ಬೆಂಗಳೂರು: ಹಸಿರು ಶಾಲುಗಳೇ ಕಾಣದ ಕಾಲದಿಂದಲೂ ನಾನು ರೈತ ಹೋರಾಟದಲ್ಲಿದ್ದೇನೆ. ಅನೇಕ ಚಳವಳಿಯಲ್ಲಿ ಭಾಗಿಯಾಗಿದ್ದೇನೆ, ಈಗ ಯಾರೋ ಆರೋಪ ಮಾಡಿದ ಕೂಡಲೇ ನಾನೇನೂ ಅಪರಾಧಿಯಾಗಲ್ಲ ಎಂದು ರೈತನಾಯಕ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಹೋರಾಟದ ಹೆಸರಿನಲ್ಲಿ ಹಣ ಪಡೆದು ದುರ್ಬಳಕೆ ಮಾಡಿಕೊಂಡಿಲ್ಲ. ಈ ಪ್ರಕರಣದ ಕುರಿತು ಸರ್ಕಾರವೇ ತನಿಖೆ ನಡೆಸಲಿ. ಧೃತಿಗೆಡಬೇಕಾದ ಅವಶ್ಯಕತೆ ನನಗಿಲ್ಲ, ಸತ್ಯ ಯಾವತ್ತೂ ಸಾಯಲ್ಲ, ಅಪಪ್ರಚಾರ, ಉದ್ದೇಶ ಪೂರ್ವಕವಾಗಿ ಮಾಡಿದಾಗ ಯಾರೂ ವಿಲನ್ ಆಗಲ್ಲ ಎಂದು ಹೇಳಿದರು.
ಸೋಮವಾರ ರೈತ ಮುಖಂಡ ರಾಕೇಶ್ ಟಿಕಾಯತ್, ಯದುವೀರ್ ಸಿಂಗ್ ಮೇಲೆ ನಡೆದ ಹಲ್ಲೆ ಬಗ್ಗೆ ಮಾತನಾಡಿದ ಅವರು, ಅವರಿಗೆ ಮಸಿ ಬಳಿಯಬಾರದಿತ್ತು. ತಪ್ಪುಗಳಿದ್ದರೆ, ವಿಚಾರ ದೋಷವಿದ್ದರೆ ಪ್ರತಿಭಟನೆ ಮಾಡಬಹುದು, ಅದುಬಿಟ್ಟು, ಮಸಿ ಬಳಿಯುವುದು ಸರಿಯಾದ ಕ್ರಮವಲ್ಲ. ಅವರು ಹೇಳುವುದನ್ನು ಕೇಳಬೇಕಿತ್ತು, ಇಂತಹ ಕೃತ್ಯಗಳನ್ನು ಸರ್ಕಾರ ನಿಯಂತ್ರಿಸಬೇಕು ಎಂದಿದ್ದಾರೆ.
ʻʻಯಾರು ಏನಾದರೂ ಆರೋಪ ಮಾಡಲಿ, ನಾನು ತನಿಖೆಗೆ ತಯಾರಿದ್ದೇನೆ, ಈ ಬಗ್ಗೆ ಸಿಎಂಗೆ ಪತ್ರ ಬರೆದಿದ್ದೇನೆ. ನಾನು ತೆರದ ಪುಸ್ತಕವಾಗಿದ್ದು ಮನೆಯಲ್ಲಿ ತಲಾಶ್ ಮಾಡಲಿ, ಬ್ಯಾಂಕ್ ಖಾತೆ ಮಾಹಿತಿ ತೆರೆದಿಡುತ್ತೇನೆʼ ಎಂದು ಹೇಳಿದರು.
ಇದನ್ನೂ ಓದಿ | ರೈತಸಂಘದಿಂದ ಕೋಡಿಹಳ್ಳಿ ಉಚ್ಚಾಟನೆ: ಬಸವರಾಜಪ್ಪ ನೂತನ ಅಧ್ಯಕ್ಷ