Site icon Vistara News

Nandini Vs Amul : ಅಮುಲ್ ವಿಚಾರದಲ್ಲಿ ರಾಜಕಾರಣ ಸಲ್ಲದು ಎಂದ ಸಿಎಂ ಬೊಮ್ಮಾಯಿ

If Amul makes Mysore Pak, Nandini will also make Gujrat's Shrikhand: Says CM Bommai

ಬಸವರಾಜ ಬೊಮ್ಮಾಯಿ

ನವದೆಹಲಿ: ಅಮುಲ್ ಉತ್ಪನ್ನಗಳ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಶನಿವಾರ ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ನಂದಿನಿ ಯಾವತ್ತಿದ್ದರೂ ನಂಬರ್ ಒನ್ ಬ್ರ್ಯಾಂಡ್. ಬೇರೆ ರಾಜ್ಯಗಳಲ್ಲಿ ನಂದಿನಿ ಮಾರಾಟವನ್ನು ನಾವು ಕೂಡ ಮಾಡಿದ್ದೇವೆ. ಹೀಗಾಗಿ ಅಮುಲ್‌ ವಿಚಾರದಲ್ಲಿ ನಕಾರಾತ್ಮಕ ಭಾವನೆ ಬೇಡ. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಅಮುಲ್ ಉತ್ಪನ್ನಗಳನ್ನು ಹಿಮ್ಮೆಟ್ಟಿಸಲು ಏನೇನೋ ಕ್ರಮ ಬೇಕೋ ಅದನ್ನು ಮಾಡುತ್ತೇವೆ ಎಂದು ಹೇಳಿದರು.

ಗುಜರಾತ್‌ ಮೂಲದ ಸಹಕಾರ ಸಂಸ್ಥೆಯಾದ ಅಮುಲ್‌ನ ಉತ್ಪನ್ನಗಳ ಮಾರಾಟವನ್ನು ಉತ್ತೇಜಿಸುವ ಮೂಲಕ ಕರ್ನಾಟಕದ ಕೆಎಂಎಫ್‌ ಬ್ರ್ಯಾಂಡ್‌ ನಂದಿನಿಯ ಕತ್ತು ಹಿಚುಕುವ ಪ್ರಯತ್ನ ನಡೆಯುತ್ತಿದೆ. ಇದರಲ್ಲಿ ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಕೈವಾಡವೂ ಇದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಜತೆಗೆ ಸೇವ್‌ ನಂದಿನಿ ಎಂಬ ಆಂದೋಲನವೂ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಈ ಎಲ್ಲ ವಿಚಾರಗಳಿಗೆ ಸಂಬಂಧಿಸಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ

ರಾಜ್ಯ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿ ನಡೆಯಲಿರುವ ಮಹತ್ವದ ಸಭೆಯಲ್ಲಿ ಭಾಗವಹಿಸಲೆಂದು ಸಿಎಂ ಬೊಮ್ಮಾಯಿ ಅವರು ದಿಲ್ಲಿಗೆ ಆಗಮಿಸಿದ್ದಾರೆ. ಈ ಸಭೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ನೇತೃತ್ವದಲ್ಲಿ ನಡೆಯಲಿದೆ. ಇದರಲ್ಲಿ ಎಲ್ಲಾ ಅಭ್ಯರ್ಥಿಗಳ ವಿಚಾರ ಚರ್ಚೆ ಮಾಡಲಾಗುವುದು. ಬಳಿಕ
ಭಾನುವಾರ (ಮಾರ್ಚ್‌ 8) ಸಂಜೆ ಐದು ಗಂಟೆಗೆ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಸಭೆಯಲ್ಲಿ ಎಲ್ಲಾ 224 ಕ್ಷೇತ್ರಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಕೆಲವು ಎಂಎಲ್ ಸಿ ಮತ್ತು ಸಂಸದರು ಕೂಡಾ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಯಾರಿಗೆಲ್ಲ ಕೊಡಬಹುದು ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಚರ್ಚೆಯ ಬಳಿಕ ಎಷ್ಟು ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಬೇಕು, ಯಾವಾಗ ಪ್ರಕಟವಾಗಬೇಕು ಎಂಬುದು ನಿರ್ಧಾರವಾಗಲಿದೆ ಎಂದು ತಿಳಿಸಿದರು.

ನಮ್ಮ ಶಕ್ತಿ ಮೇಲೆ ನಂಬಿಕೆ ಇದೆ

ಕಾಂಗ್ರೆಸ್ ನಲ್ಲಿ ಟಿಕೇಟ್ ಹಂಚಿಕೆಯ ಗೊಂದಲದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಶಕ್ತಿ ಮೇಲೆ ನಮಗೆ ನಂಬಿಕೆ ಇದೆ. ಸಹಜವಾಗಿಯೇ ಅದರ ಲಾಭ ಆಗಲಿದೆ ಎಂದರು ಬೊಮ್ಮಾಯಿ. ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ಆ ತರಹದ ಲೆಕ್ಕಾಚಾರ ಚರ್ಚೆ ಮಾಡಿದಾಗಲೇ ತಿಳಿಯುತ್ತದೆ ಎಂದರು.

ಸುದೀಪ್‌ ಬೆಂಬಲದಿಂದ ಕಾಂಗ್ರೆಸ್‌ಗೆ ನಡುಕ ಹುಟ್ಟಿದೆ

ಚಿತ್ರ ನಟ ಸುದೀಪ್ ಅವರು ಬಿಜೆಪಿ ಬೆಂಬಲ‌ ನೀಡುವ ಬಗ್ಗೆ ಮಾತನಾಡಿ, ಕಾಂಗ್ರೆಸ್ ಈ ಹಿಂದೆ ನಟರನ್ನು ಕರೆ ತಂದು ಚುನಾವಣಾ ಪ್ರಚಾರ ಮಾಡಿದೆ. ಅಂಬರೀಶ್ ಪ್ರಚಾರ ಮಾಡಲಿಲ್ಲವೇ, ಶಾಸಕರಾಗಿರಲಿಲ್ಲವೇ ಎಂದು ಪ್ರಶ್ನಿಸಿದರು. ಬಿಜೆಪಿಗೆ ಬೆಂಬಲ‌ ನೀಡುವ ಮುಂಚೆ ಅದರಿಂದಾಗುವ ಎಲ್ಲಾ ಪರಿಣಾಮದ ಬಗ್ಗೆ ಮಾಹಿತಿ ಇದೆ. ಸುದೀಪ್ ಅವರು ನಮಗೆ ಬೆಂಬಲ ನೀಡಿರುವುದರಿಂದ ಸಹಜವಾಗಿ ಕಾಂಗ್ರೆಸ್ ಗೆ ನಡುಕ ಹುಟ್ಟಿದೆ ಎಂದರು.

ಇದನ್ನೂ ಓದಿ : Nandini vs Amul: ಅಮುಲ್‌ ವಿರುದ್ಧ ಸಿಡಿದೆದ್ದ ಕನ್ನಡಪರ ಸಂಘಟನೆಗಳು; ಕರವೇಯಿಂದ ಉಗ್ರ ಹೋರಾಟದ ಎಚ್ಚರಿಕೆ

Exit mobile version