Site icon Vistara News

Rahul Gandhi: ನಂದಿನಿ ಐಸ್‌ಕ್ರೀಂ ಸವಿದ ರಾಹುಲ್‌ ಗಾಂಧಿ, ಇದು ಕರ್ನಾಟಕದ ಹೆಮ್ಮೆ ಎಂದು ಬಣ್ಣನೆ

Nandini Is Karnataka's Pride, Says Rahul Gandhi after having ice cream

Nandini Is Karnataka's Pride, Says Rahul Gandhi after having ice cream

ಬೆಂಗಳೂರು: ಕರ್ನಾಟಕಕ್ಕೆ ಗುಜರಾತ್‌ನ ಅಮುಲ್‌ ಹಾಲಿನ ಉತ್ಪನ್ನಗಳು ಲಗ್ಗೆ ಇಡುತ್ತಿರುವ ಕುರಿತು ಟೀಕೆಗಳು ವ್ಯಕ್ತವಾಗುತ್ತಿರುವ, ಕೆಎಂಎಫ್‌ನ ನಂದಿನಿ ಹಾಲಿನ ಉತ್ಪನ್ನಗಳ ಅಸ್ತಿತ್ವದ ಕುರಿತು ಅಭಿಯಾನ ಆರಂಭವಾಗಿರುವ ಬೆನ್ನಲ್ಲೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ನಂದಿನಿ ಪಾರ್ಲರ್‌ಗೆ ತೆರಳಿ, ನಂದಿನಿ ಐಸ್‌ಕ್ರೀಮ್‌ ಸವಿದಿದ್ದಾರೆ.

ಬೆಂಗಳೂರಿನ ಜೆ.ಪಿ. ನಗರದ 10ನೇ ಕ್ರಾಸ್‌ನಲ್ಲಿರುವ ನಂದಿನಿ ಪಾರ್ಲರ್‌ಗೆ ತೆರಳಿದ ಅವರು, ನಂದಿನಿ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ ನಂದಿನಿ ಐಸ್‌ಕ್ರೀಂ ಸವಿದರು. ಹಾಗೆಯೇ, ನಂದಿನಿ ಉತ್ಪನ್ನಗಳು ಎಲ್ಲಿ ತಯಾರಾಗುತ್ತವೆ ಎಂಬುದರ ಕುರಿತು ಮಾಹಿತಿ ಪಡೆದರು.

ರಾಹುಲ್‌ ಗಾಂಧಿ ಟ್ವೀಟ್‌

ಐಸ್‌ಕ್ರೀಂ ಸವಿದ ಫೋಟೊ ಟ್ವೀಟ್‌ ಮಾಡಿದ ರಾಹುಲ್‌ ಗಾಂಧಿ, ‘ಕರ್ನಾಟಕದ ಹೆಮ್ಮೆ-ನಂದಿನಿ ಅತ್ಯದ್ಭುತ’ ಎಂದು ಹೇಳಿದ್ದಾರೆ. ಇನ್ನು ರಾಹುಲ್‌ ಗಾಂಧಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪಕ್ಷದ ನಾಯಕರಾದ ಕೆ.ಸಿ.ವೇಣುಗೋಪಾಲ್‌, ರಣದೀಪ್‌ ಸುರ್ಜೇವಾಲ ಸೇರಿ ಹಲವರು ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ ನಂದಿನಿ ಹಾಲಿಗೆ ಸ್ಪರ್ಧೆಯೊಡ್ಡಲು ಗುಜರಾತ್‌ನ ಅಮುಲ್‌ ಆಗಮಿಸುತ್ತಿರುವ ವಿಷಯವೀಗ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿ ಹಲವರು ಅಮುಲ್‌ ಆಗಮನಕ್ಕೆ ವಿರೋಧಿಸಿದ್ದಾರೆ. ನಂದಿನಿ ಉಳಿಸಿ ಅಭಿಯಾನವೇ ಆರಂಭವಾಗಿದೆ.

ಕೋಲಾರದಲ್ಲಿ ಈ ಕುರಿತು ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ವಿಧಾನಸಭಾ ಚುನಾವಣೆ ಬಂದಿದ್ದು, ಕರ್ನಾಟಕದ ಜನರು ಈಗ ತೀರ್ಮಾನ ಮಾಡುವ ಸಮಯ ಬಂದಿದೆ. ಕೇಂದ್ರ ಸರ್ಕಾರದ ಹುನ್ನಾರವನ್ನು ಬಯಲಿಗೆ ಎಳೆಯಬೇಕು. ಬಿಜೆಪಿ ಸರ್ಕಾರವನ್ನು ಚುನಾವಣೆಯಲ್ಲಿ ಕಿತ್ತೆಸೆದು ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕು. ಕೇಂದ್ರ ಸರ್ಕಾರದವರು ಕರ್ನಾಟಕದ ಬ್ಯಾಂಕ್‌ಗಳನ್ನು ನುಂಗಿದ್ದು ಆಯ್ತು. ಈಗ ಕೆಎಂಎಫ್‌ನ ನಂದಿನಿ‌ಯನ್ನು ನುಂಗಲು ಹೊರಟಿದ್ದಾರೆ” ಎಂದು ಆರೋಪಿಸಿದರು.

ಇದನ್ನೂ ಓದಿ: Karnataka Election 2023: ಕರ್ನಾಟಕದ ಬ್ಯಾಂಕ್‌ಗಳ ನುಂಗಿದ ಕೇಂದ್ರವೀಗ ನಂದಿನಿ ನುಂಗಲು ಹೊರಟಿದೆ: ಸಿದ್ದರಾಮಯ್ಯ

Exit mobile version