಲು ತಿಳಿಸಿದ್ದೇನೆʼʼ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ʻʻಬಿಡದಿ ಯೋಜನಾ ಪ್ರಾಧಿಕಾರವನ್ನು ತೆಗೆದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಿ ಮಾಡುತ್ತೇವೆ. ಬಿಡದಿಯಲ್ಲಿ ಸುಮಾರು 10,000 ಎಕರೆ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯನ್ನು, ಯಾವುದೇ ಉದ್ದೇಶಕ್ಕೆ ಬಳಕೆ ಮಾಡಿಲ್ಲ. ಬೆಂಗಳೂರಿನಲ್ಲಿ ಸಿಗುವ ಸೌಲಭ್ಯ ಈ ಭಾಗದಲ್ಲೂ ಸಿಗಬೇಕು ಎನ್ನುವ ಉದ್ದೇಶ ನಮ್ಮದು. ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿ ಈ ಎರಡು ಯೋಜನೆಗಳನ್ನು ಈ ಶುಭದಿನದಂದು ಘೋಷಿಸುತ್ತೇನೆʼʼ ಎಂದು ಉಪಮುಖ್ಯಮಂತ್ರಿ ತಿಳಿಸಿದರು.

ʻʻಈ ಯೋಜನೆಗಳ ಮೂಲಕ ಈ ಭಾಗ ಅಭಿವೃದ್ಧಿ ಆಗಬೇಕು, ಈ ಭಾಗದ ಜನರ ಆಸ್ತಿ ಮೌಲ್ಯ ಹೆಚ್ಚಾಗಬೇಕು. ಈ ಭಾಗದ ಆಸ್ಪತ್ರೆ, ವಿದ್ಯಾಸಂಸ್ಥೆಗಳು, ಕಾರ್ಮಿಕರು, ಅವರ ಮಕ್ಕಳು ಹೀಗೆ ಎಲ್ಲರಿಗೂ ಹೊಸ ಶಕ್ತಿ ತುಂಬಲು ಈ ಕ್ರಮ ತೆಗೆದುಕೊಳ್ಳುತ್ತಿದ್ದೇವೆʼʼ ಎಂದರು.

ʻʻಟೊಯೋಟಾ ಸಂಸ್ಥೆ ಹೆಣ್ಣುಮಕ್ಕಳ ತರಬೇತಿ ಕೇಂದ್ರ ತೆರೆದಿರುವುದು ಸಂತೋಷದ ವಿಚಾರ. ಮಹಿಳೆಯರಿಗೆ ಶಕ್ತಿ ತುಂಬುವುದು ನಮ್ಮ ಸರ್ಕಾರದ ಸಂಕಲ್ಪ. ಶಕ್ತಿ ಯೋಜನೆ ಮೂಲಕ ಉಚಿತ ಬಸ್ ಪ್ರಯಾಣ ಮಾಡಿದ ಪರಿಣಾಮ ಮೈಸೂರು ದಸರಾ ಆಚರಣೆ ವೇಳೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇದರಿಂದ ಪ್ರವಾಸೋದ್ಯಮ, ವ್ಯಾಪಾರ ವಹಿವಾಟು ಹೆಚ್ಚಾಗುತ್ತಿದೆ. ಮುಂದಿನ ಚುನಾವಣೆ ವೇಳೆಗೆ ಮಹಿಳೆಯರಿಗೆ ರಾಜಕೀಯದಲ್ಲೂ ಶೇ.33ರಷ್ಟು ಮೀಸಲಾತಿ ಜಾರಿಗೆ ತಂದು ಈ ಭಾಗದಲ್ಲಿ ಮಹಿಳಾ ಪ್ರತಿನಿಧಿಗಳು ಆಯ್ಕೆಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲʼʼ ಎಂದು ಹೇಳಿದರು.

ʻʻನನಗೂ ಟೊಯೋಟಾ ಸಂಸ್ಥೆಗೂ ಹಳೇ ಸಂಬಂಧ. ಮನೋರಮಾ ಮಧ್ವರಾಜ್ ಅವರು ಸಚಿವರಾಗಿದ್ದಾಗ ಟೊಯೊಟಾ ಘಟಕ ಆರಂಭ ಮಾಡಿದರು. ಇದು ಸಾತನೂರಲ್ಲಿ ಆರಂಭ ಆಗಬೇಕಿತ್ತು. ರೈತರ ವಿರೋಧ ಹಿನ್ನೆಲೆಯಲ್ಲಿ ಬಿಡದಿಯಲ್ಲಿ ಸಂಸ್ಥೆ ಆರಂಭವಾಯಿತು. ಟೊಯೋಟಾ ದೇಶಕ್ಕೆ ಆಸ್ತಿ, ಈ ಸಂಸ್ಥೆ, ಅದರ ಸಿಬ್ಬಂದಿ, ಅದರ ವಾಹನಗಳ ಮೇಲೆ ನಮಗೆ ಅಪಾರ ನಂಬಿಕೆ ಇದೆ. ಟೊಯೋಟಾ ಸಂಸ್ಥೆ ಜತೆಗೆ ನಾನಿದ್ದೇನೆ, ನಮ್ಮ ಸರ್ಕಾರವೂ ಇದೆ. ನಾನು ಟೊಯೋಟಾ ಕುಟುಂಬದ ಸದಸ್ಯ. ನಿಮ್ಮ ಜತೆ ನಾನಿದ್ದೇನೆʼʼ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಜೀವನದಲ್ಲಿ ಕನಸುಗಳಿರಲಿ: ಯುವಜನರಿಗೆ ಕಿವಿಮಾತು

