Site icon Vistara News

Nandini vs Amul: ಅಮುಲ್‌ ವಿರುದ್ಧ ಸಿಡಿದೆದ್ದ ಕನ್ನಡಪರ ಸಂಘಟನೆಗಳು; ಕರವೇಯಿಂದ ಉಗ್ರ ಹೋರಾಟದ ಎಚ್ಚರಿಕೆ

Nandini vs Amul updates Pro Kannada organisations protest against Amul Karave warns of fierce fight

ಬೆಂಗಳೂರು: ಗುಜರಾತ್‌ ಮೂಲದ ಸಹಕಾರಿ ಸಂಸ್ಥೆ ಅಮುಲ್‌ (Nandini vs Amul) ಈಗಾಗಲೇ ವಿವಿಧ ಉತ್ಪನ್ನಗಳನ್ನು ಕರ್ನಾಟಕದ ಮಾರುಕಟ್ಟೆಯಲ್ಲಿ ಹೊಂದಿದ್ದು, ಇದೀಗ ಹಾಲು (Milk) ಮತ್ತು ಮೊಸರು (Curd) ಮಾರಾಟಕ್ಕೂ ಮುಂದಾಗಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇದಕ್ಕೆ ಈಗಾಗಲೇ ರಾಜಕೀಯ ಚರ್ಚೆಗಳು ಹುಟ್ಟಿಕೊಂಡಿರುವುದರ ಜತೆಗೆ ಕನ್ನಡಪರ ಸಂಘಟನೆಗಳು ವ್ಯಾಪಕ ಆಕ್ರೋಶವನ್ನು ವ್ಯಕ್ತಪಡಿಸಿವೆ. ಯಾವುದೇ ಕಾರಣಕ್ಕೂ ನಂದಿನಿ ಬ್ರ್ಯಾಂಡ್‌ಗೆ ಧಕ್ಕೆಯಾಗಲು ಬಿಡುವುದಿಲ್ಲ ಎಂದು ಎಚ್ಚರಿಕೆಯನ್ನು ನೀಡಿವೆ. ತೀವ್ರ ಸ್ವರೂಪದ ಹೋರಾಟಕ್ಕೆ ಮುಂದಾಗಲಾಗುವುದು ಎಂದೂ ಹೇಳಲಾಗಿದೆ. ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ (TA Narayana Gowda) ಹಾಗೂ ಇನ್ನೊಂದು ಬಣದ ರಾಜ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿ ಆಕ್ರೋಶವನ್ನು ಹೊರಹಾಕಿದ್ದಾರೆ.

ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕರ್ನಾಟಕದಲ್ಲಿ ನಮ್ಮ ಹಿರಿಯರು ಕಟ್ಟಿ ಬೆಳೆಸಿದ್ದ ಬ್ಯಾಂಕುಗಳನ್ನು ತಿಂದು ಮುಕ್ಕಿದ್ದಾಯಿತು. ಈಗ ರೈತರ ಪಾಲಿನ ಸಂಜೀವಿನಿಯಾಗಿರುವ ನಂದಿನಿಯನ್ನು ಆಪೋಶನ ತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಸಂಚು ಹೂಡಿದ್ದಾರೆ ಎಂದು ಕಿಡಿಕಾರಿದ್ದರು. ಅಲ್ಲದೆ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಇದು ಕೇಂದ್ರ ಸರ್ಕಾರದ ಕುತಂತ್ರವಾಗಿದೆ. ಆದರೆ, ಇದನ್ನು ತಡೆಗಟ್ಟಬೇಕಾದ ರಾಜ್ಯ ಸರ್ಕಾರ ಹಾಗೂ ಕೆಎಂಎಫ್‌ ಮೌನವಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಕನ್ನಡಿಗರಾದ ನಾವು ಎಚ್ಚೆತ್ತುಕೊಳ್ಳಬೇಕು. ಇದು ಗುಜರಾತಿಗಳ ಗುಲಾಮರನ್ನಾಗಿ ಮಾಡುವ ಹುನ್ನಾರ ಎಂದು ಕಿಡಿಕಾರಿದ್ದಾರೆ. ಈಗ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿವೆ.

