ಹುಬ್ಬಳ್ಳಿ: ನಗರದ ಕೇಶ್ವಾಪುರದ ರೈಲ್ವೆ ಮೈದಾನದಲ್ಲಿ ಗುರುವಾರ (ಜ.12) ಹಮ್ಮಿಕೊಂಡಿರುವ ʼರಾಷ್ಟ್ರೀಯ ಯುವಜನೋತ್ಸವʼಕ್ಕೆ (National Youth Festival) ಕ್ಷಣಗಣನೆ ಆರಂಭವಾಗಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸಂಜೆ 4 ಗಂಟೆಗೆ ಚಾಲನೆ ನೀಡಲಿದ್ದು, ಏರ್ಪೋರ್ಟ್‌ಗೆ ಎಸ್‌ಪಿಜಿ ಕಮಾಂಡೋ ವಾಹನಗಳು ಆಗಮಿಸಿವೆ. ಇನ್ನು ಎರಡು ದಿನಗಳಿಂದ ಹೊಸೂರ್ ಕ್ರಾಸ್‌ನಲ್ಲಿ ನಿಂತಿದ್ದ ಅಪರಿಚಿತ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ಯುವಜನೋತ್ಸವಕ್ಕೆ ಆಗಮಿಸುತ್ತಿರುವ ಯುವಜನತೆಯ ಜೋಶ್ ಹೆಚ್ಚಾಗಿದೆ. ಬಿಜೆಪಿ ಕಾರ್ಯಕರ್ತರ ಉತ್ಸಾಹವೂ ಈ ವೇಳೆ ಇಮ್ಮಡಿಗೊಂಡಿದೆ.
ಹುಬ್ಬಳ್ಳಿ ಏರ್ಪೋರ್ಟ್‌ಗೆ ಎರಡು ಗಂಟೆ ಮುಂಚಿತವಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆ ವಾಹನ ಆಗಮಿಸಿದೆ. ವಿಮಾನ ನಿಲ್ದಾಣದ ಸುತ್ತ ಪರಿಶೀಲನೆ ನಡೆಸಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅಲ್ಲದೆ, ಮೋದಿ ಬರುವ ಮಾರ್ಗದುದ್ದಕ್ಕೂ ಪೊಲೀಸರು, ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ದೇಶದ ಯುವ ಶಕ್ತಿ ಮತ್ತು ವಿವಿಧ ರಾಜ್ಯದ ಸಾಂಸ್ಕೃತಿಕ ವೈಭವ ಅನಾವರಣಗೊಳ್ಳಲಿದ್ದು, 28 ರಾಜ್ಯಗಳ, 6 ಕೇಂದ್ರಾಡಳಿತ ಪ್ರದೇಶಗಳ ಯುವ ಪ್ರತಿನಿಧಿಗಳಿಂದ ವಾಕಥಾನ್ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಸ್ಥಳದತ್ತ ಕಲಾವಿದರು ಆಗಮಿಸುತ್ತಿದ್ದಾರೆ. ಕಲಾ ಪ್ರದರ್ಶನಕ್ಕೆ ಸಜ್ಜಾಗಿ ನಿಂತಿವೆ.
ಇದನ್ನೂ ಓದಿ | ಯೋಧನ ಎದೆಯಿಂದ ಸಜೀವ ಗ್ರೆನೇಡ್ ಹೊರತೆಗೆದ ಸಾಹಸಿ ವೈದ್ಯ; ಯಾವುದೇ ಕ್ಷಣದಲ್ಲಾದರೂ ಸ್ಫೋಟಿಸುವ ಅಪಾಯವಿತ್ತು!
