Site icon Vistara News

National Youth Day : ಯುವಜನರು ಗೆದ್ರೆ ದೇಶ ಗೆದ್ದಂತೆ: ಸಂಚಲನ ಮೂಡಿಸಿದ ವಿಸ್ತಾರ ನ್ಯೂಸ್‌ನ ವಿವೇಕ ವಂದನೆ

Vistara News vivekananda Janmadina Pavagada japananda swameeji

ಪಾವಗಡ: ನೀವೇ ಭವಿಷ್ಯದ ಭಾರತ, ಭಾರತ ಉಳಿಯುವುದು ಬೆಳೆಯುವುದು ಏನಿದ್ದರೂ ನಿಮ್ಮಿಂದ: ಹೀಗೆಂದು ಯುವಜನರಿಗೆ ಸ್ಫೂರ್ತಿ ತುಂಬುವ ಜತೆಗೆ ಜವಾಬ್ದಾರಿಯ ಅರಿವು ಮೂಡಿಸಿದರು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ (Pavagada SrI Ramakrishna Sevashrama) ಅಧ್ಯಕ್ಷ ಸ್ವಾಮಿ ಜಪಾನಂದಜೀ ಮಹಾರಾಜ್ (Swamee Japanandajee Maharaj).

ಸ್ವಾಮಿ ವಿವೇಕಾನಂದ ಅವರ 160ನೇ ಜನ್ಮ ದಿನಾಚರಣೆಯ (Swami Vivekananda Birthday) ಸಂದರ್ಭದಲ್ಲಿ ವಿಸ್ತಾರ ನ್ಯೂಸ್‌ (Vistara News) ಶ್ರೀ ರಾಮಕೃಷ್ಣ ಸೇವಾಶ್ರಮದ ಸಹಯೋಗದಲ್ಲಿ ಪಾವಗಡದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ (National Youth Day) ಅವರು ಮಾತನಾಡಿದರು. ಪಾವಗಡದ ಎಸ್‌ಎಸ್‌ಕೆ ಬಯಲು ರಂಗ ಮಂದಿರದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಿದರು.

ಈ ದೇಶದ ನಿಜವಾದ ಭವಿಷ್ಯ ಇರುವುದು ಯುವಜನರಲ್ಲಿ, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಭಾಗದ ಯುವಜನರಲ್ಲಿ. ಅವರ ಶಕ್ತಿಯೇ ಭಾರತದ ನಿಜವಾದ ಶಕ್ತಿ ಎಂದು ಹೇಳಿದ ಜಪಾನಂದ ಸ್ವಾಮೀಜಿ ಅವರು, ವಿಸ್ತಾರ ನ್ಯೂಸ್‌ ಗ್ರಾಮೀಣ ಭಾಗದಲ್ಲಿ ಇಂಥಹುದೊಂದು ಅದ್ಭುತ ಕಾರ್ಯಕ್ರಮದ ಮೂಲಕ ಯುವಜನರನ್ನು ಬಡಿದೆಬ್ಬಿಸಿದ್ದು ಶ್ಲಾಘನೀಯ ಕಾರ್ಯ ಎಂದು ಬೆನ್ನು ತಟ್ಟಿದರು.

ಎರಡನೇ ವರ್ಷದ ಅಪೂರ್ವ ಕಾರ್ಯಕ್ರಮ

2022ರ ನವೆಂಬರ್‌ 6ರಂದು ಲೋಕಾರ್ಪಣೆಗೊಂಡ ವಿಸ್ತಾರ ನ್ಯೂಸ್‌ ಚಾನೆಲ್‌ ಈಗಾಗಲೇ ಎರಡು ಬಾರಿ ವಿವೇಕಾನಂದ ಜನ್ಮದಿನೋತ್ಸವವನ್ನು ಆಯೋಜಿಸಿದೆ. ಮೊದಲ ಬಾರಿ 2023ರ ಜನವರಿ 12ರಂದು ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರ ಉಪಸ್ಥಿತಿಯಲ್ಲಿ ರಾಜ್ಯ ಮಟ್ಟದ ಅದ್ಧೂರಿ ಕಾರ್ಯಕ್ರಮವನ್ನು ನಡೆಸಿದ್ದ ವಿಸ್ತಾರ ನ್ಯೂಸ್‌, ಎರಡನೇ ವರ್ಷದ ಕಾರ್ಯಕ್ರಮವನ್ನು ತಾಲೂಕು ಕೇಂದ್ರವಾದ ಪಾವಗಡದಲ್ಲಿ ನಡೆಸುವ ಮೂಲಕ ತಾನೆಷ್ಟು ಭಿನ್ನ ಎಂಬುದನ್ನು ಜಗತ್ತಿಗೆ ತೋರಿಸಿತು.

