ಬೆಂಗಳೂರು: ಗುಜರಾತ್ ಮೂಲದ ಸಹಕಾರಿ ಸಂಸ್ಥೆ ಅಮುಲ್ (Nandini vs Amul) ಈಗಾಗಲೇ ವಿವಿಧ ಉತ್ಪನ್ನಗಳನ್ನು ಕರ್ನಾಟಕದ ಮಾರುಕಟ್ಟೆಯಲ್ಲಿ ಹೊಂದಿದ್ದು, ಇದೀಗ ಹಾಲು ಮತ್ತು ಮೊಸರು ಮಾರಾಟಕ್ಕೆ ಮುಂದಾಗಿರುವುದಕ್ಕೆ ರಾಜ್ಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ನಂದಿನಿ (Nandini) ಬ್ರ್ಯಾಂಡ್ಗೆ ಈಗಾಗಲೇ ಅನೇಕ ಖಾಸಗಿ ಬ್ರ್ಯಾಂಡ್ಗಳು ಸ್ಪರ್ಧೆ ಒಡ್ಡುತ್ತಿದ್ದು, ಇದೀಗ ಅಮುಲ್ ಸಹ ಸೇರ್ಪಡೆಯಾಗುತ್ತಿರುವುದಕ್ಕೆ ರಾಜಕೀಯ ಬಣ್ಣವೂ ಬಂದಿದೆ. ಶುಕ್ರವಾರವಷ್ಟೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದರು. ಈಗ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸರಣಿ ಟ್ವೀಟ್ ಮಾಡುವ ಮೂಲಕ ಆಕ್ರೋಶವನ್ನು ಹೊರಹಾಕಿದ್ದಾರೆ.
ಇದು ಕೇಂದ್ರ ಸರ್ಕಾರದ ಕುತಂತ್ರವಾಗಿದೆ. ಆದರೆ, ಇದನ್ನು ತಡೆಗಟ್ಟಬೇಕಾದ ರಾಜ್ಯ ಸರ್ಕಾರ ಹಾಗೂ ಕೆಎಂಎಫ್ ಮೌನವಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಕನ್ನಡಿಗರಾದ ನಾವು ಎಚ್ಚೆತ್ತುಕೊಳ್ಳಬೇಕು. ಇದು ಗುಜರಾತಿಗಳ ಗುಲಾಮರನ್ನಾಗಿ ಮಾಡುವ ಹುನ್ನಾರ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: Karnataka Elections : ಚುನಾವಣೆ ನಡುವೆ ಡ್ರಗ್ಸ್ ಸದ್ದು; 1 ಕೋಟಿ ಮೌಲ್ಯದ ಗಾಂಜಾ ವಶ; ಟಾಟಾ ಸುಮೋ, ಬಸ್ನಲ್ಲಿ ಸಾಗಾಟ!
ಎಚ್.ಡಿ. ಕುಮಾರಸ್ವಾಮಿ ಸರಣಿ ಟ್ವೀಟ್ನಲ್ಲಿ ಏನಿದೆ?
- ಕನ್ನಡಿಗರ ಜೀವನಾಡಿ ನಂದಿನಿಯನ್ನು ಮುಗಿಸಲು ಈಗ ನಡೆದಿದೆ 3ನೇ ಸಂಚು. ಸಂಚು 1: ಅಮುಲ್ ಜತೆ ನಂದಿನಿ ವಿಲೀನ; ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ. ಸಂಚು 2: ಮೊಸರಿನ ಮೇಲೆ ಹಿಂದಿಯ ‘ದಹಿ’ ಪದ ಮುದ್ರಣ. ಕನ್ನಡಿಗರ ತೀವ್ರ ವಿರೋಧದಿಂದ ಎರಡೂ ಸಂಚು ವಿಫಲ. 3ನೇ ಸಂಚು ಸಫಲಗೊಳಿಸಲು ಅಮುಲ್ ಮೂಲಕ ಕೇಂದ್ರ ಸರ್ಕಾರ ಹೊರಟಿದೆ.
- ತನ್ನ ಏಕೈಕ ಪ್ರತಿಸ್ಪರ್ಧಿ ನಂದಿನಿಗೆ ಕರ್ನಾಟಕದಲ್ಲೇ ಅಡ್ಡಿ ಮಾಡಬೇಕೆನ್ನುವುದು ಅಮುಲ್ ದುರಾಲೋಚನೆ. ʼಒಂದು ದೇಶ, ಒಂದು ಅಮುಲ್, ಒಂದೇ ಹಾಲು, ಒಂದೇ ಗುಜರಾತ್ ಎನ್ನುವುದು ಕೇಂದ್ರ ಸರ್ಕಾರದ ಅಧಿಕೃತ ನೀತಿಯಂತಿದೆ. ಅದಕ್ಕೆ ಅಮುಲ್ʼಗೆ ಒತ್ತಾಸೆಯಾಗಿ ನಿಂತು ಕೆಎಂಎಫ್ ಕತ್ತು ಹಿಸುಕುತ್ತಿದೆ. ಈಗ ಅಮುಲ್ ಹಿಂಬಾಗಿಲ ಮೂಲಕ ಒಳನುಗ್ಗುತ್ತಿದೆ.