ಅನಾಹುತಕ್ಕೆ ಆ ಸಂಸ್ಥೆಗಳೇ ಜವಾಬ್ದಾರಿ- ನಾರಾಯಣಗೌಡ

ಇ-ಕಾಮರ್ಸ್ ಅಡಿಯಲ್ಲಿ ಅಮುಲ್ ಹಾಲು, ಮೊಸರು ಮಾರಾಟಕ್ಕೆ ಮುಂದಾದರೆ ಅಂಥ ಸಂಸ್ಥೆಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟ ನಡೆಸಲಿದೆ. ಈ ಸಂಸ್ಥೆಗಳು ಅಮುಲ್ ಮಾರಾಟ ನಿಲ್ಲಿಸಬೇಕು, ಇಲ್ಲವಾದಲ್ಲಿ ಆಗುವ ಅನಾಹುತಕ್ಕೆ ಆ ಸಂಸ್ಥೆಗಳೇ ಜವಾಬ್ದಾರಿಯಾಗುತ್ತವೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಅಂತರ್ಜಾಲದಲ್ಲಿ ಸುರಕ್ಷತೆ; ನಿಮ್ಮ ಖಾತೆಗಳನ್ನು ಸುರಕ್ಷಿತಗೊಳಿಸುವುದು ಹೇಗೆ?

ಕರ್ನಾಟಕ ರಕ್ಷಣಾ ವೇದಿಕೆ ಈ ಹಿಂದೆ ಆಂಧ್ರಪ್ರದೇಶದ ಕಲಬೆರೆಕೆ ಹಾಲಿನ ವಿರುದ್ಧ ಹೋರಾಟ ಸಂಘಟಿಸಿ ನಿಲ್ಲಿಸುವಲ್ಲಿ ಯಶಸ್ವಿಯಾಗಿತ್ತು. ಅದೇ ರೀತಿ ಈಗ ಅಮುಲ್ ವಿರುದ್ಧವೂ ಚಳವಳಿ ರೂಪಿಸಲಿದೆ. ನಂದಿನಿ ವಿರುದ್ಧ ನಡೆದಿರುವ ಪಿತೂರಿಗೆ ಕರವೇ ಸಂಬಂಧಪಟ್ಟವರಿಗೆ ತಕ್ಕ ಪಾಠ ಕಲಿಸಲಿದೆ. ಕನ್ನಡಿಗರು ಕಷ್ಟಪಟ್ಟು ಬೆಳೆಸಿದ ನಂದಿನಿ ಬ್ರ್ಯಾಂಡ್ ಅನ್ನು ಮುಗಿಸಲೆಂದೇ ಅಮುಲ್ ಹಾಲು-ಮೊಸರನ್ನು ರಾಜ್ಯಕ್ಕೆ ತರಲಾಗುತ್ತಿದೆ. ಕರ್ನಾಟಕದ ರೈತರನ್ನು ಭಿಕ್ಷುಕರನ್ನಾಗಿಸುವ ಸಂಚು ನಡೆಯುತ್ತಿದೆ. ಕನ್ನಡಿಗರು ಸ್ವಾಭಿಮಾನಿಗಳು, ಕೆರಳಿ ನಿಂತರೆ ಇಂಥ ಸಂಚುಗಳನ್ನು ವಿಫಲಗೊಳಿಸುವುದು ಅವರಿಗೆ ಗೊತ್ತಿದೆ ಎಂದು ನಾರಾಯಣಗೌಡ ಹೇಳಿದ್ದಾರೆ.

