ಕೊಚ್ಚಿ: ಕೇರಳದಲ್ಲಿ ತನ್ನ ಬ್ರಾಂಚ್‌ಗಳ ವಿಸ್ತರಣೆ ಯೋಜನೆಯನ್ನು ಸ್ಥಗಿತಗೊಳಿಸಲು ಕೆಎಂಎಫ್ ನಿರ್ಧರಿಸಿದೆ. ಇತ್ತೀಚೆಗೆ ಕರ್ನಾಟಕದ ಜನಪ್ರಿಯ ಡೈರಿ ಬ್ರ್ಯಾಂಡ್ ನಂದಿನಿ ಕೇರಳದಲ್ಲಿ ತನ್ನ ಕೆಲವು ಔಟ್‌ಲೆಟ್‌ಗಳನ್ನು ತೆರೆದಿತ್ತು. ಇದು ನಂದಿನಿ ವರ್ಸಸ್ ಮಿಲ್ಮಾ (Nandini VS Milma) ವಾಗ್ವಾದಕ್ಕೆ ಕಾರಣವಾಗಿತ್ತು.
ಈ ಕುರಿತು ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಸಿಇಒ ಅವರಿಂದ ಮಾಹಿತಿ ಪಡೆಯಲಾಗಿದೆ ಎಂದು ಕೇರಳದ ಪಶುಸಂಗೋಪನೆ, ಡೈರಿ ಅಭಿವೃದ್ಧಿ ಮತ್ತು ಹಾಲು ಸಹಕಾರ ಇಲಾಖೆ ಸಚಿವೆ ಜೆ. ಚಿಂಚುರಾಣಿ ಅವರು ಹೇಳಿದ್ದಾರೆ. ʻʻರಾಜ್ಯದಲ್ಲಿ ಸದ್ಯಕ್ಕೆ ನಂದಿನಿ ಹೊಸ ಮಳಿಗೆಗಳನ್ನು ತೆರೆಯುವುದಿಲ್ಲ ಎಂಬ ಮಾಹಿತಿ ಸಿಇಒ ಅವರಿಂದ ಬಂದಿದೆʼʼ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೆಎಂಎಫ್ ನಿರ್ಧಾರವನ್ನು ಚಿಂಚುರಾಣಿ ಸ್ವಾಗತಿಸಿದ್ದಾರೆ. ಕಾಂಗ್ರೆಸ್ ಗೆಲುವಿನ ನಂತರ ಕರ್ನಾಟಕದಲ್ಲಿ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಈ ಬದಲಾವಣೆಯಾಗಿದೆ. ಕೇರಳ ಸಹಕಾರಿ ಸಂಸ್ಥೆ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್‌ನ (KCMMF- ಮಿಲ್ಮಾ) ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ರಾಜ್ಯವು ಬಯಸುತ್ತದೆ ಎಂದಿದ್ದಾರೆ.
ಕರ್ನಾಟಕದ ನಂದಿನಿಯ ಹಾಲು ಮತ್ತು ಡೈರಿ ಉತ್ಪನ್ನಗಳು ರಾಜ್ಯಕ್ಕೆ ಪ್ರವೇಶಿಸುವ ಬಗ್ಗೆ ಕೇರಳದ ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್ ಸರ್ಕಾರ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿತ್ತು. ಈ ಸಮಸ್ಯೆಯನ್ನು ಬಗೆಹರಿಸುವಂತೆ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಗೆ (ಎನ್‌ಡಿಡಿಬಿ) ಕೇರಳ ಸರ್ಕಾರ ದೂರು ಸಲ್ಲಿಸಿತ್ತು. ನಂದಿನಿ ಮತ್ತು ಮಿಲ್ಮಾ ಎರಡೂ ಸರ್ಕಾರಿ ಬೆಂಬಲಿತ ಸಂಸ್ಥೆಗಳಾಗಿದ್ದು, ಬೇರೆ ರಾಜ್ಯಕ್ಕೆ ಹೋಗುವಾಗ ಆ ರಾಜ್ಯದ ಅನುಮತಿ ಪಡೆಯಬೇಕಿತ್ತು ಎಂದು ಚಿಂಚುರಾಣಿ ಈ ಹಿಂದೆ ಹೇಳಿದ್ದರು.
ಕೆಲವು ರಾಜ್ಯ ಹಾಲು ಮಾರಾಟ ಒಕ್ಕೂಟಗಳು ತಮ್ಮ ರಾಜ್ಯಗಳ ಹೊರಗಿನ ಮಾರುಕಟ್ಟೆಗಳಿಗೆ ಆಕ್ರಮಣಕಾರಿಯಾಗಿ ಪ್ರವೇಶಿಸುವ ಪ್ರವೃತ್ತಿಯನ್ನು “ಅನೈತಿಕ” ಎಂದು KCMMF ಇತ್ತೀಚೆಗೆ ಹೇಳಿತ್ತು. ಕೆಎಂಎಫ್ ತನ್ನ ನಂದಿನಿ ಬ್ರಾಂಡ್ ಹಾಲು ಮತ್ತಿತರ ಉತ್ಪನ್ನಗಳನ್ನು ಮಾರಾಟ ಮಾಡಲು ಕೇರಳದ ಕೆಲವು ಭಾಗಗಳಲ್ಲಿ ಮಳಿಗೆ ತೆರೆದ ಕ್ರಮವನ್ನು ಅದು ಟೀಕಿಸಿತ್ತು. ಇದು ಸಹಕಾರಿ ಮನೋಭಾವದ ಹಾಗೂ ಒಕ್ಕೂಟ ತತ್ವಗಳ ಉಲ್ಲಂಘನೆ ಎಂದಿತ್ತು.
ಇದನ್ನೂ ಓದಿ: Nandini VS Milma: ಕರ್ನಾಟಕದಲ್ಲಿ ಹಾಲು ಮಾರಾಟಕ್ಕೆ ಕೇರಳ ನಿರ್ಧಾರ; ನೆರೆರಾಜ್ಯದ ಡಬಲ್ ಸ್ಟಾಂಡರ್ಡ್ ಬಯಲು