Site icon Vistara News

National youth Festival | ಯುವಜನೋತ್ಸವಕ್ಕೆ ಸಜ್ಜಾದ ಅವಳಿ ನಗರ: ಮೋದಿಗೆ ಸ್ಮರಣಿಕೆಯಾಗಿ ವಿವೇಕ ಪುತ್ಥಳಿ

ಯುವನೋತ್ಸವ ಸ್ಮರಣಿಕೆ

ಪರಶುರಾಮ್‌ ತಹಶೀಲ್ದಾರ್‌, ಹುಬ್ಬಳ್ಳಿ
ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವಕ್ಕಾಗಿ ಹುಬ್ಬಳ್ಳಿ- ಧಾರವಾಡ ಅವಳಿ ನಗರ ಸಂಭ್ರಮದಿಂದ ಸಜ್ಜಾಗಿದೆ. ಜನವರಿ ೧೨ರಿಂದ ಐದು ದಿನಗಳ ಕಾಲ ನಡೆಯಲಿರುವ ಈ ವೈಭವದ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಪ್ರಧಾನಿಗಳ ಸ್ವಾಗತಕ್ಕೆ ವಾಣಿಜ್ಯ ನಗರಿ ಸಿಂಗಾರಗೊಂಡಿದ್ದು ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಸ್ವಾಮಿ ವಿವೇಕಾನಂದ ಅವರ ಜನ್ಮ ದಿನದ ಅಂಗವಾಗಿ ನಡೆಯುವ 26ನೇ ಯುವಜನೋತ್ಸವ ಇದಾಗಿದೆ. ಕೇಶ್ವಾಪುರದ ರೈಲ್ವೆ ಮೈದಾನದಲ್ಲಿ ಅದ್ಧೂರಿ ಸಮಾರಂಭ ನಡೆಯಲಿದೆ. ಈಗಾಗಲೇ ರೈಲ್ವೇ ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದೆ. ಸುಮಾರು 25 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಮತ್ತು ಕೇಂದ್ರ ಕ್ರೀಡಾ ಇಲಾಖೆ ಸಹಯೋಗದಲ್ಲಿ ನಾಳೆಯಿಂದ ಜನವರಿ 16ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮಧ್ಯಾಹ್ನ 3:45ಕ್ಕೆ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ‌. ನಂತರ ರಸ್ತೆ ಮಾರ್ಗವಾಗಿ ರೈಲ್ವೇ ಮೈದಾನಕ್ಕೆ ತೆರಳಲಿದ್ದಾರೆ. ಈ ವೇಳೆ ರಸ್ತೆ ಇಕ್ಕೆಲಗಳಲ್ಲಿ ನೆರೆದ ಜನರತ್ತ ಕೈಬಿಸಿ ಅಭಿನಂದಿಸಲಿದ್ದಾರೆ. ರೋಡ್‌ ಶೋ ನಡೆಸುವ ಸಾಧ್ಯತೆಯ ಕಾರಣ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಗೋಕುಲ ರಸ್ತೆ, ಹೊಸೂರು, ಹಳೇ ಕೋರ್ಟ್ ಸರ್ಕಲ್, ದೇಶಪಾಂಡೆ ನಗರದ ಮಾರ್ಗವಾಗಿ ಕೇಶ್ವಾಪುರ ರೈಲ್ವೇ ಮೈದಾನದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ನಾಲ್ಕು ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ನಾಲ್ಕು ಗಂಟೆಗೆ ವೇದಿಕೆಗೆ ಆಗಮಿಸಲಿರುವ ಪ್ರಧಾನಿಗಳು ಯುವ ಸಮೂಹವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ನರೇಂದ್ರ ಮೋದಿಯವರು ಯುವ ಸಮೂಹವನ್ನು ಆಕರ್ಷಿಸಲು ವಿಶೇಷ ಘೋಷಣೆಗಳನ್ನು ಮಾಡುವ ಸಾಧ್ಯತೆಯಿದೆ. ಚುನಾವಣೆ ಹೊಸ್ತಿಲಲ್ಲಿ ಪ್ರಧಾನಿಗಳ ಆಗಮನ ಈ ಭಾಗದ ಬಿಜೆಪಿ ಮುಖಂಡರಲ್ಲಿ ಹುಮ್ಮಸ್ಸು ಇಮ್ಮಡಿಗೊಳಿಸಿದೆ.

