Site icon Vistara News

ಇಂದು ಮಂಗಳೂರಿನಲ್ಲಿ ಸರ್ಕಾರದಿಂದ ನಾರಾಯಣಗುರು ಜಯಂತಿ: ಅಪಮಾನದ ಬಳಿಕ ಓಲೈಕೆ ನಡೆಸಿದ ಆರೋಪ

Narayanaguru

ಮಂಗಳೂರು: ಕರಾವಳಿಯಲ್ಲಿ ಆಗಾಗ ನಾರಾಯಣ ಗುರುಗಳ ಹೆಸರಿನಲ್ಲಿ ಕೆರಳುವ ವಿವಾದ ಈಗ ಮತ್ತೆ ಎದ್ದು ನಿಂತಿದೆ. ಇದುವರೆಗೆ ಸರಕಾರ ನಾರಾಯಣ ಗುರುಗಳನ್ನು ನಿರ್ಲಕ್ಷಿಸುತ್ತಿದೆ ಎಂಬ ಆರೋಪದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಈ ಬಾರಿ ಸರ್ಕಾರ ಸಮುದಾಯವನ್ನು ಓಲೈಸಲು ಪ್ರಯತ್ನಿಸುತ್ತಿದೆ ಎಂಬ ಆಕ್ರೋಶದಲ್ಲಿ ಅಸಸ್ವರ ಕೇಳಿಬಂದಿದೆ.

ಏನಿದು ವಿವಾದ?
ಸೆಪ್ಟೆಂಬರ್‌ ೧೦ರಂರು ನಾರಾಯಣ ಗುರು ಜಯಂತಿ. ಈ ಬಾರಿ ಸರಕಾರವೇ ಅದನ್ನು ಆಚರಿಸಲು ಮುಂದಾಗಿದೆ. ಕಳೆದ ಕೆಲವು ವರ್ಷಗಳಿಂದ ರಾಜ್ಯ ಸರಕಾರವೇ ಇದನ್ನು ನಡೆಸಿಕೊಂಡು ಬರುತ್ತಿದೆ. ಆದರೆ, ಇದುವರೆಗೆ ನಡೆದಿದ್ದೆಲ್ಲ ಇದನ್ನು ಬೆಂಗಳೂರಿನ ಬದಲು ಮೊದಲ ಸಲ ಮಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಇಂದು(ಸೆ. ೧೦) ಸಂಜೆ ಟಿಎಂಎ ಪೈ ಸಭಾಂಗಣದಲ್ಲಿ ನಾರಾಯಣ ಗುರು ಜಯಂತಿ ಆಚರಣೆಗೆ ಸಮಾರಂಭ ಆಯೋಜನೆಗೊಂಡಿದೆ. ಇದಕ್ಕೆ ಅಪಸ್ವರ ಕೇಳಿಬಂದಿದೆ.

ರಾಜ್ಯ ಸರ್ಕಾರ, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ದ.ಕ ಜಿಲ್ಲಾಡಳಿತದಿಂದ ವತಿಯಿಂದ ಈ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ವಿರೋಧ ಯಾಕೆಂದರೆ, ಸರಕಾರ ನಾರಾಯಣಗುರುಗಳ ವಿಚಾರದಲ್ಲಿ ಸಾಕಷ್ಟು ಅನ್ಯಾಯ ಮಾಡಿದೆ. ಈಗ ಓಲೈಕೆಗೆ ಮುಂದಾಗಿದೆ ಎನ್ನುವುದು.

ಅಪಸ್ವರ ಎತ್ತಿದವರು ಹೇಳುವ ಪ್ರಕಾರ, ಈಗ ನಾರಾಯಣಗುರುಗಳ ಬಗ್ಗೆ ಇಷ್ಟೊಂದು ಅಕ್ಕರೆ ತೋರುವ ಇವರು ಆವತ್ತು ಗಣರಾಜ್ಯೋತ್ಸವದಲ್ಲಿ ನಾರಾಯಣಗುರು ಟ್ಯಾಬ್ಲೋಗೆ ಅವಕಾಶ ನೀಡಿಲ್ಲ ಯಾಕೆ? ಕೇರಳ ಸರಕಾರ ಕಳುಹಿಸಿದ ಟ್ಯಾಬ್ಲೊವನ್ನು ಧಿಕ್ಕರಿಸಿದ್ದು ಯಾಕೆ? ಪಠ್ಯ ಪುಸ್ತಕದಲ್ಲೂ ಗುರುಗಳ ಪಾಠವನ್ನು ತೆಗೆಯಲಾಗಿತ್ತು. ಇಂಥ ಅನ್ಯಾಯ ಮಾಡಿದ್ದು ಯಾಕೆ? ಆಗ ಅಪಮಾನ ಮಾಡಿ ಈಗ ಸನ್ಮಾನ ಮಾಡುತ್ತಿರುವುದು ಯಾಕೆ?

ಅಂದು ಈ ಘಟನೆಗಳು ನಡೆದಾಗ ಬಿಲ್ಲವ ಸಮುದಾಯ ಆಕ್ರೋಶಗೊಂಡಿತ್ತು. ಹಾಗೆ ಸಿಟ್ಟುಗೊಂಡ ಸಮುದಾಯವನ್ನು ಓಲೈಸುವುದಕ್ಕಾಗಿ, ಸಮಾಧಾನ ಮಾಡುವುದಕ್ಕಾಗಿ ಬಿಜೆಪಿ ನಾರಾಯಣ ಗುರು ಜಯಂತಿಯನ್ನು ಮಂಗಳೂರಿಗೆ ಶಿಫ್ಟ್‌ ಮಾಡಿದೆ ಎನ್ನುವುದು ಅಪಸ್ವರ ಎತ್ತಿದವರ ಆಕ್ಷೇಪ.

ಬಿಲ್ಲವ ಮುಖಂಡರು, ಸಂಘಟನೆಗಳು ಹಾಗೂ ಸಾಮಾಜಿಕ ತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕೆ ಗುರುಗಳನ್ನು ಬಳಕೆ ಮಾಡುತ್ತಿರುವುದು ಸರಿಯಲ್ಲ ಎನ್ನುವುದು ಅವರ ವಾದ.

ಅದರ ನಡುವೆ ಆಚರಣೆಯನ್ನು ಮಂಗಳೂರಿನಲ್ಲಿ ಮಾಡಬೇಕು ಎನ್ನುವ ತೀರ್ಮಾನ ಆಗಿದ್ದೇ ಭಾರಿ ತಡವಾಗಿ. ನಾಲ್ಕು ದಿನಗಳ ಹಿಂದಷ್ಟೇ ಆಚರಣೆ ಬಗ್ಗೆ ಘೋಷಣೆಯಾಗಿದೆ. ವಿಧಾನಸೌಧ ಇಲ್ಲವೇ ಕುದ್ರೋಳಿಯಲ್ಲಿ ಜಯಂತಿ ಆಚರಿಸಲು ಸಲಹೆ ಇತ್ತು. ಕೊನೆಗೆ ಟಿಎಂಎ ಪೈ ಸಭಾಭವನದಲ್ಲಿ ತೀರ್ಮಾನ ಆಗಿದೆ.

Exit mobile version