ನವದೆಹಲಿ: ಕೇಂದ್ರೀಯ ಮೀಸಲು ಪೊಲೀಸ್ ಪಡೆಯು (ಸಿಆರ್‌ಪಿಎಫ್) 9,212 ಕಾನ್ಸ್‌ಟೆಬಲ್ (ಟೆಕ್ನಿಕಲ್ ಮತ್ತು ಟ್ರೇಡ್ಸ್‌ಮನ್) ನೇಮಕಕ್ಕೆ (CRPF Recruitment) ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ನಡೆಯಲಿದೆ ಎಂದು ಸ್ಪಷ್ಟ ನಿಲುವು ತಿಳಿಸಿದೆ. ಆಯಾ ಸ್ಥಳೀಯ ಭಾಷೆಯಲ್ಲಿಯೇ ಸಿಆರ್‌ಪಿಎಫ್ ನೇಮಕಾತಿ ಪರೀಕ್ಷೆ ನಡೆಸಬೇಕು ಎಂದು ಕರ್ನಾಟಕ, ತೆಲಂಗಾಣ, ತಮಿಳುನಾಡಿನಲ್ಲಿ ಆಗ್ರಹ ಕೇಳಿಬರುತ್ತಿರುವ ಮಧ್ಯೆಯೇ ಸಿಆರ್‌ಪಿಎಫ್ ಸ್ಪಷ್ಟನೆ ನೀಡಿದೆ. ಹಾಗಾಗಿ, ಜೂನ್ 1ರಿಂದ 13ರವರೆಗೆ ನಡೆಯುವ ಪರೀಕ್ಷೆಯು ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಮಾತ್ರ ನಡೆಯುವುದು ಖಚಿತ ಎಂದೇ ಹೇಳಲಾಗುತ್ತಿದೆ.
“ಸಿಆರ್‌ಪಿಎಫ್‌ನ ಸಿಟಿ/ಜಿಡಿ ಸೇರಿ ಹಲವು ಹುದ್ದೆಗಳಿಗೆ ಇದುವರೆಗೆ ನಡೆದ ಯಾವುದೇ ಲಿಖಿತ ಪರೀಕ್ಷೆಗಳು ಕನ್ನಡ ಹಾಗೂ ಹಿಂದಿ ಹೊರತುಪಡಿಸಿ ಯಾವುದೇ ಸ್ಥಳೀಯ ಭಾಷೆಯಲ್ಲಿ ನಡೆದಿಲ್ಲ. ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ನಡೆದ ಈ ಪರೀಕ್ಷೆಗಳು ಸುಗಮವಾಗಿಯೇ ನಡೆದಿದ್ದವು. ಸಿಆರ್‌ಪಿಎಫ್ ಇತಿಹಾಸದಲ್ಲಿ ಯಾವಾಗಲೂ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ನಡೆಸಿಲ್ಲ” ಎಂದು ಸಿಆರ್‌ಪಿಎಫ್ ಸ್ಪಷ್ಟಪಡಿಸಿದೆ. ಕರ್ನಾಟಕದಲ್ಲಿ ಸಿಆರ್‌ಪಿಎಫ್‌ನ 466 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಸಿಆರ್‌ಪಿಎಫ್ ಸ್ಪಷ್ಟನೆ
ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ನಡೆಸುತ್ತಿರುವುದಕ್ಕೆ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಈಗಾಗಲೇ ವಿರೋಧ ವ್ಯಕ್ತವಾಗಿದೆ. ಕರ್ನಾಟಕದಲ್ಲಿ ಪ್ರತಿಪಕ್ಷಗಳ ನಾಯಕರಾದ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕೇಂದ್ರ ಸರ್ಕಾರ ತನ್ನ ಸುಪರ್ದಿಯಲ್ಲಿ ನಡೆಸುವ ಎಲ್ಲ ನೇಮಕಾತಿ ಪರೀಕ್ಷೆಗಳನ್ನು ಹಿಂದಿ, ಇಂಗ್ಲಿಷ್‌ನಲ್ಲೇ ನಡೆಸುತ್ತಿದೆ. ಕೇವಲ ಹಿಂದಿ ಕೇಂದ್ರಿತ ನೇಮಕಾತಿ ಪ್ರಕ್ರಿಯೆ ಇತರೆ ಭಾಷಿಕರನ್ನು ಉದ್ಯೋಗ ವಂಚಿತರನ್ನಾಗಿಸುವುದು ಮಾತ್ರವಲ್ಲ, ಅನ್ಯ ಭಾಷೆಗಳನ್ನು ಹತ್ತಿಕ್ಕಿ ಹಿಂದಿ ಹೇರಿಕೆ ಮಾಡುವುದಷ್ಟೇ ದುರುದ್ದೇಶವಿರುವುದು ಸ್ಪಷ್ಟ” ಎಂದು ಕೆಲ ದಿನಗಳ ಹಿಂದಷ್ಟೇ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದರು.
ಇದೇ ವಿಷಯದಲ್ಲಿ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, “ಕೇಂದ್ರ ಮೀಸಲು ಪೊಲೀಸ್ ಪಡೆಯ ನೇಮಕಾತಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯುವುದನ್ನು ಕಡ್ಡಾಯಗೊಳಿಸಿರುವುದನ್ನು ತಕ್ಷಣ ಸಡಿಲಿಸಿ, ಕನ್ನಡ ಭಾಷೆಯಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟು ಈ ಅನ್ಯಾಯವನ್ನು ಸರಿಪಡಿಸಬೇಕೆಂದು ಪ್ರಧಾನಿ ಮೋದಿ ಅವರನ್ನು ಆಗ್ರಹಪಡಿಸುತ್ತಿದ್ದೇನೆ” ಎಂದಿದ್ದರು.
ಇದನ್ನೂ ಓದಿ: CRPF Recruitment 2023 : ಸಿಆರ್‌ಪಿಎಫ್‌ನಲ್ಲಿ 9,212 ಕಾನ್ಸ್‌ಟೇಬಲ್ ಹುದ್ದೆ; ರಾಜ್ಯದಲ್ಲಿಯೂ 466 ಹುದ್ದೆಗಳಿಗೆ ನೇಮಕ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯು ಮುಂದಿನ ಜುಲೈ 1ರಿಂದ 13ರ ವರೆಗೆ ನಡೆಯಲಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ದೈಹಿಕ ಅರ್ಹತಾ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ಮತ್ತು ವೃತ್ತಿ ಪರೀಕ್ಷೆ ನಡೆಸಿ, ದಾಖಲೆಗಳನ್ನು ಪರಿಶೀಲಿಸಿ, ವೈದ್ಯಕೀಯ ಪರೀಕ್ಷೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.