Site icon Vistara News

Nanu Hindu | ದೇವರಿದ್ದಾನೆ, ಇಲ್ಲವೆನ್ನುವ ಇಬ್ಬರೂ ಹಿಂದುಗಳೇ: ಚಕ್ರವರ್ತಿ ಸೂಲಿಬೆಲೆ

Nanu Hindu

ಚಿಕ್ಕೋಡಿ: ಕೆಲ ಧರ್ಮಗಳಲ್ಲಿ ಬೇರೆ ಧರ್ಮದ ದೇವರ ಪೂಜೆ ಮಾಡಿದರೆ ತಲೆ ಕಡಿಯುತ್ತಾರೆ. ಆದರೆ ಹಿಂದು ಧರ್ಮದಲ್ಲಿ ಹಾಗೆ ಮಾಡಿದರೆ ಎಲ್ಲ ದೇವರು ಒಂದೇ, ತಲೆಕೆಡಿಸಿಕೊಳ್ಳಬೇಡ ಎನ್ನುತ್ತಾರೆ. ಹಿಂದು ಧರ್ಮಕ್ಕೆ(Nanu Hindu) ಒಂದು ಗ್ರಂಥ, ಸಂಸ್ಥಾಪಕರಿಲ್ಲ. ಆದರೆ, ಇದೊಂದು ವಿಜ್ಞಾನ, ವಿಜ್ಞಾನಕ್ಕೆ ಯಾರೂ ಸಂಸ್ಥಾಪಕರಿರಲ್ಲ. ದೇವರಿದ್ದಾನೆ ಎನ್ನುವವ, ದೇವರಿಲ್ಲ ಎನ್ನುವ ಇಬ್ಬರೂ ಹಿಂದುಗಳೇ ಎಂದು ಚಿಂತಕ, ಯುವಾ ಬ್ರಿಗೇಡ್‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ವಿದ್ಯಾವರ್ಧಕ ಸಂಘದ ಶಾಲಾ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ʼನಾನು ಹಿಂದುʼ ಸಮಾವೇಶದಲ್ಲಿ ಮಾತನಾಡಿದರು. ಅಂಬೇಡ್ಕರ್ ಸೇರಿ ಮಹಾನ್ ಪುರುಷರು ಯಾರೂ ಹಿಂದು ಧರ್ಮದ ಬಗ್ಗೆ ಮಾತನಾಡಲಿಲ್ಲ. ಅವರ ಫೋಟೊಗಳನ್ನು ಹಾಕಿ ಕೆಲವರು ಹಿಂದು ಧರ್ಮದ ಬಗ್ಗೆ ಮಾತನಾಡುತ್ತಾರೆ. ಯಾರೂ ಹಿಂದು ಸಮಾಜದ ಬಗ್ಗೆ ಕೀಳಾಗಿ ಮಾತನಾಡಿದರೋ ಅವರೇ ಈಗ ಹಣೆಯ ಮೇಲೆ ಪಟ್ಟೆ ಬಳಿದುಕೊಂಡು ಜನಿವಾರ ‌ಹಾಕಿಕೊಂಡು ತಿರುಗುತ್ತಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ | All are Hindu | ಭಾರತದಲ್ಲಿ ವಾಸಿಸುವ ಎಲ್ಲರೂ ಹಿಂದೂ, ಎಲ್ಲರ ಡಿಎನ್ಎ ಒಂದೇ: ಆರ್‌ಎಸ್ಎಸ್

ಹಿಂದು ಎನ್ನುವುದನ್ನು ಅಶ್ಲೀಲ ಎಂದು ಕರೆದಾಗ ಅದಕ್ಕೆ ತಕ್ಕ ಉತ್ತರ ಕೊಡಲೇಬೇಕಾಗಿತ್ತು. ನನ್ನ ಧರ್ಮ‌ ಮತ್ತು ತಾಯಿಯ ಬಗ್ಗೆ ಮಾತಾಡಿದವರ ಕ್ಷೇತ್ರಕ್ಕೆ ಹೋಗಬೇಕು ಎಂದು ಯಮಕನಮರಡಿಗೆ ಬಂದಿದ್ದೇನೆ. ಟಿವಿಗಳಲ್ಲಿ ಮೊದಲು ಜನ ಸೇರಿರಲಿಲ್ಲ ಎಂದು ಸುದ್ದಿ ಬಂತು. ಆದರೆ ನಾನು ಲೈವ್ ನೋಡಿದಾಗ ಸಾವಿರಾರು ಜನ ಸೇರಿದ್ದಾರೆ. ಯಾರು ಯಾರನ್ನು ಕೊಂಡುಕೊಂಡಿದ್ದಾರೆ ನನಗೆ ಗೊತ್ತಾಗಲಿಲ್ಲ ಎಂದು ಸತೀಶ್ ಜಾರಕಿಹೊಳಿ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದರು.