ಕಾರ್ಯಕ್ರಮದಲ್ಲಿ ವಿಸ್ತಾರ ಸಂಸ್ಥೆಯ ಈ ವಿಶೇಷತೆಯನ್ನು ಎತ್ತಿ ಹೇಳಿದ ಕಾರ್ಯ ನಿರ್ವಾಹಕ ನಿರ್ದೇಶಕರಾದ ಕಿರಣ್‌ ಕುಮಾರ್‌ ಡಿ.ಕೆ. ಅವರು, ಚಾನೆಲ್‌ ಆರಂಭವಾಗಿ ಒಂದೇ ವರ್ಷದಲ್ಲಿ ಅದು ಜನರನ್ನು ಮನಸ್ಸನ್ನು ಮುಟ್ಟಿದ ರೀತಿಯನ್ನು ಹೆಮ್ಮೆಯಿಂದ ಸ್ಮರಿಸಿದರು. ವಿಸ್ತಾರ ನ್ಯೂಸ್‌ನ ವೈವಿಧ್ಯಮಯ ಕಾರ್ಯಕ್ರಮಗಳು, ಅದು ಮಾಡಿದ ಅದ್ಭುತ ಪರಿಣಾಮಗಳನ್ನು ತಿಳಿಸಿದರು. ವಿದ್ಯಾರ್ಥಿಗಳು ತಾವು ಏನಾಗಬೇಕು ಎಂದು ಮೊದಲು ಕ್ಲಿಯರ್‌ ಮಾಡಿಕೊಂಡು ಮುಂದಡಿ ಇಡಿ ಎಂದು ಅವರು ಕಿವಿ ಮಾತು ಹೇಳಿದರು.

ಪ್ರದೀಪ್‌‌ ಈಶ್ವರ್‌ ಪ್ರತಿ ಮಾತಿಗೆ ಕುಣಿದಾಡಿದ ಯುವಜನ

ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದವರು ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್‌ ಈಶ್ವರ್‌ ಅವರು. ತಮ್ಮ ವಿಭಿನ್ನ ಶೈಲಿಯ ಸ್ಫೂರ್ತಿದಾಯಕ ಭಾಷಣಕ್ಕೆ ಹೆಸರಾದ ಪ್ರದೀಪ್‌ ಈಶ್ವರ್‌ ಅವರ ಒಂದೊಂದು ಮಾತಿಗೂ ಚಪ್ಪಾಳೆಗಳ ಸುರಿಮಳೆಯೇ ಸುರಿಯಿತು.

ʻಸುಮ್‌ ಸುಮ್ನೆ ಗೆದ್ದರೆ ವಿಕ್ಟರಿ.. ಕಷ್ಟಪಟ್ಟು ಗೆದ್ರೆ ಹಿಸ್ಟರಿʼ, ʻʻನಮಗೆ ಅಷ್ಟು ಜನ ಫಾಲೋವರ್ಸ್‌ ಇದಾರೆ ಎಂದು ಬೀಗಬೇಡಿ, ಕಷ್ಟ ಬಂದಾಗ ಯಾವ ಫಾಲೋವರ್‌ ಕೂಡಾ ಬರಲ್ಲ, ನಮ್ಮ ತಂದೆ ತಾಯಿನೇ ಬರೋದುʼʼ ಎಂಬ ಡೈಲಾಗ್‌ಗಳ ಮೂಲಕ ಅವರು ಯುವಜನರ ಮನ ಗೆದ್ದರು.

ʻʻಕಷ್ಟಪಟ್ಟು ಓದಿ, ಇಷ್ಟಪಟ್ಟು ಓದಿ.. ಪರೀಕ್ಷೆಯಲ್ಲಿ ಫೇಲಾಗೋದು ತಪ್ಪಲ್ಲ, ಬದುಕಲ್ಲಿ ಫೇಲಾಗದಂತೆ ನೋಡಿಕೊಳ್ಳಿʼ, ನೀವು ಚೆನ್ನಾಗಿ ಕಲಿತು ಅಮೆರಿಕಕ್ಕೆ ಹೋಗಿ ಕೆಲಸ ಮಾಡ್ತೀನಿ ಅಂದ್ಕೊಬೇಡಿ. ಅಮೆರಿಕದ ಹುಡುಗರು ನಮ್ಮೂರಿನ ಗಲ್ಲಿಗೆ ಬಂದು ಕೆಲಸ ಮಾಡೋ ಹಾಗೆ ಮಾಡಿʼ, ಮಗನೇ ನೀನು ಹೇಗೆ ಓದ್ಬೇಕು ಅಂದರೆ ಇಡೀ ಕರ್ನಾಟಕಾನೇ ನಾಳೆ ನಿನ್ನ ಬಗ್ಗೆ ಓದ್ಬೇಕುʼ ಎಂದು ಹೇಳುವ ಮೂಲಕ ಹುರಿದುಂಬಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಹಾಗೂ ಶ್ರೀ ರಾಮಕೃಷ್ಣ ಸೇವಾಶ್ರಮ ಮತ್ತು ಸಹ ಸಂಸ್ಥೆಗಳ ಸಲಹಾ ಸಮಿತಿ ಅಧ್ಯಕ್ಷ ಎಚ್. ಬಿಲ್ಲಪ್ಪ, ಪಾವಗಡ ಶಾಸಕ ಎಚ್.ವಿ. ವೆಂಕಟೇಶ್, ಎಸ್‌ಎಸ್‌ಕೆ ಸಂಘದ ಅಧ್ಯಕ್ಷ ಆನಂದ ರಾವ್‌, ಪಾವಗಡ ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಮ್ಮ ಅವರು ಭಾಗವಹಿಸಿದ್ದರು.

