ಪರಶುರಾಮ್ ತಹಶೀಲ್ದಾರ್, ಹುಬ್ಬಳ್ಳಿ
ವಾಣಿಜ್ಯ ನಗರ ಹುಬ್ಬಳ್ಳಿ ಹಾಗೂ ವಿದ್ಯಾಕಾಶಿ ಧಾರವಾಡವು ದಿನೇದಿನೆ ಬೆಳೆಯುತ್ತಿರುವ ನಗರಗಳಲ್ಲಿ ಪ್ರಮುಖ ಸಾಲಿನಲ್ಲಿ ನಿಲ್ಲುತ್ತವೆ. ಆದರೆ ಈ ಅವಳಿ ನಗರಗಳಲ್ಲಿ ಇದೀಗ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಪರದಾಡುವ ಸ್ಥಿತಿಯಿದೆ. ಪಾರ್ಕಿಂಗ್ ಸಮಸ್ಯೆ ದಿನನಿತ್ಯ ವಾಹನ ಸವಾರರು ಹೈರಾಣಾಗುವಂತೆ ಮಾಡಿದೆ. ಕಳೆದ 5 ವರ್ಷಗಳ ಹಿಂದೆ ಪಾಲಿಕೆ ಮಾಡಿದ್ದ ಸರ್ವೆ ವರದಿ ಇದೀಗ ಮೂಲೆ ಗುಂಪಾಗಿದೆ.
ಜನರಿಗೆ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ಜಾಗ ಹುಡುಕುವುದೇ ದೊಡ್ಡ ಸವಾಲಾಗಿದೆ. ಅವಳಿ ನಗರದಾದ್ಯಂದ ದೊಡ್ಡ ದೊಡ್ಡ ಕಟ್ಟಡಗಳಿವೆ. ಆದರೆ ಬಹುತೇಕ ವಾಣಿಜ್ಯ ಕಟ್ಟಡಗಳಿಗೆ ಪಾರ್ಕಿಂಗ್ ಸ್ಥಳಗಳೇ ಇಲ್ಲ. ಬಿಲ್ಡಿಂಗ್‌ಗಳ ಮುಂದಿನ ಫುಟ್‌ಪಾತ್ ಅಥವಾ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಬೇಕು. ಸಿಕ್ಕಸಿಕ್ಕಲ್ಲಿ ವಾಹನಗಳನ್ನು ನಿಲ್ಲಿಸುವುದು ಸಾಮಾನ್ಯವಾಗಿ ಹೋಗಿದೆ. ಇದಕ್ಕೆ ಪ್ರಮುಖ ಕಾರಣವೇ ಬೃಹತ್ ಕಟ್ಟಡಗಳು ಮತ್ತು ಐಷಾರಾಮಿ ಹೋಟೆಲ್‌ಗಳು.
ಹುಬ್ಬಳ್ಳಿಯ ಸುಮಾರು 300ಕ್ಕೂ ಹೆಚ್ಚು ಬೃಹತ್ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ. ಹೀಗಾಗಿ ಕಳೆದ 5 ವರ್ಷಗಳ ಹಿಂದೆಯೇ ಹು-ಧಾ ಮಹಾನಗರ ಪಾಲಿಕೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಟ್ಟಡಗಳ ಸರ್ವೆ ಮಾಡಿತ್ತು.
ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿಕೊಳ್ಳದಿದ್ದರೆ ಡೆಮಾಲಿಶ್ ಮಾಡುವ ಎಚ್ಚರಿಕೆಯನ್ನು ನೀಡಿತ್ತು. ಈ ಕುರಿತು ನಿಯಮ ಬಾಹಿರವಾಗಿ ನಿರ್ಮಿಸಲಾದ ಕಟ್ಟಡಗಳಿಗೆ ನೋಟೀಸ್ ಜಾರಿ ಮಾಡಲಾಗಿತ್ತು. ಆದರೆ ಅಲ್ಲಿಂದ ಇಲ್ಲಿಯವರೆಗೆ ಪಾಲಿಕೆಯ ಕ್ರಮ ಕೇವಲ ನೋಟಿಸ್ ನೀಡುವುದಕ್ಕೆ ಮಾತ್ರ ಸೀಮಿತವಾಗಿದೆ. ಇದರಿಂದಾಗಿ ಅವಳಿ ನಗರದ ಸಾರ್ವಜನಿಕರು ಪಾರ್ಕಿಂಗ್ ವ್ಯವಸ್ಥೆಗಾಗಿ ಪರದಾಡುವಂತಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ, ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಹಲವಾರು ವರ್ಷಗಳಿಂದ ವಾಹನ ದಟ್ಟಣೆ ಹೆಚ್ಚಾಗಿದೆ. ಅಲ್ಲದೇ ಪಾರ್ಕಿಂಗ್‌ಗೆ ಸ್ಥಳವೇ ಇಲ್ಲದೆ ವಾಹನ ಸವಾರರಿಗೆ ವಾಹನಗಳನ್ನು ಪಾರ್ಕ್ ಮಾಡುವುದೇ ದೊಡ್ಡ ಸವಾಲಾಗಿದೆ. ಇನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಸ್ತೆಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ವಾಹನ ಓಡಾಟವೇ ನಗರದಲ್ಲಿ ಕಷ್ಟ ಸಾಧ್ಯವಾಗಿದೆ. ಅಲ್ಲದೆ ದೊಡ್ಡ ದೊಡ್ಡ ಕಟ್ಟಡಗಳ ಕೆಳಗೆ ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿ ಮಾಡಲಾಗಿದ್ದರೂ 300ಕ್ಕೂ ಹೆಚ್ಚು ಕಟ್ಟಡಗಳಲ್ಲಿ ಬೈಕ್, ಕಾರುಗಳನ್ನ ಪಾರ್ಕ್ ಮಾಡುವುದಕ್ಕೆ ಜಾಗವೇ ಇಲ್ಲದಾಗಿದೆ. ಹಿಂದೆ ಕೊಟ್ಟ ಪಾಲಿಕೆಯ ನೋಟಿಸ್‌ಗೆ ಕಟ್ಟಡ ಮಾಲಿಕರು ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ.
ಮಹಾನಗರ ಪಾಲಿಕೆ ಸರ್ವೇ ಕಾರ್ಯವೇ ಸಂಪೂರ್ಣ ಕಾಲಹರಣವಾಗಿದ್ದು, ಇದರಲ್ಲಿ ಪ್ರಭಾವಿಗಳ ಆಟವಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಕುರಿತು ಗಮನಹರಿಸಬೇಕು. ಪಾಲಿಕೆಯವರು ನಗರದ ಜನದಟ್ಟಣೆ ಪ್ರದೇಶಗಳಲ್ಲಿ ಪಾರ್ಕಿಂಗ್ ಮಾಡೋಕೆ ಜಾಗವನ್ನು ಕೂಡ ಸಮರ್ಪಕವಾಗಿ ನಿಗದಿಪಡಿಸಿಲ್ಲ. ಇನ್ನು ಕೇವಲ ಬೀದಿ ಬದಿ ವ್ಯಾಪಾರಸ್ಥರ ಮೇಲೆ ದರ್ಪ ತೋರಿಸುವ ಪಾಲಿಕೆ ಅಧಿಕಾರಿಗಳು ಇನ್ನಾದರೂ ದೊಡ್ಡ ದೊಡ್ಡ ಕಟ್ಟಡಗಳ ಮಾಲೀಕರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ | Agnipath: ಅಗ್ನಿವೀರರು ಕರ್ತವ್ಯದಲ್ಲಿದ್ದಾಗ ಹುತಾತ್ಮರಾದರೆ ಸಿಗಲಿದೆ ಒಂದು ಕೋಟಿ ರೂ. ಪರಿಹಾರ