ಇನ್ನು ಕಾರ್ಯಕ್ರಮಕ್ಕಾಗಿ ದೇಶದ ನಾನಾ ಭಾಗಗಳಿಂದ ಹಲವಾರು ಕಲಾವಿದರು ಆಗಮಿಸುತ್ತಿದ್ದು, ಧಾರವಾಡಕ್ಕೆ ಬಂದಿಳಿಯುವವರಿಗಾಗಿ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಅವರೆಲ್ಲರಿಗೂ ಮಧ್ಯಾಹ್ನ ೧೨ ಗಂಟೆಯಿಂದಲೇ ಹುಬ್ಬಳ್ಳಿಗೆ ರೈಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸುಮಾರು 7 ಸಾವಿರ ಯುವಕ-ಯುವತಿಯರು ಧಾರವಾಡದಿಂದ ಹುಬ್ಬಳ್ಳಿಗೆ ಪ್ರಯಾಣಿಸಿದ್ದಾರೆ. ಧಾರವಾಡದ ರೈಲ್ವೆ ನಿಲ್ದಾಣದ ಬಳಿ ದೇಶದ ನಾನಾ ಭಾಗಗಳಿಂದ ಅವರದೇ ಉಡುಗೆಗಳನ್ನು ಧರಿಸಿರುವ ಯುವಕರ ಗುಂಪುಗಳು ಮಿಂಚುತ್ತಿವೆ.
ವಿವೇಕಾನಂದರ ಫೋಟೊಗಳೇ ಕಾಣುತ್ತಿಲ್ಲ
ಸ್ವಾಮಿ ವಿವೇಕಾನಂದರ 160ನೇ ಜನ್ಮದಿನದ ಹಿನ್ನೆಲೆಯಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಬಿಂದುವನ್ನೇ ರಾಜ್ಯ ಸರ್ಕಾರ ಕೈಬಿಟ್ಟಿದೆ ಎಂಬ ಆರೋಪ ಕೇಳಿಬಂದಿದೆ. ರಸ್ತೆಯುದ್ದಕ್ಕೂ ರಾಜಕೀಯ ನಾಯಕರ ಫ್ಲೆಕ್ಸ್‌ಗಳನ್ನು ಹಾಕಲಾಗಿದ್ದು, ಎಲ್ಲಿಯೂ ಸಹ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ಹಾಕಲಾಗಿಲ್ಲ ಎಂದು ಆರೋಪ ಮಾಡಲಾಗಿದೆ. ನರೇಂದ್ರ ಮೋದಿ ಸಂಚಾರ ಮಾಡಲಿರುವ ಮಾರ್ಗದಲ್ಲಿ ನೋಡಿದರೆ ರಾಜಕೀಯ ನಾಯಕರ ಫ್ಲೆಕ್ಸ್ ಬಿಟ್ಟರೆ ಸ್ವಾಮಿ ವಿವೇಕಾನಂದರ ಭಾವಚಿತ್ರವು ಒಂದೆರೆಡು ಕಡೆ ಮಾತ್ರವೇ ಕಾಣಸಿಗುತ್ತಿದೆ ಎಂಬುದು ಅಸಮಾಧಾನಕ್ಕೆ ಕಾರಣವಾಗಿದೆ.
ರಸ್ತೆಯಲ್ಲಿ ರಂಗೋಲಿ ಚಿತ್ತಾರ
ಏರ್ಪೋರ್ಟ್ ದ್ವಾರ ಬಾಗಿಲಿನಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರ ಸಂಭ್ರಮ ಮನೆ ಮಾಡಿದೆ. ಏರ್ಪೋರ್ಟ್‌ನ ದ್ವಾರವನ್ನು ಹೂವಿನಿಂದ ಅಲಂಕರಿಸಲಾಗಿದ್ದು, ದ್ವಾರದ ಮುಂಭಾಗದಲ್ಲಿ ಬಣ್ಣ ಬಣ್ಣದ ರಂಗೋಲಿಗಳಿಂದ ಚಿತ್ತರಿಸಲಾಗಿದೆ. ಮೋದಿ ಸಂಚರಿಸಲಿರುವ ರಸ್ತೆಯನ್ನು ಅಲಂಕರಿಸಲಾಗಿದೆ. ವಿಮಾನ ನಿಲ್ದಾಣ ರಸ್ತೆಯಿಂದ ಅಕ್ಷಯ ಪಾರ್ಕ್‌ವರೆಗೂ ಬಿಜೆಪಿ ಮಹಿಳಾ ಕಾರ್ಯಕರ್ತರು ರಂಗೋಲಿಗಳಿಂದ ರಸ್ತೆಯನ್ನು ಚಿತ್ತಾರಗೊಳಿಸಿದ್ದಾರೆ.