ನನ್ನನ್ನು ವೈಯಕ್ತಿಕವಾಗಿ, ಜಾತಿ ಹಿಡಿದು ಟೀಕೆ ಮಾಡಿದರೂ ಸುಮ್ಮನಿರುತ್ತೇನೆ. ಆದರೆ ಹಿಂದು ಧರ್ಮದ ಕುರಿತು ಮಾತನಾಡಿದರೆ ಸುಮ್ಮನಿರಲ್ಲ. ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಬಹಿರಂಗ ಸವಾಲು ಹಾಕಿದ ಅವರು, ಅಂಬೇಡ್ಕರ್ ಹೆಸರನ್ನು ಹಾಕಿಕೊಂಡು ಓಡಾಡುವವರಿಗೆ ನಾನು ಪ್ರಶ್ನೆ ಮಾಡುತ್ತೇನೆ. ಡಿಕ್ಷನರಿ ನೋಡಿಕೊಂಡು ಮಾತಾಡುವ ಪುಣ್ಯಾತ್ಮರಿಗೆ ಯಾವ ಡಿಕ್ಷನರಿ ಎಂದು ಮರೆತು ಹೋಗಿದೆ. ಹಿಂದು ಸಮಾಜ ತಿರುಗಿಬಿದ್ದರೆ ಏನಾಗುತ್ತೆ ಎಂಬುವುದು ಯಮಕನಮರಡಿಯಲ್ಲಿ ಸಾಬೀತಾಗಿದೆ ಎಂದರು.

ಹಿಂದು ಸಮಾಜ ಹಲಾಲ್‌ ವಿಚಾರಕ್ಕೆ ಬೀದಿಗೆ ಬಂದು ನಿಲ್ಲುತ್ತದೆ. ಹಿಂದು ಎಂದರೆ ಅಶ್ಲೀಲವಾ? ಹಿಂದು ಎಂದರೆ ಬದುಕಿನ‌ ಶೈಲಿ ಎಂದು ಸುಪ್ರಿಂ ಕೋರ್ಟ್ ಹೇಳುತ್ತದೆ. ಧರ್ಮ ಮತ್ತು ಮತ ಬೇರೆ ಬೇರೆ, ನಾನು ಮತಾಂತರಗೊಂಡೆ ಎಂದು ಹೇಳುವುದು ಮತದಲ್ಲಿ(ರಿಲಿಜಿಯನ್) ಮಾತ್ರ. ಧರ್ಮದಲ್ಲಿ ಅದನ್ನು ಮಾಡಲು ಸಾಧ್ಯವೇ ಇಲ್ಲ. ಇದೇ ಬದುಕಿನ‌ ಶೈಲಿ, ನಮ್ಮ ಜನರನ್ನು ಮತಾಂತರ ಮಾಡಲು ಬಂದ ಕ್ರಿಶ್ಚಿಯನ್ನರೇ ಮತಾಂತರವಾದರು. ದೇವರಿದ್ದಾನೆ ಎನ್ನುವವ, ದೇವರಿಲ್ಲ ಎನ್ನುವವ ಇಬ್ಬರೂ ಹಿಂದುಗಳೇ ಎಂದು ಹೇಳಿದರು.