ವಿವೇಕಾನಂದ ಜಯಂತಿ ಸಂದರ್ಭದಲ್ಲಿ ಹೈಸ್ಕೂಲ್‌ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಭಾಷಣ‌ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಟ್ರೋಫಿ ವಿತರಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಬಿಆರ್‌ಪಿ ಆಗಿರುವ ಸಾದಿಕ್‌ ಉಲ್ಲಾ ಷರೀಫ್‌ ಮತ್ತು ಶಿಕ್ಷಕಿ ದುರ್ಗಮ್ಮ ಅವರು ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ

ವೈವಿ‌ಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ

ಬೆಳಗ್ಗೆ ಶ್ರೀ ರಾಮಕೃಷ್ಣ ಸೇವಾಶ್ರಮದ ವೃಂದದವರಿಂದ ಸ್ವಾಮಿ ವಿವೇಕಾನಂದರ ಸ್ಫೂರ್ತಿ ವಾಣಿ ಕಾರ್ಯಕ್ರಮ (ಸ್ವಾಮಿ ವಿವೇಕಾನಂದರು ಹಾಗೂ ಯುವ ಜನತೆಗಾಗಿ ಸ್ಫೂರ್ತಿಭರಿತ ಗೀತೆಗಳು) ನಡೆಯಿತು. ಸ್ವತಃ ರಾಮಕೃಷ್ಣ ಸೇವಾಶ್ರಮ ಸ್ವಾಮಿ ಜಪಾನಂದ ಮಹಾರಾಜ್‌ ಅವರೇ ಪ್ರಮುಖ ಗಾಯಕರಾಗಿ ಕಾರ್ಯಕ್ರಮ ನಡೆಸಿಕೊಟ್ಟರು.

ಪಾವಗಡದ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ವಿದ್ಯಾಲಯದ ವಿದ್ಯಾರ್ಥಿನಿಯರು ಮತ್ತು ಶ್ರೀಶಾಲಾ ಇಂಟರ್‌ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪಾವಗಡ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಿ.ಬಸವಲಿಂಗಪ್ಪ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಮಾರಪ್ಪ, ಶಾಂತಿ ಎಸ್.ಎಸ್.ಕೆ. ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ವಿನಯ್ ಬಾಬು, ಶಾಂತಿ ಎಸ್.ಎಸ್.ಕೆ. ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಂ.ಜಿ.ಮನೋಜ್ ಕುಮಾರ್, ಸ್ವಾಮಿ ವಿವೇಕಾನಂದ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್, ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನಾಗೇಂದ್ರ ಅವರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.

ಜನ ಮೆಚ್ಚಿದ ಕಾರ್ಯಕ್ರಮ; ಪಾವಗಡ ಫುಲ್‌ ಖುಷ್‌

ಎಸ್‌ಎಸ್‌ಕೆ ಸಂಘದ ಬಯಲು ರಂಗ ಮಂದಿರ ತುಂಬಿ ತುಳುಕಿದ ಕಾರ್ಯಕ್ರಮ ಇಡೀ ಪಾವಗಡದಲ್ಲಿ ಸಂಚಲನ ಸೃಷ್ಟಿಸಿತು. ವಿಸ್ತಾರ ನ್ಯೂಸ್‌ನ ಪಾವಗಡ ವರದಿಗಾರ ಇಮ್ರಾನ್‌ ಉಲ್ಲಾ ಅವರು ಈ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಿದ್ದರು. ತಲ್ಲಂ ಲಕ್ಷ್ಮೀ ಬಾಬು ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ವಿಸ್ತಾರ ನ್ಯೂಸ್‌ ಆಯೋಜಿಸುವ ಇಂಥ ಸಮಾಜಮುಖಿ, ಪರಿವರ್ತನಶೀಲ ಕಾರ್ಯಕ್ರಮಕ್ಕೆ ಪಾವಗಡದ ಜನರ ಬೆಂಬಲ ಸದಾ ಇದೆ ಎಂದು ಅಲ್ಲಿನ ಜನಪ್ರತಿನಿಧಿಗಳು, ಪ್ರಮುಖರು ಭರವಸೆ ನೀಡಿದರು.

Exit mobile version