ಮಂಡ್ಯ: ಈತ ಪ್ರತಿಭಾನ್ವಿತ ರಾಷ್ಟ್ರೀಯ ಫುಟ್‌ಬಾಲ್ ಆಟಗಾರ (National Football player). ಫುಟ್‌ಬಾಲ್ ಎಂದು ಬಂದರೆ ಈತನ ಕಾಲ್ಚಳಕವನ್ನು ನೋಡಬಹುದಾಗಿತ್ತು. ಈ ಆಟವನ್ನು ತನ್ನ ಜೀವಾಳ ಅಂದುಕೊಂಡು ಆ ನಿಟ್ಟಿನಲ್ಲಿ ತನ್ನ ಸರ್ವ ಪ್ರಯತ್ನವನ್ನು ಹಾಕುತ್ತಿದ್ದವನ ಸ್ಥಿತಿ ಈಗ ಚಿಂತಾಜನಕವಾಗಿದೆ. ಈ ಯುವ ಪ್ರತಿಭೆಗೆ ಈಗ ದಾನಿಗಳ ನೆರವು ಬೇಕಿದೆ.
ಹೌದು. ಮಂಡ್ಯ ನಗರದ ಗುತ್ತಲು ಬಡಾವಣೆ ನಿವಾಸಿ ನರಸಿಂಹಮೂರ್ತಿ ಮತ್ತು ಶ್ಯಾಮಲಾ ದಂಪತಿ ಮಗ ವಿಶ್ವಾಸ್ ಈಗ ಸಾವು ಬದುಕಿನ ಹೋರಾಟದಲ್ಲಿದ್ದಾರೆ. ನಗರದ ಪಿಇಎಸ್ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿರುವ ಸುಮಾರು ೨೦ ವರ್ಷದ ಈ ಯುವಕನಿಗೆ ಫುಟ್ಬಾಲ್ ಎಂದರೆ ಪ್ರಾಣ. ಅದಕ್ಕಾಗಿಯೇ ಹಗಲಿರುಳು ಶ್ರಮ ವಹಿಸಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು. ಒಳ್ಳೆಯ ಪ್ರದರ್ಶನವನ್ನೂ ನೀಡುತ್ತಿದ್ದರು. ಆದರೆ, ವಿಧಿಯಾಟವು ಬೇರೆಯೇ ಇತ್ತು.
ಜುಲೈ ೧ರ ದುರ್ಘಟನೆ
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜುಲೈ ೧ರಂದು ಸ್ವರ್ಣ ಫುಟ್‌ಬಾಲ್ ಸಂಸ್ಥೆ ಆಯೋಜಿಸಿದ್ದ ಹೊನಲು ಬೆಳಕಿನ ಏಳು ಮಂದಿ ಆಟಗಾರರ ಫುಟ್ಬಾಲ್ ಕ್ರೀಡೆಯಲ್ಲಿ ಭಾಗವಹಿಸಬೇಕಿತ್ತು. ಆದರೆ, ಅಂದೇ ವಿಶ್ವಾಸ್‌ಗೆ ಮನೆಯಲ್ಲಿ ವಿದ್ಯುತ್ ಶಾಕ್ ತಗುಲಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ವಿಶ್ವಾಸ್ ಅವರನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಬಡತನದಿಂದ ಚಿಕಿತ್ಸೆಗೆ ಪರದಾಟ
ವಿಶ್ವಾಸ್ ಮನೆಯಲ್ಲಿ ಬಡತನ ಇರುವ ಕಾರಣ ಪೋಷಕರು ಚಿಕಿತ್ಸೆಗಾಗಿ ತೀವ್ರ ಪರದಾಡುತ್ತಿದ್ದಾರೆ. ಇವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವಿದ್ಯುತ್ ಶಾಕ್‌ನಿಂದ ದೇಹದ ಶೇ.80ರಷ್ಟು ಭಾಗ ಹಾನಿಗೊಳಗಾಗಿದೆ. ಹಾಲಿ ಕೋಮಾ ಸ್ಥಿತಿಯಲ್ಲಿದ್ದಾದ್ದು, ವಿಶ್ವಾಸ್ ಚಿಕಿತ್ಸೆಗೆ ದಿನವೊಂದಕ್ಕೆ ಸಾವಿರಾರೂ ರೂಪಾಯಿ ವೆಚ್ಚವಾಗುತ್ತಿದೆ. ಈ ಹಿನ್ನೆಲಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಣ ಸಂಗ್ರಹಿಸಿ ಚಿಕಿತ್ಸೆಗೆಂದು ನೀಡುತ್ತಿದ್ದಾರೆ. ಅಂತೆಯೇ ಪುಟ್ಬಾಲ್ ಕ್ಲಬ್‌ಗಳು ಕೂಡ ಆರ್ಥಿಕ ನೆರವನ್ನು ಸಾಧ್ಯವಾದಷ್ಟು ಮಾಡುತ್ತಿವೆ. ಆದರೆ, ಈ ಹಣವು ಸಾಲುತ್ತಿಲ್ಲ.
ಚಿಕಿತ್ಸೆಗೆ ಇನ್ನಷ್ಟು ಆರ್ಥಿಕ ನೆರವಿನ ಅವಶ್ಯಕತೆ ಇದ್ದು, ಸಹಾಯ ಮಾಡುವವರು ಬ್ಯಾಂಕ್ ಖಾತೆ ಸಂಖ್ಯೆ-17202610002717 (ಐಎಫ್‌ಎಸ್‌ಸಿ ಕೋಡ್-SYNB0001720), ಫೋನ್ ಪೇ ಅಥವಾ ಗೂಗಲ್ ಪೇ ಸಂಖ್ಯೆ- 9900201307 (ಅಶ್ವಿನಿ) ಹಣ ಕಳುಹಿಸಬಹುದು. ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಪ್ರತಿಭಾವಂತ ಯುವ ಪ್ರತಿಭೆಗೆ ನೆರವಾಗಬೇಕೆಂದು ಕುಟುಂಬದವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ| “ಬಡ್ಡೀಸ್ʼ ಚಿತ್ರ ತಂಡದ ವಾಹನದ ಮೇಲೆ ಉರುಳಿದ ವಿದ್ಯುತ್ ಕಂಬ