ವಿಧಾನಪರಿಷತ್: ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲೂ ಮುಂದಿನ ವರ್ಷದಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರಲಿದೆ. ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ವಿಧಾನ ಪರಿಷತ್‌ನಲ್ಲಿ ಹೇಳಿದ್ದಾರೆ. ಸದಸ್ಯ ಗೋವಿಂದರಾಜು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ʻʻಶಾಲಾ ಪೂರ್ವ ಶಿಕ್ಷಣಕ್ಕಾಗಿ ಆರು ಸಮಿತಿಗಳ ರಚನೆಗಳನ್ನು ರಚಿಸಲಾಗಿದೆ. ಸಮಿತಿಗಳು ನೀಡುವ ಶಿಫಾರಸಿನಂತೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗುತ್ತದೆ. ʻʻಅಂಗನವಾಡಿಗಳಲ್ಲಿ ಎನ್ಇಪಿಯಡಿ ಒಂದು ಪಠ್ಯಕ್ರಮ ರಚಿಸಿ ಕಲಿಕೆಗೆ ಅವಕಾಶ ನೀಡಲಾಗುತ್ತದೆ. ಮೊದಲ ವರ್ಷ ರಾಜ್ಯದ 20 ಸಾವಿರ ಅಂಗನವಾಡಿಗಳಲ್ಲಿ ಎನ್ಇಪಿ ಜಾರಿಗೆ ನಿರ್ಧರಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಂದಲೇ ಎನ್ಇಪಿ ಪಠ್ಯ ಬೋಧನೆ ಮಾಡಿಸಲಾಗುತ್ತದೆ. ಇದಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ 1 ವರ್ಷದವರೆಗೆ ಎನ್ಇಪಿಯನ್ವಯ ತರಬೇತಿ ನೀಡಲಾಗುತ್ತದೆʼʼ ಎಂದು ಅವರು ಹೇಳಿದರು.
ರಾಯಚೂರು ಕಲುಷಿತ ನೀರು ಪ್ರಕರಣ
ರಾಯಚೂರಿನಲ್ಲಿ ಕಲುಷಿತ ನೀರು ಸೇವಿಸಿ ಐವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಪರಿಷತ್‌ನಲ್ಲಿ ಕೇಳಿದ ಪ್ರಶ್ನೆಗೆ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಉತ್ತರ ನೀಡಿದರು. ʻʻಕಲುಷಿತ ನೀರು ಸೇವಿಸಿ ಮೃತರಾದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದಲ್ಲಿ ಏಳು ಜನ ಸತ್ತಿದ್ದಾರೆ. ಐವರು ಕಲುಷಿತ ನೀರು ಸೇವನೆಯಿಂದ ಮೃತರಾಗಿದ್ದರೆ, ಇಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಲುಷಿತ ನೀರು ಸೇವಿಸಿ ಮೃತಪಟ್ಟವರಿಗೆ ತಲಾ 15 ಲಕ್ಷ ರೂ. ಪರಿಹಾರ ಕೊಡಲು ಕ್ರಮ ವಹಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್, ಮತ್ತೊಬ್ಬ ಸಿಬ್ಬಂದಿ ಕೃಷ್ಣ ಅವರನ್ನು ಅಮಾನತು ಮಾಡಲಾಗಿದೆ ಎಂದರು.
35 ಟ್ಯಾಂಕ್ ಗಳ ಶುದ್ಧೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಟ್ಯಾಂಕ್ ಗಳ ಶುದ್ಧೀಕರಣಕ್ಕೆ 5 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು. ಈ ವೇಳೆ ಕಾಂಗ್ರೆಸ್ ಸದಸ್ಯರು ಮೃತರ ಕುಟುಂಬಗಳಿಗೆ ಪರಿಹಾರ ಹೆಚ್ಚಿಸುವಂತೆ ಒತ್ತಾಯಿಸಿದರು.