ಬೆಂಗಳೂರು, ಕರ್ನಾಟಕ: ಚುನಾವಣಾ ಪ್ರಚಾರಕ್ಕಾಗಿ ಕರ್ನಾಟಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಭಾನುವಾರ ಬೆಂಗಳೂರಿನಲ್ಲಿನ ನಂದಿನಿ ಬೂತ್‌ಗೆ ಭೇಟಿ ನೀಡಿ, ನಂದಿನ ಉತ್ಪನ್ನಗಳನ್ನು ಖರೀದಿಸಿದ್ದರು. ಅಲ್ಲದೇ, ಅವುಗಳ ಭಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಟ್ವೀಟ್ ಕೂಡ ಮಾಡಿದ್ದರು. ಕರ್ನಾಟಕದ ಹೆಮ್ಮೆ- ನಂದಿನಿ ಬೆಸ್ಟ್ ಎಂಬ ರಾಹುಲ್ ಅವರ ಟ್ವೀಟ್‌ಗೆ ಬಿಜೆಪಿಯ ಇಬ್ಬರು ಯುವ ನಾಯಕರು ಪ್ರತಿಕ್ರಿಯಿಸಿದ್ದಾರೆ.
Rahul Gandhi ಕಾಲೆಳೆದ ಬಿಜೆಪಿಯ ಅಣ್ಣಾಮಲೈ
ಕರ್ನಾಟಕದ ಹೆಮ್ಮೆ ನಂದಿನಿ ದಿ ಬೆಸ್ಟ್ ಎಂಬ ರಾಹುಲ್ ಗಾಂಧಿ ಟ್ವೀಟ್‌ಗೆ ವ್ಯಂಗ್ಯ ಮಾಡಿರುವ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ, ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರು, ನಿಮ್ಮ ಪೂರ್ವಜರು ಹುಟ್ಟು ಹಾಕಿರುವ ಬ್ರ್ಯಾಂಡ್‌ಗಳಿಗಿಂತಲೂ ಪ್ರಧಾನಿ ಮೋದಿ ನಾಯಕತ್ವದಲ್ಲಿ ಪ್ರಾದೇಶಿಕ ಬ್ರ್ಯಾಂಡುಗಳಾದ ತಮಿಳುನಾಡಿನ ಅವಿನ್ ಮತ್ತು ಕರ್ನಾಟಕದ ನಂದಿನಿ ಬೆಳವಣಿಗೆ ಕಾಣುತ್ತಿವೆ. ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯಲ್ಲಿ ಈ ಎಲ್ಲ ಬ್ರ್ಯಾಂಡುಗಳು ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳಾಗಿ ಬೆಳವಣಿಗೆಯಾಗುತ್ತಿವೆ ಎಂದು ಕಾಲೆಳೆದಿದ್ದಾರೆ. ಅಣ್ಣಾಮಲೈ ಟ್ವೀಟ್‌ಗೆ ಬಹಳಷ್ಟು ಜನರು ಪ್ರತಿಕ್ರಿಯಿಸಿದ್ದು, ಬಹುತೇಕರು ಅವರ ಅಜ್ಞಾನವನ್ನು ಬಯಲಿಗೆಳೆದಿದ್ದಾರೆ. ಅವಿನ್, ಅಮೂಲ್ ಮತ್ತು ಕೆಎಂಎಫ್‌ಗಳು ಕಾಂಗ್ರೆಸ್ ಸರ್ಕಾರ ಇದ್ದಾಗಲೇ, ಅಂದಿನ ಪ್ರಧಾನಿಗಳು ಮತ್ತು ಮುಖ್ಯಮಂತ್ರಿಗಳು ಚಾಲನೆ ನೀಡಿರುವ ಮಾಹಿತಿಯನ್ನು ಷೇರ್ ಮಾಡಿದ್ದಾರೆ.
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಟ್ವೀಟ್
ಕೇರಳದಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಿ ಎಂದ ಸಂಸದ ತೇಜಸ್ವಿ ಸೂರ್ಯ
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ತೇಜಸ್ವಿ ಸೂರ್ಯ ಅವರೂ ರಾಹುಲ್ ಗಾಂಧಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿ, ಕೇರಳದಲ್ಲೂ ನಂದಿನಿ ಮಾರಾಟಕ್ಕೆ ಅವಕಾಶ ಕಲ್ಪಿಸಲು ರಾಹುಲ್ ಗಾಂಧಿ ಅವರು ಮಧ್ಯ ಪ್ರವೇಶಿಸಬೇಕೆಂದು ವ್ಯಂಗ್ಯವಾಗಿ ಹೇಳಿದ್ದಾರೆ. ಕೇರಳದಲ್ಲಿ ನಂದಿನಿ ಮಾರಾಟಕ್ಕೆ ಅಲ್ಲಿನ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.
ತೇಜಸ್ವಿ ಸೂರ್ಯ ಅವರ ಟ್ವೀಟ್
ನಂದಿನಿ ಅತ್ಯುತ್ತಮ ಎಂದು ರಾಹುಲ್ ಗಾಂಧಿ ಎಂದು ಭಾವಿಸಿದ್ದಾರೆ. ಅದರಲ್ಲೇನೂ ಅನುಮಾನವಿಲ್ಲ ನಂದಿನಿ ಅತ್ಯುತ್ತಮ ಉತ್ಪನ್ನವಾಗಿದೆ. ಕೇರಳದಲ್ಲೂ ನಂದಿನಿ ಸುಗಮ ಮಾರಾಟಕ್ಕೆ ರಾಹುಲ್ ಗಾಂಧಿ ಮಧ್ಯಪ್ರವೇಶಿಸಬೇಕು. ಒಂದೊಮ್ಮೆ ಅದು ಸಾಧ್ಯವಾಗದಿದ್ದರೆ, ಇದು ಕೂಡ ಅವರ ಮತ್ತೊಂದು ಗಿಮಿಕ್ ಅಷ್ಟೇ. ಕೇರಳದಲ್ಲಿ ನಂದಿನಿ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸಂಬಂಧ ರಾಹುಲ್ ಗಾಂಧಿ ಸಾರ್ವಜನಿಕ ಘೋಷಣೆಯ ಬಗ್ಗೆ ಕಾಯುತ್ತಾ ಇದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.