Site icon Vistara News

Namma Clinic : ನಮ್ಮ ಕ್ಲಿನಿಕ್ ಇನ್ಮುಂದೆ ನಂ. 1 ಕ್ಲಿನಿಕ್; ಸಿಗಲಿದೆ ʼಆರೋಗ್ಯ ಸಂಜೆʼ!

Namma clinic and minister dinesh gundurao

ಬೆಂಗಳೂರು: ರಾಜ್ಯಾದ್ಯಂತ ಇರುವ ನಮ್ಮ ಕ್ಲಿನಿಕ್‌ಗಳನ್ನು (Namma Clinic) ನಂಬರ್ 1 ಕ್ಲಿನಿಕ್‌ಗಳನ್ನಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ (Health Department) ಮುಂದಾಗಿದೆ. ಈ ಸೇವೆಯು ಬಡವರಿಗೆ ಇನ್ನಷ್ಟು ಹತ್ತಿರವಾಗಬೇಕು ಎಂಬ ಕಾರಣಕ್ಕಾಗಿ ಕೆಲವು ಬದಲಾವಣೆಯನ್ನು ಮಾಡಲು ನಿರ್ಧರಿಸಲಾಗಿದೆ. ಸಮಯ ಬದಲಾವಣೆಯಿಂದ ಜನರ ಆರೋಗ್ಯ ಸುಧಾರಣೆಯ ಪ್ರಯತ್ನವನ್ನು ಈಗ ಮಾಡಲು ಮುಂದಾಗಲಾಗಿದೆ. ಸಚಿವ ದಿನೇಶ್ ಗುಂಡೂರಾವ್ (Health Minister Dinesh Gundu Rao) ಈಗ ವಿಭಿನ್ನ ಪ್ರಯೋಗಗಳಿಗೆ ಕೈಹಾಕಿದ್ದಾರೆ.‌ ನಗರ ಪ್ರದೇಶಗಳ ಬಡವರು ಹಾಗೂ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆಯನ್ನು ನಮ್ಮ ಕ್ಲಿನಿಕ್‌ಗಳ ಮುಖಾಂತರ ಒದಗಿಸುವ ಸಂಬಂಧ ನಮ್ಮ ಕ್ಲಿನಿಕ್‌ಗಳಿಗೆ ಹೊಸ ಕಾಯಕಲ್ಪ‌ ನೀಡಲು ಯೋಜನೆ ರೂಪಿಸಲಾಗುತ್ತಿದೆ.

ಪ್ರಾಯೋಗಿಕ ಹಂತವಾಗಿ ರಾಜ್ಯದಲ್ಲಿರುವ ನಮ್ಮ ಕ್ಲಿನಿಕ್‌ಗಳಲ್ಲಿ ಶೇ. 25ರಷ್ಟು ಕ್ಲಿನಿಕ್‌ಗಳ ಸಮಯ ಬದಲಾವಣೆಗೆ (Time Change) ನಿರ್ಧರಿಸಲಾಗಿದೆ. ಅಸಹಾಯಕರು ಬಡವರಿಗೆ ಅನುಕೂಲ ಆಗಲಿ ಎಂದು ರಾಜ್ಯದ ನಗರ ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್‌ಗಳನ್ನು ತೆರೆಯಲಾಗಿತ್ತು. ಆದರೆ, ಇವುಗಳ ತೆರೆಯುತ್ತಿದ್ದ ಸಮಯ, ಜನಸಾಮಾನ್ಯರಿಗೆ ಅನುಕೂಲಕರವಾಗಿಲ್ಲ. ಪ್ರಸ್ತುತ ನಮ್ಮ ಕ್ಲಿನಿಕ್‌ಗಳು ಬೆಳಗ್ಗೆ 9 ಗಂಟೆಗೆ ತೆರೆದು ಮಧ್ಯಾಹ್ನ 12.30ಕ್ಕೆ ಮುಚ್ಚಲ್ಪಡುತ್ತಿದೆ. ಬಳಿಕ ಮಧ್ಯಾಹ್ನ 2 ಗಂಟೆಗೆ ತೆರೆದು 4.30ಕ್ಕೆ ಅವಧಿ ಕೊನೆಗೊಳ್ಳುತ್ತಿತ್ತು.

ಇದನ್ನೂ ಓದಿ: Arecanut Price : ಭೂತಾನ್‌ ಅಡಿಕೆಯಿಂದ ಬೆಳೆಗಾರರು ಹೆದರಬೇಕಿಲ್ಲ; ಆರಗ ಜ್ಞಾನೇಂದ್ರ ಹೇಳಿದ್ದೇನು?

ಸಂಜೆ ಕ್ಲಿನಿಕ್!

