ಧಾರವಾಡ: ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವಜನೋತ್ಸವ (National Youth Festival) ಯಶಸ್ವಿಯಾಗಿದೆ. ರಾಜ್ಯದ ಯುವನೀತಿಯಲ್ಲಿ ಶಿಕ್ಷಣ, ಕ್ರೀಡೆ, ಸಂಸ್ಕೃತಿ, ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಲಾಗಿದ್ದು, ಸ್ವಾಮಿ ವಿವೇಕಾನಂದರ ಸಂದೇಶದಿಂದ ಯುವನೀತಿ ಪ್ರೇರಿತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೃಷಿ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ 26ನೇ ರಾಷ್ಟ್ರೀಯ ಯುವಜನೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಈ ವರ್ಷದಲ್ಲಿ ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘ ಯೋಜನೆಗಳನ್ನು ರೂಪಿಸಲಾಗಿದ್ದು, ಆರ್ಥಿಕ ಸಹಾಯ, ಯೋಜನೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಒದಗಿಸುವ ಮೂಲಕ 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ನೀಡಲಾಗುತ್ತಿದೆ. ಅಮೃತ ಕ್ರೀಡಾ ಯೋಜನೆಯಡಿ 75 ಕ್ರೀಡಾಪಟುಗಳನ್ನು ದತ್ತ ಪಡೆದು ತರಬೇತಿ, ಶಿಕ್ಷಣ ನೀಡಲಾಗುತ್ತಿದೆ. ಗ್ರಾಮೀಣ ಕ್ರೀಡಾಕೂಟದ ಮೂಲಕ ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಇದನ್ನೂ ಓದಿ | Modi Roadshow In Delhi | ಮೋದಿ ಮೆಗಾ ರೋಡ್ ಶೋ, ಲೋಕಸಭೆ ಚುನಾವಣೆಗೆ ದೆಹಲಿಯಿಂದಲೇ ರಣಕಹಳೆ
ಭಾರತೀಯರ ಹೃದಯ ಭಾರತ ಮಾತೆಗಾಗಿ ಮಿಡಿಯುತ್ತದೆ
ಯುವಜನ ಉತ್ಸವ ಯಶಸ್ವಿಯಾದ ಸ್ಮರಣೀಯ ಕಾರ್ಯಕ್ರಮವಾಗಿದೆ. ವಿಭಿನ್ನ ಪ್ರಾಂತ್ಯದಿಂದ, ರಾಜ್ಯಗಳಿಂದ ದೇಶದ ಮೂಲೆ ಮೂಲೆಗಳಿಂದ ಯುವಕರು ಬಂದಿದ್ದು, ಅಲ್ಲಿನ ಸಂಸ್ಕೃತಿ ಜೀವನ ವಿಭಿನ್ನವಾಗಿದ್ದರೂ ಭಾರತೀಯರ ಹೃದಯ ಒಗ್ಗಟ್ಟಿನಿಂದ ಭಾರತ ಮಾತೆಗಾಗಿ ಮಿಡಿಯುತ್ತದೆ. ರಾಷ್ಟ್ರೀಯತೆ ನಮ್ಮೆಲ್ಲರನ್ನೂ ಜೋಡಿಸುತ್ತದೆ. ಮಾನವ ಭಾವುಕ ಜೀವಿ. ಭಾವುಕತೆ ದೇಶವನ್ನು ಅಭಿವೃದ್ಧಿಗೊಳಿಸಲು ಇರಬೇಕು. ಬ್ರಿಟಿಷರಿಂದ ಭಾರತವನ್ನು ಸ್ವತಂತ್ರಗೊಳಿಸಲು ದೇಶಕ್ಕಾಗಿ ಪ್ರಾಣ ನೀಡಬೇಕಾಗಿತ್ತು. ಆದರೆ, ಈಗ ದೇಶಕ್ಕಾಗಿ ಜೀವವನ್ನು ನಡೆಸಬೇಕು. ಯುವ ಜೀವನ ಸಂತೋಷ, ಪರಿಶ್ರಮದಿಂದ ಕೂಡಿರುತ್ತದೆ. ಯುವಜನರು ತಮ್ಮ ಶಕ್ತಿಯನ್ನು ಕನಸನ್ನು ಸಾಕಾರಗೊಳಿಸಲು, ಗುರಿಯನ್ನು ಸಾಧಿಸಲು ಬಳಸಬೇಕು ಎಂದರು.
