ಬೆಂಗಳೂರು: ಹುಟ್ಟು ಹಾಗೂ ಸಾವಿನ ನಡುವಿನ ಸಂಘರ್ಷದಲ್ಲಿ ಮನುಷ್ಯನ ಆದ್ಯತೆಗಳು ಹೇಗಿರಬೇಕು ಎಂಬ ಕುರಿತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಪುತ್ರ ಕರಣ್ ಲಾಡ್ ಬರೆದಿರುವ ಕೃತಿ A GLITCH IN THE SIMULATION (ಎ ಗ್ಲಿಚ್ ಇನ್ ದಿ ಸಿಮ್ಯುಲೇಷನ್) ಉತ್ತಮ ಕೃತಿ (New Book) ಎಂದು ಸಿಎಂ ಸಿದ್ದರಾಮಯ್ಯ ಹಾರೈಸಿದ್ದಾರೆ.
ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಇದ್ದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಂತೋಷ್ ಲಾಡ್ ದಂಪತಿ ಹಾಗೂ ಲೇಖಕ ಕರಣ್ ಲಾಡ್ ಸಿಎಂ ಸಿದ್ದರಾಮಯ್ಯ ಅವರನ್ನು ಶುಕ್ರವಾರ ಭೇಟಿ ಮಾಡಿ ಕೃತಿಯನ್ನು ನೀಡಿದರು.
ವಿಧಾನಸಭೆಯ ಕಾರ್ಯ ಕಲಾಪದ ಒತ್ತಡಗಳ ಹಿನ್ನೆಲೆಯಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗಲಿಲ್ಲ. ಹುಟ್ಟು ಮತ್ತು ಸಾವಿನ ನಡುವೆ ನಡೆಯುವ ಸಂಘರ್ಷದಲ್ಲಿ ಮನುಷ್ಯನಾದವನ ಆದ್ಯತೆಗಳು ಹೇಗಿರಬೇಕೆಂಬ ತತ್ವ ಶಾಸ್ತ್ರದ ಮೂಲತತ್ವವನ್ನು ಆಯ್ದುಕೊಂಡು ಕೃತಿಯನ್ನು ರಚಿಸಿದ್ದಾರೆ. ಇದು ಭಾರತದ ಸಾಹಿತ್ಯ ಪ್ರಕಾರದ ಮೈಲುಗಲ್ಲಾಗಲಿ. ಸಾಹಿತ್ಯ ಕೃಷಿಯಲ್ಲಿ ಮುಂದುವರಿಯಲಿ ಎಂದು ಆಶೀರ್ವದಿಸಿದರು.
ಕೃತಿಯ ಕುರಿತು
ಎ ಗ್ಲಿಚ್ ಆನ್ ದಿ ಸಿಮ್ಯುಲೇಷನ್ ಶೀರ್ಷಿಕೆಯ ಈ ತತ್ವಶಾಸ್ತ್ರದ ಕೃತಿಯನ್ನು ಸಂತೋಷ ಲಾಡ್ ಅವರ ಪುತ್ರ ಕರಣ್ ಲಾಡ್ ರಚಿಸಿ ನಿರೂಪಿಸಿದ್ದಾರೆ. ದ್ವಿತೀಯ ಪಿಯುಸಿ ಅಧ್ಯಯನ ಮಾಡುತ್ತಿರುವ 17 ವರ್ಷದ ಕರಣ್. ಜರ್ಮನ್‍ನ ತತ್ವಜ್ಞಾನಿ ಫೆಡ್ರಿಕ್ ನೀಶೆ ಅವರ ಬರಹಗಳಿಂದ ಸ್ಫೂರ್ತಿಗೊಂಡು, ಧರ್ಮ, ಮೌಲ್ಯಗಳು, ಭಯಗಳು, ಅಭದ್ರತೆಗಳ ಬಗ್ಗೆ ಮಾತನಾಡುತ್ತಾ ಜೀವನದ ನಿಜವಾದ ಅರ್ಥವನ್ನು ಹುಡುಕುವಂತಹ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕರಣ್ ಲಾಡ್ ಫುಟ್ಬಾಲ್ ಆಟದ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದಾರೆ. ಕಳೆದ ಎರಡು ವರ್ಷಗಳಿಂದ ಕಲೆ ಮತ್ತು ಸಿನಿಮಾ ಕ್ಷೇತ್ರದಲ್ಲಿ ತಮ್ಮ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ ಮತ್ತು ಕಲೆ ಮತ್ತು ಸಿನಿಮಾ ಕ್ಷೇತ್ರದಲ್ಲಿ ತಮ್ಮ ಹೆಚ್ಚಿನ ಅಧ್ಯಯನವನ್ನು ನಡೆಸುತ್ತಿದ್ದಾರೆ.
ತಮ್ಮ ಪೋಷಕರ ಪ್ರೋತ್ಸಾಹದಿಂದ ಕರಣ್, ತಮ್ಮ ಮತ್ತು ತಾವು ವಾಸಿಸುವ ಪ್ರಪಂಚದ ಬಗ್ಗೆ ಅನ್ವೇಷಿಸಲು ತಾವು ತುಳಿದ ಹಾದಿಯನ್ನು ಸ್ಪಷ್ಟಪಡಿಸಿಕೊಂಡು ಭೌತಿಕ ಮೌಲ್ಯಗಳು, ಮಾನವೀಯ ಮೌಲ್ಯಗಳು ಮತ್ತು ನಂಬಿಕೆಗಳನ್ನು ಕುರಿತು ಹುಡುಕಾಟ ನಡೆಸಿದ್ದಾರೆ. ಯುವಕನೊಬ್ಬನು ತನ್ನನ್ನು ತಾನು ಕಂಡುಕೊಳ್ಳಲು ಮತ್ತು ಸತ್ಯವನ್ನು ಹುಡುಕಲು ಮಾಡಿದ ಗಂಭೀರ ಪ್ರಯತ್ನದ ಫಲ ಈ ಪುಸ್ತಕ.
