Site icon Vistara News

ಹೆರಿಗೆ, ಶಸ್ತ್ರಚಿಕಿತ್ಸೆ ವಿಭಾಗಗಳಲ್ಲಿ ಉತ್ತಮ ಕಾರ್ಯನಿರ್ವಹಣೆ; ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ರಾಷ್ಟ್ರಮಟ್ಟದ ಲಕ್ಷ್ಯ ಪ್ರಶಸ್ತಿ

ಬಾಗಲಕೋಟೆ ಜಿಲ್ಲಾಸ್ಪತ್ರೆ

ಅಶೋಕ್, ಬಾಗಲಕೋಟೆ
ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರೆ ಹೆಚ್ಚು. ಅದು ಅವ್ಯವಸ್ಥೆಯ ಆಗರ. ಅಲ್ಲಿಗೆ ಹೋದರೆ ಸೂಕ್ತ ಚಿಕಿತ್ಸೆ ಸಿಗುವುದಿಲ್ಲ, ಸುಮ್ಮನೆ ಪ್ರೈವೇಟ್‌ ಹಾಸ್ಪಿಟಲ್‌ನಲ್ಲಿ ತೋರಿಸಿ ಎನ್ನುವ ಮಾತುಗಳನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತೇವೆ. ಆದರೆ ಬಾಗಲಕೋಟೆ ಸರ್ಕಾರಿ ಜಿಲ್ಲಾಸ್ಪತ್ರೆ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ. ತನ್ನ ಗುಣಮಟ್ಟದ ಚಿಕಿತ್ಸೆ, ಸ್ವಚ್ಛತೆ ಹಾಗೂ ಉತ್ತಮ‌ ಕಾರ್ಯ ನಿರ್ವಹಣೆಯಿಂದಾಗಿ ಇದೀಗ ರಾಷ್ಟ್ರ ಮಟ್ಟದ ಲಕ್ಷ್ಯ ಪ್ರಶಸ್ತಿಗೆ ಪಾತ್ರವಾಗಿದೆ.

ಬಾಗಲಕೋಟೆ ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗಕ್ಕೆ ರಾಷ್ಟ್ರೀಯ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರ ಮಟ್ಟದ ಲಕ್ಷ್ಯ ಪ್ರಶಸ್ತಿ ಘೋಷಿಸಿದ್ದು, ಹೆರಿಗೆ ಹಾಗೂ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ತಾಯಿ ಹಾಗೂ ಶಿಶು ಮರಣ ಕಡಿಮೆಗೊಳಿಸುವಲ್ಲಿ ಉತ್ತಮ ಕಾರ್ಯನಿರ್ವಣೆ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯು ರಾಷ್ಟ್ರ ಮಟ್ಟದ ಈ ಪ್ರಶಸ್ತಿಗೆ ಭಾಜನವಾಗಿದೆ.

ಕೇಂದ್ರ ಸರ್ಕಾರದ ಉತ್ತಮ ಯೋಜನೆಯಾದ ಲಕ್ಷ್ಯ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಜಿಲ್ಲಾ ಆಸ್ಪತ್ರೆ ಶ್ರಮಿಸಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ದೆಹಲಿ ಹಾಗೂ ಮಧ್ಯಪ್ರದೇಶದ ನುರಿತ ತಜ್ಞರ ಸಮಿತಿ ತಂಡವು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಕೂಲಂಕಷವಾಗಿ ಪರಿಶೀಲನೆ ನಡೆಸಿದೆ. ನಂತರ ಆ ತಂಡ ಒದಗಿಸಿದ ವರದಿಯನ್ವಯ ರಾಷ್ಟ್ರೀಯ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯು ಅಧಿಕೃತವಾಗಿ ಪ್ರಶಸ್ತಿಯನ್ನು ಘೋಷಿಸಿದೆ ಎಂದು ಅಧಿಕಾರಿಗಳು ಖುಷಿ ಹಂಚಿಕೊಂಡಿದ್ದಾರೆ.

