Site icon Vistara News

Best Teacher Award : ಕರ್ನಾಟಕದ ಇಬ್ಬರು ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ

Award Teacher

ಬೆಂಗಳೂರು: 2023ರ ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ದೇಶದ 50 ಶಿಕ್ಷಕರಿಗೆ ‘ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ’ ಘೋಷಿಸಿದೆ. ಕರ್ನಾಠಖ ಇಬ್ಬರು ಶಿಕ್ಷಕರು ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶ್ರೀ ಮಾರಿಕಾಂಬ ಸರಕಾರಿ ಪಿಯು ಕಾಲೇಜು -ಹೈಸ್ಕೂಲ್‌ನ ನಾರಾಯಣ್‌ ಪರಮೇಶ್ವರ್‌ ಭಾಗ್ವತ್​​ ಮತ್ತು ಬಾಗಲಕೋಟೆ ಜಿಲ್ಲೆಯ ಕೆಎಲ್‌ಇ ಸೊಸೈಟಿಯ ಎಸ್‌ಸಿಪಿ ಜೂನಿಯರ್‌ ಕಾಲೇಜ್‌ ಹೈಸ್ಕೂಲ್‌ನ ಸಪ್ನಾ ಶ್ರೀಶೈಲ್‌ ಅನಿಗೋಳ್‌ ಅತ್ಯುತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸೆಪ್ಟೆಂಬರ್‌ 5ರಂದು ದಿಲ್ಲಿಯಲ್ಲಿ ನಡೆಯಲಿರುವ ಶಿಕ್ಷಕರ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 50 ಸಾವಿರ ರೂ. ನಗದು ಮತ್ತು ಪದಕವನ್ನು ಒಳಗೊಂಡಿದೆ.

ರಸಾಯನ ಶಾಸ್ತ್ರ ಶಿಕ್ಷಕಿ ಸ್ವಪ್ನಾ ಅನಿಗೋಳ್​​

ಬಾಗಲಕೋಟೆ ಜಿಲ್ಲೆಯ ‌ಮಹಾಲಿಂಗಪುರದ ಕೆಎಲ್ ಇ ಜ್ಯೂನಿಯರ್ ಕಾಲೇಜಿನ‌ ಶಿಕ್ಷಕಿ ಸ್ವಪ್ನಾ ಅನಿಗೋಳ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಪಾತ್ರರಾದ ಕನ್ನಡಿಗರು. ಎಂಎಸ್ ಸಿ, ಬಿಎಡ್ ಪದವೀಧರೆಯಾಗಿರುವ ಸ್ವಪ್ನಾ ವಿಜ್ಞಾನ ವಿಷಯದ ಶಿಕ್ಷಕಿ. ವಿಭಿನ್ನವಾಗಿ ಬೋಧನಾ ಶೈಲಿಯ ಮೂಲಕ ಮಕ್ಕಳ ಮನ ಗೆದ್ದವರು ಅವರು.

ಇದನ್ನೂ ಓದಿ : Sunday Read: ಹೊಸ ಪುಸ್ತಕ: ನಾ.ಮೊಗಸಾಲೆ ಕಾದಂಬರಿ: ನೀರು

ಪ್ರತಿ ದಿನ ಮಕ್ಕಳ ಹಾಜರಾತಿ ಪಡೆಯುವ ವೇಳೆ ಮಕ್ಕಳ ಹೆಸರಿನ ಬದಲು ರಸಾಯನಿಕಗಳ ಹೆಸರು ಕೂಗುತ್ತಾರೆ ಸ್ವಪ್ನಾ ಟೀಚರ್​. ಸ್ಕೌಟ್ ಆ್ಯಂಡ್ ಗೈಡ್ಸ್, ಸಾಮಾಜಿಕ ಚಟುವಟಿಕೆಗಳಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ಮಹಾಲಿಂಗಪುರ ನಗರಸಭೆ ವ್ಯಾಪ್ತಿಯಲ್ಲಿ ಅವರನ್ನು ಸ್ವಚ್ಚತಾ ರಾಯಭಾರಿಯಾಗಿ ಅವರನ್ನು ನೇಮಿಸಲಾಗಿದೆ.

ನಾರಾಯಣ ಭಾಗವತ್​

ಶಿರಸಿಯ ಮಾರಿಕಾಂಬಾ ಪ್ರೌಢ ಶಾಲೆಯ ಕನ್ನಡ ಶಿಕ್ಷಕ ನಾರಾಯಣ ಭಾಗ್ವತ್​ ಅವರಿಗೂ ಪ್ರಶಸ್ತಿ ಲಭಿಸಿದೆ. ಅವರು ರಂಗಕರ್ಮಿಯೂ ಹೌದು. ನಾರಾಯಣ ಭಾಗವತ್ ಅವರಿಗೆ ರಾಷ್ಟ್ರ ಮಟ್ಟದಲ್ಲಿ ನೀಡಲಾಗುವ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಒಲಿದು ಬಂದಿದೆ.

ನಾರಾಯಣ ಭಾಗವತ್ ಅವರು ಅನೇಕ ಶೈಕ್ಷಣಿಕ ಪ್ರಯೋಗಗಳ ಜೊತೆ ಕನ್ನಡ ಭಾಷಾ ಪ್ರಯೋಗದಲ್ಲೂ ಕೆಲಸ ಮಾಡಿದ್ದಾರೆ. ಕಳೆದ ವರ್ಷ ಇವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಕೂಡ ಲಭಿಸಿತ್ತು. ರಾಷ್ಟ್ರ ಮಟ್ಟದಲ್ಲಿ ವಿಜ್ಞಾನ ನಾಟಕದಲ್ಲೂ ರಾಷ್ಟ್ರ ಮಟ್ಟದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿತ್ತು.

ರಾಜ್ಯ ಮಟ್ಟದಲ್ಲಿಯೂ ಶಿಕ್ಷಕರಿಗೆ ಪ್ರಶಸ್ತಿ

ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ರಾಜ್ಯ ಮಟ್ಟದಲ್ಲಿಯೂ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಸಪ್ಟೆಂಬರ್‌ 5 ರಂದು ಬೆಂಗಳೂರಿನಲ್ಲಿ ನಡೆಯುವ ಶಿಕ್ಷಣ ಇಲಾಖೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಜಿಲ್ಲೆಗೆ ಒಬ್ಬರಂತೆ 31 ಶಿಕ್ಷಕರಿಗೂ, ವಿಶೇಷ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಅಂತೆಯೇ ಜಿಲ್ಲಾಮಟ್ಟದಲ್ಲಿ ತಾಲೂಕು ಮಟ್ಟದಲ್ಲಿಯೂ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

Exit mobile version