ತಿರುವನಂತಪುರಂ: ಕರ್ನಾಟಕದ ಹೆಮ್ಮೆಯ ನಂದಿನಿ ಹಾಲಿನ (KMF) ಉತ್ಪನ್ನಗಳು ದೇಶದಲ್ಲಿಯೇ ಖ್ಯಾತಿ ಗಳಿಸಿವೆ. ಕರ್ನಾಟಕದ ಗ್ರಾಮ ಗ್ರಾಮಗಳು ಮಾತ್ರವಲ್ಲದೆ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲೂ ನಂದಿನಿ ಉತ್ಪನ್ನಗಳನ್ನು ಜನ ಮುಗಿಬಿದ್ದು ಖರೀದಿಸುತ್ತಾರೆ. ಆದರೆ, ಕೇರಳದಲ್ಲಿ ನಂದಿನಿ ಡೇರಿ ಉತ್ಪನ್ನಗಳ ವರ್ಚಸ್ಸು, ಮಾರಾಟ ಸಹಿಸದ ಕೇರಳ ಸರ್ಕಾರವೀಗ ನಂದಿನಿ ಹಾಲಿನ ಉತ್ಪನ್ನಗಳ ಕುರಿತು ಅಪಪ್ರಚಾರ ಮಾಡುತ್ತಿದೆ. “ನಂದಿನಿ ಹಾಲಿನ ಉತ್ಪನ್ನಗಳ ಗುಣಮಟ್ಟ ಕಳಪೆಯಾಗಿದೆ” ಎಂದು ಕೇರಳ ಪಶು ಸಂಗೋಪನೆ ಸಚಿವೆ (Nandini VS Milma) ಜೆ ಚಿಂಚು ರಾಣಿ ಹೇಳಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
“ಕರ್ನಾಟಕ ಹಾಲು ಒಕ್ಕೂಟವು (KMF) ಕೇರಳ ಪ್ರವೇಶಿಸುವ ಮುನ್ನ ಅನುಮತಿ ಪಡೆಯಬೇಕಿತ್ತು. ಈ ಕುರಿತು ನಾವು ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಗೆ ದೂರು ನೀಡುತ್ತೇವೆ. ಹಾಗೆಯೇ, ನಂದಿನಿ ಹಾಲಿನ ಗುಣಮಟ್ಟ ಕಳಪೆಯಾಗಿದೆ. ಕೇರಳ ನಾಗರಿಕರು ಮಿಲ್ಮ ಡೇರಿ ಉತ್ಪನ್ನಗಳನ್ನೇ ಬಳಸಬೇಕು” ಎಂದು ಕರೆ ನೀಡಿದ್ದಾರೆ. ಕೊಚ್ಚಿಯ ಮಾಮಲ್ಲಪುರಂನಲ್ಲಿ ನಂದಿನಿ ಹಾಲಿನ ಮಳಿಗೆಗಳನ್ನು ತೆರೆಯಲಾಗಿದೆ. ಇದು ಕೇರಳದ ಕೆಂಗಣ್ಣಿಗೆ ಗುರಿಯಾಗಿದೆ.