- ಹೈನುಗಾರಿಕೆಯ ಮೂಲ ಉತ್ಪನ್ನ ಹಾಲನ್ನು ತನ್ನ ಬ್ರ್ಯಾಂಡ್ನಲ್ಲಿಯೇ ಕರ್ನಾಟಕದಲ್ಲಿಯೇ ಮಾರಲು ಹೊರಟಿರುವ ಅಮುಲ್, ನಂದಿನಿಯನ್ನು ಆಪೋಶನ ತೆಗೆದುಕೊಳ್ಳುವುದು ಖಚಿತ. ವಿಲೀನಕ್ಕೆ, ಹಿಂದಿ ಹೇರಿಕೆಗೆ ಪ್ರಬಲ ಪ್ರತಿರೋಧ ಒಡ್ಡುತ್ತಿರುವ ಕನ್ನಡಿಗರು ಮತ್ತು ಕೆಎಂಎಫ್ನ ಕಥೆ ಮುಗಿಸಲೇಬೇಕು ಎಂದು ಅಮುಲ್ ಪಣ ತೊಟ್ಟಂತಿದೆ.
- ಕೆಎಂಎಫ್ ಜತೆ ಅಮುಲ್ ಅನಗತ್ಯ ಸ್ಪರ್ಧೆ ನಡೆಸಿ ದಿನದಿಂದ ದಿನಕ್ಕೆ ನಂದಿನಿಯನ್ನು ತುಳಿಯುವ ಹುನ್ನಾರ ನಡೆಸುತ್ತಿದ್ದು, ಇದು ಸ್ಪಷ್ಟ. ಸಹಕಾರಿ ಕ್ಷೇತ್ರದ ಪ್ರಸಿದ್ಧ ಸೋದರ ಸಂಸ್ಥೆಗಳ ನಡುವೆ ಅನಾರೋಗ್ಯಕರ ಪೈಪೋಟಿ ಯಾರಿಗೂ ಹಿತವಲ್ಲ. ಕೆಎಂಎಫ್ ರಾಜ್ಯದ ಸಾವಿರಾರು ಗ್ರಾಮಗಳ ಸಹಕಾರ ಸಂಘಗಳ ಮೂಲಕ ರೈತರಿಂದಲೇ ಹಾಲನ್ನು ನೇರವಾಗಿ ಖರೀದಿಸುತ್ತದೆ.
- ಬಿಜೆಪಿ ಡಬಲ್ ಎಂಜಿನ್ ಸರ್ಕಾರ ನಮ್ಮ ರಾಜ್ಯದ ಹಾಲು ಉತ್ಪಾದಕರನ್ನು ಬೀದಿಗೆ ತಳ್ಳಿ ಗುಜರಾತಿಗಳ ಗುಲಾಮರನ್ನಾಗಿ ಮಾಡುವ ಹುನ್ನಾರ ನಡೆಸಿರುವುದು ಸ್ಪಷ್ಟ. ಇದುರೆಗೂ ಇಷ್ಟೆಲ್ಲ ಆದರೂ ರಾಜ್ಯ ಬಿಜೆಪಿ ಸರ್ಕಾರದ ದಿವ್ಯ ಮೌನ, ಕೆಎಂಎಫ್ ನಿಷ್ಕ್ರಿಯತೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
- ಗುಜರಾತಿನಲ್ಲಿ ಎಂದೂ ಕೆಎಂಎಫ್ ಹಾಲು ಮಾರಾಟ ಮಾಡಿಲ್ಲ. ಅದು ಅಮುಲ್ನ ಸ್ಥಳೀಯ ಮಾರುಕಟ್ಟೆ ಹಿತ, ಸಹಕಾರಿ ತತ್ವವನ್ನು ಗೌರವಿಸಿದೆ. ಹಾಲು ಸಮೃದ್ಧಿ ಇರುವ ಯಾವುದೇ ಮಹಾಮಂಡಳದ ಸ್ಥಳೀಯ ವ್ಯಾಪ್ತಿಯಲ್ಲಿ ಕೆಎಂಎಫ್ ತನ್ನ ಹಾಲನ್ನು ಮಾರಲ್ಲ. ಕರ್ನಾಟಕ ನೈಜ ಸಹಕಾರ ತತ್ತ್ವ ನಂಬಿದ್ದರೆ, ಗುಜರಾತ್ ಅಸಹಕಾರವನ್ನೇ ನಂಬಿದೆ.