ಶೇ.40 ಯುವಶಕ್ತಿಯೇ ಭಾರತದ ಶಕ್ತಿ
ಭಾರತದ ಯುವಜನರ ಬುದ್ಧಿಮತ್ತೆ ಇತರ ದೇಶಗಳ ಯುವಜನರಿಗಿಂತ ಹೆಚ್ಚಿದೆ. ಭಾರತದ ಯುವಜನರ ಬುದ್ಧಿಮತ್ತೆ ಮೊದಲಿನಿಂದಲೂ ಹೆಚ್ಚಿದ್ದು, ಅದೇ ನಿಮ್ಮಶಕ್ತಿ. ಭಾರತದ ಸಂಸ್ಕಾರ, ಸಂಸ್ಕೃತಿ ಮತ್ತು ಜನಸಂಖ್ಯೆಯೇ ನಮ್ಮ ಶಕ್ತಿ. ಸ್ವಾತಂತ್ರ್ಯದ ಸಂದರ್ಭದಲ್ಲಿ ಜನಸಂಖ್ಯೆ ನಮ್ಮ ಬಹಳ ದೊಡ್ಡ ಸಂಕಷ್ಟವಾಗಿತ್ತು. ಮೊದಲು ಜನಸಂಖ್ಯೆಯನ್ನು ದೇಶದ ಅಭಿವೃದ್ಧಿಗೆ ಮಾರಕವೆಂದು ತಿಳಿದಿದ್ದರು. ಆದೆ ಶೇ.40 ಯುವಶಕ್ತಿಯೇ ಭಾರತದ ಶಕ್ತಿಯಾಗಿದೆ. ಇದರಿಂದ ಆತ್ಮನಿರ್ಭರ, ಆತ್ಮವಿಶ್ವಾಸದ ಭಾರತದ ನಿರ್ಮಾಣ ಸಾಧ್ಯವಾಗುತ್ತಿದೆ. ಏಕ ಭಾರತ ಶ್ರೇಷ್ಠ ಭಾರತ ಎಂಬ ಚಿಂತನೆಯಿಂದ ಭವಿಷ್ಯ ಭಾರತದ ನಿರ್ಮಾಣದಲ್ಲಿ ಪ್ರಧಾನಿ ಮೋದಿಯವರು ತೊಡಗಿದ್ದಾರೆ ಎಂದರು.
ನಿಮ್ಮ ಭದ್ರ ಭವಿಷ್ಯದಿಂದ ದೇಶದ ಭವಿಷ್ಯವನ್ನು ಭದ್ರಗೊಳಿಸಬಹುದು
ಕ್ರೀಡೆಯಲ್ಲಿ ಸೋಲಬಾರದು ಎಂದು ಆಡುಲಾಗುತ್ತದೆ. ಅದರೆ, ಗೆಲ್ಲಲೇಬೇಕೆಂಬ ಆಕ್ರಮಣಕಾರಿಯಾಗಿ ಆಡಬೇಕು. ಇಡೀ ಜೀವನ, ಯಶಸ್ಸು ನಿಮ್ಮ ಕೈಯಲ್ಲಿದೆ. ನಿಮ್ಮ ಭವಿಷ್ಯವನ್ನು ನೀವೇ ಬರೆದುಕೊಳ್ಳಿ. ಇದರಿಂದ ಭಾರತದ ಭವಿಷ್ಯವನ್ನು ಬರೆದಂತಾಗುತ್ತದೆ ಎಂದು ಯುವಕರಿಗೆ ಕಿವಿಮಾತು ಹೇಳಿದ ಮುಖ್ಯಮಂತ್ರಿ, ಯುವಜನೋತ್ಸವ ಯಶಸ್ಸಿಗೆ ಸಹಕರಿಸಿದ ಭಾರತ ಸರ್ಕಾರ, ಕೇಂದ್ರ ಸಚಿವರು, ಕ್ರೀಡಾ ಮಂತ್ರಿಗಳು, ಅಧಿಕಾರಿಗಳು, ಧಾರವಾಡ ಜಿಲ್ಲಾ ಆಡಳಿತ, ನೆಹರು ಯುವ ಕೇಂದ್ರ, ಧಾರವಾಡದ ಸಂಘ-ಸಂಸ್ಥೆಗಳು, ಸಾರ್ವಜನಿಕರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಯುವಜನೋತ್ಸವ ನಡೆಸಲು ಚರ್ಚೆ ಮಾಡುವಾಗ ಎಲ್ಲಿ ಮಾಡಬೇಕು ಎಂದು ಚರ್ಚೆ ಮಾಡಲಾಯಿತು. ಅನುರಾಗ್ ಠಾಕೂರ್ ಅವರು ಪ್ರಧಾನ ಮಂತ್ರಿಗಳಿಗೆ ಹುಬ್ಬಳ್ಳಿ-ಧಾರವಾಡದಲ್ಲಿ ಮಾಡೋಣ ಎಂದು ಹೇಳಿದರು. ನಗರದಲ್ಲಿ ಯುವಜನೋತ್ಸವ ಮಾಡಿದ್ದು ಖುಷಿ ತಂದಿದೆ. ಸಿಎಂ ಹಾಗೂ ಕೇಂದ್ರ ಸಚಿವ ಅನುರಾಗ್ ಠಾಕೂರ್‌ಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.
