ಭಾಸ್ಕರ್ ಆರ್. ಗೆಂಡ್ಲ, ಶಿರಸಿ
ಒಂದು ಕಡೆ ಶಿರಸಿ-ಕುಮಟಾ ಹೆದ್ದಾರಿ ಕಾಮಗಾರಿ ವಿಳಂಬವಾಗುತ್ತಿದ್ದರೆ, ಇನ್ನೊಂದೆಡೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಿಸ್ಲಕೊಪ್ಪದಿಂದ ಹಾವೇರಿ ಜಿಲ್ಲೆಯವರೆಗಿನ ಕಾಮಗಾರಿಯೂ ಅರೆಬರೆಯಾಗಿದ್ದು, ವಾಹನ ಸವಾರರು ತೀವ್ರ ತೊಂದರೆ ಪಡುವಂತಾಗಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (National Highway) ಹಿಡಿಶಾಪ ಹಾಕುವ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದಲ್ಲಿ ಅದೆಷ್ಟೋ ಹೆದ್ದಾರಿ ಕಾಮಗಾರಿಗಳು ನನೆಗುದಿಗೆ ಬಿದ್ದಿದ್ದು, ರಸ್ತೆ ಸುರಕ್ಷತೆ ಬಗೆಗಿನ ಸರ್ಕಾರದ ಕಾಳಜಿ ಇಲ್ಲದಂತಾಗಿದೆ. ಇದಕ್ಕೆ ಹಿಡಿದ ಕೈಗನ್ನಡಿಯಂತಿರುವುದು ಉ.ಕ. ಜಿಲ್ಲೆಯ ಶಿರಸಿ-ಹಾವೇರಿ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ. ಸಾಗರಮಾಲಾ ಯೋಜನೆ ಅಡಿ ಎರಡನೇ ಹಂತದಲ್ಲಿ ಶಿರಸಿ ತಾಲೂಕಿನ ಬಿಸಲಕೊಪ್ಪದಿಂದ ಹಾವೇರಿ ಜಿಲ್ಲೆಯ ನಾಲ್ಕರ ಕ್ರಾಸ್‍ವರೆಗಿನ ಹೆದ್ದಾರಿ (766 ಇ) ಕಾಮಗಾರಿಗೆ ಚಾಲನೆ ದೊರೆತಿದೆ.
ಹೆದ್ದಾರಿಗಾಗಿ ಮೂರು ಕಡೆಗಳಲ್ಲಿ ಕೈಗೊಂಡಿರುವ ಕಲ್ವರ್ಟ್ ಚರಂಡಿ (ಸಿ.ಡಿ) ಕಾಮಗಾರಿಯಿಂದ ರಸ್ತೆ ಕೆಸರುಮಯವಾಗಿ ಪರಿವರ್ತನೆಗೊಂಡಿದೆ. ಮಳಲಗಾಂವ, ದನಗನಹಳ್ಳಿ, ದಾಸನಕೊಪ್ಪ ಭಾಗದಲ್ಲಿ ಪ್ರಾರಂಭಿಕ ಹಂತವಾಗಿ ಅಡ್ಡ ಸಿ.ಡಿ ನಿರ್ಮಿಸುವ ಕಾರ್ಯವನ್ನು ಕಾಮಗಾರಿ ಗುತ್ತಿಗೆ ಪಡೆದಿರುವ ಅಮ್ಮಾಪುರ ಇನ್‍ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿ. ಸಂಸ್ಥೆ ಕೆಲವು ದಿನಗಳ ಹಿಂದೆ ಕೈಗೆತ್ತಿಕೊಂಡಿದೆ. ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುವ ಮುಖ್ಯ ರಸ್ತೆ ಇದಾಗಿದ್ದು, ಶಿರಸಿಯಿಂದ ಹಾವೇರಿ, ದಾವಣಗೆರೆ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಸಂಪರ್ಕಿಸಲು ಅನುಕೂಲವಾಗಿದೆ. ಹೀಗಾಗಿ ಇಲ್ಲಿ ಓಡಾಟ ನಡೆಸುವವರು ಹೆಚ್ಚಿದ್ದಾರೆ. ಮಳೆಯಿಂದ ಹೆದ್ದಾರಿ ಕೆಸರುಮಯವಾಗಿರುವ ಕಾರಣ ಈಚೆಗೆ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ.
