Site icon Vistara News

Nandini vs Amul: ಅಮುಲ್ ಕರ್ನಾಟಕವನ್ನು ಪ್ರವೇಶಿಸುತ್ತಿಲ್ಲ ಎಂದ ಬಿಜೆಪಿ ನಾಯಕ, ಕಾಂಗ್ರೆಸ್‌ ವಿರುದ್ಧ ಅಪಪ್ರಚಾರ ಆರೋಪ!

Nandini vs Amul: BJP said that Amul will not entering Karnataka

ನವದೆಹಲಿ: ಅಮುಲ್ ಜತೆ ಕೆಎಂಎಫ್ ವಿಲೀನ (Nandini vs Amul) ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ತಪ್ಪು ಮಾಹಿತಿಯನ್ನು ನೀಡುತ್ತಿದೆ. ಆದರೆ, ಅಮುಲ್ ಕರ್ನಾಟಕ ಮಾರುಕಟ್ಟೆಯನ್ನು ಪ್ರವೇಶಿಸುತ್ತಿಲ್ಲ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಹೇಳಿದ್ದಾರೆ. ಕರ್ನಾಟಕದಲ್ಲಿ ಅಮುಲ್ ವ್ಯವಹಾರ ಕುರಿತು ಕಾಂಗ್ರೆಸ್ ಜನರನ್ನು ತಪ್ಪುದಾರಿಗೆಳೆಯುತ್ತಿದೆ. ಕೆಎಂಎಫ್ ಉತ್ಪನ್ನಗಳ ಮಾರಾಟವನ್ನ ಹೆಚ್ಚಿಸಿರುವುದಾಗಿ ಬಿಜೆಪಿಯು ಹೇಳಿಕೊಂಡಿದೆ.

ಅಮುಲ್ ಕರ್ನಾಟಕವನ್ನು ಪ್ರವೇಶಿಸುತ್ತಿಲ್ಲ. ಅಮುಲ್ ಮತ್ತು ಕೆಎಂಎಫ್ ಎರಡೂ ಬ್ರ್ಯಾಂಡ್‍‌ಗಳು ತಮ್ಮ ಉತ್ಪನ್ನಗಳನ್ನು ಕಾಮರ್ಸ್ ವೇದಿಕೆಗಳಲ್ಲಿ ಮಾರಾಟ ಮಾಡುತ್ತವೆ. 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆಯೇ ಕೆಎಂಎಫ್ ವ್ಯವಹಾರವು 10 ಸಾವಿರ ಕೋಟಿ ರೂ. ಹೆಚ್ಚಾಗಿದೆ. 2022ರಲ್ಲಿ 25 ಸಾವಿರ ಕೋಟಿ ರೂ. ವಹಿವಾಟು ನಡೆದಿದ್ದು, ಈ ಪೈಕಿ 20 ಸಾವಿರ ಕೋಟ ರೂ. ವಾಪಸ್ ರೈತರಿಗೆ ಬಂದಿದೆ ಎಂದು ಮಾಳವಿಯಾ ಅವರು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ಮಾರುಕಟ್ಟೆಯಲ್ಲಿ ಅಮುಲ್ ತನ್ನ ಮೊಸರು ಮತ್ತು ಹಾಲು ಮಾರಾಟಕ್ಕೆ ಮುಂದಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮಾಳವಿಯಾ ಟ್ವೀಟ್ ಮಾಡಿ, ತಿರುಗೇಟು ನೀಡಿದ್ದಾರೆ. ಭಾನುವಾರ ಮೋದಿ ಅವರು ಕರ್ನಾಟಕಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಸಿದ್ದರಾಮಯ್ಯ ಅವರು ಮೋದಿ ಭೇಟಿಯು ಕರ್ನಾಟಕವನ್ನು ಲೂಟಿ ಮಾಡುವುದಾಗಿದೆಯೇ ಎಂದು ಪ್ರಶ್ನಿಸಿದ್ದರು.

ಭಾರತವು ಕಾಂಗ್ರೆಸನ್ನು ಯಾಕೆ ನಂಬುವುದಿಲ್ಲ ಎಂಬುದಕ್ಕೆ ಕಾರಣವಿದೆ. ಅವರು ಸುಳ್ಳು ಹೇಳುತ್ತಾರೆ. ಕೆಎಂಎಫ್ ಬಗ್ಗೆ ಅವರು ಸುಳ್ಳು ಹೇಳುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಕೆಎಂಎಫ್ ಅಮುಲ್ ಜತೆ ವಿಲೀನವಾಗಲಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ನಂದಿನಿಯನ್ನು ಜಾಗತಿಕ ಬ್ರ್ಯಾಂಡ್ ಮಾಡಲು ಕೆಎಂಎಫ್‌ಗೆ ಬಲ ನೀಡಿದ್ದೇ ಬಿಜೆಪಿ ಎಂದು ಅವರು ಹೇಳಿಕೊಂಡಿದ್ದಾರೆ. ಸದ್ಯ, ಕೆಎಂಎಫ್ ದೇಶದ ಎರಡನೇ ಅತಿದೊಡ್ಡ ಹಾಲು ಸಹಕಾರ ಸೊಸೈಟಿಯಾಗಿದೆ. ಮಹಾರಾಷ್ಟ್ರ, ಗೋವಾ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳುನಾಡುಗಳಲ್ಲಿ ತನ್ನ ಮಾರಾಟ ಜಾಲವನ್ನು ಹೊಂದಿದೆ.

ಇದನ್ನೂ ಓದಿ: Save Nandini:‌ ಕನ್ನಡ ಬಳಸುತ್ತಿರುವುದಕ್ಕೇ ನಂದಿನಿಯನ್ನು ನಾಶಪಡಿಸಲು ಬಿಜೆಪಿ ಮುಂದಾಗಿದೆ: ಎಐಸಿಸಿ ವಕ್ತಾರ ಗೌರವ್‌ ವಲ್ಲಭ್‌

ಕೆಎಂಎಫ್‌ನ ಶೇ.15ರಷ್ಟು ಮಾರಾಟವು ಕರ್ನಾಟಕದ ಹೊರಗೇ ಇದೆ. ನಂದಿನಿ ಸಿಂಗಪುರ್, ಯುಎಇ ಸೇರಿದಂತೆ ಇನ್ನೂ ಅನೇಕ ದೇಶಗಳಿಗೆ ರಫ್ತು ಆಗುತ್ತದೆ. ಅಮುಲ್ ಮತ್ತು ಕೆಎಂಎಫ್ ವಿಲೀನವಾಗುವುದಿಲ್ಲ. ಅಲ್ಲದೇ, ಗುಜರಾತ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ ಒಡೆತನದ ಅಮುಲ್ ಕರ್ನಾಟಕವನ್ನು ಪ್ರವೇಶಿಸುತ್ತಿಲ್ಲ. ಅಲ್ಲದೇ ಕೆಎಂಎಫ್ ಮತ್ತು ಅಮುಲ್ ಎರಡೂ ತಮ್ಮ ಉತ್ಪನ್ನಗಳನ್ನು ತ್ವರಿತ-ಕಾಮರ್ಸ್ ವೇದಿಕೆಗಳಲ್ಲಿ ಮಾರಾಟ ಮಾಡಲಿವೆ ಎಂದು ಹೇಳಿದ್ದಾರೆ.

Exit mobile version