ನಿಮಗೆ ಏನಾದರೂ ಇಲ್ಲಿ ಅಡಚಣೆ ಆಗಿದ್ದರೆ ನೇರವಾಗಿ ನಮಗೆ ಸಂದೇಶ ಕಳುಹಿಸಿ. ನಿಮಗೆ ಇಲ್ಲಿ ಎಲ್ಲವೂ ಚೆನ್ನಾಗಿದೆ ಅನಿಸಿದರೆ ನಿಮ್ಮ ಊರಲ್ಲಿ ಹೋಗಿ ಕಾರ್ಯಕ್ರಮದ ಬಗ್ಗೆ ಹೇಳಿ ಎಂದ ಅವರು, ಧಾರವಾಡ ಜಿಲ್ಲೆ ಹಲವು ವಿಭಿನ್ನ ಮತ್ತು ಮಹಾನ್ ವ್ಯಕ್ತಿಗಳಿದ್ದ ಸ್ಥಳವಾಗಿದೆ. ಪ್ರಧಾನಮಂತ್ರಿ ಸಹ ಈ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.
ಯುವಜನೋತ್ಸವ ಅರ್ಥಪೂರ್ಣವಾಗಿ ನಡೆದಿದೆ
ಹುಬ್ಬಳ್ಳಿ: ನಗರದಲ್ಲಿ ನಡೆದ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮವು ಅರ್ಥಪೂರ್ಣವಾಗಿ ಹಾಗೂ ಅದ್ಭುತವಾಗಿ ಜರುಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಇಂದು ಯುವಜನೋತ್ಸವ ಸಮಾರೋಪ ಸಮಾರಂಭ ಜರುಗುತ್ತಿದೆ. ವಿವಿಧ ರಾಜ್ಯಗಳ ಕ್ರೀಡಾಪಟುಗಳು ಆಗಮಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಅರ್ಥಪೂರ್ಣವಾಗಿ ನಡೆಸಿಕೊಟ್ಟಿದ್ದಾರೆ. ಈ ಭಾಗದಲ್ಲಿ ಈ ರೀತಿಯ ಕಾರ್ಯಕ್ರಮಗಳಿಂದ ಯುವಕರಿಗೆ ಸಾಧನೆ ಮಾಡಲು ಸ್ಫೂರ್ತಿ ದೊರೆಯಲಿದೆ ಎಂದರು.
ನಮ್ಮ ರಾಜ್ಯದ ಯುವ ನೀತಿಯಲ್ಲಿ ಶಿಕ್ಷಣ, ಉದ್ಯೋಗ,ಕ್ರೀಡೆ ಹಾಗೂ ಸಂಸ್ಕೃತಿಗೆ ಮಹತ್ವ ನೀಡಲಾಗಿದೆ. ಯುವಕರಿಗೆ ಎಲ್ಲ ರಂಗಗಳಲ್ಲಿ ಅವಕಾಶ ನೀಡಲಾಗಿದೆ. ಈ ವರ್ಷ ಗ್ರಾಮೀಣ ಕ್ರೀಡೆಗಳನ್ನು ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಹಾಗೂ ರಾಜ್ಯ ಮಟ್ಟದಲ್ಲಿ ಏರ್ಪಡಿಸಿದ್ದು, ಕಬಡ್ಡಿ, ಕುಸ್ತಿ, ಖೋ ಖೋ ಮುಂತಾದ ಗ್ರಾಮೀಣ ಸೊಗಡಿರುವ ಕ್ರೀಡೆಗಳನ್ನು ಪ್ರಥಮ ಬಾರಿಗೆ ರಾಜ್ಯದಲ್ಲಿ ಏರ್ಪಡಿಸಿ ಹೊಸ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡಲಾಗುತ್ತಿದೆ ಎಂದರು.
ಗಡ್ಕರಿಯವರಿಗೆ ಬೆದರಿಕೆ; ಸಂಪೂರ್ಣ ತನಿಖೆ
ಹಿಂಡಲಗ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ ಹೋಗಿರುವ ಬಗ್ಗೆ ಪ್ರತಿಕ್ರಿಯಿಸಿ, ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಂಪೂರ್ಣವಾಗಿ ತನಿಖೆ ಮಾಡಲಾಗುತ್ತಿದೆ. ಅದಕ್ಕಿಂತ ಮುಖ್ಯವಾಗಿ ಅವರ ಹಿನ್ನೆಲೆಯನ್ನು ಪರಿಶೀಲಿಸಲಾಗುತ್ತದೆ ಎಂದರು.
ಇದನ್ನೂ ಓದಿ | Women Representation | ರಾಜ್ಯದಲ್ಲಿ ನಿಧಾನವಾಗಿ ಹೆಚ್ಚುತ್ತಿದೆ ಮಹಿಳಾ MLAಗಳ ಸಂಖ್ಯೆ: ಕಾಂಗ್ರೆಸ್ ಪಕ್ಷವೇ ಮುಂದೆ; BJP-JDS ಹಿಂದೆ