ಇದೀಗ ನಮ್ಮ ಕ್ಲಿನಿಕ್‌ಗಳನ್ನು ಸಂಜೆ ಕ್ಲಿನಿಕ್ ಮಾದರಿಯಲ್ಲಿ ಸಮಯ ಬದಲಾಯಿಸಲು ನಿರ್ಧರಿಸಲಾಗಿದ್ದು, 12 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯನಿರ್ವಹಿಸುವಂತೆ ತಯಾರಿ ನಡೆಸಲಾಗಿದೆ. ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗುವ ಸಮಯ ಹಾಗೂ ನಮ್ಮ ಕ್ಲಿನಿಕ್‌ಗಳ ಸಮಯ ಎರಡೂ ಒಮ್ಮೆಗೆ ಆಗುತ್ತಿತ್ತು. ಇದರಿಂದ ಬಡವರು ಈ ಸೌಲಭ್ಯದಿಂದ ವಂಚಿತರಾಗುತ್ತಾರೆ. ಹೀಗಾಗಿ ರಾತ್ರಿಯ ವರೆಗೂ ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುವಂತೆ ಸಮಯ ಬದಲಾವಣೆ ಮಾಡಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚಿಸಿದ್ದರು. ರಾತ್ರಿ ವರೆಗೂ ಕಾರ್ಯನಿರ್ವಹಿಸಬೇಕಾದರೆ ಎರಡು ಶಿಫ್ಟ್ ಮಾಡಬೇಕಾಗಬಹುದು.‌ ಆಗ ಹೆಚ್ಚಿನ‌ ವೈದ್ಯರು ಬೇಕಾಗುತ್ತಾರೆ. ಈಗಾಗಲೇ ವೈದ್ಯರ ಕೊರತೆಯಿದೆ ಎಂಬ ವಾದಗಳು ಕೂಡಾ ಕೇಳಿ ಬಂದಿದ್ದವು. ಅಂತಿಮವಾಗಿ ಎರಡು ಶಿಫ್ಟ್ ಮಾಡುವ ಬದಲು ಒಂದೇ ಶಿಫ್ಟ್‌ನಲ್ಲಿ ಸಮಯ ಬದಲಾವಣೆ ಮಾಡಲು ಆರೋಗ್ಯ ಸಚಿವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರು.‌

ಶೇ. 25ರಷ್ಟು ಬದಲಾವಣೆ

ಬೆಳಗ್ಗೆ 7 ಗಂಟೆಗೆ ನಮ್ಮ ಕ್ಲಿನಿಕ್‌ಗಳು ತೆರೆಯಲಿದ್ದು, ಬೆಳಗ್ಗೆ ಹೊತ್ತಿನಲ್ಲಿ ಲ್ಯಾಬ್ ಟೆಕ್ನಿಷಿಯನ್ ಮಾತ್ರ ಇರುತ್ತಾರೆ. ಬಳಿಕ 12 ಗಂಟೆಯಿಂದ 8 ಗಂಟೆವರೆಗೂ ವೈದ್ಯರು ಹಾಗೂ ನರ್ಸ್ ಇರಲಿದ್ದು, ಜನರಿಗೆ ಚಿಕಿತ್ಸೆ ನೀಡುವಂತೆ ಯೋಜನೆ ರೂಪಿಸಲಾಗಿದೆ.‌ ರಾಜ್ಯದಲ್ಲಿ ಒಟ್ಟು 415 ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಶೇ. 25.ರಷ್ಟು ಕ್ಲಿನಿಕ್‌ಗಳನ್ನು ಪ್ರಾಯೋಗಿಕ ಹಂತದಲ್ಲಿ ಸಂಜೆ ಕ್ಲಿನಿಕ್‌ಗಳಾಗಿ ಸಮಯ ಬದಲಾವಣೆ ಮಾಡಲಾಗುತ್ತಿದೆ. ಇವುಗಳು ಯಶಸ್ವಿಯಾದರೆ ರಾಜ್ಯಾದ್ಯಂತ ಎಲ್ಲ ನಮ್ಮ ಕ್ಲಿನಿಕ್‌ಗಳ ಸಮಯವನ್ನು ಬದಲಾವಣೆ ಮಾಡಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.

ಸಂಜೆ ವೇಳೆ ನಮ್ಮ ಕ್ಲಿನಿಕ್‌ಗಳಲ್ಲಿ ಒಪಿಡಿ ತೆರೆಯುವುದರಿಂದ ಸಾಕಷ್ಟು ಅನುಕೂಲ ಕೂಡ ಆಗಲಿದೆ.‌ ಹೀಗೆ ಆಗುವ ಬದಲಾವಣೆಯಿಂದ ಜನರಿಗೆ ಅನುಕೂಲ ಆಗುತ್ತದೆಯೇ? ಜನ ಈ ಯೋಜನೆಯ ಫಲಾನುಭವಿ ಆಗುತ್ತಾರಾ? ಎಂಬುದನ್ನು ಕಾದು ನೋಡಲು ನಿರ್ಧರಿಸಲಾಗಿದೆ. ಬಳಿಕ ಹಂತ ಹಂತವಾಗಿ ನಮ್ಮ ಕ್ಲಿನಿಕ್‌ಗಳಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಯೋಜಿಸಲಾಗಿದೆ.

ಇದನ್ನೂ ಓದಿ: Karnataka Politics : ಸರ್ಕಾರದ ವಿರುದ್ಧ ಬೀದಿಗಿಳಿದ ಬಿಜೆಪಿ; ಕೃಷಿ ನೀತಿ ಖಂಡಿಸಿ ಜನಾಂದೋಲನ

ಈವರೆಗೆ 5 ಲಕ್ಷ ಮಂದಿಗೆ ಚಿಕಿತ್ಸೆ

ಸುಮಾರು ಮೂರು ಲಕ್ಷದ 96 ಸಾವಿರ ಮಹಿಳೆಯರು ಹಾಗೂ 4 ಲಕ್ಷದ 21 ಸಾವಿರ ಪುರುಷರು ನಮ್ಮ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪ್ರತಿ ದಿನ ಸರಾಸರಿ 35ರಿಂದ 40 ಜನರು ಚಿಕಿತ್ಸೆ ಪಡೆಯಲು ನಮ್ಮ ಕ್ಲಿನಿಕ್‌ಗಳಿಗೆ ಭೇಟಿ ನೀಡುತ್ತಿದ್ದಾರೆ. ಇನ್ನೂ 2 ಲಕ್ಷದ 88 ಸಾವಿರ ಜನರು ರೋಗ ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದಾರೆ. ನಮ್ಮ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ತರ ಬದಲಾವಣೆಗಳನ್ನು ತರಲಾಗುತ್ತಿದೆ‌

Exit mobile version