ಏಳು ಅಧ್ಯಾಯಗಳನ್ನು ಹೊಂದಿರುವ ಈ ಕೃತಿಯು ಹಿಂದಿನ ಮತ್ತು ವರ್ತಮಾನದ ಅನೇಕ ಪರಿಕಲ್ಪನೆಗಳು ಮತ್ತು ವಿಚಾರಗಳ ಮೇಲೆ ಬೆಳಕು ಚೆಲುತ್ತದೆ. ಈ ಕೃತಿಯು ಹೊಸ ದೃಷ್ಟಿಕೋನ, ವಿಭಿನ್ನ ದೃಷ್ಟಿಕೋನಗಳನ್ನು ಒದಗಿಸುವಂತಹ ಪ್ರಯತ್ನ ಮಾಡುತ್ತಾ ಮಾನವನ ಜೀವನದ ಮೌಲ್ಯಗಳನ್ನು ಕುರಿತು ತಾತ್ವಿಕ ಪ್ರಶ್ನೆಗಳನ್ನು ಎತ್ತುತ್ತದೆ. ಆಧುನಿಕ ಪ್ರಪಂಚದ ಸದ್ಯದ ಸಂದರ್ಭದಲ್ಲಿ ಧರ್ಮಗಳು ಮತ್ತು ಸಾಂಸ್ಕೃತಿಕ ಮೌಲ್ಯಗಳು ಮತ್ತು ನೈತಿಕತೆಯ ಕುರಿತು ಉತ್ತರಗಳನ್ನು ಹುಡುಕುವ ಪ್ರಯತ್ನ ಮಾಡುತ್ತದೆ.
ಮಾನವನ ಅಸ್ತಿತ್ವದ ಆಳವಾದ ವ್ಯಾಖ್ಯಾನ, ತಾತ್ವಿಕ ಪರಿಕಲ್ಪನೆಗಳು, ನಂಬಿಕೆಗಳು ಮತ್ತು ಸತ್ಯದ ಹುಡುಕಾಟದ ಕಿರು ಪರಿಚಯವನ್ನು ಈ ಕೃತಿ ಮಾಡಿಸುತ್ತದೆ. ನಮ್ಮ ನೈಸರ್ಗಿಕ ಆಧುನಿಕ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಅನೇಕ ಸಿದ್ಧಾಂತಗಳು ಮತ್ತು ನಿಯಮಗಳ ಬಗ್ಗೆ ಸಂದೇಹ ಮತ್ತು ಅಪನಂಬಿಕೆಯನ್ನು ಹೊರಹೊಮ್ಮಿಸಿ ನಮ್ಮನ್ನು ಚರ್ಚೆಗೆ ಈಡು ಮಾಡುತ್ತದೆ.
ಸ್ವರ್ಗ ಮತ್ತು ನರಕದ ಪರಿಕಲ್ಪನೆಯ ಕುರಿತು ಸಾಕಷ್ಟು ತಾರ್ಕಿಕವಾಗಿ ಕೃತಿಯಲ್ಲಿ ಚರ್ಚಿಸಲಾಗಿದೆ. ಸಮಾಜಗಳನ್ನು ನಿಯಂತ್ರಿಸುವ ರಾಜಕೀಯ ಜೊತೆಗೆ ಸಂಪತ್ತು , ಅಧಿಕಾರ , ಧರ್ಮ, ಸಾವು ಮತ್ತು ಆಧ್ಯಾತ್ಮಿಕ ನಂಬಿಕೆಗಳನ್ನು ಕುರಿತು ಅವುಗಳನ್ನು ನಿರಾಕರಿಸಬೇಕಾದ ಅಗತ್ಯವನ್ನು ಕುರಿತು ನಿಖರವಾಗಿ ಸ್ಪಷ್ಟತೆ ವ್ಯಕ್ತಪಡಿಸಲಾಗಿದೆ. ಹದಿಹರೆಯದವರ ತೀವ್ರವಾದ ಸ್ವತಂತ್ರ ಚಿಂತನೆಗಳು ಅವರ ಜೀವನದ ಮೇಲೆ ಬೀರುವ ಪರಿಣಾಮಗಳನ್ನು ಕುರಿತು ವಿಭಿನ್ನವಾದ ದೃಷ್ಟಿಕೋನವನ್ನು ವ್ಯಕ್ತಪಡಿಸುತ್ತದೆ. ಸುಖ ದುಃಖ ಎರಡನ್ನು ಸಮಾನವಾಗಿ ಸ್ವೀಕರಿಸಿ ಸಮಸ್ಥಿತಿಯನ್ನು ಕಾಪಾಡಿಕೊಳ್ಳುವುದು ಆರೋಗ್ಯಕರ ಎಂಬುದನ್ನು ಈ ಕೃತಿ ಪ್ರತಿಪಾದಿಸುತ್ತದೆ.