ಇದನ್ನೂ ಓದಿ | Midday Meal | ಬಿಸಿಯೂಟದಲ್ಲಿ ಹುಳಗಳು ಪತ್ತೆ; ಜನಪ್ರತಿನಿಧಿಗಳ ಸಭೆಗೆ ತಟ್ಟೆ ಹಿಡಿದು ಬಂದ ವಿದ್ಯಾರ್ಥಿನಿಯರು
ಕಳೆದ ೪೫ ವರ್ಷಗಳ ಆಗ್ರಹದಿಂದ ಈಗ ರಾಜ್ಯ ಹೆದ್ದಾರಿಯಾಗಿದ್ದ ಈ ಮಾರ್ಗ ಇದೀಗ ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಾಟಾಗಿದೆ. ಆದರೆ, ಪ್ರಾರಂಭದಲ್ಲಿ ಮಳೆಗಾಲದ ವೇಳೆಯಲ್ಲಿ ಸಿ.ಡಿ ಕಾಮಗಾರಿ ಆರಂಭಿಸಿದ್ದರಿಂದ ರಸ್ತೆ ಕೆಸರು ಗುಂಡಿಯಂತಾಗಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸಿದ ಬಳಿಕ ಕಾಮಗಾರಿ ನಡೆಸುವ ಬದಲು ಏಕಾಏಕಿ ಕೆಲಸ ನಡೆದಿದೆ. ಮಣ್ಣಿನ ರಾಶಿಯನ್ನು ರಸ್ತೆಯ ಪಕ್ಕದಲ್ಲೇ ಹಾಕಿಡಲಾಗುತ್ತಿದೆ. ಸವಾರರ ಸುರಕ್ಷತೆಗೆ ಕ್ರಮವಹಿಸಿಲ್ಲ. ರಾತ್ರಿ ವೇಳೆ ಈ ಮಾರ್ಗದಲ್ಲಿ ಸಂಚಾರ ದುಸ್ತರವಾಗಿದೆ. ಇದರಿಂದ ಹೆದ್ದಾರಿಯೂ ಸಾಕು, ಅಭಿವೃದ್ಧಿಯೂ ಸಾಕು ಎನ್ನುವಂತಾಗಿದೆ ಎಂದು ಜನರು ಕಿಡಿಕಾರುತ್ತಿದ್ದಾರೆ.
ಇನ್ನು ಸಾಗರಮಾಲಾ ಹಂತ 1ರಲ್ಲಿ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯು 440 ಕೋಟಿ ರೂ. ವೆಚ್ಚದಲ್ಲಿ 60 ಕಿ.ಮೀ. ಉದ್ದದ ರಸ್ತೆ ನಿರ್ಮಾಣಗೊಳ್ಳುತ್ತಿದೆ. ಎರಡನೇ ಹಂತದಲ್ಲಿ ಬಿಸಲಕೊಪ್ಪ ಕ್ರಾಸ್‍ನಿಂದ ಹಾವೇರಿ ಜಿಲ್ಲೆಯ ನಾಲ್ಕರ ಕ್ರಾಸ್‍ವರೆಗೆ 40 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ 208 ಕೋಟಿ ರೂ. ವೆಚ್ಚದ ಟೆಂಡರ್‌ಗೆ ಅನುಮೋದನೆ ದೊರೆತಿದೆ. 10 ಮೀ. ಅಗಲದ ದ್ವಿಪಥ ರಸ್ತೆ ಇದಾಗಿದ್ದು, ಎರಡೂ ಕಡೆ ಕಾಮಗಾರಿ ವಿಳಂಬವಾಗುತ್ತಿದೆ. ಕಾರಣ ಈ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಬೇಕು. ಜತೆಗೆ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಿ ವೇಗ ಹೆಚ್ಚಿಸಬೇಕಿದೆ.
ಇಲ್ಲಿನ ಸ್ಥಳೀಯರ 45 ವರ್ಷದ ಬೇಡಿಕೆಯಾಗಿದ್ದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭವಾಗಿದ್ದರೂ ಜನರಿಗೆ ಸಂಕಟ ತಂದಿದೆ. ಕಾಮಗಾರಿ ಪ್ರಾರಂಭಗೊಂಡ ಆರು ತಿಂಗಳಾಗಿದೆ. ರಸ್ತೆಯ ಅಲ್ಲಲ್ಲಿ ಬ್ರಿಡ್ಜ್ ಮಾಡಿದ್ದು ಬಿಟ್ಟರೆ ಇನ್ಯಾವುದೆ ಕಾಮಗಾರಿ ನಡೆದಿಲ್ಲ. ಅಲ್ಲದೆ ಬ್ರಿಡ್ಜ್ ಕಾಮಗಾರಿ ಕೂಡ ಪರಿಪೂರ್ಣವಾಗಿಲ್ಲ. ಮಳೆ ಬಂದರೆ ಅಲ್ಲಿ ನೀರು ತುಂಬಿ ಪ್ರಯಾಣಿಕರು ಓಡಾಡುವುದೇ ದುಸ್ತರವಾಗಿದೆ. ಕೆಲವೊಮ್ಮೆ ಅಪಘಾತಗಳು ನಡೆದ ನಿದರ್ಶಗಳೂ ಇವೆ. ಇಂತಹ ಅವೈಜ್ಞಾನಿಕ ಕಾಮಗಾರಿ ಮಾಡಿಸಿದ ಗುತ್ತಿಗೆದಾರರನ್ನು ತೆಗೆದುಹಾಕಬೇಕು. ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕು.
| ಬಸವರಾಜ ನಂದಿಕೇಶ್ವರಮಠ ಮಾಜಿ ಅಧ್ಯಕ್ಷ, ಬದನಗೋಡ ಗ್ರಾಪಂ.
ಇದನ್ನೂ ಓದಿ | Hubballi Airport | ರಾಜ್ಯದ ಮೊದಲ ಗ್ರೀನ್ ಏರ್‌ಪೋರ್ಟ್ ಹುಬ್ಬಳ್ಳಿ ವಿಮಾನ ನಿಲ್ದಾಣ