ಹಿಂದು ಧರ್ಮದ ಬಗ್ಗೆ ಮಾತನಾಡಿದ ಸತೀಶ ಜಾರಕಿಹೊಳಿಯನ್ನು ಕಾಂಗ್ರೆಸ್ ಉಚ್ಚಾಟನೆ ಮಾಡುತ್ತದಾ ಎಂದು ಪ್ರಶ್ನಿಸಿದ ಅವರು, 8 ರಿಂದ 10 ಸಾವಿರ ವರ್ಷಗಳಿಂದ ಅಲುಗಾಡದ ಧರ್ಮ, ಯಮಕನಮರಡಿಯಲ್ಲಿ ಯಾರೋ ಒಬ್ಬ ಏನೋ ಮಾತನಾಡುತ್ತಾರೆ ಎಂದು ಅಲುಗಾಡಲ್ಲ. ಹಿಂದು ಪದ ಪರ್ಷಿಯಾದಿಂದ ಬಂದಿದ್ದು ಎಂದು ಇವರು ಹೇಳುತ್ತಾರೆ. ಸಪ್ತಸಿಂಧೂ ರಾಷ್ಟ್ರ, ಏಳು ನದಿಗಳು ಪ್ರತಿನಿತ್ಯ ಆವಾಹನೆ ಮಾಡಿಕೊಂಡು ನಾವು ಸ್ನಾನ ಮಾಡುತ್ತೇವೆ. ಇಲ್ಲಿಂದಲೇ ಹೋಗಿ ಅಲ್ಲಿ ಹಪ್ತ ಎಂಬ ಪದ ಹಿಂದು ಎಂದಾಯಿತು. ನಿಮ್ಮ ಸಾಹುಕಾರ್‌ನನ್ನು ಟ್ರೋಲ್‌ ಮಾಡಿದಾಗ ನಾನು ಶಹಬ್ಬಾಷ್‌ ಅಂದುಕೊಳ್ಳುತ್ತೇನೆ. ಯಾಕೆಂದರೆ ಅವರಿಗೆ ನಾನು ಅಷ್ಟು ಡೆಂಜರ್ ಆಗಿ ಕಾಣಿಸುತ್ತೇನೆ ಎಂದು ಹೇಳಿದರು.

ಓಂಕಾರವನ್ನು ಶ್ರದ್ಧೆಯಿಂದ ಹೇಳಿದರೆ ನೀವು ಹಿಂದು ಎಂದು ನನ್ನ ಪೂರ್ವಜರು ಹೇಳಿದರು. ನೀವು ಯಾವುದೇ ಸ್ರೋತ್ರವನ್ನು ಹೇಳಿದರೂ ಓಂಕಾರ ಮಾತ್ರ ಇರುತ್ತದೆ. ಹಿಂದು ಧರ್ಮ ಯಾವತ್ತೂ ಹೇಡಿಗಳನ್ನು ಹುಟ್ಟಿಸಲಿಲ್ಲ. ತನ್ನ ಧರ್ಮವನ್ನು ರಕ್ಷಣೆ ಮಾಡುವ ಹಾಗೂ ಅಗತ್ಯ ಬಿದ್ದರೆ ಪ್ರಾಣ ತೆಗೆಯುವ ವೀರರನ್ನು ಹುಟ್ಟಿಸಿದೆ. ನಮ್ಮನ್ನು ಎದುರಿಸಲಾಗದ ಜನ ಡಾಕುಗಳು ಎಂದರು. ಜಗತ್ತಿನಲ್ಲಿ 8 ಕೋಟಿ ಹಿಂದುಗಳಲ್ಲಿ ಹತ್ಯೆ ಮಾಡಲಾಯಿತು. ಈ ಬಗ್ಗೆ ಪುಸ್ತಕಗಳಲ್ಲಿ ಉಲ್ಲೇಖವಾಗಿದೆ ಎಂದರು.

