Site icon Vistara News

Udupi Murder: ನೇಜಾರು ಕೊಲೆ ಪ್ರಕರಣ; ಮೃತರ ಕುಟುಂಬಸ್ಥರಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಸಾಂತ್ವನ

Laxmi Hebbalkar in udupi

ಉಡುಪಿ: ಒಂದೇ ಕುಟುಂಬದ ನಾಲ್ವರ ಕೊಲೆ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮೃತರ ಕುಟುಂಬಸ್ಥರ ಉಡುಪಿಯ ನೇಜಾರು ನಿವಾಸಕ್ಕೆ (Udupi Murder) ಶುಕ್ರವಾರ ಭೇಟಿ ನೀಡಿ ಸಾಂತ್ವನ ಹೇಳಿದರು. ಮೃತ ಹಸೀನಾ ಪತಿ ನೂರ್ ಮೊಹಮದ್ ಹಾಗೂ ಅವರ ಮಗ ಆಸಾದ್ ಹಾಗೂ ಕುಟುಂಬದ ಇತರ ಸದಸ್ಯರನ್ನು ಭೇಟಿಯಾದ ಸಚಿವೆ, ಅವರಿಗೆ ಸಾಂತ್ವನ ಹೇಳಿ, ಕುಟುಂಬಕ್ಕೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರು.

ನಂತರ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಒಂದೇ ಕುಟುಂಬದ ನಾಲ್ವರು ಸದಸ್ಯರನ್ನು ಅಮಾನುಷವಾಗಿ ಕೊಂದ ವ್ಯಕ್ತಿ ರಾಕ್ಷಸ ಕೃತ್ಯ ಎಸಗಿದ್ದಾನೆ. ಮೃತರ ಕುಟುಂಬದ ಜತೆ ಸರ್ಕಾರವಿದ್ದು, ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದೇನೆ. ಆರೋಪಿಯನ್ನು ತ್ವರಿತವಾಗಿ ಬಂಧಿಸುವ ಮೂಲಕ ಪೊಲೀಸ್ ಇಲಾಖೆ ಒಳ್ಳೆಯ ಕೆಲಸ ಮಾಡಿದ್ದು, ಕುಟುಂಬಕ್ಕೆ ಆದಷ್ಟು ಬೇಗ ನ್ಯಾಯ ದೊರಕಿಸಲು ಪ್ರಯತ್ನ ಮಾಡುತ್ತೇವೆ ಎಂದರು.

ಉಡುಪಿ ಶಾಂತಿ ಪ್ರಿಯ ಜಿಲ್ಲೆ, ಇಂತಹ ಜಿಲ್ಲೆಯಲ್ಲಿ ಹೀಗಾಗಬಾರದಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮ ಕೈಗೊಳ್ಖುತ್ತೇವೆ ಎಂದ ಅವರು, ಆರೋಪಿ ಸೈಕೋ ರೀತಿಯಲ್ಲಿ ವರ್ತಿಸಿದ್ದಾನೆ. 20 ನಿಮಿಷದಲ್ಲಿ ಕೃತ್ಯವೆಸಗಿದ ಆತನ ಮೆಂಟಲ್ ಸ್ಟೇಟಸ್ ಯಾವ ರೀತಿ ಇರಬಹುದು? ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದ ಮೂಲಕ ತನಿಖೆಗೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಸೂಕ್ತ ರೀತಿಯಲ್ಲಿ ತನಿಖೆ ಮಾಡಿಸಲಾಗುವುದು ಎಂದರು.

ನಾನು ಬೆಳಗಾವಿಯಲ್ಲಿದ್ದರೂ ಸಂತ್ರಸ್ತ ಕುಟುಂಬದ ಜತೆಗೆ, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಮೃತ ಮಹಿಳೆಯ ಸಹೋದರರಿಗೆ ಕರೆ ಮಾಡಿ ಸಂಪೂರ್ಣ ಮಾಹಿತಿ ಪಡೆದಿದ್ದೆ ಎಂದು ಸಚಿವೆ ಹೇಳಿದರು.