ʻʻಇಲ್ಲಿ ತರಬೇತಿ ಪಡೆಯುತ್ತಿರುವ ಹಾಗೂ ಕೆಲಸ ಮಾಡುತ್ತಿರುವ ಯುವ ಸಮುದಾಯಕ್ಕೆ ಒಂದು ಕಿವಿ ಮಾತು. ನೀವು ಜೀವನದಲ್ಲಿ ಕನಸು ಕಾಣಬೇಕು, ಅದನ್ನು ನನಸಾಗಿಸಲು ನೀವು ಹಂಬಲಿಸಬೇಕು. ಅದಕ್ಕಾಗಿ ಶ್ರಮ ಹಾಕಬೇಕು. ಈ ಪ್ರಕ್ರಿಯೆಯಲ್ಲಿ ನೀವು ಶಿಸ್ತನ್ನು ಹೊಂದಿರಬೇಕುʼʼ ಎಂದು ಹೇಳಿದರು.

ʻʻಗ್ರಾಮೀಣ ಭಾಗದ ಮಕ್ಕಳಿಗೆ ಪ್ರೋತ್ಸಾಹ ನೀಡಲು, 51 ಐಟಿಐ ಕಾಲೇಜುಗಳ ಜತೆ ಒಡಂಬಡಿಕೆ ಮಾಡಿಕೊಂಡು ಅಲ್ಲಿ ಅವರಿಗೆ ತರಬೇತಿ ನೀಡಿ ಉದ್ಯೋಗ ಸಿಗುವಂತೆ ಮಾಡಲಾಗುತ್ತಿದೆ. ಟೊಯೋಟಾ ಕಂಪನಿಯಲ್ಲಿ ಕೆಲಸ ಮಾಡುವುದರಿಂದ ಸಮಾಜದಲ್ಲಿ ಗೌರವ ಸಿಗುತ್ತದೆ. ನೀವು ನಿಮ್ಮ ಬೇರು ಮರೆತರೆ ಫಲ ಸಿಗುವುದಿಲ್ಲ. ಹುಳಿ ಪೆಟ್ಟು ಬೀಳದೆ ಯಾವ ಕಲ್ಲು ಶಿಲೆಯಾಗುವುದಿಲ್ಲ, ಉಳುಮೆ ಮಾಡದೇ ಯಾವ ಜಮೀನೂ ಮಟ್ಟವಾಗುವುದಿಲ್ಲ. ಅದೇ ರೀತಿ ಶ್ರಮವಿಲ್ಲದೆ ಫಲವಿಲ್ಲ, ಶ್ರಮಪಟ್ಟರೆ ಮಾತ್ರ ಬದುಕು ಕಟ್ಟಿಕೊಳ್ಳಲು ಸಾಧ್ಯʼʼ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಟೊಯೋಟಾ ಸಂಸ್ಥೆಯವರು ಮುಂದಿನ ದಿನಗಳಲ್ಲಿ ಶಾಲೆಗಳ ಜೊತೆಗೆ ಇಂಜಿನಿಯರಿಂಗ್ ಕಾಲೇಜುಗಳ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.

