Site icon Vistara News

Narayana Murthy: ಇನ್ಫೋಸಿಸ್‌ ನಾರಾಯಣ ಮೂರ್ತಿ-ಸುಧಾ ಮೂರ್ತಿಗೆ ಮೂರನೇ ಮೊಮ್ಮಗು!

rohan murthy

rohan murthy

ಬೆಂಗಳೂರು: ಇನ್ಫೋಸಿಸ್‌ ಸಂಸ್ಥಾಪಕ ಎನ್‌.ಆರ್‌.ನಾರಾಯಣ ಮೂರ್ತಿ (Infosys founder N.R.Narayana Murthy) ಮತ್ತು ಲೇಖಕಿ ಸುಧಾ ಮೂರ್ತಿ (Sudha Murty) ದಂಪತಿ ಮತ್ತೊಮ್ಮೆ ಅಜ್ಜ-ಅಜ್ಜಿ ಆಗಿದ್ದಾರೆ. ಪುತ್ರ ರೋಹನ್‌ ಮೂರ್ತಿ ಮತ್ತು ಸೊಸೆ ಅಪರ್ಣಾ ಕೃಷ್ಣನ್‌ ದಂಪತಿಗೆ ಗಂಡು ಮಗುವೊಂದು ಜನಿಸಿದೆ. ನವೆಂಬರ್‌ 10ರಂದು ಬೆಂಗಳೂರಿನಲ್ಲಿ ಅಪರ್ಣಾ ಕೃಷ್ಣನ್‌ ಮಗುವಿಗೆ ಜನ್ಮ ನೀಡಿದ್ದಾರೆ.

ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಗೆ ಈಗಾಗಲೇ ಮೊಮ್ಮಕ್ಕಳಿದ್ದಾರೆ. ಪುತ್ರಿ ಅಕ್ಷತಾ ಮೂರ್ತಿ ಮತ್ತು ಬ್ರಿಟನ್‌ ಪ್ರಧಾನಮಂತ್ರಿ ರಿಷಿ ಸುನಕ್‌ ದಂಪತಿಗೆ ಕೃಷ್ಣ ಮತ್ತು ಅನೌಷ್ಕಾ ಎನ್ನುವ ಇಬ್ಬರು ಮಕ್ಕಳಿದ್ದಾರೆ. ತಾಯಿ ಮತ್ತು ಮಗ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಗುವಿಗೆ ಏಕಾಗ್ರಹ್‌ ಎಂದು ಹೆಸರಿಡಲಾಗಿದೆ. ಸಂಸ್ಕೃತ ಪದವಾದ ಇದರ ಅರ್ಥ ಅಚಲ ಗಮನ ಮತ್ತು ಏಕಾಗ್ರತೆ. ಮೂರ್ತಿ ಕುಟುಂಬವು ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ ಬರುವ ಅರ್ಜುನನ ಅಚಲ ಏಕಾಗ್ರತೆಯಿಂದ ಪ್ರೇರಿತವಾಗಿದೆ ಎಂದು ವರದಿಯಾಗಿದೆ.

ರೋಹನ್‌ ಮೂರ್ತಿ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ, ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ರೋಹನ್ ಮೂರ್ತಿ ಯುಎಸ್ ಮೂಲದ ಸಾಫ್ಟ್‌ವೇರ್‌ ಅಭಿವೃದ್ಧಿ ಸಂಸ್ಥೆ ಸೊರೊಕದ ಸ್ಥಾಪಕರೂ ಹೌದು. ಇದು ಡೇಟಾವನ್ನು ಅರ್ಥಪೂರ್ಣ ಮಾಹಿತಿಯಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಇದಲ್ಲದೆ ಅವರು ಅಮೆರಿಕನ್ ಸಂಸ್ಕೃತ ವಿದ್ವಾಂಸ ಶೆಲ್ಡನ್ ಪೊಲಾಕ್ ನೇತೃತ್ವದ ಕ್ಲೇ ಸಂಸ್ಕೃತ ಗ್ರಂಥಾಲಯ ಯೋಜನೆಯ ಮುಂದುವರಿಕೆಯಾದ ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್ ಇಂಡಿಯಾವನ್ನು ಸಹ ಸ್ಥಾಪಿಸಿದ್ದಾರೆ.