ಗುಜರಾತ್‌ ಲಾಬಿಗೆ ಮಣಿಯುವುದಿಲ್ಲ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಮುಲ್‌ನೊಂದಿಗೆ ನಂದಿನಿ ಸೇರಿದಂತೆ ದೇಶದ ವಿವಿಧ ಹಾಲು ಉತ್ಪಾದಕ ಸಂಸ್ಥೆಗಳನ್ನು ವಿಲೀನಗೊಳಿಸುವ ಮಾತುಗಳನ್ನು ಆಡಿದ ಬೆನ್ನಲ್ಲೇ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ಕೇಂದ್ರ ಸರ್ಕಾರವೇ ಪಿತೂರಿಯ ಹಿಂದಿದೆ ಎಂಬುದು ಸ್ಪಷ್ಟವಾಗುತ್ತದೆ. ಗುಜರಾತ್‌ ಲಾಬಿಗೆ ನಾವು ಮಣಿಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುವ ಕಾಲ ಇದಾಗಿದೆ ಎಂದು ನಾರಾಯಣಗೌಡ ಕಿಡಿಕಾರಿದ್ದಾರೆ.

ಕರ್ನಾಟಕದ ಬಹುಪಾಲು ರೈತರು ಹಾಲು ಉತ್ಪಾದನೆಯನ್ನು ನೆಚ್ಚಿಕೊಂಡು ಬದುಕುತ್ತಿದ್ದಾರೆ. ಅವರನ್ನು ಗುಜರಾತಿ ವ್ಯಾಪಾರಿಗಳ ಅಡಿಯಾಳಾಗಿ ಮಾಡುವ ಹುನ್ನಾರವೇ ಅಮುಲ್-ನಂದಿನಿ‌ ವಿಲೀನದ ಪ್ರಸ್ತಾಪ. ಅದನ್ನು ಜಾರಿಗೊಳಿಸುವ ಸಲುವಾಗಿಯೇ ಅಮುಲ್ ಹಾಲು-ಮೊಸರು ರಾಜ್ಯವನ್ನು ಪ್ರವೇಶಿಸುತ್ತಿದೆ. ಅಮುಲ್ ಪ್ರವೇಶಕ್ಕಾಗಿಯೇ ವೇದಿಕೆ ಸಜ್ಜುಗೊಳಿಸಲಾಗಿದೆ. ಕೃತಕವಾಗಿ ನಂದಿನ ಹಾಲಿನ ಪೂರೈಕೆ ಕುಸಿಯುವಂತೆ ಮಾಡಲಾಗಿದೆ. ಇದ್ದಕ್ಕಿದ್ದಂತೆ ನಂದಿನಿ ಹಾಲಿನ ಉತ್ಪಾದನೆ ಕುಸಿಯಲು ಕಾರಣವೇನು? ನಂದಿನಿಯನ್ನು ಮುಗಿಸಲು ಕೆಎಂಎಫ್ ಅಧಿಕಾರಿಗಳಿಗೆ ಸುಪಾರಿ ನೀಡಲಾಗಿದೆಯೇ? ಎಂದು ನಾರಾಯಣಗೌಡ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Droupadi Murmu: ಅಸ್ಸಾಂನಲ್ಲಿ ಸುಖೋಯ್​ 30 ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ರಾಷ್ಟ್ರಪತಿ ಮುರ್ಮು

ಲಾಭದಲ್ಲಿದ್ದ ಕರ್ನಾಟಕದ ಬ್ಯಾಂಕುಗಳನ್ನು ನಷ್ಟದಲ್ಲಿದ್ದ ಉತ್ತರ ಭಾರತದ ಬ್ಯಾಂಕುಗಳೊಂದಿಗೆ ವಿಲೀನಗೊಳಿಸಲಾಯಿತು. ಅದೇ ರೀತಿ ಅಮುಲ್ ಜತೆಗೆ ನಂದಿನಿಯನ್ನು ವಿಲೀನಗೊಳಿಸುವ ಹುನ್ನಾರ ನಡೆದಿದೆ. ಕರ್ನಾಟಕದ ರೈತರ ಬದುಕಿಗೆ ಕೊಳ್ಳಿ ಇಡಲು ಬಂದರೆ ಕನ್ನಡಿಗರು ದಂಗೆ ಏಳುತ್ತಾರೆ ಎಂಬುದನ್ನು ಮರೆಯಬೇಡಿ ಎಂದು ಟಿ.ಎ. ನಾರಾಯಣಗೌಡ ಕಿಡಿಕಾರಿದ್ದಾರೆ.