ಬಾಲಿವುಡ್‌ ನಟ ಸೈಫ್‌ ಅಲಿಖಾನ್ ಮಗನಿಗೆ ತೈಮೂರ್‌ ಎಂದು ಹೆಸರಿಟ್ಟಿದ್ದಾನೆ. ತೈಮೂರ್‌ ಎಂಬ ಒಬ್ಬ ರಾಜ ಹಿಂದು ತಲೆ ಕತ್ತರಿಸಿ, ಅದರಿಂದ ಬೆಟ್ಟ ಮಾಡಿದ್ದ. ಅಂತಹವನ ಹೆಸರನ್ನು ನಟ ತನ್ನ ಮಗನಿಗಿಟ್ಟಿದ್ದಾನೆ, ಇದಕ್ಕಿಂತ ದುರ್ದೈವ ಬೇಕಾ? ಎಂದು ಪ್ರಶ್ನಿಸಿದ ಅವರು, ನಾನು ಚಿಕ್ಕವನಿದ್ದಾಗ ಮಲವಿಸರ್ಜನೆಗೆ ಹೋಗಬೇಕಾರೆ ಲಂಡನ್‌ಗೆ ಹೋಗುತ್ತೇನೆ ಎನ್ನುತ್ತಿದ್ದೆ. ನಾನು ಕಾಲೇಜಿಗೆ ಹೋದಾಗ ಟಾಯ್ಲೆಟ್ ಮೇಲೆ ವೆಲ್‌ ಕಮ್ ಟೂ ಪಾಕಿಸ್ತಾನ ಅಂತ ಬರೆದಿದ್ದರು. ಇವರು ಇದನ್ನೂ ಡಿಕ್ಷನರಿಯಲ್ಲಿ ಲಂಡನ್‌ಗೆ ಮಲವಿಸರ್ಜನೆ ಎಂದು ಅರ್ಥ ಇದೆ. ಅದೇ ಡಿಕ್ಷನರಿಯಲ್ಲಿ ಟಾಯ್ಲೆಟ್‌ಗೆ ಪಾಕಿಸ್ಥಾನ ಎಂದು ಅರ್ಥ ಇದೆ ಅಂತ ಚರ್ಚೆಗೆ ಬಂದರೆ ಏನು ಮಾಡಲು ಆಗುತ್ತದೆ.
ಸತೀಶ್ ಹಿಂದು ಧರ್ಮವನ್ನು ಅರ್ಥೈಸಿಕೊಂಡ ಇರುವ ರೀತಿ ಹೀಗೆಯೇ ಎಂದು ಕುಟುಕಿದರು.

ಬೂಟನ್ನು ಪಾಲಿಷ್ ಮಾಡಿ ಬದುವುದು ಸ್ವಾಭಿಮಾನದ ಬದುಕು. ಆದರೆ ಬೂಟು ನೆಕ್ಕಿಕೊಂಡು ಬದುಕುವುದು ಬದುಕಲ್ಲ. ಸಂವಿಧಾನದ 370ನೇ ವಿಧಿಯನ್ನು ತಾಕತ್ ಇದ್ರೆ ತೆಗೆಯಿರಿ ಎಂದು ಸವಾಲು ಮಾಡುತ್ತಿದ್ದರೆ. ನಮ್ಮ ಪ್ರಧಾನಿಗಳು ಅದನ್ನು ರದ್ದುಗೊಳಿಸಿದರು. ಪ್ರತಿಯೊಂದು ಶಾಲಾ ಕಾಲೇಜುಗಳ ಮೇಲೆ ಅಂದು ತ್ರಿವರ್ಣ ಧ್ವಜ ಹಾರಾಡಿತು. ರಾಮಮಂದಿರ ಕೆಡವಿ ಬಾಬ್ರಿ ಮಸೀದಿ ಕಟ್ಡಿದ ಜಾಗದಲ್ಲಿಯೇ ಈಗ ರಾಮಮಂದಿರ ನಿರ್ಮಾಣವಾಗುತ್ತಿದೆ. ಹಿಂದುಗಳು ಈಗ ಜಾಗೃತರಾಗಿದ್ದಾರೆ. ಯಾರೂ ಹಿಂದು ಸಮಾಜವನ್ನು ಕೀಳಾಗಿ ಮಾತನಾಡಿದರೋ ಅವರು ಈಗ ಹಣೆಯ ಮೇಲೆ ಪಟ್ಟೆ ಬಳಿದುಕೊಂಡು ಜನಿವಾರ ‌ಹಾಕಿಕೊಂಡು ತಿರುಗುತ್ತಿದ್ದಾರೆ. ಹಿಂದುಗಳು ಜಾಗೃತರಾದರೆ ಕಾಂಗ್ರೆಸ್ ತನ್ನ ಕೋಟ್‌ ಮೇಲೆ ‌ಜನಿವಾರ ಹಾಕಿಕೊಂಡು ಓಡಾಡುತ್ತೆ ಎಂದು ಸಾವರ್ಕರ್ ಅಂದೇ ಹೇಳಿದ್ದರು. ಅದು ಸಹ ನಿಜವಾಗುತ್ತಿದೆ ಎಂದರು.