ಜಿಲ್ಲಾ ಆಸ್ಪತ್ರೆಗೆ ಲಕ್ಷ್ಯ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಹೆರಿಗೆ ಹಾಗೂ ಶಸ್ತ್ರಚಿಕಿತ್ಸೆಯ ವಿಭಾಗಕ್ಕೆ ಪ್ರತಿ ವರ್ಷ 3 ಲಕ್ಷ ರೂ.ಗಳಂತೆ ಮೂರು ವರ್ಷಗಳ ಕಾಲ ವಿಶೇಷ ಅನುದಾನ ದೊರೆಯಲಿದೆ. ಆ ಅನುದಾನದಲ್ಲಿ ಶೇ.25 ಲಕ್ಷ್ಯ ಪ್ರಶಸ್ತಿಗೆ ಸಂಬಂಧಿಸಿದ ಗುಣಮಟ್ಟ ಕಾಯ್ದಿರಿಸುವಲ್ಲಿ ಶ್ರಮಿಸಿದ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಹಂಚಿಕೆ ಮಾಡಲಾಗುತ್ತದೆ. ಉಳಿದ ಶೇ.75 ಅನುದಾನವನ್ನು ಆಯಾ ವಿಭಾಗದ ಅಭಿವೃದ್ದಿ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತದೆ.

ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗಾಗಿಯೇ ಪ್ರತ್ಯೇಕವಾಗಿ 6 ಹಾಸಿಗೆಗಳ ಐಸಿಯು ವಿಭಾಗವನ್ನು ಸಹ ಆರಂಭಿಸಲಾಗಿದೆ. ಇದು ಸಂಪೂರ್ಣ ಏರ್ ಕಂಡಿಷನ್ ನಿಂದ ಕೂಡಿದೆ. ಇದಕ್ಕೆ ಅಟಾಚ್ಡ್‌ ಆಗಿ ಬಾಣಂತಿಯರಿಗೆ ಏನಾದರೂ ಸಮಸ್ಯೆ ಆದರೆ ಉತ್ತಮವಾಗಿ ಆರೈಕೆ ಮಾಡಲು 6 ಹಾಸಿಗೆಗಳ ಸ್ಪೆಷಲ್ ಐಸಿಯುವನ್ನು ಪ್ರಾರಂಭಿಸಲಾಗಿದೆ. ಜತೆಗೆ ಈ ವಿಭಾಗಕ್ಕೆ ಬೇಕಾಗುವ ಪ್ರತ್ಯೇಕ ವೈದ್ಯ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.

ಜಿಲ್ಲಾ ಆಸ್ಪತ್ರೆಯು ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳನ್ನು ಮೀರಿ ಕೆಲಸ ನಿರ್ವಹಿಸುತ್ತಿದೆ. ಆಸ್ಪತ್ರೆಯನ್ನು ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸುವ ಮೂಲಕ ಮೇಲ್ದರ್ಜೆಗೆ ಏರಿಸಲಾಗಿದೆ. ಪ್ರತಿ ದಿನ 700 ದಿಂದ 800 ವರೆಗೆ ರೋಗಿಗಳಿಗೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುತ್ತಿದೆ.‌ ಡಾ.ಪ್ರಕಾಶ ಬಿರಾದಾರ ನೇತೃತ್ವದಲ್ಲಿ 32 ವಿಭಾಗಗಲ್ಲಿ ಆಸ್ಪತ್ರೆಯು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಹೆರಿಗೆ, ಸರ್ಜರಿ ಹಾಗೂ ಮೆಡಿಸಿನ್ ವಿಭಾಗ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇನ್ನು ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಿರೋ ಬಾಣಂತಿಯರು ಆಸ್ಪತ್ರೆಯಲ್ಲಿನ ವ್ಯವಸ್ಥೆ ಕಂಡು ಖುಷಿಯಾಗಿದ್ದಾರೆ. ಶೀಘ್ರದಲ್ಲಿಯೇ ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ | ನಟಿ ದೀಪಿಕಾ ಪಡುಕೋಣೆ ಹೃದಯ ಆರೋಗ್ಯ: ಕಳವಳಕ್ಕೆ ಕಾರಣವಿಲ್ಲ

Exit mobile version