ನಂದಿನಿಯನ್ನು ಮುಗಿಸೋದಕ್ಕೆ ಸರ್ಕಾರ ಹೊರಟಿದೆ- ಪ್ರವೀಣ್‌ ಶೆಟ್ಟಿ

ನಂದಿನಿಯನ್ನು ಮುಗಿಸಲು ಸರ್ಕಾರ ಹೊರಟಿದೆ. ಇದನ್ನು ಕನ್ನಡ ರಕ್ಷಣಾ ವೇದಿಕೆ ವಿರೋಧಿಸುತ್ತದೆ. ಹೈನುಗಾರಿಕೆಗೆ ಉತ್ತೇಜನ ಕೊಡುವುದನ್ನು ಬಿಟ್ಟು ಈ ರೀತಿಯ ಹುನ್ನಾರ ಮಾಡಲಾಗತ್ತಿದೆ. ಈಗ ಹೈನುಗಾರಿಕೆ ಮಾಡಲು ಜನರು ಮುಂದೆ ಬರುತ್ತಿಲ್ಲ. ಇದಕ್ಕೆ ಕಾರಣ ನಮ್ಮ ಸರ್ಕಾರ ಹೈನುಗಾರಿಕೆ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು. ಕನ್ನಡಿಗರು ಕಟ್ಟಿ, ಬೆಳೆಸಿರುವ ನಂದಿನಿಯನ್ನು ಹಾಳು ಮಾಡಲು ಹೊರಟ ಸರ್ಕಾರದ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದು ಕರವೇ ಪ್ರವೀಣ್ ಶೆಟ್ಟಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪ್ರವೀಣ್‌ ಶೆಟ್ಟಿ ಎಚ್ಚರಿಕೆ

ಇದನ್ನೂ ಓದಿ: Nandini vs Amul: ಒಂದು ದೇಶ-ಒಂದು ಅಮುಲ್, ಒಂದೇ ಹಾಲು, ಒಂದೇ ಗುಜರಾತ್: ಎಚ್.ಡಿ. ಕುಮಾರಸ್ವಾಮಿ ಸರಣಿ ಟ್ವೀಟ್‌

ರೈತರು ಬೀದಿಗೆ ಬರುವ ಪರಿಸ್ಥಿತಿ- ರವಿ ಶೆಟ್ಟಿ ಬೈಂದೂರು

ಅಮುಲ್‌ ಹಾಲು ಮತ್ತು ಮೊಸರು ರಾಜ್ಯ ಮಾರುಕಟ್ಟೆಯನ್ನು ಪ್ರವೇಶ ಮಾಡುವುದರಿಂದ ರೈತರು ಬೀದಿಗೆ ಬರುವ ಪರಿಸ್ಥಿತಿ ಎದುರಾಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರವು ಅವಕಾಶ ಮಾಡಿಕೊಡಬಾರದು. ಈ ಮೂಲಕ ಇಲ್ಲಿನ ರೈತರ ಮೇಲೆ ಮರಣ ಶಾಸನವನ್ನು ಬರೆಯಲು ಹೊರಟಿದೆ. ರಾಜ್ಯ ಸರ್ಕಾರ ಕೂಡಲೇ ಇದರ ಬಗ್ಗೆ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ನಾಡಿನಾದ್ಯಂತ ರೈತರು ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಕರ್ನಾಟಕ ಕಾರ್ಮಿಕ ಪರಿಷತ್ತಿನ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ಎಚ್ಚರಿಕೆ ನೀಡಿದ್ದಾರೆ.

ನಟಿ ಸಂಜನಾ ಹೇಳಿದ್ದೇನು? ಇಲ್ಲಿದೆ ನೋಡಿ ವಿಡಿಯೊ

Exit mobile version