Site icon Vistara News

National Youth Festival : ಪ್ರಧಾನಿಗೆ ಅದ್ಧೂರಿ ಸ್ವಾಗತ; ಹೂಮಳೆಯಲ್ಲಿ ಮಿಂದೆದ್ದ ನರೇಂದ್ರ, ಮುಗಿಲು ತಾಕಿದ ಮೋದಿ ಜಯಘೋಷ

ನರೇಂದ್ರ ಮೋದಿ ರೋಡ್‌ ಶೋ ಬಾಲಕ ಭದ್ರತಾ ಲೋಪ

ಹುಬ್ಬಳ್ಳಿ: ರಾಷ್ಟ್ರೀಯ ಯುವಜನೋತ್ಸವ (National Youth Festival) ಕಾರ್ಯಕ್ರಮದ ನಿಮಿತ್ತ ಹುಬ್ಬಳ್ಳಿ ಮದುವೆ ಮನೆಯಂತೆ ಸಿಂಗಾರಗೊಂಡಿದೆ. ಇದೇ ವೇಳೆ ಇದಕ್ಕೆ ಚಾಲನೆ ನೀಡುವ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಗಮಿಸುವ ವೇಳೆ ಬರೋಬ್ಬರಿ ೮ ಕಿ.ಮೀ. ಹೂವಿನ ಮಳೆಯೇ ಹರಿದಿದೆ. ಪುಷ್ಪವೃಷ್ಟಿಗೆ ಮೋದಿ ಮನಸೋತರು, ಮೋದಿ ಮೋದಿ ಘೋಷಣೆಯು ಮುಗಿಲನ್ನು ತಾಕಿದೆ. ಶಿಳ್ಳೆ, ಚಪ್ಪಾಳೆಗಳೂ ಕೇಳಿಬಂದಿವೆ. ಭಾರತ್‌ ಮಾತಾಕಿ ಜೈ ಘೋಷಣೆಗಳು ಮೊಳಗಿವೆ. ಈ ಮೂಲಕ ಯುವ ಕಹಳೆಯು ಹುಬ್ಬಳ್ಳಿಯಲ್ಲಿ ಮೊಳಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೇರಿದಂತೆ ಇನ್ನಿತರರು ಸ್ವಾಗತ ಕೋರಿದರು. ಪ್ರಧಾನಿ ಆಗಮನಕ್ಕೋಸ್ಕರ ಅವರು ಸಂಚರಿಸುವ ಇಡೀ ಮಾರ್ಗವನ್ನು ಅಂದರೆ ಬರೋಬ್ಬರಿ ೮ ಕಿ.ಮೀ. ವ್ಯಾಪ್ತಿಯವರಗೆ ರಂಗೋಲಿಯಿಂದ ಚಿತ್ತಾರಗಳು ಮೂಡಿದ್ದವು. ಬಿಜೆಪಿ ಕಾರ್ಯಕರ್ತೆಯರು ಇದಕ್ಕಾಗಿ ಶ್ರಮವಹಿಸಿದ್ದು, ರಸ್ತೆಯುದ್ದಕ್ಕೂ ರಂಗೋಲಿಯನ್ನು ಬಿಡಿಸಿ ಕಣ್ಣಿಗೆ ಮುದ ನೀಡುವಂತೆ ಮಾಡಿದ್ದರು. ವಿಮಾನ ನಿಲ್ದಾಣ ರಸ್ತೆಯಿಂದ ಅಕ್ಷಯ ಪಾರ್ಕ್‌ವರೆಗೂ ಈ ಸೊಬಗವನ್ನು ಕಾಣಬಹುದಾಗಿತ್ತು.

ರಸ್ತೆಯುದ್ದಕ್ಕೂ ಹೂಮಳೆ
ಮೋದಿ ಅವರು ತಮ್ಮ ಕಾರಿನಲ್ಲಿ ರೋಡ್‌ ಶೋ ಮೂಲಕ ಬರುತ್ತಿದ್ದರೆ, ಬ್ಯಾರಿಕೇಡ್‌ ಆಚೆಗೆ ನಿಂತಿದ್ದ ಅಭಿಮಾನಿಗಳು, ಸಾರ್ವಜನಿಕರಿಂದ ಜಯಘೋಷಗಳೇ ಮೊಳಗಿದವು. ಹೂವುಗಳನ್ನು ಮೋದಿಯತ್ತ ಹಾಕಿದರು, ಪುಷ್ಪವೃಷ್ಟಿಯಲ್ಲಿ ನರೇಂದ್ರ ಮೋದಿ ಮುಳುಗಿಹೋದರು.