- ಕನ್ನಡಿಗರಿಗೆ ಅಮುಲ್ ಋಣಿಯಾಗಿರಬೇಕು. ಎಚ್.ಡಿ. ದೇವೇಗೌಡ ಅವರು ಪ್ರಧಾನಿ ಆಗಿದ್ದಾಗ, ಎಚ್.ಡಿ. ರೇವಣ್ಣ ಅವರು ಕೆಎಂಎಫ್ ಅಧ್ಯಕ್ಷರಾಗಿದ್ದಾಗ ಯಲಹಂಕ ಮದರ್ ಡೈರಿಯಲ್ಲಿ ವಿಶೇಷ ಐಸ್ಕ್ರೀಮ್ ಘಟಕವನ್ನು ಸ್ಥಾಪಿಸಿ, ಈ ಘಟಕದಿಂದ ದಶಕಗಳಿಂದ ನಿತ್ಯವೂ ಕೆಎಂಎಫ್ ದೊಡ್ಡ ಪ್ರಮಾಣದಲ್ಲಿ ಅಮುಲ್ ಬ್ರ್ಯಾಂಡ್ ಐಸ್ಕ್ರೀಮ್ ತಯಾರಿಸಿ ಈಗಲೂ ಕೊಡುತ್ತಿದೆ.
- ಅಷ್ಟೇ ಅಲ್ಲ; ರಾಜ್ಯ ಸರ್ಕಾರವು ಗುಜರಾತ್ ಹಾಲು ಮಹಾಮಂಡಳಿ ಅಮುಲ್ಗೆ ಬೆಂಗಳೂರಿನ ಕೋರಮಂಗಲದಲ್ಲಿ ಅತಿ ಕಡಿಮೆ ದರಕ್ಕೆ ಬೆಲೆ ಬಾಳುವ ಬೃಹತ್ ಜಾಗ ನೀಡಿದೆ. ಇಷ್ಟು ಔದಾರ್ಯ ತೋರಿದ ಕರ್ನಾಟಕ ಹಾಲು ಉತ್ಪಾದಕರು ಮತ್ತು ಕೆಎಂಎಫ್ಗೆ ದೊಡ್ಡ ಖೆಡ್ಡಾ ತೋಡಲು ಅಮುಲ್ ಹೊರಟಿದೆ.
- ಕನ್ನಡಿಗರಾದ ನಾವು ತಕ್ಷಣ ಎಚ್ಚೆತ್ತು ನಂದಿನಿಯನ್ನೇ ಅವಲಂಬಿಸಿರುವ ರಾಜ್ಯದ ರೈತರ ಹಿತವನ್ನು ಆದ್ಯತೆಯಲ್ಲಿ ರಕ್ಷಿಸಿ ಉಳಿಸಿಕೊಳ್ಳಬೇಕು. ನಮ್ಮ ಜನತೆ-ಗ್ರಾಹಕರು ನಂದಿನಿ ಉತ್ಪನ್ನಗಳನ್ನಷ್ಟೇ ಆದ್ಯತೆಯ ಮೇರೆಗೆ ಬಳಸಿ ರಾಜ್ಯದ ರೈತರ ಬದುಕನ್ನು ಕಾಪಾಡಬೇಕು.
- ಇಲ್ಲಿನ ಡಬಲ್ ಎಂಜಿನ್ ರಾಜ್ಯ ಬಿಜೆಪಿ ಸರ್ಕಾರ ಈಗಲಾದರೂ ಎಚ್ಚೆತ್ತು ತಕ್ಷಣ ರಾಜ್ಯದಲ್ಲಿ ಅಮುಲ್ʼನ ಪ್ಯಾಕೆಟ್ ಹಾಲಿನ ಮಾರಾಟಕ್ಕೆ ತಡೆ ಒಡ್ಡಬೇಕು. ಕೇಂದ್ರದ ಒತ್ತಾಸೆಯಿಂದ ಅಮುಲ್ ಕದ್ದುಮುಚ್ಚಿ ಹಿಂಬಾಗಿಲ ಮೂಲಕ ಬರುತ್ತಿದೆ. ಕೆಎಂಎಫ್ ಮತ್ತು ರೈತರ ಕುತ್ತಿಗೆಗೆ ಕುಣಿಕೆ ಬಿಗಿಯುತ್ತಿರುವ ಅಮುಲ್ ವಿರುದ್ಧ ಕನ್ನಡಿಗರು ಸಿಡಿದೇಳಬೇಕು.