ಇದನ್ನೂ ಓದಿ | ‌Zameer Ahmed : ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ; ಉಲ್ಟಾ ಹೊಡೆದ ಜಮೀರ್!

ಈ ವೇಳೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಸನ್ನ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಉಡುಪಿ ಹತ್ಯೆಗಳನ್ನು ಸಂಭ್ರಮಿಸಿದ ಕಿಡಿಗೇಡಿಗಳು, ಕೇಸ್‌

ಉಡುಪಿ: ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ (Udupi Murder) ಬರ್ಬರತೆಯನ್ನು ಕಂಡು ನಾಡಿನ ಜನ ಮರುಗುತ್ತಿದ್ದರೆ, ಕೆಲವು ಕಿಡಿಗೇಡಿಗಳು ಹತ್ಯೆಯನ್ನು ಸಂಭ್ರಮಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿಬಿಟ್ಟಿದ್ದಾರೆ. ಇದೀಗ ಅವರ ಮೇಲೆ ಕೇಸು ದಾಖಲಿಸಲಾಗಿದೆ.

ʼಹಿಂದೂ ಮಂತ್ರʼ ಹೆಸರಿನ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಸಂದೇಶ ಪೋಸ್ಟ್ ಮಾಡಲಾಗಿದೆ. ಹತ್ಯೆ ಮಾಡಿದ ಕ್ರೂರಿ ಪ್ರವೀಣ್ ಅರುಣ್ ಚೌಗುಲೆಯ ತಲೆಗೆ ಕಿರೀಟ ತೊಡಿಸಿದಂತೆ ಕಾಣಿಸಲಾಗಿರುವ ಪೋಸ್ಟರ್‌ ಮಾಡಲಾಗಿದ್ದು, ಅದರಲ್ಲಿ ʼ15 ನಿಮಿಷದಲ್ಲಿ ನಾಲ್ಕು ಮುಸ್ಲಿಮರನ್ನು ಕೊಂದು ವಿಶ್ವ ದಾಖಲೆ ನಿರ್ಮಿಸಿದ್ದಾನೆʼ ಎನ್ನುವ ಪ್ರಚೋದನಕಾರಿ ಶೀರ್ಷಿಕೆ ಕೊಡಲಾಗಿದೆ.

ʼಉಡುಪಿಯ ಹುಡುಗಿಯರ ವಿಚಾರದಲ್ಲಿ ಯಾರೂ ಬಂದಿಲ್ಲ, ಆದ್ದರಿಂದ ನಾವು ಈ ವಿಚಾರಕ್ಕೆ ಬರುವುದಿಲ್ಲʼ ಎನ್ನುವ ಅಡಿಬರಹ ನೀಡಲಾಗಿದೆ. ಸದ್ಯ ʼಹಿಂದೂ ಮಂತ್ರʼ ಇನ್ಸ್ಟಾಗ್ರಾಮ್ ಪೇಜ್ ಮೇಲೆ ಉಡುಪಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿ ಪ್ರವೀಣ್‌ಗೆ ನ್ಯಾಯಾಂಗ ಬಂಧನ

