ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi Visit) ಅವರು ಜನವರಿ 12ರ ಮಧ್ಯಾಹ್ನದಂದು ಹುಬ್ಬಳ್ಳಿಗೆ ಆಗಮಿಸುತ್ತಿದ್ದು, ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಸೋಮವಾರ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಐದು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದೇಶದ 28 ರಾಜ್ಯಗಳಿಂದ ಹಾಗೂ 8 ಕೇಂದ್ರೀಯ ಪ್ರಾಂತ್ಯದಿಂದ ಯುವಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿಯವರು ಈ ಕಾರ್ಯಕ್ರಮವನ್ನು ಭಾಗವಹಿಸಿ ಹಿಂದಿರುಗಲಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಯುವ ಸಮ್ಮೇಳನವನ್ನು ಹುಬ್ಬಳ್ಳಿಯಲ್ಲಿ ಉದ್ಘಾಟನೆ ಮಾಡಿದರೂ ಧಾರವಾಡದ ಪ್ರಮುಖ ಸ್ಥಳಗಳಲ್ಲಿ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆಯುತ್ತಿವೆ. ಹೀಗಾಗಿ ಮೊದಲಿಗೆ ಧಾರವಾಡದ ಕರ್ನಾಟಕ ಕಾಲೇಜು, ಕರ್ನಾಟಕ ವಿವಿ, ಕೃಷಿ ವಿವಿಗೆ ಸಂಪರ್ಕ ಕಲ್ಪಿಸುವ ಒಟ್ಟು 12 ರಸ್ತೆಗಳ ಸುಧಾರಣೆ ಕಾರ್ಯ ಬರದಿಂದ ನಡೆದಿದೆ. ಜತೆಗೆ ಗಟಾರುಗಳ ಸ್ವಚ್ಛತೆ, ಕಸ ನಿರ್ವಹಣೆ ಕಾರ್ಯ ಶುರು ಮಾಡಲಾಗಿದೆ. ಮಹಾನಗರ ಪಾಲಿಕೆಯ 100 ಸಿಬ್ಬಂದಿ ಬಳಸಿಕೊಂಡು ಕಸ ಸ್ವಚ್ಛತಾ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಜನವರಿ 19ರಂದು ಪ್ರಧಾನಿ ಮೋದಿಯವರು ನಾರಾಯಣಪುರಕ್ಕೆ ಆಗಮಿಸಲಿದ್ದು, ಕೇಂದ್ರ ಹಾಗೂ ರಾಜ್ಯ ಅನುದಾನಿತ ನಾರಾಯಣಪುರ ಎಡದಂಡೆ ಕಾಲುವೆ (ಎನ್ ಎಲ್ ಬಿ ಸಿ) ಆಧುನೀಕರಣದ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಗುಲ್ಬರ್ಗಾದ ಬಂಜಾರ ಸಮಾವೇಶ ನಡೆಸುವ ಯೋಜನೆಯಿದ್ದು, ಪ್ರಧಾನಿ ಮೋದಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಇನ್ನೂ ನಿಶ್ಚಯವಾಗಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ | Youth Festival | ಜ. 12ರಿಂದ ರಾಷ್ಟ್ರೀಯ ಯುವಜನೋತ್ಸವ: ಲಾಂಛನ ಮತ್ತು ಮ್ಯಾಸ್ಕಾಟ್ ಬಿಡುಗಡೆ