ಇದನ್ನೂ ಓದಿ | Hindu activist dead | ಬಜರಂಗ ದಳ ಮುಖಂಡನ ಶವ ನೇತ್ರಾವತಿ ನದಿಯಲ್ಲಿ ಪತ್ತೆ: ಸಾವಿನ ಬಗ್ಗೆ ಸಂಶಯ
ಕಲಾ ತಂಡಗಳಿಂದ ರಿಹರ್ಸಲ್
ಹುಬ್ಬಳ್ಳಿಯ ರೈಲ್ವೇ ಮೈದಾನದಲ್ಲಿ ಕಲಾ ತಂಡಗಳಿಂದ ರಿಹರ್ಸಲ್ ಆರಂಭವಾಗಿದೆ. ವೇದಿಕೆ ಮುಂಭಾಗದಲ್ಲಿ ಕಲಾ ತಂಡಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಇದೇ ವೇಳೆ ವೇದಿಕೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಅನುರಾಗ್ ಸಿಂಗ್ ಠಾಕೂರ್ ಆಗಮಿಸಿ, ಸಿದ್ಧತೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಸಚಿವರಾ ಹಾಲಪ್ಪ ಆಚಾರ್, ನಾರಾಯಣಗೌಡ, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಶಾಸಕ ಅರವಿಂದ ಬೆಲ್ಲದ್ ಜತೆಗಿದ್ದರು.
ಅಪರಿಚಿತ ವಾಹನ ವಶಕ್ಕೆ
ಪ್ರಧಾನಿ ಮೋದಿ ಸಂಚರಿಸುವ ಮಾರ್ಗವಾದ ಹೊಸೂರ್ ಕ್ರಾಸ್ ಬಳಿ ಮಹಾರಾಷ್ಟ್ರ ನೋಂದಣಿಯ ಅಪರಿಚಿತ ಕಾರೊಂದು ನಿಂತಿತ್ತು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಇದನ್ನು ಪರಿಶೀಲನೆ ನಡೆಸಿ, ಅದರ ಮಾಲೀಕರ ವಿವರ ಸಂಗ್ರಹಣೆ ಮುಂದಾಗಿದ್ದರು. ಆದರೆ, ಪತ್ತೆಯಾಗದ ಹಿನ್ನೆಲೆಯಲ್ಲಿ ಆ ಕಾರನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರಂಗೋಲಿಯಲ್ಲಿ ಮೂಡಿದ ಮೋದಿ
ವೇದಿಕೆ ಮುಂಭಾಗದಲ್ಲಿ ಕಲಾವಿದನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ರಂಗೋಲಿಯನ್ನು ಬಿಡಿಸುತ್ತಿರುವುದು ಸಾಕಷ್ಟು ಗಮನ ಸೆಳೆದಿದೆ.
ಇದನ್ನೂ ಓದಿ | Pathaan Film | ʻಪಠಾಣ್ʼ ಮಹತ್ವಾಕಾಂಕ್ಷೆಯ ಚಿತ್ರ, ನನಗೆ ನನ್ನ ಸಿನಿಮಾ ಮೇಲೆ ಮಾತ್ರ ಗಮನ: ರಾಜ್‌ಕುಮಾರ್ ಸಂತೋಷಿ!