Site icon Vistara News

Netaji Statue | ನೇತಾಜಿ ಪ್ರತಿಮೆ ಕೆತ್ತಿದ್ದು ಕನ್ನಡಿಗ ಶಿಲ್ಪಿ ಅರುಣ್‌ ಯೋಗಿರಾಜ್ ತಂಡ

Netaji Statue

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂಜೆ ಇಂಡಿಯಾ ಗೇಟ್‌ನಲ್ಲಿ ಅನಾವರಣ ಮಾಡಿದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ (Netaji Statue) ಮೂರ್ತಿಯನ್ನು ನಮ್ಮ ರಾಜ್ಯದ ಹೆಮ್ಮೆಯ ಶಿಲ್ಪಕಲಾವಿದ ಅರುಣ್‌ ಯೋಗಿರಾಜ್ ನೇತೃತ್ವದ ಶಿಲ್ಪಿಗಳ ತಂಡ ಕೆತ್ತಿದೆ.

ಕೇದಾರನಾಥದಲ್ಲಿ ಆದಿ ಗುರು ಶ್ರೀ ಶಂಕರಾಚಾರ್ಯರ ಪ್ರತಿಮೆಯನ್ನು ಕೆತ್ತಿ ಪ್ರಪಂಚದ ಗಮನ ಸೆಳೆದ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರಿಗೆ ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ಪ್ರತಿಮೆಯನ್ನು ಕೆತ್ತುವ ಜವಾಬ್ದಾರಿಯನ್ನು ಕೇಂದ್ರ ಸಂಸ್ಕೃತಿ ಸಚಿವಾಲಯ ವಹಿಸಿತ್ತು.

ಸುಭಾಶ್ಚಂದ್ರ ಬೋಸ್‌ ಪ್ರತಿಮೆಯೊಂದಿಗೆ ಅರುಣ್‌

ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆಯೇ ಸುಭಾಶ್ಚಂದ್ರ ಬೋಸ್‌ ಅವರ ಪ್ರತಿಮೆ ನಿರ್ಮಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು. ಶ್ರೀ ಶಂಕರಾಚಾರ್ಯರ ಪ್ರತಿಮೆಯನ್ನು ನಿರ್ಮಿಸುವ ಜವಾಬ್ದಾರಿಯನ್ನು ಪ್ರಧಾನಿಯೇ ಅವರಿಗೆ ವಹಿಸಿದ್ದರು.

ರಾಷ್ಟ್ರ ರಾಜಧಾನಿಯ ಐತಿಹಾಸಿಕ ಸ್ಥಳ ಇಂಡಿಯಾ ಗೇಟ್‌ನ ಅಮರ ಜವಾನ್ ಜ್ಯೋತಿ ಹಿಂಭಾಗದಲ್ಲಿನ ಬೃಹತ್ ಮಂಟಪದಲ್ಲಿ ಬೋಸ್‌ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಬೋಸ್‌ ಅವರ ಪ್ರತಿಮೆಯನ್ನು ಇಂಡಿಯಾ ಗೇಟ್‌ ಬಳಿ ಸ್ಥಾಪಿಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿರುವ ಕೊಡುಗೆಯನ್ನು ಗೌರವಿಸಲಾಗುವುದು ಎಂದು ಪ್ರಧಾನಿ ಮೋದಿ ಅವರು, ಬೋಸ್‌ ಅವರ 125ನೇ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಘೋಷಿಸಿದ್ದರು. ಅದರಂತೆಯೇ ಗುರುವಾರ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ.

ಕಳೆದ ಏಪ್ರಿಲ್‌ನಲ್ಲಿಯೇ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದ ಅರುಣ್‌ ಯೋಗಿರಾಜ್‌ ಸುಭಾಶ್ಚಂದ್ರ ಬೋಸ್‌ ಅವರ ಪ್ರತಿಮೆಯ ಮಾದರಿಯನ್ನು ಕೊಟ್ಟು, ಅವರ ಒಪ್ಪಿಗೆ ಪಡೆದಿದ್ದರು. ಒಂದೇ ಕಪ್ಪು ಗ್ರ್ಯಾನೆಟ್‌ ಕಲ್ಲಿನಲ್ಲಿ ೨೮ ಅಡಿ ಎತ್ತರದ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಕಲ್ಲನ್ನು ತೆಲ್ಲಂಗಾಣದಿಂದ ತರಲಾಗಿದ್ದು, ದೆಹಲಿಯಲ್ಲಿಯೇ ಕೆತ್ತನೆ ಕಾರ್ಯ ನಡೆದಿತ್ತು. ೨೮೦ ಮೆಟ್ರಿಕ್‌ ಟನ್‌ನ ಪ್ರತಿಮೆ ಅಳವಡಿಸಲಾಗಿದೆ.

ಏಪ್ರಿಲ್‌ನಲ್ಲಿ ಪ್ರಧಾನಿ ಮೋದಿ ಟ್ವೀಟ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ್ದರು.

ಅರುಣ್‌ ಯೋಗಿರಾಜ್‌, ನ್ಯಾಷನಲ್‌ ಗ್ಯಾಲರಿ ಆಫ್‌ ಮಾರ್ಡನ್‌ ಆರ್ಟ್‌ (ಎನ್‌ಜಿಎಂಎಂ) ಜತೆಗೂಡಿ ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಆಗಸ್ಟ್‌ 15ರ ಒಳಗೆ ಈ ಕಾರ್ಯವನ್ನು ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿತ್ತಾದರೂ ಒಂದಿಷ್ಟು ತಡವಾಗಿತ್ತು. 20 ರಿಂದ 25 ಶಿಲ್ಪಿಗಳು ಅರುಣ್‌ ಅವರಿಗೆ ಈ ಕಾರ್ಯದಲ್ಲಿ ನೆರವಾಗಿದ್ದರು. ಪ್ರತಿಮೆ ಕೆತ್ತಲು ಶಿಲ್ಪಿಗಳು ೨೬ ಸಾವಿರ ಗಂಟೆ ವ್ಯಯಿಸಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಯಾರು ಈ ಅರಣ್‌ ಯೋಗಿರಾಜ್‌?