ಅಪರ್ಣಾ ಕೃಷ್ಣನ್ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕಮಾಂಡರ್ ಕೆ.ಆರ್.ಕೃಷ್ಣನ್ ಮತ್ತು ಎಸ್‌ಬಿಐ ಮಾಜಿ ಉದ್ಯೋಗಿ ಸಾವಿತ್ರಿ ಕೃಷ್ಣನ್ ಅವರ ಪುತ್ರಿ. ಅಪರ್ಣಾ ತಮ್ಮ ಆರಂಭಿಕ ಶಾಲಾ ಶಿಕ್ಷಣವನ್ನು ಭಾರತದಲ್ಲಿ ಪೂರೈಸಿದ್ದರು. ಯುನೈಟೆಡ್ ವರ್ಲ್ಡ್ ಕಾಲೇಜಿನಲ್ಲಿ ವಿದ್ಯಾರ್ಥಿವೇತನ ಪಡೆದ ನಂತರ ಪ್ರೌಢಶಾಲಾ ಶಿಕ್ಷಣಕ್ಕಾಗಿ ಕೆನಡಾಕ್ಕೆ ತೆರಳಿದ್ದರು. ಅಪರ್ಣಾ ಕೃಷ್ಣನ್ ಸುಮಾರು ನಾಲ್ಕು ವರ್ಷಗಳ ಕಾಲ ಸೊರೊಕೊದಲ್ಲಿ ಕಾರ್ಯಾಚರಣೆಗಳ ಜನರಲ್ ಮ್ಯಾನೇಜರ್ ಆಗಿದ್ದರು. ಅವರು ಪ್ರಸ್ತುತ ಮೂರ್ತಿ ಮೀಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಮೂರ್ತಿ ಮೀಡಿಯಾ ಸುಧಾ ಮೂರ್ತಿ ಅವರ ಪುಸ್ತಕಗಳನ್ನು ಆಧರಿಸಿ ಯೂ ಟ್ಯೂಬ್‌ನಲ್ಲಿ ಸರಣಿ ಕಾರ್ಯಕ್ರಮಗಳಾದ ʼಸ್ಟೋರಿ ಟೈಮ್ ವಿತ್ ಸುಧಾ ಅಮ್ಮʼ ಅನ್ನು ನಿರ್ಮಿಸಿದೆ.

ಇದನ್ನೂ ಓದಿ: Narayana Murthy: ವಾರಕ್ಕೆ 70 ಗಂಟೆ ಕೆಲಸ ಮಾಡಲು ಯುವಕರಿಗೆ ಇನ್ಫೋಸಿಸ್ ನಾರಾಯಣಮೂರ್ತಿ ಸಲಹೆ!

ರೋಹನ್‌ ಮೂರ್ತಿ ಮತ್ತು ಅಪರ್ಣಾ ಕೃಷ್ಣನ್‌ 2016ರಲ್ಲಿ ಭೇಟಿಯಾಗಿದ್ದರು. ಬಳಿಕ ಇಬ್ಬರು 2019ರಲ್ಲಿ ವಿವಾಹವಾಗಲು ತೀರ್ಮಾನಿಸಿದ್ದರು. ರೋಹನ್‌ ಅವರಿಗೆ ಇದು ಎರಡನೇ ವಿವಾಹ. 2011ರಲ್ಲಿ ಅವರು ಟಿವಿಎಸ್‌ ಮೋಟಾರ್ಸ್‌ ಚೇರ್‌ಮ್ಯಾನ್‌ ವೇಣು ಶ್ರೀನಿವಾಸನ್‌ ಮತ್ತು ಮಲ್ಲಿಕಾ ಶ್ರೀನಿವಾಸನ್‌ ಅವರ ಪುತ್ರಿ ಲಕ್ಷ್ಮೀ ವೇಣು ಜತೆ ಸಪ್ತಪದಿ ತುಳಿದಿದ್ದರು. ಆದರೆ ಈ ದಾಂಪತ್ಯ ಜೀವನ 2 ವರ್ಷಕ್ಕೇ ಅಂತ್ಯವಾಗಿತ್ತು. 2015ರಲ್ಲಿ ಕೋರ್ಟ್‌ ಇವರ ಡಿವೋರ್ಸ್‌ಗೆ ಅನುಮತಿ ನೀಡಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version