ಬೆಳಗಾವಿ: ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಧ್ಯಾಹ್ನದವರೆಗೂ ಯಾವೊಬ್ಬ ಸಿಬ್ಬಂದಿಯೂ ಬಾರದಿರುವ ವಿದ್ಯಮಾನ ಬೆಳಕಿಗೆ ಬಂದಿದೆ. ಇದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಥೆಯಾದರೂ ರಾಜ್ಯದ ಹಲವು ಕಡೆಗಳಲ್ಲಿ ಪರಿಸ್ಥಿತಿ ಇದೇ ರೀತಿ ಇದೆ ಎಂಬ ಆರೋಪವಿದೆ. ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ಕರೆ ತಂದ ಕುಟುಂಬ ವೈದ್ಯರಾಗಲೀ, ಸಿಬ್ಬಂದಿಗಳಾಗಲೀ ಇಲ್ಲದೆ ಪರದಾಡಿದೆ. ಕೊನೆಗೆ ಮಹಿಳೆಯನ್ನು ತಾಲೂಕು ಆಸ್ಪತ್ರೆಗೆ ಶಿಫ್ಟ್ ಮಾಡಬೇಕಾಯಿತು.
ಬೈಲಹೊಂಗಲ ತಾಲೂಕಿನ ಕಡತನಾಳ ಗ್ರಾಮದ ಗರ್ಭಿಣಿ ರತ್ನವ್ವ ಕಾದರವಳ್ಳಿ ಅವರು ತುಂಬು ಗರ್ಭಿಣಿಯಾಗಿದ್ದು ಪ್ರಸವದ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗುರುವಾರ ಸಂಗೊಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಕವಚ ಆಂಬ್ಯುಲೆನ್ಸ್ ಮೂಲಕ ಕರೆ ತರಲಾಯಿತು. ಆದರೆ ಆಸ್ಪತ್ರೆಗೆ ಬಂದು ನೋಡಿದರೆ ವೈದ್ಯರು ಬಿಡಿ ಸಿಬ್ಬಂದಿಯೂ ಇರಲಿಲ್ಲ.
ಆಂಬ್ಯುಲೆನ್ಸ್ ಮೂಲಕ ರತ್ನವ್ವ ಅವರನ್ನು ಆಸ್ಪತ್ರೆಗೆ ಕರೆ ತಂದು ನೋಡಿದರೆ ಅಲ್ಲಿ ಆಸ್ಪತ್ರೆಯ ಬಾಗಿಲೇ ತೆರೆದಿರಲಿಲ್ಲ. ಬಾಗಿಲಿಗೆ ಬೀಗವೂ ಹಾಕಿರಲಿಲ್ಲ. ಬಾಗಿಲು ತಳ್ಳಿ ಒಳಗೆ ಪ್ರವೇಶ ಮಾಡಿದರೆ ಇಡೀ ಆಸ್ಪತ್ರೆಯಲ್ಲಿ ಯಾರೂ ಇರಲಿಲ್ಲ. ಎಲ್ಲ ಕೋಣೆಗಳು, ಹಾಲ್‌ಗಳು ಖಾಲಿಯಾಗಿದ್ದವು. ಸುಮಾರು ಹೊತ್ತು ಕಾದರೂ ಯಾರೂ ಬಂದಿರಲಿಲ್ಲ.
ಒಂದು ಕಡೆ ಆಂಬ್ಯುಲೆನ್ಸ್‌ನಲ್ಲಿ ರತ್ನವ್ವ ಪ್ರಸವದ ನೋವಿನಿಂದ ಕಂಗೆಟ್ಟಿದ್ದರೆ ಒಳಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲೂ ಯಾರೂ ಇಲ್ಲದೆ ಪರದಾಡಬೇಕಾಯಿತು. ರತ್ನವ್ವ ಹೆರಿಗೆ ನೋವಿನಿಂದ ಬಳಲುತ್ತಿದ್ದರೂ ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಯತ್ತ ಸುಳಿಯಲಿಲ್ಲ.
ಕೊನೆಗೆ ಬೇರೆ ದಾರಿಯೇ ಕಾಣದಿದ್ದಾಗ ಸ್ಥಳೀಯರ ಸಹಕಾರದಿಂದ ಬೈಲಹೊಂಗಲ ತಾಲೂಕಾಸ್ಪತ್ರೆಗೆ ರತ್ನವ್ವ ಅವರನ್ನು ಶಿಫ್ಟ್ ಮಾಡಲಾಯಿತು. ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಕುಟುಂಬದವರು ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ | ರಕ್ತದ ಮಾದರಿ ಪಡೆಯುವಾಗ ನವಜಾತ ಶಿಶು ಸಾವು; ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಆರೋಪ