ಬೆಂಗಳೂರು: ನಂದಿನಿ ಹಾಲಿನ ದರ (Nandini Milk) ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳ ಆಗಿದ್ದು, ದಿನ ನಿತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಗ್ರಾಹಕರ ಮೇಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ನಡುವೆ ಕೆಲವು ನಂದಿನಿ ಬೂತ್‌ಗಳು (Nandini retail stores) ಸೇರಿದಂತೆ ಜನರಲ್ ಸ್ಟೋರ್‌ಗಳಲ್ಲಿ (General stores) ಗರಿಷ್ಠ ಮಾರಾಟ ದರಕ್ಕಿಂತ (Maximum Retail price) ಹೆಚ್ಚಿನ ಹಣವನ್ನು ಗ್ರಾಹಕರಿಂದ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಕರ್ನಾಟಕ ಹಾಲು ಮಹಾಮಂಡಳಿ (Karnataka Milk Federation- KMF) ಅಲರ್ಟ್ ಆಗಿದೆ. ಅಧಿಕ ದರ ವಸೂಲಿ ಮಾಡುವವರ ವಿರುದ್ಧ ಗಂಭೀರ ಕ್ರಮದ ಎಚ್ಚರಿಕೆ ನೀಡಿದೆ.
ನಂದಿನಿ ಹಾಲಿಗೆ ಎಂಆರ್‌ಪಿ ದರಕ್ಕಿಂತಲೂ ಹೆಚ್ಚಿಗೆ ವಸೂಲಿ ಮಾಡುತ್ತಿರುವುದು ಹಲವು ಕಡೆಗಳಲ್ಲಿ ಸಾಮಾನ್ಯ ಆಗಿದ್ದು, ಗ್ರಾಹಕರು ವಿಧಿ ಇಲ್ಲದೆ ಖರೀದಿ ಮಾಡುತ್ತಿದ್ದಾರೆ. ಸದ್ಯ ಈ ಪ್ರಕರಣಗಳು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹಾಲು ಮಹಾಮಂಡಳಿ, ಹೆಚ್ಚುವರಿ ವಸೂಲಿ ಮಾಡುವ ಡೀಲರ್ಸ್ ಅಥವಾ ಏಜೆಂಟ್‌ಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೂತನವಾಗಿ KMF ಅಧ್ಯಕ್ಷರಾಗಿರುವ ಭೀಮಾ ನಾಯಕ್ ಇನ್ನು ಮುಂದೆ ಇದಕ್ಕೆಲ್ಲಾ ಕಡಿವಾಣ ಹಾಕುವ ಸುಳಿವು ನೀಡಿದ್ದಾರೆ.
ಕೆಎಂಎಫ್ ಎಂಡಿ ಜಗದೀಶ್ ಅವರು ಕೂಡಾ ನಂದಿನಿ ಉತ್ಪನ್ನಗಳನ್ನು ಹೆಚ್ಚುವರಿ ದರಕ್ಕೆ ಮಾರಾಟ ಮಾಡುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದಾರೆ. ಅಲ್ಲದೆ ನಂದಿನಿ ಪಾರ್ಲರ್ ಗಳಲ್ಲಿ ಮಾತ್ರ ಅಲ್ಲದೆ ಯಾವುದೇ ಇತರೆ ಸಾಮಾನ್ಯ ಅಂಗಡಿಗಳಲ್ಲಿ ಸಹ ಗರಿಷ್ಠ ಮಾರಾಟದ ದರಕ್ಕಿಂತಲೂ ಹೆಚ್ಚು ಹಣ ಪಡೆಯಬಾರದು. ಹೆಚ್ಚು ಹಣ ಕೇಳಿದರೆ ನಂದಿನಿ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬೇಕಾಗಿ ಮನವಿ ಮಾಡಿದ್ದಾರೆ.
ಕೆಎಂಎಫ್ ತನ್ನ ಬೂತ್‌ಗಳು ಹಾಗೂ ಏಜಂಟರಿಗೆ ಕಮಿಷನ್ ನೀಡಿದರೂ ಕೆಲವೊಂದು ಕಡೆಗಳಲ್ಲಿ ಹೆಚ್ಚು ಹಣ ವಸೂಲಿ ಮಾಡುತ್ತಿರುವುದು ಸಾಮಾನ್ಯವಾಗಿದೆ. ಗ್ರಾಹಕರು ಕೂಡಾ ಇದನ್ನು ಸಹಿಸಿಕೊಂಡಿದ್ದಾರೆ. ಈ ಬಾರಿ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಹೇಳುತ್ತಿರುವ ಕೆಎಂಎಫ್ ಇದನ್ನು ಹೇಗೆ ನಿಭಾಯಿಸುತ್ತದೆ ಎಂದು ಕಾದು ನೋಡಬೇಕು.
ಹಾಗಿದ್ದರೆ ನಂದಿನಿ ಹಾಲಿನ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ಪಟ್ಟಿ
ಡಬಲ್ ಟೋನ್ಡ್ ಹಾಲು – 41 ರೂ., ಟೋನ್ಡ್ ಹಾಲು – 42 ರೂ, ಹೋಮೋಜಿನೈಸ್ಡ್ ಹಾಲು- 43 ರೂ., ಹೋಮೋಜಿನೈಸ್ಡ್ ಹಸುವಿನ ಹಾಲು – 47 ರೂ., ಸ್ಪೆಷಲ್ ಹಾಲು – 48 ರೂ., ಶುಭಂ ಹಾಲು- 48 ರೂ. ಹೋಮೋಜಿನೈಸ್ಡ್ ಸ್ಟ್ಯಾಂಡಡೈಸ್ಡ್ ಹಾಲು- 49 ರೂ. ಸಮೃದ್ಧಿ ಹಾಲು- 53 ರೂ., ಸಂತೃಪ್ತಿ ಹಾಲು – 55 ರೂ., ಪ್ರತಿ ಲೀಟರ್ ಮೊಸರಿಗೆ 50 ರೂ.
ಇದನ್ನೂ ಓದಿ : Nandini Brand Ambassador: ನಂದಿನಿ ಉತ್ಪನ್ನಗಳ ರಾಯಭಾರಿಯಾಗಿ ಶಿವಣ್ಣ ಆಯ್ಕೆ