ಇದನ್ನೂ ಓದಿ | National Youth Festival : ಮೋದಿಗೆ ಹೂವಿನ ಹಾರ ಕೊಡಲು ಬ್ಯಾರಿಕೇಡ್‌ ಹಾರಿಬಂದ ಬಾಲಕ; ಭದ್ರತಾ ಸಿಬ್ಬಂದಿ ತಬ್ಬಿಬ್ಬು!

ಮೊಳಗಿದ ಜಯಘೋಷ
ಭಾರತ್ ಮಾತಾಕಿ ಜೈ, ಮೋದಿ-ಮೋದಿ ಘೋಷಣೆಯು ಮುಗಿಲು ಮುಟ್ಟುತ್ತಿತ್ತು. ಮೋದಿ ಸಹ ಎರಡೂ ಬದಿ ಕೈಬೀಸಿ ಹರ್ಷ ವ್ಯಕ್ತಪಡಿಸುತ್ತಿದ್ದರು. ಪ್ರಧಾನಿಯನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಸಹಸ್ರಾರು ಜನ ಸೇರಿದ್ದರು. ಕೆಲವರು ಮಾರ್ಗದ ಅಕ್ಕಪಕ್ಕ ಇರುವ ಕಟ್ಟಡಗಳ ಮೇಲೆ ಕುಳಿತಿದ್ದರೆ, ಮತ್ತೆ ಕೆಲವರು ಮರವನ್ನೇರಿ ಕುಳಿತಿದ್ದರು. ೮ ಕಿಮೀ ವ್ಯಾಪ್ತಿಯಲ್ಲಿ ಈ ದೃಶ್ಯಗಳು ಕಂಡುಬಂದವು.

ಏರ್ಪೋರ್ಟ್‌ಗೆ ಹೋಗಲು ಪ್ರಯಾಣಿಕರ ಪರದಾಟ
ಇದೇ ವೇಳೆ ಏರ್ಪೋರ್ಟ್‌ಗೆ ಹೋಗಲು ಇಲ್ಲವೇ ಆ ರಸ್ತೆ ಮಾರ್ಗವಾಗಿ ಕ್ರಮಿಸುವವರು ತೀವ್ರವಾಗಿ ಪರದಾಡುವಂತಾಯಿತು. ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಭಾರಿ ಬಿಗಿ ಭದ್ರತೆಯನ್ನು ಅಳವಡಿಸಲಾಗಿತ್ತು. ಹೀಗಾಗಿ ಪ್ರತಿ ಚಲನವಲನಗಳ ಮೇಲೆ ನಿಗಾವಹಿಸಲಾಗಿತ್ತು. ವಿಮಾನ ನಿಲ್ದಾಣ ಮಾರ್ಗದಲ್ಲಿ ಯಾವುದೇ ಖಾಸಗಿ ವಾಹನಗಳಿಗೆ ಪೊಲೀಸರು ಅನುಮತಿ ನೀಡಿರಲಿಲ್ಲ. ಈ ಕಾರಣಕ್ಕಾಗಿ ಹುಬ್ಬಳ್ಳಿಯ ಅಕ್ಷಯ ಪಾರ್ಕ್‌ನಿಂದಲೇ ಸುಮಾರು ಅರ್ಧ ಕಿ.ಮೀ.ಗೂ ಹೆಚ್ಚು ದೂರ ಪ್ರಯಾಣಿಕರು ನಡೆದು ಸಾಗಿದ್ದಾರೆ.

ಇದನ್ನೂ ಓದಿ | National Youth Festival | ಮೋದಿ ನೇತೃತ್ವದಲ್ಲಿ ಭಾರತ ಸಶಕ್ತ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

Exit mobile version