ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 25 ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ರಾಜ್ಯದ ಮೂರು ಜಿಲ್ಲೆಗಳಲ್ಲಿ ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯ ಬಿಜೆಪಿ ಪ್ರಚಾರದ ಅಂಗವಾಗಿ ದಾವಣಗೆರೆಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಿ ಮೋದಿ ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿ ಚಿಕ್ಕಬಳ್ಳಾಪುರ ಜಿಲ್ಲೆಗೆ ತೆರಳಲಿದ್ದು, ಅಲ್ಲಿ ಮುದ್ದೇನಹಳ್ಳಿ ಗ್ರಾಮದಲ್ಲಿ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. 450 ಕೋಟಿ ವೆಚ್ಚದಲ್ಲಿ ಈ ಸಂಸ್ಥೆಯನ್ನು ನಿರ್ಮಿಸಲಾಗಿದ್ದು, 750 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ.
ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಮರಳುವ ಪ್ರಧಾನಿ ಮೋದಿ ಕೆ.ಆರ್.ಪುರಂ ಮತ್ತು ವೈಟ್‌ಫೀಲ್ಡ್ ನಡುವೆ ಬಹುನಿರೀಕ್ಷಿತ ಮೆಟ್ರೋ ರೈಲು ಸೇವೆಯನ್ನು ಉದ್ಘಾಟಿಸಲಿದ್ದಾರೆ. ಅವರು ಇತರ ಗಣ್ಯರೊಂದಿಗೆ ಮೆಟ್ರೋ ರೈಲಿನಲ್ಲಿ ಸವಾರಿ ಮಾಡುತ್ತಾರೆ.
ಮೆಟ್ರೋ ಸೇವೆಯನ್ನು ಉದ್ಘಾಟಿಸಿದ ನಂತರ, ಪ್ರಧಾನಿ ಮೋದಿ ಅವರು ದಾವಣಗೆರೆ ಜಿಲ್ಲೆಗೆ ಪ್ರಯಾಣಿಸಲಿದ್ದು, ಅಲ್ಲಿ ಶಿವಗಂಗೋತ್ರಿ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ತಮ್ಮ ಸರ್ಕಾರದ ಸಾಧನೆಗಳನ್ನು ಬಿಂಬಿಸಲಿದ್ದಾರೆ ಹಾಗೂ ಪ್ರತಿಕ್ಷಗಳ ಕುರಿತು ಯಾವ ರೀತಿ ಮಾತನಾಡುತ್ತಾರೆ ಎಂಬ ಕುತೂಹಲವಿದೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ಮೋದಿ ರೋಡ್ ಶೋ ನಡೆಸಲಿದ್ದಾರೆ ಎನ್ನಲಾಗುತ್ತಿದ್ದು, ಇನ್ನಷ್ಟೇ ಖಚಿತವಾಗಬೇಕು. ಒಟ್ಟಾರೆ ಒಂದು ದಿನದಲ್ಲಿ ಮೂರು ಜಿಲ್ಲೆಗಳಲ್ಲಿ ನಾಲ್ಕು ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗಿಯಾಗಲಿದ್ದಾರೆ.
ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಸಂಚರಿಸುವಂತೆ ಬಿಜೆಪಿ ಮಾರ್ಚ್ 1 ರಿಂದ ಕರ್ನಾಟಕದಾದ್ಯಂತ ನಾಲ್ಕು ವಿಜಯ ಸಂಕಲ್ಪ ಯಾತ್ರೆಗಳನ್ನು ಪ್ರಾರಂಭಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಇತರ ಹಿರಿಯ ನಾಯಕರ ನೇತೃತ್ವದಲ್ಲಿ ಯಾತ್ರೆಗಳು ನಡೆಯುತ್ತಿವೆ.
ಪ್ರಧಾನಿ ಮೋದಿಯವರ ಕರ್ನಾಟಕ ಭೇಟಿಯು ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಮತ್ತು ಚುನಾವಣೆಗೆ ಮುಂಚಿತವಾಗಿ ಮತದಾರರನ್ನು ಓಲೈಸುವ ಪ್ರಯತ್ನ. ಇತ್ತೀಚೆಗಷ್ಟೆ ಬೆಂಗಳೂರು ಮೈಸೂರು ಎಕ್ಸ್‌ಪರೆಸ್‌ವೇ ಉದ್ಘಾಟನೆಗೆ ಮಂಡ್ಯ ಜಿಲ್ಲೆಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದರು.
ಇದನ್ನೂ ಓದಿ: Modi In Karnataka: ಧಾರವಾಡದಲ್ಲಿ ಮೋದಿ ಭೇಟಿ ಸಾಧ್ಯವಾಗದೆ ದೂರದಿಂದಲೇ ಆರತಿ ಬೆಳಗಿದ ಅಜ್ಜಿ