ಬೆಂಗಳೂರು: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ (Umesh Katti) ಅವರ ನಿಧನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉಮೇಶ್ ಕತ್ತಿ ಪತ್ನಿ ಶೀಲಾ ಕತ್ತಿ ಅವರಿಗೆ ಪತ್ರ ಬರೆದು ಸಾಂತ್ವನ ಹೇಳಿದ್ದಾರೆ. “ಸಚಿವ ಉಮೇಶ್ ಕತ್ತಿ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ನಿಮ್ಮ ಕುಟುಂಬದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದು ಮೋದಿ ಸಾಂತ್ವನ ಹೇಳಿದ್ದಾರೆ.
“ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಉಮೇಶ್ ಕತ್ತಿ ಅವರು ಹೆಚ್ಚಿನ ಬದ್ಧತೆ ಹೊಂದಿದ್ದರು. ಶಾಸಕರಾಗಿ, ಆಡಳಿತಗಾರರಾಗಿ ಅವರು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಶ್ರಮಿಸಿದ್ದರು. ಉತ್ತಮ ಸಂಘಟನಾ ಸಾಮರ್ಥ್ಯ ಹೊಂದಿದ್ದ ಕತ್ತಿ ಅವರು ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಅಪಾರ ಕೊಡುಗೆ ನೀಡಿದ್ದಾರೆ. ಇಂತಹ ಧೀಮಂತ ನಾಯಕನನ್ನು ರಾಜ್ಯವು ಎಂದಿಗೂ ಸ್ಮರಿಸುತ್ತದೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಉಮೇಶ್ ಕತ್ತಿ ಅವರನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಸ್ಥರು ಮಾತ್ರವಲ್ಲ, ಇಡೀ ರಾಜ್ಯವೇ ಮಹೋನ್ನತ ನಾಯಕನನ್ನು ಕಳೆದುಕೊಂಡಿದೆ. ಅವರು ನಮ್ಮೊಡನೆ ಭೌತಿಕವಾಗಿ ಇಲ್ಲದಿರಬಹುದು, ಆದರೆ, ನಮ್ಮೆಲ್ಲರ ಸ್ಮೃತಿಪಟಲದಲ್ಲಿ ಎಂದಿಗೂ ನೆಲೆಸಿರುತ್ತಾರೆ. ಕುಟುಂಬಸ್ಥರಿಗೆ ದೇವರು ಕತ್ತಿ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ಭಾವನಾತ್ಮಕ ನುಡಿಗಳ ಮೂಲಕ ಮೋದಿ ಸಂತಾಪ ಸೂಚಿಸಿದ್ದಾರೆ. ಮಂಗಳವಾರ ರಾತ್ರಿ ಹೃದಯಾಘಾತದಿಂದ ಉಮೇಶ್ ಕತ್ತಿ ಅವರು ನಿಧನರಾಗಿದ್ದಾರೆ.
ಇದನ್ನೂ ಓದಿ | 8 ಬಾರಿ ಶಾಸಕ ಉಮೇಶ್ ಕತ್ತಿ ಇನ್ನು 8 ತಿಂಗಳು ಇದ್ದಿದ್ದರೆ ಧರ್ಮ ಸಿಂಗ್ ದಾಖಲೆ ಮುರಿಯುತ್ತಿದ್ದರು !