ಹೀಗಾಗಿ ಪ್ರಧಾನಿಗಳ ಸ್ವಾಗತಕ್ಕೆ ರಸ್ತೆ ಡಿವೈಡರ್‌ಗಳು ಮತ್ತು ಅಕ್ಕಪಕ್ಕದ ಗೋಡೆಗಳನ್ನು ಸುಣ್ಣ-ಬಣ್ಣದ ಚಿತ್ತಾರಗಳಿಂದ ಸಿಂಗರಿಸಲಾಗಿದೆ. ನಗರದೆಲ್ಲೆಡೆ ರಾಜಕೀಯ ನಾಯಕರ ಬ್ಯಾನರ್, ಪ್ಲೆಕ್ಸ್, ಕಟೌಟ್‌ಗಳು ರಾರಾಜಿಸುತ್ತಿವೆ. ಸುಮಾರು ಒಂದು ಗಂಟೆ ನಲ್ವತ್ತೈದು ನಿಮಿಷಗಳ ಕಾಲ ಹುಬ್ಬಳ್ಳಿಯಲ್ಲಿ ಇರುವ ಮೋದಿಯವರು ಸಂಜೆ 5:45ಕ್ಕೆ ದೆಹಲಿಗೆ ಮರಳಲಿದ್ದಾರೆ.

ಹುಬ್ಬಳ್ಳಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ನಾಳೆ ಸಾರ್ವಜನಿಕ ವಾಹನಗಳ ಸಂಚಾರಕ್ಕಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಹುಬ್ಬಳ್ಳಿ ಶಹರದ ಶಾಲಾ ಕಾಲೇಜುಗಳಿಗೆ ನಾಳೆ ಒಂದು ದಿನದ ರಜೆ ಘೋಷಿಸಲಾಗಿದೆ. ಜನವರಿ 16ರವರೆಗೆ ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಮಧ್ಯ ನಾಲ್ಕು ವಿಶೇಷ ರೈಲುಗಳ ಸಂಚರಿಸಲಿವೆ. ನಗರದಲ್ಲಿ ಕೇಸರಿ ಬಣ್ಣದ ಬಟ್ಟೆಗಳನ್ನು ಕಟ್ಟಲಾಗಿದ್ದು ವಾಣಿಜ್ಯ ನಗರಿ ಕೇಸರಿಮಯವಾಗಿದೆ.

ಈಗಾಗಲೇ ಆಗಮಿಸಿದ ಯುವ ಶಕ್ತಿ
ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಭಾಗವಹಿಸಲು 28 ರಾಜ್ಯಗಳ 8000 ಯುವ ಸಮೂಹ ಈಗಾಗಲೆ ಅವಳಿ ನಗರಕ್ಕೆ ಆಗಮಿಸಿದೆ. ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡೆಗಳು ಜನಮನ ಸೆಳೆಯಲಿವೆ. ಬರುವ ಅತಿಥಿಗಳ ಸ್ವಾಗತಕ್ಕೆ ಊಟೋಪಚಾರ, ವಸತಿ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ನಾಲ್ಕು ದಿನಗಳ ಕಾಲ ಹುಬ್ಬಳ್ಳಿ- ಧಾರವಾಡದಲ್ಲಿ ದೇಶದ ವಿಭಿನ್ನ ಸಂಸ್ಕೃತಿಯ ವೈಭವ ಅನಾವರಣಗೊಳ್ಳಲಿದೆ.

ವೈಭವದ ಸನ್ಮಾನಕ್ಕೆ ಸಿದ್ಧತೆ
ಹುಬ್ಬಳ್ಳಿಯಲ್ಲಿ ಗುರುವಾರ ನಡೆಯುವ ಸಮಾರಂಭದಲ್ಲಿ ಯುವಜನೋತ್ಸವಕ್ಕೆ ಚಾಲನೆ ನೀಡಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜ್ಯ ಸರ್ಕಾರದ ವತಿಯಿಂದ ಸನ್ಮಾನ ನಡೆಸಲು ಸಿದ್ಧತೆ ನಡೆದಿದೆ. ಅವರಿಗೆ ಸ್ವಾಮಿ ವಿವೇಕಾನಂದರ ಪುತ್ಥಳಿ ನೀಡಿ, ಮೈಸೂರು ಪೇಟ ತೊಡಿಸಿ ಸನ್ಮಾನ ಮಾಡಲಾಗುತ್ತದೆ. ಜತೆಗೆ ಖಾದಿ ರಾಷ್ಟ್ರಧ್ವಜದ ಸ್ಮರಣಿಕೆ ಕೊಡಲು ಸಿದ್ಧತೆ ನಡೆದಿದೆ. ಆಕಾಶದಲ್ಲಿ ಹಾರುವ ಹೆಮ್ಮೆಯ ರಾಷ್ಟ್ರಧ್ವಜ ಸಿದ್ಧವಾಗುವುದು ನಮ್ಮ ಧಾರವಾಡದಲ್ಲಿ ಅನ್ನೋ ಅಡಿಬರಹದ ಸ್ಮರಣಿಕೆ ಇದಾಗಿದೆ.

ಇದನ್ನೂ ಓದಿ | National youth festival | ಪ್ರಧಾನಿ ಮೋದಿ ಆಗಮನದಿಂದ ಯುವಕರಿಗೆ ಅವಕಾಶ, ಪ್ರೇರಣೆ: ಬೊಮ್ಮಾಯಿ

Exit mobile version