ಹುಬ್ಬಳ್ಳಿ: ನಗರದ ಬಿವಿಬಿ ಕಾಲೇಜು ಆವರಣದಲ್ಲಿ ನೇಹಾ ಹಿರೇಮಠ (Neha Hiremath) ಅವರನ್ನು ಭೀಕರವಾಗಿ ಕೊಲೆಗೈದ ಆರೋಪಿ ಫಯಾಜ್ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ನೇಹಾ ಕೊಲೆ ಖಂಡಿಸಿ ಹಲವೆಡೆ ಪ್ರತಿಭಟನೆ ನಡೆಸಲಾಗುತ್ತಿದೆ. ಫಯಾಜ್ (Fayaz) ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಜನ ಆಗ್ರಹಿಸುತ್ತಿದ್ದಾರೆ. ಇದರ ಬೆನ್ನಲ್ಲೇ, “ನೇಹಾಳನ್ನು ಕೊಲೆಗೈದ ಫಯಾಜ್‌ನನ್ನು ಎನ್‌ಕೌಂಟರ್ ಮಾಡಬೇಕು. ಇಲ್ಲದಿದ್ದರೆ ನನ್ನನ್ನೇ ಕೊಂದು ಬಿಡಿ” ಎಂಬುದಾಗಿ ನೇಹಾ ಹಿರೇಮಠ ಅವರ ತಂದೆ ನಿರಂಜನ್ ಹಿರೇಮಠ (Niranjan Hiremath) ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮಗಳ ಸಾವಿನ ಕುರಿತು ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯಿಸಿದ ಅವರು, “ನೇಹಾ ಹೆಸರಿನಲ್ಲಿ ಕಠಿಣ ಕಾನೂನು ಜಾರಿಗೆ ತರಬೇಕು. ವ್ಯವಸ್ಥಿತ ಷಡ್ಯಂತ್ರದ ಮೂಲಕ ನನ್ನ ಮಗಳನ್ನು ಕೊಲೆ ಮಾಡಲಾಗಿದೆ. ಫಯಾಜ್ ಮಾತ್ರವಲ್ಲ, ಆತನ ತಂದೆ, ತಾಯಿ, ಸಹೋದರಿ ಸೇರಿ ಹಲವರು ಯೋಜನೆ ರೂಪಿಸಿಯೇ ಹತ್ಯೆ ಮಾಡಿದ್ದಾರೆ. ಹಾಗಾಗಿ, ಅವರ ವಿರುದ್ಧವೂ ತನಿಖೆಯಾಗಬೇಕು. ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂಬುದಾಗಿ ಒತ್ತಾಯಿಸಿದ್ದಾರೆ.
“ನೇಹಾ ಹತ್ಯೆಯ ಕುರಿತು ಸಮಗ್ರವಾಗಿ ತನಿಖೆ ನಡೆಸದ ಹುಬ್ಬಳ್ಳಿ-ಧಾರವಾಡ ಕಮಿಷನರ್ ಅವರನ್ನು ಕೂಡಲೇ ಎತ್ತಂಗಡಿ ಮಾಡಬೇಕು. ದಕ್ಷ ಅಧಿಕಾರಿಯನ್ನು ನೇಮಿಸಿ ಸಮಗ್ರವಾಗಿ ತನಿಖೆ ಮಾಡಿಸಬೇಕು. ಹಾಗೆಯೇ, ಕೊಲೆಗಡುಕನನ್ನು ಎನ್‌ಕೌಂಟರ್ ಮಾಡಬೇಕು. ಗೃಹ ಸಚಿವರೇ, ನಿಮ್ಮ ಬಗ್ಗೆ ಮಾತನಾಡಿದ್ದೇನೆ. ಬೇಡವಾದರೆ, ನನ್ನನ್ನೂ ಎನ್‌ಕೌಂಟರ್ ಮಾಡಿಸಿ” ಎಂಬುದಾಗಿ ನಿರಂಜನ್ ಹಿರೇಮಠ ಅವರು ಹೇಳಿದ್ದಾರೆ.
14 ಬಾರಿ ಇರಿದು ಕೊಂದ ಫಯಾಜ್
ವಿದ್ಯಾರ್ಥಿನಿ ನೇಹಾಳಿಗೆ ಪಾಗಲ್ ಫಯಾಜ್ 9 ಬಾರಿ ಅಲ್ಲ, 14 ಬಾರಿ ಇರಿದು ಕೊಲೆ ಮಾಡಿದ್ದಾನೆ ಎಂಬುದಾಗಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಹಿರಂಗವಾಗಿದೆ. ಇದಕ್ಕೂ ಮೊದಲು, ನೇಹಾ ಹಿರೇಮಠ್‌ಗೆ ಫಯಾಜ್ 9 ಬಾರಿ ಚಾಕು ಇರಿದು ಕೊಲೆ ಮಾಡಿದ್ದ ಎಂಬುದಾಗಿ ಹೇಳಲಾಗಿತ್ತು. ಆದರೆ, ಈಗ 14 ಬಾರಿ ಚಾಕು ಇರಿದು ಕೊಲೆ ಮಾಡಿದ್ದಾಣೆ ಎಂದು ಮರಣೋತ್ತರ ವರದಿ ತಿಳಿಸಿದೆ.
ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನೇಹಾ ಹಿರೇಮಠ ಮೇಲೆ ದಾಳಿ ಮಾಡಿದ್ದ ಫಯಾಜ್ ಕೇವಲ 30 ಸೆಕೆಂಡ್‌ಗಳಲ್ಲಿ 14 ಬಾರಿ ಇರಿದಿದ್ದಾನೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ನೇಹಾ ದೇಹದ ಮೇಲೆ 14 ಗಾಯಗಳ ಗುರುತು ಪತ್ತೆಯಾಗಿದೆ. ಪ್ರೀತಿ ನಿರಾಕರಿಸಿದ ನೇಹಾಳ ಹೃದಯಕ್ಕೆ ಮೊದಲು ಚಾಕು ಇರಿದ ಆತ, 30 ಸೆಕೆಂಡ್‌ಗಳಲ್ಲೇ 14 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕತ್ತಿನ ಬಳಿ ಚಾಕು ಇರಿಯುತ್ತಿದ್ದಂತೆ ರಕ್ತನಾಳ ಕತ್ತರಿಸಿದ್ದು, ಇದರಿಂದ ತೀವ್ರ ರಕ್ತಸ್ರವಾ ಉಂಟಾಗಿದೆ. ಅತಿಯಾದ ರಕ್ತಸ್ರಾವದಿಂದ ನೇಹಾ ಹಿರೇಮಠ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Neha Murder Case: ನೇಹಾ ಹಿರೇಮಠ ಸಾವಿಗೆ ನ್ಯಾಯ ಸಿಗಲಿ ಎಂದ ದೊಡ್ಮನೆ ಸೊಸೆ