ಬೆಂಗಳೂರು: ಸರ್ಕಾರದ ಕೆಲಸ ದೇವರ ಕೆಲಸ ಎಂದು ವಿಧಾನಸೌಧದ ಮುಂಭಾಗದಲ್ಲಿ ಕೆತ್ತಿಸಲಾಗಿದೆ ಹಾಗೂ ಅನೇಕ ಸರ್ಕಾರಿ ಕಚೇರಿಗಳಲ್ಲಿ ಫಲಕ ಅಳವಡಿಸಲಾಗಿರುತ್ತದೆ. ಆದರೆ ಇದೀಗ ರಾಜ್ಯ ಸರ್ಕಾರ ಹೊಸದೊಂದು ಚಿಂತನೆಯನ್ನು ನಡೆಸಿದ್ದು, ಇನ್ನೊಂದು ಫಲಕವನ್ನೂ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಬೇಕಿದೆ.
ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ವಿಪರೀತವಾಗಿದೆ. ಈ ಹಿನ್ನೆಲೆಯಲ್ಲಿ ಕಾನೂನು ಶಿಕ್ಷೆ ಒಂದೆಡೆಯಾದರೆ, ನೈತಿಕವಾಗಿ ಸರ್ಕಾರಿ ನೌಕರರು ಭ್ರಷ್ಟಾಚಾರದಿಂದ ದೂರ ಸರಿಯುವಂತೆ ಮಾಡುವ ಯೋಚನೆ ಬಂದಿದೆ. ʼನನಗೆ ಯಾರೂ ಲಂಚ ಕೊಡಬೇಕಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆʼ ಎಂದು ನಾಮಫಲಕ ಅಳವಡಿಸಬೇಕಾಗುತ್ತದೆ.
ಅಕ್ಟೋಬರ್ 2 ರಿಂದ ಅಕ್ಟೋಬರ್ 20ರವರೆಗೂ ಭ್ರಷ್ಟಾಚಾರ ನಿರ್ಮೂಲನಾ ಅಭಿಯಾನ ನಡೆಸುತ್ತಿರುವ ಸಿಟಿಜನ್ ಎನ್ಕ್ವೈರಿ ಕೌನ್ಸಿಲ್ ಎನ್‌ಜಿಒ, ʼನನಗೆ ಯಾರೂ ಲಂಚ ಕೊಡಬೇಕಾಗಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆʼ ಎಂದು ಸರ್ಕಾರಿ ಕಚೇರಿಯಲ್ಲಿ ನಾಮಫಲಕ ಹಾಕುವಂತೆ ಮನವಿ ಮಾಡಿತ್ತು. ಇದಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದೆ.
ಕೌನ್ಸಿಲ್ ಮನವಿ ಅನುಸಾರ ಮುಂದಿನ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಗೆ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಟಿಪ್ಪಣಿ ನೀಡಿದ್ದಾರೆ.
ಈ ಪ್ರಸ್ತಾವನೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಒಪ್ಪಿಗೆ ನೀಡಿದರೆ, ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ನಾಮಫಲಕ ಅಳವಡಿಸಬೇಕಾಗುತ್ತದೆ.
ಇದನ್ನೂ ಓದಿ | ಸರ್ಕಾರಿ ಕಚೇರಿಗಳಲ್ಲಿ ವಿಡಿಯೊ, ಫೋಟೊ ನಿಷೇಧದ ವಿವಾದಾತ್ಮಕ ಆದೇಶ ವಾಪಸ್