ಅಭಿನವ ಮಂಜುನಾಥ ಮಹಾಸ್ವಾಮೀಜಿ, ಹಾಲ ಮಹಾಸ್ವಾಮೀಜಿ, ಸಚಿವೆ ಶಶಿಕಲಾ‌ ಜೊಲ್ಲೆ, ಸಂಸದ ಅಣ್ಣಸಾಹೇಬ್ ಜೊಲ್ಲೆ, ಮಾಜಿ ಶಾಸಕ ಸಂಜಯ್ ಪಾಟೀಲ್, ಮಾಜಿ ಸಚಿವ ಶಶಿಕಾಂತ ನಾಯಿಕ, ಮಾರುತಿ ಅಷ್ಟಗಿ ಮತ್ತಿತರರರು ಉಪಸ್ಥಿತರಿದ್ದರು.

ವಿವಿಧ ಪುಸ್ತಕಗಳ ಬಿಡುಗಡೆ
ವೇದಿಕೆಯ ವಿವಿಧ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ನಾನು ಹಿಂದು, ಎಲ್ಲೆಲ್ಲೂ ಹಿಂದು ಸಂಸ್ಕೃತಿ, ಕನ್ನಡದ ಹಿಂದು ಸಾಮ್ರಾಜ್ಯ, ಮತಾಂಧ ಟಿಪ್ಪು, ಲವ್ ಜಿಹಾದ್, ದಿ ಕಾಶ್ಮೀರಿ ಫೈಲ್ಸ್ ಪುಸ್ತಕಗಳನ್ನು ಚಕ್ರವರ್ತಿ ಸೂಲಿಬೆಲೆ ಹಾಗೂ ಗಣ್ಯರು ಬಿಡುಗಡೆ ಮಾಡಿದರು. ಹಿಂದು ಧರ್ಮ ಇನ್ನು ಯಾವುದನ್ನೂ ಸಹಿದಲ್ಲ. ಓಟು ಹಾಕುವ ಮುನ್ನ ಹಿಂದು ಎಂದರೆ ಅಶ್ಲೀಲ ಎಂದು ಹೇಳಿರುವುದು ನೆನಪಿಗೆ ಬರಲಿ. ಓಟು ಹಾಕುವ ಮುನ್ನ ಹಿಂದು ಧರ್ಮಕ್ಕೆ ‌ಮಾಡಿದ ಅನ್ಯಾಯ ನೆನಪಿಗೆ ಬರಲಿ. ನಾನು ಯಾವತ್ತು ರಾಜ್ಯದಲ್ಲಿ ಚುನಾವಣೆ ಪ್ರಚಾರ ಮಾಡಿಲ್ಲ, ಈ ದೇಶಕ್ಮೆ ಒಬ್ಬ ಸಮರ್ಥ ಪ್ರಧಾನಿ ಬೇಕು ಎಂದು ನಿಮ್ಮ ಬಳಿ ಬಂದಿದ್ದೆ. ನಿಮ್ಮ ಬಳಿ ಬಂದು ಭಿಕ್ಷೆ ಕೇಳಿದ್ದೆ, ದಯವಿಟ್ಟು ಓಟು ಹಾಕುವ ಮುನ್ನ ಎಚ್ಚರ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಇದನ್ನೂ ಓದಿ | Azaan controversy | ಶಾಲಾ ಕ್ರೀಡಾಕೂಟ ನೃತ್ಯದಲ್ಲಿ ಹಿಂದು ಮಕ್ಕಳಿಂದ ಆಜಾನ್‌; ವ್ಯಾಪಕ ಆಕ್ರೋಶ, ಪ್ರತಿಭಟನೆ

Exit mobile version