ಭೂಮಿ ಕಳೆದುಕೊಂಡವರಿಗೆ ಉದ್ಯೋಗ

ಬಿಡದಿ ಭಾಗದಲ್ಲಿ ಕೈಗಾರಿಕೆಗಳು ಹೆಚ್ಚಾದರೆ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಲಾಗುತ್ತದೆಯೇ ಎಂದು ಕೇಳಿದಾಗ “ನಾನು ಟೊಯೋಟಾ ಸಂಸ್ಥೆಗೂ ಇದೇ ಕಿವಿಮಾತು ಹೇಳಿದ್ದೇನೆ. ಯಾರು ಕೈಗಾರಿಕೆಗಳ ಅಭಿವೃದ್ಧಿಗೆ ಭೂಮಿ ಕಳೆದುಕೊಳ್ಳುತ್ತಾರೋ ಅವರಿಗೆ ಹಾಗೂ ಅವರ ಮಕ್ಕಳಿಗೆ ಕೆಲಸದಲ್ಲಿ ಮೊದಲ ಆದ್ಯತೆ ನೀಡಬೇಕು. ಈ ವಿಚಾರವಾಗಿ ಸರ್ಕಾರದ ಕಾನೂನು ಕೂಡ ಇದೆ. ಕೇವಲ ಟೊಯೋಟಾ ಮಾತ್ರವಲ್ಲ ಎಲ್ಲಾ ಸಂಸ್ಥೆಗಳ ಜೊತೆ ಚರ್ಚೆ ಮಾಡಿ ಒಂದು ಪ್ರಕ್ರಿಯೆ ಮೂಲಕ ಸ್ಥಳೀಯರಿಗೆ ಉದ್ಯೋಗ ಆದ್ಯತೆ ನೀಡುವಂತೆ ಮಾಡಲಾಗುವುದು” ಎಂದು ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜತೆ ಮಾತನಾಡುತ್ತಾ ಹೇಳಿದರು.

ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಾದರೆ ಕೈಗಾರಿಕೆಗಳು ಹೆಚ್ಚು ಬರುತ್ತವೆಯೇ ಎಂದು ಕೇಳಿದಾಗ “ನಾವೆಲ್ಲರೂ ಬೆಂಗಳೂರಿನವರು. ನಮ್ಮ ಜಿಲ್ಲಾ ಕೇಂದ್ರ ರಾಮನಗರದಲ್ಲೇ ಇರಲಿ. ನಮ್ಮ ಅಭ್ಯಂತರವಿಲ್ಲ. ನಾವು ಬೆಂಗಳೂರಿನ ಹೆಸರನ್ನು ಕಳೆದುಕೊಳ್ಳಲು ಇಷ್ಟವಿಲ್ಲ” ಎಂದರು.

ಬಿಡದಿ ಮೆಟ್ರೋ ವಿಸ್ತರಣೆ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾವನೆ

ಮೆಟ್ರೋ ವಿಸ್ತರಣೆ ವಿಚಾರವಾಗಿ ಕೇಳಿದಾಗ, “ಈ ವಿಚಾರವಾಗಿ ಸ್ಥಳೀಯ ಭಾಗದ ಜನರನ್ನು ಕೇಳುತ್ತಿದ್ದೇನೆ. ಸಮೀಕ್ಷೆ ಮಾಡಿಸಿ, ಜನರಿಂದ ಅಭಿಪ್ರಾಯ ಪಡೆದು ಅವರ ಆಸೆ ಆಕಾಂಕ್ಷೆಗಳನ್ನು ತಿಳಿಯುತ್ತಿದ್ದೇನೆ. ಜನರ ಅಭಿಪ್ರಾಯ ಪಡೆದು ನಂತರ ಸರ್ಕಾರದ ಮುಂದೆ ಈ ಪ್ರಸ್ತಾವನೆ ಇಡುತ್ತೇನೆ. ಈ ವಿಚಾರವಾಗಿ ಮೆಟ್ರೋ ಸಂಸ್ಥೆಗೆ ಡಿಪಿಆರ್ ಮಾಡಲು ಹೇಳಿದ್ದೇನೆ. ಭೂಸ್ವಾಧೀನ ತಪ್ಪಿಸುವುದು ಹೇಗೆ, ಬೆಂಗಳೂರಿನಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು, ಹೊರಗಿನಿಂದ ಬರುವವವರು ಇಲ್ಲೇ ತಮ್ಮ ವಾಹನ ನಿಲ್ಲಿಸಿ ಮೆಟ್ರೋ ಮೂಲಕ ಬೆಂಗಳೂರಿಗೆ ತೆರಳುವಂತೆ ಮಾಡಲು ವಾಹನ ನಿಲುಗಡೆ ಸ್ಥಳ ನಿರ್ಮಿಸುವುದು ಸೇರಿದಂತೆ ಅನೇಕ ಆಲೋಚನೆಗಳಿವೆ. ಎಲ್ಲವೂ ಪ್ಲಾನ್ ಆಗುತ್ತಿವೆ” ಎಂದರು. ಈ ಭಾಗಕ್ಕೆ ನೈಸ್ ರಸ್ತೆ ವಿಚಾರವಾಗಿ ಕೇಳಿದಾಗ, “ಈಗಾಗಲೇ ಸುಮಾರು ಶೇ.50ರಷ್ಟು ಭೂಸ್ವಾಧೀನ ಪ್ರಕ್ರಿಯೆ ಮುಗಿದಿದ್ದು, ಈ ವಿಚಾರವಾಗಿ ಚರ್ಚೆ ಮಾಡುತ್ತೇವೆ” ಎಂದರು.

Exit mobile version