ಬೆಂಗಳೂರು: ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ 32 ಬಾರಿ ಪ್ರವಾಸ ಮಾಡಿದ್ದಾರೆ. ಇದೀಗ ಏಪ್ರಿಲ್ 9ರಂದು ಆಗಮಿಸುವುದು 33ನೇ ಬಾರಿ. ಈ ಕುರಿತ ಮಾಹಿತಿಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಮಲ್ಲೇಶ್ವರದ ಮಾಧ್ಯಮ ಕೇಂದ್ರ “ಗಿರಿಜಾರಾಮ ದೈವಜ್ಞ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹುಟ್ಟುವ ಮೊದಲೇ ಪಕ್ಷದ ಮುಖಂಡರು ಬೆಂಗಳೂರಿನ ಜತೆ ಭಾವನಾತ್ಮಕ ಸಂಬಂಧ ಹೊಂದಿದ್ದರು. ತುರ್ತು ಪರಿಸ್ಥಿತಿ ಹೇರುವ ಮೂಲಕ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆದಾಗ ನಮ್ಮ ಇಬ್ಬರು ಪ್ರಮುಖ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಅಡ್ವಾಣಿ ಅವರನ್ನು ಇಲ್ಲಿ ಬಂಧಿಸಲಾಗಿತ್ತು ಎಂದು ಅವರು ಹೇಳಿದರು.
ಚುನಾವಣೆ ಘೋಷಣೆ ಆದ ಬಳಿಕ ನಾನು ಇಲ್ಲಿಗೆ ಮೊದಲ ಬಾರಿಗೆ ಬಂದಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಇಲ್ಲಿನವರೆಗೆ 32 ಬಾರಿ ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದಾರೆ. 2023ರಲ್ಲಿ ಈಗಾಗಲೇ 7 ಬಾರಿ ಭೇಟಿ ನೀಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಅವರು ಮತ್ತೊಮ್ಮೆ ಭೇಟಿ ಕೊಡಲಿದ್ದಾರೆ ಎಂದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಲೋಕಸಭೆಗೆ ಒಂದು ವರ್ಷದ ಅಸಾಂವಿಧಾನಿಕ ವಿಸ್ತರಣೆ ಜತೆಗೆ ಸಂವಿಧಾನದ ಮೂಲಭೂತ ವಿಷಯಗಳಿಗೆ ತಿದ್ದುಪಡಿ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂಬುದು ಕರ್ನಾಟಕ ಮಾತ್ರವಲ್ಲದೆ ದೇಶದ ಜನತೆಗೆ ಗೊತ್ತಿದೆ. ಬಿಜೆಪಿ ಹುಟ್ಟುವ ಮೊದಲೇ ನಮ್ಮ ನಾಯಕರಿಗೆ ಕರ್ನಾಟಕದ ಜತೆ ವಿಶೇಷ ಭಾವನಾತ್ಮಕ ಸಂಬಂಧ ಇದೆ ಎಂದು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ತಿಳಿಸಿದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಲೋಕಸಭೆ ಅವಧಿಯನ್ನು ಒಂದು ವರ್ಷ ಅಸಾಂವಿಧಾನಿಕ ರೀತಿಯಲ್ಲಿ ವಿಸ್ತರಣೆ ನೀಡಲಾಗಿತ್ತು. ವಿರೋಧ ಪಕ್ಷಗಳ ಪ್ರಮುಖ ನಾಯಕರು ಜೈಲಿನಲ್ಲಿ ಇರುವಾಗಲೇ ಸಂವಿಧಾನಕ್ಕೆ ತಿದ್ದುಪಡಿಯನ್ನೂ ತರಲಾಗಿತ್ತು. ರಾಜ್ಯಸಭೆ, ಲೋಕಸಭೆಯಲ್ಲಿ ಮೂರನೇ ಎರಡು ಬಹುಮತ ಬೇಕಿದ್ದರೂ ಇದೇ ಅವಧಿಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿತ್ತು ಎಂದರು.
ಜಿ 20 ಸಭೆಗಳಲ್ಲಿ ಕೇಂದ್ರ ಬ್ಯಾಂಕ್, ಗವರ್ನರ್‌ಗಳ ಸಭೆ ಬೆಂಗಳೂರಿನಲ್ಲಿ ನಡೆದಿತ್ತು. ಅಲ್ಲಿ ಐಐಟಿಗಳು, ಸ್ಟಾರ್ಟಪ್‍ಗಳ ಪ್ರದರ್ಶಿನಿಯನ್ನೂ ಏರ್ಪಡಿಸಲಾಗಿತ್ತು. ಭಾರತೀಯರ ಸಾಮಥ್ರ್ಯ ಅನಾವರಣಕ್ಕೆ ಇದು ಅವಕಾಶ ಮಾಡಿಕೊಟ್ಟಿತ್ತು ಎಂದು ವಿವರಿಸಿದರು.
ಕೇಂದ್ರ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ರಾಜನಾಥ್ ಸಿಂಗ್ ಅವರು ರಾಜ್ಯಕ್ಕೆ ಭೇಟಿ ಕೊಟ್ಟಿದ್ದರು. ಎರಡೂ ಕಡೆ ಬಿಜೆಪಿ ಸರ್ಕಾರ ಇರುವ ಕಾರಣ ಹೀಗೆ ಭೇಟಿ ನೀಡುತ್ತಿದ್ದಾರೆ ಎಂದು ಭಾವಿಸಬಹುದು ಎಂದರು.
ಪ್ರಧಾನಿ ಮೋದಿ ಪ್ರವಾಸದ ವಿವರ
- ಏಪ್ರಿಲ್ 8ರಂದು ಚೆನೈನಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ರಾತ್ರಿ 8.45ಕ್ಕೆ ಆಗಮನ.
- ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ
- ಏಪ್ರಿಲ್ 9ರಂದು ವಿವಿಧ ಕಾರ್ಯಕ್ರಮದಲ್ಲಿ ಭಾಗಿ.
- ಮೈಸೂರಿನಿಂದ ಚಾಮರಾಜನಗರಕ್ಕೆ ಪ್ರಯಾಣ.
- ಬಂಡೀಪುರ ಹುಲಿ ಸಂರಕ್ಷಿತ ಅರಣ್ಯಕ್ಕೆ ಭೇಟಿ.
- ಬಳಿಕ 11ರಿಂದ 12 ಗಂಟೆಯವರೆಗೆ ಟೈಗರ್ ಪ್ರಾಜೆಕ್ಟ್ ಕಾರ್ಯಕ್ರಮದಲ್ಲಿ ಭಾಗಿ.
- 50 ವರ್ಷಗಳ ಹುಲಿ ಯೋಜನೆ ಸ್ಮರಣಾರ್ಥ ಕಾರ್ಯಕ್ರಮ ಉದ್ಘಾಟನೆ.
- ಕಾರ್ಯಕ್ರಮ ಉದ್ದೇಶಿಸಿ ಭಾಷಣ.
- ಮಧ್ಯಾಹ್ನ 12.50ಕ್ಕೆ ಮೈಸೂರಿನಿಂದ ದೆಹಲಿಗೆ ಪ್ರಯಾಣ