ಬೆಂಗಳೂರು: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ನಮೋ ವಿದ್ಯಾನಿಧಿ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳಿಗೆ ತಲಾ 10 ಸಾವಿರ ರೂಪಾಯಿ ಶಿಷ್ಯವೇತನವನ್ನು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ (H D Deve Gowda) ಅವರು ಬುಧವಾರ ವಿತರಿಸಿದರು.
ಸಂಸದ ತೇಜಸ್ವಿ ಸೂರ್ಯ, ದೇವೇಗೌಡರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಜೆಡಿಎಸ್ ವರಿಷ್ಠರು ನಗರದ ಆಟೋ ರಿಕ್ಷಾ ಚಾಲಕರ ಮಕ್ಕಳು ಸೇರಿ 10 ಮಕ್ಕಳಿಗೆ ವಿದ್ಯಾರ್ಥಿ ವೇತನದ ಚೆಕ್ ಅನ್ನು ಹಸ್ತಾಂತರಿಸಿದರು.
ಇದನ್ನೂ ಓದಿ | Karnataka Politics: ಈಗಲೇ ಎಷ್ಟುಬೇಕೋ ಕುಡಿದುಬಿಡಿ: ಎಣ್ಣೆ ಹೊಡೆಯೋರಿಗೆ ಆರ್. ಅಶೋಕ್ ಟಿಪ್ಸ್
ತೇಜಸ್ವಿ ಸೂರ್ಯ ನಮೋ ವಿದ್ಯಾನಿಧಿ ಕಾರ್ಯಕ್ರಮದಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಸುಮಾರು 10,000 ಪ್ರತಿಭಾವಂತ ಮಕ್ಕಳಿಗೆ ತಲಾ 10,000 ರೂ.ಗಳ ವಿದ್ಯಾರ್ಥಿವೇತನವನ್ನು ನೀಡಿ ನೆರವಾಗುವ ಗುರಿ ಹೊಂದಿದ್ದು, ನೇರವಾಗಿ ಮಕ್ಕಳು ವ್ಯಾಸಂಗ ಮಾಡುತ್ತಿರುವ ಆಯಾ ಶಾಲೆಗಳಿಗೆ ವಿದ್ಯಾರ್ಥಿ ವೇತನ ಪಾವತಿಸಲಾಗಿದೆ. ಪ್ರಸ್ತುತ ಬೆಂಗಳೂರು ದಕ್ಷಿಣದಲ್ಲಿ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಕಾರ್ಯಕ್ರಮದಿಂದ ಪ್ರಯೋಜನ ಪಡೆಯುತ್ತಿದ್ದಾರೆ.
ತೇಜಸ್ವಿ ಸೂರ್ಯ ಮಾತನಾಡಿ, “ದೇವೇಗೌಡ ಅವರಂತಹ ಮೇರು ವ್ಯಕ್ತಿಗಳ ಸಮ್ಮುಖದಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಚೆಕ್‌ಗಳನ್ನು ನೀಡಿರುವುದು ಸಂತಸದ ಅನುಭವವಾಗಿದೆ. ಈ ಮಕ್ಕಳಿಗೆ ಚೆಕ್‌ಗಳನ್ನು ನೀಡಲು ಒಪ್ಪಿಕೊಂಡಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಮಕ್ಕಳು ಉತ್ತಮ ಶೈಕ್ಷಣಿಕ ಸಾಧನೆ ಮಾಡಿ, ರಾಷ್ಟ್ರ ನಿರ್ಮಾಣದಲ್ಲಿ ಪಾಲುದಾರರಾಗಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ | Karnataka Politics : ಹೊಂದಾಣಿಕೆ ಆರೋಪದ ನಡುವೆಯೇ ಅಚ್ಚರಿ ಮೂಡಿಸಿದ ಶಾಮನೂರು- ಬೊಮ್ಮಾಯಿ ಗೌಪ್ಯ ಭೇಟಿ
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 9 ವರ್ಷಗಳ ಸೇವಾ ಅವಧಿಯಲ್ಲಿ ಮಾಡಿದ ಕಾರ್ಯಗಳು ಮತ್ತು 2019 ರಿಂದ ಬೆಂಗಳೂರು ದಕ್ಷಿಣದಲ್ಲಿ ಮಾಡಿದ ಸಾಧನೆಗಳ ವರದಿಯನ್ನು ಸೂರ್ಯ ಮಂಡಿಸಿದರು. ಇದೇ ವೇಳೆ ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನ ಠೇವಣಿದಾರರ ಹಿತಾಸಕ್ತಿ ಕಾಪಾಡಲು ಕೇಂದ್ರ ಕೈಗೊಂಡಿರುವ ಕ್ರಮ, ಸ್ಥಗಿತಗೊಂಡಿರುವ ರಿಯಲ್ ಎಸ್ಟೇಟ್ ಯೋಜನೆಗಳು ಪೂರ್ಣಗೊಳಿಸಲು, ವಿಶೇಷವಾಗಿ ಕನಕಪುರ ರಸ್ತೆಯಲ್ಲಿರುವ ಮಂತ್ರಿ ಸೆರಿನಿಟಿ ಯೋಜನೆ ಪೂರ್ಣಗೊಳಿಸಲು ಕೇಂದ್ರ ಸರ್ಕಾರವು ಸ್ವಾ ನಿಧಿಯ ಮೂಲಕ ತಂದ ಕ್ರಮಗಳ ಕುರಿತು ಮಾಜಿ ಪ್ರಧಾನಿಗಳೊಂದಿಗೆ ಚರ್ಚಿಸಿದರು.