ಮೈಸೂರಿನ ಖ್ಯಾತ ಶಿಲ್ಪಿಗಳ ಕುಟುಂಬದಿಂದ ಬಂದವರು ಅರುಣ್‌ ಯೋಗಿರಾಜ್‌. ಅವರ ತಂದೆ ಯೋಗಿರಾಜ್‌ ಕೂಡ ನುರಿತ ಶಿಲ್ಪಿಯಾಗಿದ್ದಾರೆ. ಅರುಣ್‌ ಅವರ ಅಜ್ಜ ಬಸವಣ್ಣ ಶಿಲ್ಪಿ ಅವರು ಮೈಸೂರಿನ ರಾಜಾಶ್ರಯ ಪಡೆದಿದ್ದರು. 37 ವರ್ಷದ ಅರುಣ್‌, ಬಾಲ್ಯದಿಂದಲೇ ಕೆತ್ತನೆಯಲ್ಲಿ ತೊಡಗಿಕೊಂಡವರು. ಆದರೆ ಎಂಬಿಎ ಮಾಡಿದ ನಂತರ ಅವರು ಕೆಲ ಕಾಲ ಖಾಸಗಿಕಂಪನಿಯೊಂದರಲ್ಲಿ ಕೆಲಸ ಮಾಡಿದರು. ಆದರೆ ಕೆತ್ತನೆಯ ವೃತ್ತಿಯ ಸೆಳೆತದಿಂದ ಅವರಿಗೆ ಬಿಡಿಸಿಕೊಳ್ಳಲಾಗಲಿಲ್ಲ. ಹೀಗಾಗಿ 2008 ರಿಂದ ಮತ್ತೆ ಕೆತ್ತನೆಯ ವೃತ್ತಿಯನ್ನು ಮುಂದುವರಿಸಿದ್ದರು.

ಇದನ್ನೂ ಓದಿ| 31 ಅಡಿ ಎತ್ತರದ ಬೃಹತ್‌ ಹನುಮಾನ್‌ ವಿಗ್ರಹ ಪ್ರತಿಷ್ಠಾಪನೆಗೆ ಸಿದ್ಧ

ಮೈಸೂರಿನಲ್ಲಿನ ಸ್ವಾಮಿ ರಾಮಕೃಷ್ಣ ಪರಮಹಂಶರ ಬಿಳಿ ಅಮೃತ ಶಿಲೆಯ ಮೂರ್ತಿ, ಆರು ಅಡಿ ಎತ್ತರದ ಬೃಹತ್‌ ನಂದಿಯ ಏಕಶಿಲೆಯ ಪ್ರತಿಮೆ, ಆರು ಅಡಿ ಎತ್ತರದ ಬನಶಂಕರಿ ದೇವಿ ಮೂರ್ತಿ, ಮೈಸೂರಿನ ಅರಸು ಜಯಚಾಮರಾಜೇಂದ್ರ ವಡೇಯರ್‌ ಅವರ 14.5 ಅಡಿ ಎತ್ತರದ ಬಿಳಿ ಅಮೃತ ಶಿಲೆಯ ಪ್ರತಿಮೆ, ಮೈಸೂರು ವಿವಿ ಸೋಪ್‌ ಸ್ಟೋನ್‌ ಕಲಾಶಿಲ್ಪ ಹೀಗೆ ಹಲವಾರು ಮೂರ್ತಿ, ಪ್ರತಿಮೆಗಳನ್ನು ನಿರ್ಮಿಸಿದ ಅವರಿಗೆ ಕಳೆದ ವರ್ಷ ಶ್ರೀ ಶಂಕರರ ಪ್ರತಿಮೆ ನಿರ್ಮಿಸುವ ಅವಕಾಶ ದೊರೆತಿತ್ತು. ದೇಶದ ಬೇರೆ ಬೇರೆ ಶಿಲ್ಪಿಗಳೊಂದಿಗೆ ಸ್ಪರ್ಧಿಸಿ ಅರುಣ್‌ ಈ ಅವಕಾಶವನ್ನು ತಮ್ಮದಾಗಿಸಿಕೊಂಡಿದ್ದರು.
ಈಗಾಗಲೇ ಹಲವಾರು ಸಂಘಸಂಸ್ಥೆಗಳು ಅರುಣ್‌ ಅವರನ್ನು ಸನ್ಮಾನಿಸಿವೆ, ಗೌರವಿಸಿದೆ. ಮೈಸೂರಿನ ರಾಜ ಮನೆತನ ಕೂಡ ವಿಶೇಷ ಗೌರವ ಸಲ್ಲಿಸಿದೆ.

ಇದನ್ನೂ ಓದಿ | Netaji Statue | ಇಂಡಿಯಾ ಗೇಟ್‌ನ ನೇತಾಜಿ ಪ್ರತಿಮೆ ಕೆತ್ತನೆಗೆ ಶಿಲ್ಪಿಗಳು ತೆಗೆದುಕೊಂಡಿದ್ದು 26 ಸಾವಿರ ಗಂಟೆ!

Exit mobile version