ವಿಜಯ ಕುಮಾರ್ ನಾಯ್ಕ. ಯಲ್ಲಾಪುರ
ಯಲ್ಲಾಪುರ : ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬಾರೆಯಲ್ಲಿ ಪಶ್ಚಿಮ ಘಟ್ಟದ ಸಾಲಿನಲ್ಲಿ ಹೊಸ ಜಾತಿಯ ಸಿಹಿ ನೀರಿನ ಏಡಿಯೊಂದು ಪತ್ತೆಯಾಗಿದೆ. ಇದಕ್ಕೆ “ವೇಲಾ ಬಾಂಧವ್ಯ” ಎಂದು ಹೆಸರಿಡಲಾಗಿದೆ. ನಿಸರ್ಗ ತಜ್ಞ ಗೋಪಾಲಕೃಷ್ಣ ಹೆಗಡೆ, ಅರಣ್ಯ ಇಲಾಖೆಯ ಸಿಬ್ಬಂದಿ ಪರಶುರಾಮ ಭಜಂತ್ರಿ ಮತ್ತು ಪುಣೆಯ ಪ್ರಾಣಿ ಸರ್ವೇಕ್ಷಣಾಲಯದ ಡಾ. ಸಮೀರಕುಮಾರ ಪತಿ ತಂಡ ಈ ವೇಲಾ ಪ್ರಭೇದದ ಹೊಸ ಜಾತಿಯ ಸಿಹಿನೀರಿನ ಏಡಿಯನ್ನು ಪತ್ತೆ ಹಚ್ಚಿದ್ದಾರೆ.
ಹಳದಿ ಮತ್ತು ಕೇಸರಿ ಮಿಶ್ರಿತ ಮೈಬಣ್ಣದ ಈ ಏಡಿಗಳು ಸಮತಟ್ಟಾದ ಜಾಗದ ಮಣ್ಣಿನಲ್ಲಿ ಸುಮಾರು ಒಂದರಿಂದ ಒಂದೂವರೆ ಅಡಿಯಷ್ಟು ಆಳದಲ್ಲಿ ರಂಧ್ರ ಕೊರೆದು ವಾಸಿಸುತ್ತವೆ. ಇವುಗಳು ಮಳೆಗಾಲದಲ್ಲಿ ತೋಟ, ಗದ್ದೆಗಳಲ್ಲಿ ಕಾಣಸಿಗುತ್ತವೆ. ಸುಮಾರು ನಾಲ್ಕು ಇಂಚು ಅಗಲ, ಮೂರೂವರೆ ಇಂಚು ಉದ್ದವಿರುವ ಈ ಏಡಿಯ ತಲೆಯಿಂದ ಬೆನ್ನಿನ ಮೇಲೆ ಕಪ್ಪು ಬಣ್ಣದ ಪತಂಗದಂಥ ಆಕಾರವಿದೆ.
ನಿಸರ್ಗ ತಜ್ಞ ಗೋಪಾಲಕೃಷ್ಣ ಹೆಗಡೆಯವರ ಯಲ್ಲಾಪುರ ತಾಲೂಕಿನ ಬಾರೆಯಲ್ಲಿರುವ ತೋಟದಲ್ಲಿ ಈ ಏಡಿ ಪತ್ತೆಯಾಗಿದ್ದು, ವೇಲಾ ಕುಲಕ್ಕೆ ಸೇರಿದ ನಾಲ್ಕನೇ ಪ್ರಭೇದ ಇದಾಗಿದೆ. ವೇಲಾ ಕುಲದ ಕರ್ಲಿ, ಪುಲ್ವಿನಾಟ, ವಿರೂಪ ಎಂಬ ನಾಲ್ಕೂ ಪ್ರಭೇದಗಳು ಕೇರಳದ ಕರಾವಳಿಯಲ್ಲಿ ಈ ಮೊದಲು ಪತ್ತೆಯಾಗಿದ್ದು, ನಾಲ್ಕನೇ ಪ್ರಭೇದ ಈ ವೇಲಾ ಬಾಂಧವ್ಯ .