ಮಾರಾಟ ವಿರೋಧಿಸಲು ಮಿಲ್ಮ ತೀರ್ಮಾನ
ಈಗಾಗಲೇ, ಕರ್ನಾಟಕದ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟವನ್ನು ವಿರೋಧಿಸಲು ಕೇರಳ ಕೋಆಪರೇಟಿವ್ ಮಿಲ್ ಮಾರ್ಕೆಟಿಂಗ್ ಫೆಡರೇಷನ್ (Milma-ಮಿಲ್ಮ) ತೀರ್ಮಾನಿಸಿದೆ. ಹಾಗೆಯೇ, ಭಾರತೀಯ ರಾಷ್ಟ್ರೀಯ ಸಹಕಾರಿ ಡೇರಿ ಫೇಡರೇಷನ್ ನಿರ್ದೇಶಕರ ಮಂಡಳಿ ಸಭೆಯಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಸ್ಥಗಿತಗೊಳಿಸುವ ಕುರಿತು ಪ್ರಸ್ತಾಪಿಸಲು ಕೂಡ ತೀರ್ಮಾನಿಸಲಾಗಿದೆ. ಹಾಗೊಂದು ವೇಳೆ, ಕೇರಳದಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಸ್ಥಗಿತಗೊಂಡರೆ ಕೆಎಂಎಫ್‌ಗೆ ಹಿನ್ನಡೆಯಾಗುತ್ತದೆ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ: ಅಮುಲ್ vs ನಂದಿನಿ ಬೆನ್ನಲ್ಲೇ ತಮಿಳುನಾಡಿನಲ್ಲಿ ಆವಿನ್ vs ಅಮುಲ್! ಕೇಂದ್ರಕ್ಕೆ ಸ್ಟಾಲಿನ್ ಪತ್ರ, ಏನಿದು ವಿವಾದ?
“ದೇಶದಲ್ಲಿ ಹಾಲಿನ ಒಕ್ಕೂಟಗಳು ಇದುವರೆಗೆ ಪಾಲಿಸಿಕೊಂಡು ಬರುತ್ತಿದ್ದ ಕೆಲಸ ನಿಯಮಗಳನ್ನು ಮುರಿಯುತ್ತಿವೆ. ಕರ್ನಾಟಕದಲ್ಲಿ ಅಮುಲ್‌ಗೆ ವಿರೋಧ ವ್ಯಕ್ತವಾಗುವ ಮೊದಲೇ ಕೇರಳದಲ್ಲಿ ಮಿಲ್ಮ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡಲು ತೀರ್ಮಾನಿಸಲಾಗಿತ್ತು. ಕೇರಳದಲ್ಲಿ ಕರ್ನಾಟಕದ ಹಾಲಿನ ಮಳಿಗೆ ಸ್ಥಾಪಿಸಲು ಮೊದಲೇ ವಿರೋಧಿಸಿ ಪತ್ರ ಬರೆದಿದ್ದೆವು. ಕರ್ನಾಟದಲ್ಲಿ ಬ್ಯುಸಿನೆಸ್ ಮಾಡಲು ಮುಂದಾದ ಅಮುಲ್ ನಿರ್ಧಾರ ಸರಿಯಲ್ಲ. ಹಾಗಂತ, ಅಮುಲ್‌ಗೆ ವಿರೋಧ ವ್ಯಕ್ತಪಡಿಸುವ ಯಾವ ನೈತಿಕತೆಯೂ ನಂದಿನಿಗಿಲ್ಲ” ಎಂದು ಮಿಲ್ಮ ಮಲಬಾರ್ ಪ್ರಾದೇಶಿಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಎಸ್. ಮಣಿ ಕೆಲ ದಿನಗಳ ಹಿಂದಷ್ಟೇ ಹೇಳಿದ್ದಾರೆ.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಗುಜರಾತ್‌ನ ಅಮುಲ್ ಸಂಸ್ಥೆಯು ಕರ್ನಾಟಕದ ಕೆಎಂಎಫ್‌ಅನ್ನು (ನಂದಿನಿ) ವಶಪಡಿಸಿಕೊಳ್ಳುತ್ತದೆ, ಅಮುಲ್ ಉತ್ಪನ್ನಗಳ ಉತ್ತೇಜನಕ್ಕಾಗಿಯೇ ನಂದಿನಿ ಹಾಲಿನ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿಸಲಾಗುತ್ತದೆ ಎಂಬ ಆರೋಪಗಳು ದೇಶಾದ್ಯಂತ ಸುದ್ದಿಯಾಗಿದ್ದವು. ನಂದಿನಿ ಹಾಲಿನ ಅಸ್ಮಿತೆಗಾಗಿ ಕರ್ನಾಟಕದಲ್ಲಿ ಹೋರಾಟಗಳೇ ಆರಂಭವಾಗಿದ್ದವು.