ಉಡುಪಿಯ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಅತ್ಯಂತ ಬರ್ಬರವಾಗಿ ಚೂರಿಯಿಂದ ಇರಿದು ಕೊಲೆ ಮಾಡಿದ ಹಂತಕ (Killer Arrest) ಪ್ರವೀಣ್‌ ಅರುಣ್‌ ಚೌಗುಲೆಯನ್ನು ಉಡುಪಿಯ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ 14 ದಿನಗಳ ಪೊಲೀಸ್‌ ಕಸ್ಟಡಿಗೆ (14 day Police Custody) ಒಪ್ಪಿಸಿದೆ. ಈ ನಡುವೆ ಈ ಕೊಲೆಗೆ ಪ್ರವೀಣ್‌ ಚೌಗುಲೆಯ ಟಾರ್ಗೆಟ್‌ ಆಗಿದ್ದದ್ದು ನೂರ್‌ ಮಹಮದ್‌ ಅವರ ಎರಡನೇ ಮಗಳು, ಏರ್‌ ಹೋಸ್ಟೆಸ್‌ ಆಗಿರುವ ಅಯ್ನಾಜ್‌ ಎನ್ನುವುದು ಸ್ಪಷ್ಟವಾಗಿದೆ. ಇದನ್ನು ಸ್ವತಃ ಪ್ರವೀಣ್‌ ಚೌಗುಲೆ ಬಾಯಿ ಬಿಟ್ಟಿದ್ದಾನೆ.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಉಡುಪಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಾರಾಷ್ಟ್ರದ ಸಾಂಗ್ಲಿ ಮೂಲದ ಪ್ರವೀಣ್‌ ಅರುಣ್‌ ಚೌಗುಲೆಯನ್ನು ಪೊಲೀಸರು ಪ್ರಾಥಮಿಕ ಹಂತದ ವಿಚಾರಣೆಯನ್ನು ನಡೆಸಿದ್ದಾರೆ. ಬಳಿಕ ಬುಧವಾರ ಆತನನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಯಿತು.

ಕಳೆದ ಭಾನುವಾರ ಮುಂಜಾನೆ ಕೆಮ್ಮಣ್ಣು ನೇಜಾರಿನ ತೃಪ್ತಿ ನಗರದಲ್ಲಿರುವ ನೂರ್‌ ಮಹಮದ್‌ ಅವರ ಮನೆಗೆ ನುಗ್ಗಿದ ಪ್ರವೀಣ್‌ ಅರುಣ್‌ ಚೌಗುಲೆ ನೂರ್‌ ಮಹಮದ್‌ ಅವರ ಪತ್ನಿ ಹಸೀನಾ (45), ಪುತ್ರಿಯರಾದ ಅಫ್ನಾನ್‌ (23), ಅಯ್ನಾಜ್‌ (21) ಮತ್ತು ಮಗ ಅಸೀಮ್‌ (14)ನನ್ನು ಕೊಂದು ಹಾಕಿದ್ದ. ಕೊಲೆಯಾದವರ ಪೈಕಿ ಅಫ್ನಾನ್‌ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದರೆ, ಅಯ್ನಾಜ್‌ ಏರ್‌ ಹೋಸ್ಟೆಸ್‌ ಆಗಿ ಕೆಲಸ ಮಾಡುತ್ತಿದ್ದಳು. ಅಸೀಂ ಏಳನೇ ತರಗತಿಯಲ್ಲಿ ಓದುತ್ತಿದ್ದ.

ಇದನ್ನೂ ಓದಿ: Udupi Murder : ಮಹಜರಿನ ವೇಳೆ ಮುತ್ತಿಗೆ; ಹಂತಕನನ್ನು 30 ಸೆಕೆಂಡ್‌ ನಮ್ಮ ಕೈಗೆ ಕೊಡಿ ಎಂದ ಜನ

ಪ್ರವೀಣ್‌ ಚೌಗುಲೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಖಾಸಗಿ ಸೆಕ್ಯೂರಿಟಿ ಏಜೆನ್ಸಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಅವನ ಟಾರ್ಗೆಟ್‌ ಆಗಿದ್ದದ್ದು ಅಯ್ನಾಜ್‌ ಎಂದು ತನಿಖೆಯ ವೇಳೆ ತಿಳಿದುಬಂದಿದೆ. ಆಕೆಯನ್ನು ಕೊಲ್ಲಲೆಂದು ಹೋದವನು ತನ್ನ ಕೃತ್ಯಕ್ಕೆ ಸಾಕ್ಷಿಯಾದ ಇತರ ಮೂವರನ್ನು ಕೂಡಾ ನಿರ್ದಾಕ್ಷಿಣ್ಯವಾಗಿ ಕೊಂದು ಹಾಕಿದ್ದಾನೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version