ಹೆಸರಿನಲ್ಲಿರುವ ವಿಶೇಷತೆ
ಬಾರೆಯಲ್ಲಿ ಪತ್ತೆಯಾಗಿರುವ ಈ ಏಡಿಗೆ “ವೇಲಾ ಬಾಂಧವ್ಯ” ಎಂಬ ಹೆಸರಿಡಲಾಗಿದ್ದು, ಬಾಂಧವ್ಯ ಎಂದರೆ ಸಂಬಂಧ ಎಂದು ಅರ್ಥ. ಈ ಏಡಿಯನ್ನು ಆಹಾರಕ್ಕಾಗಿ ಬಳಸಲಾಗುತ್ತದೆ. ಈ ಏಡಿ ಗುರುತು ಮಾಡಿರುವ ಗೋಪಾಲಕೃಷ್ಣ ಹೆಗಡೆಯವರು ತಮ್ಮ ಪುತ್ರಿ ಬಾಂಧವ್ಯ ಹೆಗಡೆ. ಅವರದ್ದೇ ತೋಟದಲ್ಲಿ ಈ ಏಡಿ ಪತ್ತೆಯಾಗಿರುವ ಕಾರಣ ಅವರ ಮಗಳ ಹೆಸರನ್ನೇ ಏಡಿಗೆ ನಾಮಕರಣ ಮಾಡಲಾಗಿದೆ.
ಸಾಮಾನ್ಯವಾಗಿ ಹೊಸದಾಗಿ ಕಂಡುಹಿಡಿಯಲ್ಪಟ್ಟ ಜೀವಿಗಳಿಗೆ ಲ್ಯಾಟಿನ್ ಹೆಸರನ್ನಿಡಲಾಗುತ್ತದೆ. ಆದರೆ ಅಂತಹ ಹೆಸರುಗಳನ್ನ ಸಾಮಾನ್ಯ ಜನತೆ ನೆನಪಿನಲ್ಲಿಡುವುದು ಬಹಳ ಕಷ್ಟಕರ. ಹೀಗಾಗಿ ಎಲ್ಲರಿಗೂ ಅರ್ಥವಾಗುವಂತೆ ಹಾಗೂ ನೆನಪಿನಲ್ಲಿರುವಂತಾಗಲು ಈ ಹೆಸರನ್ನು ಆಯ್ಕೆ ಮಾಡಲಾಗಿದೆ.
ಈ ಏಡಿಗಳು ಮಳೆಗಾಲ ಶುರುವಾಗಿ ಮೊದಲ 15- 20 ದಿನಗಳಲ್ಲಿ ಕಾಣಿಸಿಕೊಳ್ಳುತ್ತವೆ. ಈ ಏಡಿಯನ್ನ ಆಹಾರಕ್ಕಾಗಿಯೂ ಬಳಸಲಾಗುತ್ತದೆ. ಸದ್ಯ ನಮ್ಮ ತಂಡ ಈ ಹೊಸ ಪ್ರಭೇದದ ಏಡಿಯನ್ನ ಪತ್ತೆ ಮಾಡಿರುವ ವರದಿ ನ್ಯೂಜಿಲೆಂಡ್ ನ ಸೈಂಟಿಫಿಕ್ ಜರ್ನಲ್ ಝೂಟ್ಯಾಕ್ಸಾದಲ್ಲಿ ಪ್ರಕಟವಾಗಿದ್ದು, ಇನ್ನಷ್ಟು ಅಧ್ಯಯನ ನಡೆಯಬೇಕಿದೆ.
– ಗೋಪಾಲಕೃಷ್ಣ ಹೆಗಡೆ, ನಿಸರ್ಗ ತಜ್ಞ